ಪತಿಯನ್ನು ಜೈಲಿಗಟ್ಟುವುದರಿಂದ ವೈವಾಹಿಕ ಸಂಬಂಧ ಬಲಗೊಳ್ಳುತ್ತದೆಯೇ?

0
776

2017ರಲ್ಲಿ ತ್ರಿವಳಿ ತಲಾಕ್ ಮಸೂದೆ ತಂದಾಗ ಅದರಲ್ಲಿ ಕೇಸು ದಾಖಲಿಸಿ ಆರೋಪಿ ಯನ್ನು ಪೊಲೀಸ್ ವಾರಂಟಿಲ್ಲದೆ ಬಂಧಿಸಿ ಜೈಲಿ ಗಟ್ಟಬಹುದು ಮತ್ತು ಕೋರ್ಟು ಮೂರು ವರ್ಷ ಜೈಲು ಶಿಕ್ಷೆ ನೀಡಬಹುದು ಎಂದಿತ್ತು. ಅಂದರೆ ‘ತಲಾಕ್, ತಲಾಕ್, ತಲಾಕ್’ ಯಾವುದೇ ಜಾಮೀನಿಲ್ಲದ ಅಪರಾಧ. ಸಾಯಿರಾ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟು ಮುತ್ತಲಾಕನ್ನು ಸಂವಿಧಾನ ವಿರೋಧಿ ಪ್ರಕ್ರಿಯೆ ಎಂದಿತ್ತು. ಆಗ ಈ ತೀರ್ಪನ್ನು ಜಸ್ಟಿಸ್ ಕೇಹರ್, ಜಸ್ಟಿಸ್ ಅಬ್ದುಲ್ ನಝೀರ್ ಅವರನ್ನೊಳಗೊಂಡ ಐವರು ಸದಸ್ಯರ ಪೀಠ ನೀಡಿತ್ತು.

ನಂತರ ದೇಶದಲ್ಲಿ ಮುತ್ತಲಾಕ್ ಹೆಚ್ಚುತ್ತಿದೆ, ಆದ್ದರಿಂದ ಅದನ್ನು ಕ್ರಿಮಿನಲ್ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಸರಕಾರ ಹೊರಟಿತ್ತು. ಹೀಗೆ 2017 ಡಿಸೆಂಬರ್ 18ಕ್ಕೆ ಮುಸ್ಲಿಂ ಮಹಿಳೆಯರ ಮದುವೆ ರಕ್ಷಣಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಎಷ್ಟೇ ಚರ್ಚೆ ಆದರೂ ಪ್ರತಿಪಕ್ಷಗಳು ವಿರೋಧಿಸಿ ಗಲಾಟೆ ಮಾಡಿದರೂ ಅಲ್ಲಿ ಬಹುಮತವಿರುವ ಎನ್‍ಡಿಎ ಅದನ್ನು ಪಾಸು ಮಾಡಿತು. ಆದರೆ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದ ಪಾಸಾಗಲಿಲ್ಲ. ನಂತರ 2018 ಸಪ್ಟೆಂಬರ್ 19ಕ್ಕೆ ಸುಗ್ರೀವಾಜ್ಞೆ ತಂದಿತು. ಆದರೆ ಸುಗ್ರೀವಾಜ್ಞೆಯ ಅವಧಿ ಈಗ ನಡೆಯುವ ಲೋಕಸಭಾ ಅಧಿವೇಶನಕ್ಕೆ ಮುಕ್ತಾಯವಾಗುತ್ತದೆ ಎಂಬ ಕಾರಣದಿಂದ ಪುನಃ ಈ ಅಧಿವೇಶನದಲ್ಲಿ ಡಿಸೆಂಬರ್ 10ಕ್ಕೆ ಪುನಃ ಸರಕಾರ ಮಂಡಿಸಿದೆ. ಅಂತೂ ಮೋದಿ ಸರಕಾರಕ್ಕೆ ಮುಸ್ಲಿಮ್ ಮಹಿಳೆಯರ ಬಗ್ಗೆ ಬಹಳ ಪ್ರೀತಿ, ಪುರುಷರಲ್ಲಿ ಅಷ್ಟು ಇಷ್ಟ ಇಲ್ಲ. ಮೂರು ಬಾರಿ ತಲಾಕ್ ಹೇಳಿದರೆ ಮೂರು ವರ್ಷ ಜೈಲಿಗೆ ಕಳುಹಿಸಬೇಕು ಅಷ್ಟೇ.

ಆದರೆ ಈ ಮಸೂದೆ ಈಗಲೂ ರಾಜ್ಯಸಭೆಯಲ್ಲಿ ಪಾಸಾಗ ಬೇಕಿದೆ. ಅಲ್ಲಿ 250 ಸದಸ್ಯರಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯಿಡು ರಾಜ್ಯಸಭಾ ಅಧ್ಯಕ್ಷರು. ಬಿಜೆಪಿಗೆ 73 ಮತ್ತು ಕಾಂಗ್ರೆಸ್ಸಿಗೆ 50 ರಾಜ್ಯಸಭಾ ಸದಸ್ಯರು ಇದ್ದಾರೆ. ಉಳಿದಂತೆ ತಲಾ ಹದಿಮೂರು ಸದಸ್ಯರು ಸಮಾಜವಾದಿ ಪಾರ್ಟಿಗೆ, ತೃಣಮೂಲ ಕಾಂಗ್ರೆಸ್‍ಗೆ, ಎಐಡಿಎಂಕೆಗಿದೆ. ಉಳಿದಂತೆ ಬಿಜೆಪಿ, ಜನತಾದಳಕ್ಕೆ ಒಂಭತ್ತು. ಹಾಗೆಯೇ ತಲಾ ಆರು ಟಿಆರ್‍ಎಸ್, ಜೆಡಿಯು, ಟಿಡಿಪಿ, ಪಕ್ಷೇತರರಿಗಿದೆ. ಹೀಗೆ ಯಾವ ಲೆಕ್ಕ ನೋಡಿದರೂ ರಾಜ್ಯಸಭೆಯಲ್ಲಿ ಈ ಮಸೂದೆ ಪಾಸಾಗುವುದು ಸಂದೇಹ. ಹಾಗಿದ್ದರೆ ಇನ್ನೊಂದು ಸುಗ್ರೀವಾಜ್ಞೆಯನ್ನು ಸರಕಾರ ಹೊರಡಿಸಬೇಕಾಗ ಬಹುದು. ಮುಸ್ಲಿಂ ಪರ್ಸನಲ್ ಲಾ ಬೋರ್ಡು ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲೂ ಬಹುದು. ಮುತ್ತಲಾಕ್ ಮಸೂದೆಯ ಅಂತಿಮ ಪರಿಣಾಮ ಇಷ್ಟೇ ಎಂದು ಈಗ ನಮ್ಮಿಂದ ಊಹಿಸಲು ಸಾಧ್ಯವಾಗುತ್ತದೆ.

ಆದರೆ ಹೀಗೊಂದು ಕಾನೂನು ತಂದು ಮುಸ್ಲಿಮರಲ್ಲಿರುವ ಅವಿವೇಕಿಗಳನ್ನು ಅಪರಾಧಿ ಗಳಾಗಿ ಜೈಲು ಕಂಬಿ ಎಣಿಸುವಂತೆ ಮಾಡಬೇಕಿದೆಯೇ ಅಂತಹದ್ದೊಂದು ಅಗತ್ಯವನ್ನು ಸುಪ್ರೀಂ ಕೋರ್ಟು ಕೂಡ ಹೇಳಿಲ್ಲ. ಮುತ್ತಲಾಕ್ ಸಂವಿಧಾನ ವಿರೋಧಿ ಎಂದಷ್ಟೇ ಅದು ಹೇ ಳಿದೆ. ಸುಪ್ರೀಂ ಕೋರ್ಟು ತೀರ್ಪೇ ಇಡೀ ದೇಶದಲ್ಲಿ ಜಾರಿಗೊಳಿಸಲು ಸಾಧ್ಯವಿರುವ ಒಂದು ಕಾನೂನಿನಷ್ಟೇ ಶಕ್ತಿಶಾಲಿ.

ಅವಿವೇಕಿಯೊಬ್ಬ ಮುತ್ತಲಾಕ್ ಹೇಳಿದರೂ ಅದು ಸಿಂಧುವಾಗುವುದಿಲ್ಲ ಹಾಗೂ ಸುಪ್ರೀಂ ಕೋರ್ಟಿನ ತೀರ್ಮಾನದ ಪ್ರಕಾರವೂ ವಿವಾಹ ವಿಚ್ಛೇದನ ನಡೆಯುವುದಿಲ್ಲ. ಮಹಿಳೆಗೆ ಆಕೆಯ ಪತಿ ಬಿಟ್ಟು ಹೋಗದಂತೆ ಮಾಡಿದರೂ ಆಕೆಗೆ ಸಂರಕ್ಷಣೆ ನೀಡಿದಂತೆ ಎನ್ನುವ ಸಾಮಾನ್ಯ ಅರ್ಥಕ್ಕಿಂತ ಹೆಚ್ಚಿನದನ್ನು ಊಹಿಸುವ ಕೇಂದ್ರ ಸರಕಾರದ್ದು ಷಡ್ಯಂತ್ರ ಎನ್ನಬೇಕಾಗುತ್ತದೆ. ಒಂದು ವೇಳೆ ಪತಿಯಿಂದ ಮಹಿಳೆಗೆ ಕಿರುಕುಳ ಮುಂದುವರಿಯಬಹುದು ಎಂದಿಟ್ಟುಕೊಂಡರೂ ಅಲ್ಲಿ ತಲಾಕ್ ಮುಖ್ಯ ವಾಗುತ್ತದೆ. ಆಕೆಗೆ ಪತಿ ಜೈಲಿಗೆ ಹೋಗುವುದಕ್ಕಿಂತ ಪತಿಯಿಂದ ದೂರವಾಗಿ ಸ್ವತಂತ್ರಳಾಗಿ ಉಳಿಯು ವುದು ಮಹಿಳಾ ರಕ್ಷಣೆಯಾಗುತ್ತದೆ. ಅದಕ್ಕಿಂತ ಹೆಚ್ಚು ಶಿಕ್ಷೆಯೇ ಆಗಬೇಕೆಂದಾದರೆ ಮಹಿಳಾ ದೌರ್ಜನ್ಯ ವಿರೋಧಿ ಕಾಯಿದೆಡೆಯಡಿ ಜೈಲಿಗೆ ದೂಡುವ ಸಾಕಷ್ಟು ಅವಕಾಶವೂ ಇರುತ್ತದೆ. ಹೀಗಿದ್ದೂ ಮುಸ್ಲಿಮ್ ಮಹಿಳೆಗಾಗಿ ಪತಿಯನ್ನು ಜೈಲಿಗೆ ಹಾಕುವ ಮತ್ತೊಂದು ತ್ರಿವಳಿ ತಲಾಕ್ ಕಾನೂನು ತರುವ ಆಸಕ್ತಿ ಮುಸ್ಲಿಮ್ ಮಹಿಳೆಗಲ್ಲ, ಕೇವಲ ಬಿಜೆಪಿ ಪ್ರಾಯೋಜಿತ ಸರಕಾರಕ್ಕೆ ಮಾತ್ರ ಇರಲು ಸಾಧ್ಯ.

ದೇಶದ ಪ್ರಜೆಗಳೆಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಎಲ್ಲರಿಗೂ ಸಮಾನ ಹಕ್ಕು ಇದೆ, ಧಾರ್ಮಿಕ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಇವೆಲ್ಲ ಇದ್ದರೂ ಎನ್‍ಡಿಎ ಕೇಂದ್ರಿತ ಬಿಜೆಪಿ ಪ್ರಾಯೋಜಿತ ಸರಕಾರಕ್ಕೆ ಮುಸ್ಲಿಮರನ್ನು ಹಿಂಸಿಸಿದರೆ ಸಂತೋಷ. ಹೀಗೇಕೆ? ಮುಂದೊಮ್ಮೆ ಇದು ಸಂವಿಧಾನ ವಿರೋಧಿ ಪ್ರಕ್ರಿಯೆಯೆಂದು ಸಂಬಂಧಪಟ್ಟ ಕೋರ್ಟುಗಳೇ ಹೇಳಬಹುದು.
ಇರಲಿ, 2017ರಲ್ಲಿ ತಂದ ಮಸೂದೆಯಲ್ಲಿ ಕೆಲವು ಬದಲಾವಣೆ ಮಾಡಿ 2018ರ ಸೆಪ್ಟಂಬರಿ ನಲ್ಲಿ ತಂದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕಿದರು. ಕೇಂದ್ರ ಸರಕಾರ ಹೇಳುವ ಪ್ರಕಾರ ಮುಸ್ಲಿಂ ಸಮಾಜದಲ್ಲಿ ಚಾಲ್ತಿಯಲ್ಲಿರುವ ವಿವಾಹ ವಿಚ್ಛೇದನ ನಿಯಂತ್ರಣ ಸದ್ರಿ ಮಸೂದೆಯ ಉದ್ದೇಶವಾಗಿದೆ. ಇದು ಸರಕಾರದ ನಿಜವಾದ ಉದ್ದೇಶವೆಂದಾದರೆ ಪವಿತ್ರ ಕುರ್‍ಆನಿನ ಆದೇಶ ಪ್ರಕಾರ ಕಾನೂನನ್ನು ರೂಪಿಸಬೇಕಿತ್ತು. ತೊಂಭತ್ತು ದಿವಸಗಳ ನಂತರ ಇಸ್ಲಾಮಿನಲ್ಲಿ ವಿಚ್ಛೇದನ ಜಾರಿಗೆ ಬರುತ್ತದೆ.

2018ರಲ್ಲಿ ಕೇಂದ್ರ ಸರಕಾರ ಮಂಡಿಸಿದ ಮುತ್ತಲಾಕ್ ಮಸೂದೆಯ ಪ್ರಕಾರ ಆರೋಪಿಗೆ ಜಾಮೀನು ನೀಡುವ ಮೊದಲು ದೂರು ನೀಡಿದ ಮಹಿಳೆಯ ವಾದವನ್ನು ಆಲಿಸುವುದು ಕಡ್ಡಾಯವಾಗಿದೆ. ಆದರೆ ದೂರುದಾರಳ ವಾದವನ್ನು ಆಲಿಸದೆ ಆರೋಪಿಗೆ ಜಾಮೀನು ಇಲ್ಲ ಎಂಬ ವ್ಯವಸ್ಥೆ ಕ್ರಿಮಿನಲ್ ನ್ಯಾಯ ನಿ ರ್ವಹಣಾ ಕ್ಷೇತ್ರದಲ್ಲಿ ಹಿಂದೆಂದೂ ಕೇಳಿರದ ವಿಚಾರವಾಗಿದೆ. ದೂರು ನೀಡಿದ ಒಬ್ಬಳು ಮಹಿಳೆ ಎಲ್ಲೋ ದೂರಕ್ಕೆ ಹೋಗಿದ್ದರೆ ಆಕೆ ಬಂದು ತನ್ನ ವಾದ ಮಂಡಿಸುವ ವರೆಗೆ ಆರೋಪಿಗೆ ಜಾಮೀನು ಇಲ್ಲ. ಇದೆಷ್ಟು ಕೆಟ್ಟದಾದ ನ್ಯಾಯ ವಿಲೇವಾರಿ ರೀತಿ.

ಹೇಗಿದ್ದರೂ ಮದುವೆ ವಿಚ್ಛೇದನದ ವಿಷಯದಲ್ಲಿ ಮುಸ್ಲಿಮರನ್ನು ಜೈಲಿಗಟ್ಟಿದರೆ ಮಾತ್ರ ಈ ಸರಕಾರಕ್ಕೆ ನೆಮ್ಮದಿ ಇರುವಂತಿದೆ. ತ್ರಿವಳಿ ತಲಾಕನ್ನು ಮುಸ್ಲಿಮರು ಬೆಂಬಲಿಸುವುದಿಲ್ಲ. ತೊಂಬತ್ತು ದಿವಸ ಕಳೆಯದೆ ತಲಾಕ್ ಸಂಭವಿಸುವುದೂ ಇಲ್ಲ. ವಿಷಯ ಹೀಗಿರುತ್ತಾ ಮತ್ತು ಸುಪ್ರೀಂಕೋರ್ಟೇ ಸಂವಿಧಾನ ಬಾಹಿರ ಎಂದಿರುವಾಗ ಕೇಂದ್ರ ಸರಕಾರ ವಿಶೇಷ ಕಾಯ್ದೆ ತರುವುದು ಎಷ್ಟು ಸರಿ?

ತ್ರಿವಳಿ ತಲಾಕಿನಿಂದ ಮಹಿಳೆಯರಿಗೆ ತೊಂದರೆಯಾಗಿದೆಯೋ ಲಾಭವಾಗಿದೆಯೋ ಎಂದು ಸ್ವಯಂ ಮಹಿಳೆಯರು ನಿರ್ಧರಿಸ ಬಹುದಷ್ಟೇ. ಕೆಲವೊಮ್ಮೆ ಪತಿಯೊಂದಿಗೆ ಇರಲು ಇಷ್ಟವಿಲ್ಲದ ಮಹಿಳೆಗೆ ತೊಂಬತ್ತು ದಿವಸ ಕಾಯುವ ಕಷ್ಟ ಇಲ್ಲದಾಗುತ್ತದೆ. ಇನ್ನು ಮಹಿಳೆಗೆ ಪತಿಯೊಂದಿಗೆ ಜೀವಿಸುವ ಹಕ್ಕು ತೊಂಬತ್ತು ದಿವಸಗಳ ವರೆಗೂ ಇಸ್ಲಾಮಿನ ತಲಾಕ್ ಪ್ರಕಾರ ಊರ್ಜಿತದಲ್ಲಿರುತ್ತದೆ. ಅಷ್ಟರಲ್ಲಿ ಅವರಿಗೆ ಒಂದಾಗುವ ಸದವಕಾಶವಿದೆ. ತ್ರಿವಳಿ ತಲಾಕನ್ನು ಮುಸ್ಲಿಮರು ಒಪ್ಪುವುದಿಲ್ಲ. ಆದರೆ ತ್ರಿವಳಿ ತಲಾಕಿಗಾಗಿ ಮೂರು ವರ್ಷ ಜೈಲಿಗೆ ಹಾಕುವು ದನ್ನು ಮುಸ್ಲಿಂ ಮಹಿಳೆಯರೂ ಒಪ್ಪುವುದಿಲ್ಲ. ಆದ್ದರಿಂದ ತ್ರಿವಳಿ ತಲಾಕ್ ಮಸೂದೆ ವಿರೋಧಿ ಹೋರಾಟದಲ್ಲಿ ಒಂಬತ್ತು ಕೋಟಿ ಮುಸ್ಲಿಮ್ ಮಹಿಳೆಯರು ಭಾಗವಹಿಸುವ ಮೂಲಕ ದೇಶಕ್ಕೆ ಸಂದೇಶ ಸಾರಿದ್ದಾರೆ. ಮೋದಿ ಸರಕಾರಕ್ಕೆ ಇದು ಕಂಡಿಲ್ಲವೇ?