ಅತ್ಯಾಚಾರ ಪೀಡಿತೆಯ ಕೈಗೆ ರಾಖಿ ಕಟ್ಟಿದರೆ ಜಾಮೀನು; ಆರೋಪಿಗೆ ಶರತ್ತು ವಿಧಿಸಿದ ಮಧ್ಯಪ್ರದೇಶ ಹೈಕೋರ್ಟ್

0
1216

ಸನ್ಮಾರ್ಗ ವಾರ್ತೆ

ಭೋಪಾಲ,ಆ.3: ದೂರುದಾರೆಯ ಕೈಗೆ ರಾಖಿ ಕಟ್ಟಿದರೆ ಅತ್ಯಾಚಾರ ಆರೋಪಿಗೆ ಜಾಮೀನು ಕೊಡಬಹುದು ಎಂದು ಮಧ್ಯಪ್ರದೇಶ ಹೈಕೋರ್ಟು ತಿಳಿಸಿದೆ.

“ಎಲ್ಲ ಕಾಲದಲ್ಲಿಯೂ ದೂರುದಾರೆಯನ್ನು ಸಂರಕ್ಷಿಸುವೆ ಎಂದು ಪ್ರಮಾಣ ಮಾಡಬೇಕು. ರಾಖಿ ಕಟ್ಟುತ್ತಿರುವ ಫೋಟೊ ಹಾಜರುಪಡಿಸಬೇಕು” ಎಂದು ಹೈಕೋರ್ಟು ಜಾಮೀನಿಗೆ ಶರ್ತ ವಿಧಿಸಿದೆ. ಮಧ್ಯಪ್ರದೇಶ ಹೈಕೋರ್ಟಿನ ಇಂದೋರ್ ಪೀಠವು ರಾಖಿ ಕಟ್ಟುವ ನಿರ್ದೇಶ ನೀಡಿದೆ.

ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಹರಕೆಯ ಭಾಗವಾಗಿ ದೂರುದಾರೆಗೆ 11,000ರೂಪಾಯಿ ಕೊಡಲು ಕೋರ್ಟು ಆರೋಪಿ ವಿಕ್ರಮ ಬಾರ್ಗಿಗೆ ತಿಳಿಸಿದೆ. ನಂತರ ಕಳೆದ ವಾರ ಐವತ್ತು ಸಾವಿರ ರೂಪಾಯಿ ಬಾಂಡಿನಲ್ಲಿ ಆರೋಪಿ ಜಾಮೀನು ಪಡೆದುಕೊಂಡಿದ್ದಾನೆ.

ಆರೋಪಿ ಆಗಸ್ಟ್ 3 ರಂದು ಬೆಳಗ್ಗೆ 11 ಗಂಟೆಗೆ ಪತ್ನಿಯನ್ನು ಕರೆದುಕೊಂಡು ಸಿಹಿ ಫಲಾಹಾರದೊಂದಿಗೆ ದೂರುದಾರೆಯ ಮನೆಗೆ ಹೋಗಬೇಕು. ದೂರುದಾರೆ ತನ್ನ ಕೈಗೆ ರಾಖಿ ಕಟ್ಟಲು ಹೇಳಬೇಕು. ಎಲ್ಲ ಕಾಲವೂ ಅವಳನ್ನು ಸಂರಕ್ಷಿಸುವ ಪ್ರಮಾಣ ಮಾಡಬೇಕು ಎಂದು ಕೋರ್ಟು ಆದೇಶದಲ್ಲಿ ತಿಳಿಸಿದೆ.

ರಕ್ಷಾ ಬಂಧನ್ ಸಂದರ್ಭದಲ್ಲಿ ಸಹೋದರನು ಸಹೋದರಿಗೆ ಕೊಡುವ 11,000 ರೂಪಾಯಿಯನ್ನು ಆರೋಪಿಯು ದೂರುದಾರೆಗೆ ನೀಡಬೇಕು. ದೂರುದಾರೆಯಿಂದ ಶುಭಾಶಯ ಪಡೆದುಕೊಳ್ಳಬೇಕು. ಸಿಹಿಫಲಾಹಾರ, ಉಡುಪು ಖರೀದಿಸಲು 5000 ರೂಪಾಯಿ ದೂರುದಾರೆಯ ಪುತ್ರನಿಗೆ ನೀಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ.

ಮನೆಯೊಳಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ ಎಂದು ವಿಕ್ರಂ ಬಾರ್ಗಿಯ ವಿರುದ್ಧ ಉಜ್ಜೈನಿ ಜಿಲ್ಲೆಯ ಮಹಿಳೆ ದೂರು ನೀಡಿದ್ದು, ಆರೋಪಿ ದೂರುದಾರೆಯ ನೆರೆಯ ಮನೆಯವನಾಗಿದ್ದಾನೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಸಿ.