ಮೋದಿ, ಅಮಿತ್ ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ಶಿವರಾಜ್ ಸಿಂಗ್ ಚೌಹಾನ್

0
364

ಸನ್ಮಾರ್ಗ ವಾರ್ತೆ

ಪಣಜಿ,ಆ.19: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ 370ನೆ ವಿಧಿ ರದ್ದು ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಶ್ರೀಕೃಷ್ಣಾರ್ಜುನರಾಗಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾನ್ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ನಿರಂತರ ಎರಡು ಸೋಲು ಕಂಡು ನಿರ್ಣಾಯಕ ಹಂತದಲ್ಲಿ ಸಾಗುತ್ತಿರುವ ಕಾಂಗ್ರೆಸ್‍ನ್ನು ತೊರೆದು ಓಡಿದ ಹೋದ ವ್ಯಕ್ತಿ ರಾಹುಲ್ ಗಾಂಧಿಯಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಗೋವಾದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತಾಡುತ್ತಿದ್ದರು.

ಮೋದಿ ಅಮಿತ್ ಶಾ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿದೆ. ಕೃಷ್ಣ, ಅರ್ಜುನರಂತೆ ದೇಶಕ್ಕೆ ನಾಯಕ ನೀಡುವುದರಲ್ಲಿ ಅವರು ವ್ಯಸ್ತವಾಗಿದ್ದಾರೆ. ಕಾಶ್ಮೀರ ವಿಷಯದಲ್ಲಿ ಸೋನಿಯಾ ಗಾಂಧಿ ಮೌನ ವಹಿಸಿದ್ದಾರೆ. ಈ ವಿಷಯದಲ್ಲಿ ತಾತ್ಕಾಲಿಕ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಬಹಿರಂಗಪಡಿಸಬೇಕೆಂದು ಶಿವರಾಜ್ ಸಿಂಗ್ ಚೌಹಾನ್ ಹೇಳಿದರು. ಕೇಂದ್ರದ ನಿರ್ಧಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಅರಿಯದೆ ಕಾಂಗ್ರೆಸ್ ದಿಗ್ಮೂಢವಾಗಿದೆ ಎಂದು ಅವರು ಕುಟುಕಿದರು. ಮಾಜಿ ಪ್ರಧಾನಿ ಜವಹರಾಲ್ ನೆಹರೂರ ತಪ್ಪು ನೀತಿಯನ್ನು ಜಮ್ಮು-ಕಾಶ್ಮೀರ ಮತ್ತು ಗೋವಾ ಅನುಭವಿಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನೆಹರೂ ಜವಾಬ್ದಾರರು ಎಂದು ಅವರು ಆರೋಪಿಸಿದರು.