ಪ್ರಾರ್ಥನೆ ಹೇಗಿರಬೇಕು?

0
494

ಸಂಗ್ರಹ: ಎನ್.ಎಂ. ಪಡೀಲ್

ಅಬೂ ಹುರೈರಾ(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು, “ನಿಮ್ಮಲ್ಲಿ ಓರ್ವನು ಅವಸರ ತೋರದಿರುವವರೆಗೆ ಅವನ ಪ್ರಾರ್ಥನೆಗೆ  ಉತ್ತರ ಲಭಿಸುತ್ತದೆ. (ಅವಸರ ತೋರಿಸುವವನು) ಹೀಗೆ ಹೇಳುತ್ತಾನೆ: ನಾನು (ಎಷ್ಟು ಬಾರಿ) ಪ್ರಾರ್ಥಿಸಿದೆ. ಆದರೆ ಉತ್ತರ ಲಭಿಸಲಿಲ್ಲ.”

ದೇವಗ್ರಂಥ ಕುರ್‍ಆನ್‍ನಲ್ಲಿ ಒಂದು ಪ್ರಾರ್ಥನೆ ಯಿದೆ. ಪ್ರವಾದಿ ಝಕರಿಯ್ಯಾ(ಅ)ರ ಪ್ರಾರ್ಥನೆ ದೇವನೊಂದಿಗೆ ಪ್ರಾರ್ಥಿಸುವಾಗ ಪಾಲಿಸಬೇಕಾದ ಶಿಷ್ಟಾಚಾರಗಳನ್ನೊಳಗೊಂಡ ಪ್ರಾರ್ಥನೆ. ಅದು ಹೀಗಿದೆ: “ಓ ನನ್ನ ಪ್ರಭೂ, ನನ್ನ ಎಲುಬುಗಳು ಕೂಡ ದುರ್ಬಲಗೊಂಡಿದೆ. ತಲೆಯು ವೃದ್ಧಾಪ್ಯ ದಿಂದಾಗಿ ಉರಿದೆದ್ದಿದೆ. ಓ ನನ್ನ ಪ್ರಭೂ, ನಿನ್ನನ್ನು ಪ್ರಾರ್ಥಿಸಿ ನಾನೆಂದೂ ನಿರಾಶನಾಗಲಿಲ್ಲ. ನಿಶ್ಚಯವಾಗಿಯೂ ನನಗೆ  ನನ್ನ ಅನಂತರ ನನ್ನ ಬಂಧು ಬಳಗದವರ ಕೇಡಿನ ಭಯವಿದೆ ಮತ್ತು ನನ್ನ ಪತ್ನಿ ಬಂಜೆಯಾಗಿರುತ್ತಾಳೆ. ನೀನು ನಿನ್ನ ವಿಶಿಷ್ಟ ಅನುಗ್ರಹದಿಂದ ನನಗೆ ಓರ್ವ ಉತ್ತರಾಧಿ ಕಾರಿಯನ್ನು ದಯಪಾಲಿಸು.” (ಮರ್ಯಮ್: 4-5)

ಪ್ರವಾದಿ ಝಕರಿಯಾರ ಪ್ರಾರ್ಥನೆಯಲ್ಲಿ ನಮಗೆ ಹಲವು ಪಾಠಗಳಿವೆ:

ಒಂದು, ಪ್ರಾರ್ಥನೆಗೆ ಉತ್ತರ ದೊರೆಯಲು ಅವಸರ ತೋರಬಾರದು. ಅವಸರ ತೋರುವವರ ಪ್ರಾರ್ಥನೆಯನ್ನು ಅಲ್ಲಾಹನು ಪರಿಗಣಿಸುವುದಿಲ್ಲ. ಪ್ರವಾದಿ ಝಕರಿಯಾ(ಅ)ರು ಈ ಪ್ರಾರ್ಥನೆ ಮಾಡುವಾಗ ಅವರಿಗೆ ನೂರು ವರ್ಷ ಪತ್ನಿಗೆ ತೊಂಬತ್ತು ವರ್ಷ. ವಿವಾಹವಾದ ಸಮಯದಿಂದ ಅವರು ಸಂತಾನಕ್ಕಾಗಿ ಪ್ರಾರ್ಥಿಸಿರಬಹುದಲ್ಲವೇ? ಅಂದರೆ ಯುವಕರಾಗಿದ್ದಾಗಲೇ ಈ ಪ್ರಾರ್ಥನೆ ಆರಂಭಿಸಿದ್ದರು. ಕಾಲ  ತುಂಬಾ ಕಳೆದು ಹೋಯಿತು. ಅರ್ಧ ಶತಕವೇ ಕಳೆದು ಹೋಯಿತು. ಹಾಗಿದ್ದರೂ ಅವರು ಸಂತಾನ ಲಬ್ದಿಗಾಗಿ ಪ್ರಾರ್ಥನೆಯನ್ನು  ಮುಂದುವರಿಸಿದರು. ಆದರೂ ಕೂಡ ಅವರ ಪ್ರಾರ್ಥನೆಯಲ್ಲಿ ನಮಗೆ ಅವಸರದ ಅಂಶ ಕೂಡ ಗೋಚರಿಸುವುದಿಲ್ಲ. ಆತುರ ತೋರುವುದು  ಪ್ರಾರ್ಥ ನೆಯ ಶಿಷ್ಟಾಚಾರಕ್ಕೆ ಒಪ್ಪುವಂತಹದ್ದಲ್ಲ ಎಂಬ ವಿಷಯವು ಈ ಹದೀಸ್‍ನಿಂದ ಸ್ಪಷ್ಟವಾಗುತ್ತದೆ.

ನಮ್ಮಲ್ಲಿ ಕೆಲವರು ಹಾಗೆಯೇ ಇರುತ್ತಾರೆ. ಒಂದು ವಿಷಯಕ್ಕಾಗಿ ಹಲವು ಬಾರಿ ಪ್ರಾರ್ಥಿಸು ತ್ತಾರೆ. ಅಲ್ಲಾಹನು ಕೂಡಲೇ ಈಡೇರಿಸದಿದ್ದರೆ  ನಿರಾಶರಾಗುತ್ತಾರೆ. ಅಲ್ಲಾಹನು ನನ್ನನ್ನು ನೋಡು ವುದೇ ಇಲ್ಲ ಎಂದು ದೂರುತ್ತಾರೆ. ಬಳಿಕ ತನ್ನ ಅವಶ್ಯಕತೆಗಳನ್ನು ಅಲ್ಲಾಹನ ಮುಂದೆ  ಹೇಳುವುದನ್ನೇ ಬಿಟ್ಟು ಬಿಡುತ್ತಾರೆ. ನಮ್ಮ ಈ ರೀತಿಯ ನಡ ವಳಿಕೆಯನ್ನು ಅಲ್ಲಾಹನು ಇಷ್ಟಪಡುವುದಿಲ್ಲ ಎಂದು ಪ್ರವಾದಿಯವರು(ಸ)  ಕಲಿಸಿಕೊಟ್ಟಿದ್ದಾರೆ.

ಎರಡು, ನಮ್ಮ ಅಗತ್ಯ ಈಡೇ ರುವವರೆಗೆ ಪ್ರಾರ್ಥಿಸುತ್ತಲೇ ಇರಬೇಕು. ಇದು ಝಕರಿಯಾ(ಅ)ರ ಪ್ರಾರ್ಥನೆಯಲ್ಲಿರುವ ಎರಡನೆಯ ಸಂದೇಶ. ಅಮ್ಮ ನೊಂದಿಗೆ ಆಟಿಕೆಗಾಗಿ ಹಠ ಹಿಡಿಯುವ ಮಗುವಿನ ಹಾಗೆ ಮಗು ತನ್ನ ಆವಶ್ಯಕತೆಯನ್ನು ಹೇಳುತ್ತದೆ. ತಾಯಿ ಗಮನ ನೀಡುವುದಿಲ್ಲ. ಮಗು ಪುನಃ ಕೇಳುತ್ತದೆ. ಅಮ್ಮಾ ಖರೀದಿಸಿ ನೀಡುವುದಿಲ್ಲ. ನಂತರ ಮಗು ತಾಯಿಯ ಹಿಂದೆಯೇ ಜೋತು ಬೀಳುತ್ತದೆ. ಅಳಲಾರಂಭಿಸುತ್ತದೆ. ತಾಯಿಯ ವಸ್ತ್ರ ವನ್ನು ಹಿಡಿದೆಳೆಯುತ್ತದೆ. ಸಿಕ್ಕಿಯೇ ತೀರಬೇಕು ಎಂಬ ಬಹಳ ಹಠ. ಕೊನೆಗೆ ಅಮ್ಮ ಹೇಗೂ ಮಗುವಿಗೆ  ಮಣಿದು ಆಟಿಕೆಯನ್ನು ತೆಗೆದುಕೊಡು ತ್ತಾಳೆ. ನಾವು ಇದೇ ರೀತಿ ಅಲ್ಲಾಹನ ಮುಂದೆ ಪ್ರಾರ್ಥಿಸಬೇಕು. ಒಂದು ಸಣ್ಣ ಮಗುವಿನಂತೆ ನಮ್ಮ  ಅಗತ್ಯ ಈಡೇರುವವರೆಗೆ ಅಲ್ಲಾಹನೊಂದಿಗೆ ಅತ್ತು ಕರೆದು ಪ್ರಾರ್ಥಿಸುತ್ತಲೇ ಇರಬೇಕು.

ಮೂರು, ಉತ್ತರ ಲಭಿಸುತ್ತದೆಯೆಂಬ ನೂರು ಶೇಕಡಾ ವಿಶ್ವಾಸದೊಂದಿಗೆ ಪ್ರಾರ್ಥಿಸಬೇಕು. ಪ್ರಾರ್ಥನೆಯ ಆರಂಭದಲ್ಲಿ ಝಕರಿಯ್ಯಾ ಶೈಲಿ  ನೋಡಿ: “ದೇವಾ, ನನ್ನ ದೇಹ ದುರ್ಬಲವಾಗಿದೆ. ನಾನು ವಯೋವೃದ್ಧನೂ ಪತ್ನಿ ಬಂಜೆಯೂ ಆಗಿ ದ್ದಾಳೆ. ಒಂದು ಮಗುವಿಗೆ ಜನ್ಮ ನೀಡಲು ಅವಳಿಗೆ ಸಾಧ್ಯವಿಲ್ಲ.” ಬಳಿಕ ಅವರು ಕೇಳುವ ವಿಷಯ ನಮಗೆ ಆಶ್ಚರ್ಯ ಉಂಟುಮಾಡುತ್ತದೆ, “ಹೀಗೆಲ್ಲಾ ಇದ್ದರೂ ಅಲ್ಲಾಹನೇ,  ಒಂದು ಸಂತಾನಕ್ಕಾಗಿ ನಾನು ನಿನ್ನೊಡನೆ ಪ್ರಾರ್ಥಿಸುತ್ತೇನೆ. ಇದಕ್ಕಾಗಿ ಹಲವು ವರ್ಷಗಳಷ್ಟು ಕಾದೆ. ಆದರೆ ನಿನ್ನೊಡನೆ ಬೇಡಿ ನಾನು ನಿ ರಾಶನಾಗಲಿಲ್ಲ.” ಈ ಪ್ರಾರ್ಥನೆ ಯಲ್ಲಿ ತನ್ನ ಪ್ರಾರ್ಥನೆ ಈಡೇರಿಸಲ್ಪಡುತ್ತದೆಯೆಂಬ ಸಂಪೂರ್ಣ ವಿಶ್ವಾಸ ಕಂಡುಬರುತ್ತದೆ. ಕೊನೆಗೆ ಅಲ್ಲಾಹನು ಅವರೊಡನೆ ಹೇಳುತ್ತಾನೆ:
“ಓ ಝಕರಿಯ್ಯಾ, ನಾವು ನಿಮಗೆ ಓರ್ವ ಬಾಲಕನ ಸುವಾರ್ತೆ ನೀಡುತ್ತೇವೆ.” (ಮರ್ಯಮ್: 7)

ಕೆಲವರು ಪ್ರಾರ್ಥಿಸಿ ನೋಡುವ. ಈಡೇರಲೂ ಬಹುದು ಎಂಬ ಭಾವನೆಯೊಂದಿಗೆ ಪ್ರಾರ್ಥಿಸು ತ್ತಾರೆ. ಹಾಗೆಂದಾದರೆ ಅವರ ಪ್ರಾರ್ಥನೆ  ಫಲಿಸುವುದಿಲ್ಲ. ಪ್ರವಾದಿಯವರು(ಸ) ಹೇಳಿರುವರು: “ಅಲ್ಲಾಹನೊಂದಿಗೆ ಪ್ರಾರ್ಥಿಸುವಾಗ ಉತ್ತರ ಲಭಿಸುತ್ತದೆಂಬ ದೃಢವಿಶ್ವಾಸವಿರಬೇಕು.  ಆಲಸ್ಯ ದೊಂದಿಗೆ ಮಾಡುವ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ.”

ಪ್ರಾರ್ಥಿಸುವಾಗ ಪಾಲಿಸಬೇಕಾದ ಇನ್ನೊಂದು ಶಿಷ್ಟಾಚಾರವಿದೆ. ಅದೆಂದರೆ ನಮ್ಮ ಅಸಹಾಯಕತೆ ದುಃಖ, ನೋವು, ದೌರ್ಬಲ್ಯವನ್ನು ಅಲ್ಲಾಹನ ಮುಂದೆ ಇಡಬೇಕು. ಬಳಿಕ ನಮ್ಮ ಅಗತ್ಯಗಳನ್ನು ಕೇಳುವುದು. ಆಗ ಅಲ್ಲಾಹನೊಂದಿಗೆ ಮಾತನಾಡು ತ್ತಿರುವುದು  ನಾಲಗೆಯಾಗಿರುವುದಿಲ್ಲ. ಬದಲಾಗಿ ಹೃದಯವಾಗಿರುತ್ತದೆ.ಪ್ರವಾದಿಯವರ(ಸ) ಪ್ರಾರ್ಥನೆಗಳು ಅದೇ ರೀತಿ ಇತ್ತು.

ಅದಕ್ಕೊಂದು  ಉದಾಹರಣೆ ಹೇಳುತ್ತೇನೆ. ಪ್ರವಾದಿ ಮುಹಮ್ಮದ್(ಸ)ರ ಮಟ್ಟಿಗೆ ಅಬೂತಾಲಿಬ್ ಆಧಾರಸ್ತಂಭವಾಗಿದ್ದರು. ಮನೆ ಯಲ್ಲಿ ಪತ್ನಿ ಖದೀಜಾ ಕಣ್ಣಿನ ತಂಪಾಗಿದ್ದರು. ಸಂಕಷ್ಟಗಳ ಸರಮಾಲೆಗಳಿಂದ ಜರ್ಜರಿತರಾಗಿದ್ದ ಪ್ರವಾದಿವರ್ಯರಿಗೆ(ಸ) ಇವರೀರ್ವರ ಉಪಸ್ಥಿತಿ ನೀಡಿದ ಧೈರ್ಯ, ಸಮಾಧಾನ ಅಷ್ಟಿಷ್ಟಲ್ಲ.  ಆದರೆ ಅವರೀರ್ವರು ಒಂದೇ ವರ್ಷ ಇಹ ಲೋಕಕ್ಕೆ ವಿದಾಯ ಹೇಳಿದರು- ಮನೆಯಲ್ಲಿ ಪ್ರವಾದಿಯವರು(ಸ) ಒಂಟಿಯಾದರು. ಊರಿನಲ್ಲಿದ್ದ ಅಭಯವೂ ಹೋಯಿತು. ಭವಿಷ್ಯದಲ್ಲಿ ನ್ಯೂನ್ಯತೆಯೇ ಗೋಚರಿಸುತ್ತಿತ್ತು. ಬೇರೆ ಏನು ದಾರಿಯೂ ತೋಚುವುದಿಲ್ಲ. ಆ ಸಂದರ್ಭದಲ್ಲಿ ಅವರಿಗೆ ತಾಇಫ್ ನೆನಪಿಗೆ ಬಂತು. ಅಲ್ಲಿ  ತಾಯಿಯ ಕುಟುಂಬವಿದೆಯಲ್ಲಾ. ಅದು ತನಗೆ ಕೊನೆಯ ಆಸರೆಯಾಗಬಹುದು ಎಂದುಕೊಂಡು ಪ್ರವಾದಿ(ಸ)ರು ತಾಇಫ್‍ಗೆ ಹೋದರು.  ಆದರೆ ಅಲ್ಲಿನ ಪರಿಸ್ಥಿತಿ ಕೈ ಮೀರಿತ್ತು. ಜನರು ಅವರನ್ನು ಊರಿನಿಂದ ಹೊಡೆದೋಡಿಸಲು ಪ್ರಯತ್ನಿಸಿದರು. ಊರಿನ ಮಕ್ಕಳು ಕಲ್ಲೆಸೆದರು.  ರಕ್ತ ಸುರಿಯುವ ದೇಹ, ಗಾಯವಾದ ಮನದೊಂದಿಗೆ ಪ್ರವಾದಿ(ಸ) ತಿರುಗಿ ನಡೆದರು. ಬಳಲಿ, ಆಯಾಸ, ನೋವು ಜೊತೆಯಾಗಿ ಒಂದು  ತೋಟದಲ್ಲಿ ವಿಶ್ರಾಂತಿ ಪಡೆದರು. ಎಲ್ಲವನ್ನೂ ಕಳಕೊಂಡ ಒಂಟಿಯಾದವನ ನೋವು.

ರೋದಿಸುವ ಮನಸ್ಸಿನಿಂದ ಪ್ರವಾದಿ(ಸ)ರು ಅಲ್ಲಾಹನೊಂದಿಗೆ ಪ್ರಾರ್ಥಿಸಿದರು: ಅಲ್ಲಾಹನೇ, ನನ್ನ ಶಕ್ತಿಯು ದುರ್ಬಲವಾಗಿದೆ. ನನ್ನ ಸಾಧನಾನುಕೂಲತೆಗಳು ಪರಿಮಿತವಾಗಿದೆ. ಜನರು  ನನಗೆ ಬೆಲೆ ನೀಡುವುದಿಲ್ಲ. ಕರುಣಾನಿಧಿಯೇ, ನೀನು ದುರ್ಬಲರ ಹಾಗೂ ಸಂಕಷ್ಟ ಅನುಭವಿಸುವವರ ರಕ್ಷಕನಲ್ಲವೇ? ನೀನು ನನ್ನನ್ನು  ಯಾರಿಗೆ ಒಪ್ಪಿಸುವೆ? ನನ್ನೊಂದಿಗೆ ಕ್ರೂರವಾಗಿ ವರ್ತಿಸುವ ವಿದೇಶಿಯರಿಗೋ ಅಥವಾ ಧಮನ ರೀತಿ ಕೈಗೊಳ್ಳುವ ಶತ್ರುವಿಗೊ? ಆದರೆ ನಿ ನಗೆ ನನ್ನಲ್ಲಿ ಕೋಪವಿಲ್ಲದಿದ್ದರೆ ನನಗದು ಸಮಸ್ಯೆಯೇ ಅಲ್ಲ. ಆದರೆ ನಿನ್ನ ಸಂರಕ್ಷಣೆಯೇ ನನಗೆ ಹಿತವಾಗಿದೆ. ನಿನ್ನ ಬೆಳಕು ಕತ್ತಲನ್ನು  ಹೊಡೆದೋಡಿಸುತ್ತದೆ. ಎಂತಹ ಸುಂದರ ಪ್ರಾರ್ಥನೆ ಅಲ್ಲಾಹನಿಗೆ ಇಂತಹ ಪ್ರಾರ್ಥನೆ ಬಹಳ ಇಷ್ಟ. ನಿಷ್ಕಳಂಕವಾಗಿ ಹೃದಯಾಳಾಂತರದಿಂದ  ಬರುವ ಪ್ರಾರ್ಥನೆಯನ್ನು ಅಲ್ಲಾಹನು ಖಂಡಿತವಾಗಿಯೂ ಸ್ವೀಕರಿಸುತ್ತಾನೆ ಎಂದು ಪ್ರವಾದಿ(ಸ)ರು ಒತ್ತಿ ಹೇಳಿದ್ದಾರೆ.