ಪ್ರತಿಭಟನಾ ಸ್ಥಳಗಳಲ್ಲಿ ತೂಗುಹಾಕಬೇಕಾದ ಕೇರಳದ ಫೋಟೋಗಳು

0
806

ಏ. ಕೆ. ಕುಕ್ಕಿಲ

ಚರ್ಚ್ ನಲ್ಲಿ ನಮಾಜ್ ಗೆ ಅವಕಾಶ ಮಾಡಿಕೊಟ್ಟ ಕ್ರೈಸ್ತರು, ಹಿಂದೂಗಳಿಗೆ ಮಸೀದಿಯಲ್ಲಿ ಆಶ್ರಯ ಕೊಟ್ಟ ಮುಸ್ಲಿಮರು ಮತ್ತು ದೇವಾಲಯದ ಆವರಣದಲ್ಲಿ ಈದ್ ನಮಾಜ್ ಗೆ ಸೌಲಭ್ಯ ಒದಗಿಸಿದ ಹಿಂದೂಗಳು… ಹೀಗೆ ಕೇರಳದಿಂದ ಒಂದರ ಮೇಲೊಂದರಂತೆ ಸುದ್ದಿಗಳು ಮತ್ತು ಫೋಟೋಗಳು ಹರಿದು ಬರುತ್ತಲೇ ಇವೆ. ಆದರೆ, ಯಾವ ಮಂದಿರ, ಮಸೀದಿ, ಚರ್ಚ್ ಗಳೂ ಅಪವಿತ್ರವಾದ ಬಗ್ಗೆ ಯಾರೂ ಈವರೆಗೂ ದೂರಿಕೊಂಡಿಲ್ಲ. ಗೋಮಾಂಸ ಸೇವಿಸುವವರು, ಹಂದಿ ಮಾಂಸ ಸೇವಿಸುವವರು ಮತ್ತು ಇವಾವುದನ್ನೂ ಸೇವಿಸದವರು ಜೊತೆಯಾಗಿಯೇ ಮಂದಿರ, ಮಸೀದಿ, ಚರ್ಚ್ ಗಳ ಒಳಹೊಕ್ಕು ಸೇವೆಯಲ್ಲಿ ನಿರತರಾಗಿದ್ದಾರೆ. ಅಂದಹಾಗೆ, ದುರಂತದ ವೇಳೆ ನಮ್ಮ ಮಧ್ಯೆ ಈ ಮಟ್ಟದ ಅನ್ಯೋನ್ಯತೆ ಸಾಧ್ಯವೆಂದಾದರೆ, ದುರಂತ ರಹಿತ ಹೊಟ್ಟೆ ತುಂಬಿದ ದಿನಗಳಲ್ಲಿ ಯಾಕೆ ಇದು ಸಾಧ್ಯವಾಗುವುದಿಲ್ಲ? ನಾವೇಕೆ ಪರಸ್ಪರರನ್ನು ಅನ್ಯರಾಗಿಸಿ ಬದುಕುತ್ತೇವೆ? ಹಂದಿಯ ತಲೆ, ಗೋವಿನ ತಲೆಗಳಿಗೆಲ್ಲ ಯಾಕೆ ಆಗ ಮಹತ್ವ ಬರುತ್ತದೆ?

 ಸಾಧ್ಯವಾದರೆ, ಈ ಅನ್ಯೋನ್ಯತೆಯ ಫೋಟೋಗಳನ್ನು ಕಟೌಟ್ ಗಳಾಗಿಸಿ ಈ ದೇಶದ ಪ್ರಮುಖ ಪ್ರತಿಭಟನಾ ಸ್ಥಳಗಳಲ್ಲಿ ನಿಲ್ಲಿಸಬೇಕು. ಭಾಷಣ ಪೀಠದ ಮುಂಭಾಗದಲ್ಲಿ ಬರುವಂತೆ ಈ ಕಟೌಟ್ ಗಳನ್ನು ಸ್ಥಾಪಿಸಿದರೆ ಇನ್ನಷ್ಟು ಉತ್ತಮ. ಕನಿಷ್ಠ, ಹಿಂದೂ ಮತ್ತು ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟುವ ಭಾಷಣಕೋರರಲ್ಲಿ ಒಂದಿಷ್ಟು ಹಿಂಜರಿಕೆಯನ್ನಾದರೂ ಈ ಕಟೌಟ್ ಗಳು ಉಂಟುಮಾಡೀತು.