ಪ್ರಿಯಾ, ನಾನು ನಿಮಗೆ ದ್ರೋಹ ಬಗೆಯಲಾರೆ, ಆದರೂ… ಗಲ್ಫ್ ಪತಿಗೆ ಪತ್ನಿಯ ಪತ್ರ

0
3667

 

ನೂರೀ ಜಕ್ರಿಬೆಟ್ಟು

➡ ಹೌದು ಇಟ್ಟ ಭರವಸೆಗಳೆಲ್ಲವೂ ನುಚ್ಚು ನೂರಾಯಿತು. ಮತ್ತೆ ತಡವಾದ ನಿಮ್ಮ ಆಗಮನವನ್ನು ಅರಿತು ಹೆಣೆದುಕೊಂಡ ಭಾವನೆಗಳೆಲ್ಲವೂ ದಾರ ಕಡಿದುಕೊಂಡು ಚೆಲ್ಲಾಪಿಲ್ಲಿಯಾದುವು. ಸ್ವಪ್ನದಂತೆ ಕಳೆದ ಆ ನಲ್ವತ್ತೆರಡು ಮಧುರ ದಿನಗಳನ್ನು ಹಾದು ವರುಷಗಳೆಷ್ಟು ಉರುಳಿತು ಗೊತ್ತೇ? ನಿಮ್ಮ ಸುದೀರ್ಘ ವಿರಹದಿಂದ ನಾನು ಮಾನಸಿಕ ವಾಗಿಯೂ ದೈಹಿಕವಾಗಿಯೂ ಬಹಳಷ್ಟು ಬಳಲಿ ಬೆಂಡಾಗಿದ್ದೇನೆ. ವೈದ್ಯರಲ್ಲಿಗೆ ಹೋದಾಗ ನಿಮಗೆ ಯಾವ ತೊಂದರೆನೂ ಇಲ್ಲಮ್ಮಾ, ಮದ್ದು ಬೇಕಾಗಿಲ್ಲ. ಪತಿಯ ವಿರಹದಿಂದಲೇ ನೀವು ಹೀಗಾಗಿದ್ದೀರಿ ಎನ್ನುವರು. ಅಂದು ವಿಮಾನ ನಿಲ್ದಾಣದಲ್ಲಿ, ನನ್ನ ಕಣ್ಣಂಚಿನಲ್ಲಿ ಓಘವಾದ ಕಣ್ಣೀರನ್ನು ಒರೆಸುತ್ತಾ, ನೂರೀ… ದುಃಖಿಸದಿರು, ಬದುಕೆಂದರೆ ಸಿಹಿ-ಕಹಿಗಳ, ವಿರಹ-ವೇದನೆಗಳ ಸಮ್ಮಿಶ್ರವದು. ಅವನ್ನು ನಾವು ಜತೆಯಾಗಿ ಹಂಚಿಕೊಳ್ಳೋಣ. ಇನ್ಶಾಅಲ್ಲಾಹ್‌ ಆದಷ್ಟು ಬೇಗನೆ ಮರಳಿ ಬರುತ್ತೇನೆ. ದುಆಮೆ ಯಾದ್‌ ರಕೋ… ಎಂದು ಸಮಾಧಾನಿಸಿ ಗಲ್ಫ್‌ಗೆ ತೆರಳಿದಿರಿ. ಆದರೆ,

ನಿಮ್ಮ ಬರುವಿಕೆ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ನಾನು ಕೇವಲ ಕನಸು ಕಾಣುವವಳಾಗಿದ್ದೇನೆ. ನಿಮ್ಮ ಆರ್ಥಿಕ ಬಿಕ್ಕಟ್ಟು, ನೀವು ನಿಮ್ಮ ಅರಬಿಯಿಂದ ಅನುಭವಿಸುವ ಶೋಷಣೆ ಇದೆಲ್ಲವೂ ನಿಮ್ಮ ಬರುವಿಕೆಗೆ ಕತ್ತರಿ ಹಾಕಿದೆಯೆಂದು ನಿಮ್ಮ ಸಂಬಂಧಿಗಳ ಮಾತುಗಳಿಂದ ನಾನು ಅರ್ಥಮಾಡಿ ಕೊಂಡಿದ್ದೇನೆ. ನಿಮ್ಮ ವ್ಯಥೆ ಇನ್ನಷ್ಟು ಉಲ್ಬಣವಾಗದಿರಲೆಂದು ನಾನು ಇದುವರೆಗೂ ಸಹನೆಯ ಪರ್ವತವನ್ನೇ ಹೊತ್ತು ಕೊಂಡೆ. ನಿಮ್ಮನ್ನು ನೋಯಿಸುವ ಒಂದೇ ಒಂದು ಮಾತು ನನ್ನ ತುಟಿಗಳಿಂದ ಉದುರದಂತೆ ನಾನು ಸದಾ ಮುಂಜಾಗ್ರತೆ ವಹಿಸಿದೆ. ಏಕೆಂದರೆ ನಿಮ್ಮ ತೃಪ್ತಿಯೇ ನನ್ನ ತೃಪ್ತಿ. ನಿಮ್ಮ ಅಳಲು ಅದು ನನಗೂ ನೋವುಂಟು ಮಾಡುವುದು. ನನ್ನ ಅಮ್ಮನಿಂದ ನಾನು ಕಂಡು ಅನುಭವಿಸಿದ ಪಾಠವಿದು. ದಾಂಪತ್ಯ ಭದ್ರತೆಗೆ ಅದು ಅಗತ್ಯವೂ ಹೌದು. ಆದ್ದರಿಂದಲೇ ನನ್ನ ಎಲ್ಲ ಮಾನಸಿಕ ತೊಳಲಾಟ, ಸಿಕ್ಕುಗಳನ್ನು ಸಹನೆಯ ಒಡಲಲ್ಲಿ ಹುದುಗಿಟ್ಟೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಅನುದಿನದ ನಮಾಝ್‌ನಲ್ಲೂ ಬೊಗಸೆಯ ಕೈಗಳನ್ನೆತ್ತಿ ಕಣ್ಣೀರ ಕಣ್ಗಳಿಂದ ಧಾರಾಳ ಪ್ರಾರ್ಥಿಸಿದೆ. ಹೃದಯಾಂತರಾಳದಿಂದ ಹರಿದು ಬರುವ ನಿಷ್ಕಪಟ ಮತ್ತು ನಿಷ್ಕಳಂಕವಾದ ಪ್ರಾರ್ಥನೆ. ಆದರೆ,

    ಪ್ರಿಯರೇ ಸುದೀರ್ಘವಾದ ನಿಮ್ಮ ಅಗಲಿಕೆ ನನ್ನನ್ನು ಪರಿತಾಪಗೊಳಿಸಿದೆ. ನಾನಿಂದು ತುಲನೆ ಮಾಡಲಾಗದ ವೇದನೆಯ ಅಂಚಿನಲ್ಲಿದ್ದೇನೆ. ನನ್ನ ಅಹವಾಲನ್ನು ನಿಮ್ಮ ಮುಂದೆ ಹಂಚಿಕೊಳ್ಳದೆ ನಿರ್ವಾಹವಿಲ್ಲ. ನಾನು ನಿಮ್ಮಲ್ಲಿ ಹೇಳದೆ ಇನ್ಯಾರಲ್ಲಿ ಹೇಳಲಿ? ನಿಮ್ಮ ಬಾಳಸಂಗಾತಿ ಯಾದುದರಲ್ಲಿ ನಾನು ಖಂಡಿತ ಸಂತೃಪ್ತಳಾಗಿದ್ದೇನೆ. ಈ ನಿಟ್ಟಿನಲ್ಲಿ ನಾನು ಧನ್ಯೆ. ಅಷ್ಟೇ ಹರ್ಷಿತಳಾಗಿದ್ದೇನೆ ಕೂಡಾ. ಆದರೆ… ನಾನೂ ಆಸೆ, ಕನಸುಗಳಿರುವ ಕೋಮಲ ಜೀವಿ. ಅದರಲ್ಲೂ ಅಬಲೆ. ನಮ್ಮ ದಾಂಪತ್ಯ ಬದುಕು ಬರೀ ಟೆಲಿಫೋನ್‌ ಕರೆಗಳಲ್ಲೇ ಉಳಿದು ಬಿಡುವುದೋ ಎಂಬ ಭಯ ನನ್ನನ್ನಾವರಿಸಿ ಕೊಂಡಿದೆ. ದಂಪತಿಗಳೆಂದರೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಒಗ್ಗೂಡುವ ಪವಿತ್ರ ಒಪ್ಪಂದವಲ್ಲವೇ? ನಿಮಗೆ ಕುಟುಂಬದ ಹೊಣೆಯೊಂದಿಗೆ ಸಂಗಾತಿ ನೂರಿಯ ಮೇಲೂ ಜವಾಬ್ದಾರಿಕೆ ಇದೆ ತಾನೆ. ಪ್ರತಿ ಪತ್ನಿ ತನ್ನ ಗಂಡನನ್ನು ಸಂತೃಪ್ತಿ ಪಡಿಸಲು ಇಚ್ಛಿಸುತ್ತಾಳೆ. ಪತಿಯ ಸೇವೆ ಮಾಡಲು ಹೆಚ್ಚೆಚ್ಚು ಬಯಸುತ್ತಾಳೆ. ಇದು ನಿಸರ್ಗದ ವೈಶಿಷ್ಟ್ಯವೂ ಹೌದು!

ಆದರೆ ನಾನಿಂದು ಆ ಮಧುರ ಬದುಕಿನ ಸೌಭಾಗ್ಯದಿಂದ ವಂಚಿತಳಾಗಿದ್ದೇನೆ. ಏ.. ನೂರೀ… ನೀನು ಅದೃಷ್ಟವಂತೆ ಕಣೇ. ನಿನ್ನನ್ನು ಬಾಳಸಂಗಾತಿಯಾಗಿಸಲು ಸಮ್ಮತಿ ನೀಡಿದ ಆ ಜಂಟ್ಲ್‌ಮ್ಯಾನ್‌ ಗಲ್ಫ್‌ನಲ್ಲಿರುವುದಂತೆ. ನೀನಿನ್ನು ಗಲ್ಫಿಗನ ಪತ್ನಿಯೆಂದು ಕರೆಸಿಕೊಳ್ಳಲು ಹೆಚ್ಚು ದಿನವಿಲ್ಲ… ನಮ್ಮ ಒಂದುಗೂಡುವಿಕೆಗೆ ತುಸು ಮೊದಲು ಗೆಳತಿ ಅಸ್ಮಾ ಹೇಳಿದ ಈ ಮಾತು ಇಂದಿಗೂ ನನ್ನನ್ನು ಅಣಕಿಸುವಂತಿದೆ. ತನ್ನ ತಾಳ್ಮೆಯಲ್ಲಿ ಅಡಕವಾಗಿರುವ ಉರಿಯುತ್ತಿರುವ ನಿರೀಕ್ಷೆ ನಿರಂತರ ಮುಂದುವರಿಯುತ್ತಿರುವ ನಿಮ್ಮ ಬರುವಿಕೆಯನ್ನು ಪರಚಿ ಹಾಕಬಹುದೇನೋ ಎಂಬ ಅಳುಕು ನನ್ನನ್ನಾವರಿಸಿ ಕೊಂಡಿದೆ. ನಮ್ಮ ದಾಂಪತ್ಯದ ಸಾಕ್ಷಿಯಾದ ಅಬ್ದುಲ್ಲಾ ಕೂಡಾ ನಿಮ್ಮ ಸನ್ನಿದಾನವನ್ನು ಅರಸುತ್ತಾನೆ. ಅವನಿನ್ನೂ ತಂದೆಯ ಮುಖ ನೋಡದ ಹತ ಭಾಗ್ಯ. ನಿಮ್ಮ ಬರುವಿಕೆಯನ್ನೇ ಇಣುಕುತ್ತಿದ್ದಾನೆ‌. ನಾನು ಆತನ ವಾತ್ಸಲ್ಯಮಯಿ ಅಂಬೆ. ಆತನಿಗೆ ನಿಮ್ಮ ಪರಿಚಯವಿಲ್ಲದಿದ್ದರೂ ನಿಮ್ಮ ಪೂರ್ಣ ಚಿತ್ರಣವನ್ನು ನಾನವನ ಮನಸ್ಸಿನಲ್ಲಿ ಮುದ್ರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಮತ್ತು ಅದು ನನ್ನ ಬಾಧ್ಯತೆ ಕೂಡಾ. ಪರಿಣಾಮವಾಗಿ ಇಂದು ವಿಮಾನ ಹಾರಾಟದ ಸದ್ದನ್ನಾಲಿಸಿದ ತಕ್ಷಣ ಉತ್ಸಾಹದ ಚಿಲುಮೆಯಂತೆ ಉಣ್ಣುತ್ತಿರುವ ಅನ್ನದ ಬಟ್ಟಲನ್ನು ಬದಿಗಿಟ್ಟು, ಆಟಿಕೆಯ ವಸ್ತುವನ್ನು ದೂರಕ್ಕೆಸೆದು ಅಂಗೈಯಿಂದ ಚಪ್ಪಾಳೆ ತಟ್ಟುತ್ತಾ ಜಿಂಕೆಯ ಮರಿಯಂತೆ ಅಂಗಳಕ್ಕೆ ಜಿಗಿದು, ಬಾಪಾ… ಬನ್ನಿ ಬಾಪಾ…

ಗಗನದೆಡೆ ದಿಟ್ಟಿಸಿ ವಿಮಾನ ಕಣ್ಮರೆಯಾಗುವ ವರೆಗೂ ಕೂಗಾಡುವ ಅಬ್ದುಲ್ಲಾನನ್ನು ಕಂಡು ಅದೆಷ್ಟೋ ಬಾರಿ ನಾನು ನನಗರಿವಿಲ್ಲದೆ ಅತ್ತದ್ದಿದೆ. ಕಣ್ಮರೆಯಾದ ವಿಮಾನವನ್ನು ಕಂಡು, ಸಪ್ಪೆ ಮೋರೆಯೊಂದಿಗೆ ಪ್ರಶ್ನಾರ್ಥಕವಾಗಿ ನನ್ನನ್ನೇ ದಿಟ್ಟಿಸುವಾಗ ನಾನವನನ್ನು ಎದೆಗಪ್ಪಿಕೊಂಡು ಸಮಜಾಯಿಸುತ್ತೇನೆ. ಇದಂತೂ ನನಗೆ ಮಾಮೂಲಿ ಆಗಿ ಬಿಟ್ಟಿದೆ. ಹೌದು, ಅಲ್ಲಾಹನು ಕಣ್ಣೀರಿಗೆ ಬಣ್ಣ ನೀಡದ್ದು ಒಳ್ಳೆಯದೇ ಆಯಿತು. ಇಲ್ಲವಾದರೆ, ನನ್ನ ತಲೆದಿಂಬು ಇಡೀ ಮನೆಯನ್ನೇ ದುಃಖದ ಕಡಲಲ್ಲಿ ಮುಳುಗಿಸುತ್ತಿತ್ತು. ಗೊಂದಲಕ್ಕೆ ಕಾರಣವಾಗುತ್ತಿತ್ತು. ಪ್ರಿಯರೇ, ನನ್ನ ಒಂದೊಂದು ಮಾತುಗಳು ಮರುಳುಗಾಡಿನ ಉರಿಬಿಸಿಲಿನ ತಾಪದಲ್ಲಿ ತ್ರಾಸ ಪಡುವ ನಿಮ್ಮನ್ನು ನಿಬ್ಬೆರಗಾಗಿಸ ಬಹುದು. ನನ್ನ ನೂರಿಗೆ ಏನಾಯಿತೆಂದು ನೀವು ಹುಬ್ಬೇರಿಸ ಬಹುದು. ಎಂದಿನಂತಲ್ಲ, ನನ್ನ ಈ ಪತ್ರ ನಿಮ್ಮನ್ನು ಘಾಸಿಗೊಳಿಸಿದೆ ಎಂದೂ ನಾನು ಬಲ್ಲೆ. ಆದರೆ… ಪರಿಸ್ಥಿತಿ ನನ್ನನ್ನು ಈ ರೀತಿ ಬರೆಯುವಂತೆ ಪ್ರೇರೇಪಿಸಿತು. ಇಂದು ನನ್ನಂತಹ ಅದೆಷ್ಟೋ ಗಲ್ಫಿಗರ ಪತ್ನಿಯರು ಹೊರ ಪ್ರಪಂಚಕ್ಕೆ ಕಿಲಕಿಲ ನಗುವಂತೆ ತೋರುತ್ತಿದ್ದರೂ ಮಾನಸಿಕವಾಗಿ ನಾವಂತೂ ಹಲುಬುತ್ತಿದ್ದೇವೆ. ನೂರೀ… ನಿನಗೇನು ಬೇಕು ಹೇಳು, ಊರಿಗೆ ಬರುವವರಲ್ಲಿ ಕೊಟ್ಟು ಕಳುಹಿಸುತ್ತೇನೆ ಎಂಬ ನಿಮ್ಮ ಸವಿ ಮಾತಿಗೆ ನಾನು ಯಾವ ರೀತಿ ಪ್ರತಿಕ್ರಿಯಿಸಿದ್ದೇನೆಂದು ನೀವು ಚೆನ್ನಾಗಿ ಬಲ್ಲಿರಿ. ಈಗಲೂ ಅದನ್ನೇ ಆವರ್ತಿಸುತ್ತೇನೆ. ನನ್ನ ಜಾನೂ…

 ನನಗೆ ಏನೂ ಬೇಡ. ಹಣ, ಬಂಗಾರ, ದೌಲತ್ತು ನಾನು ನಿಮ್ಮಿಂದ ಎಂದೂ ಬಯಸಿಲ್ಲ. ನಿಮಗಿಂತ ದೊಡ್ಡ ದೌಲತ್ತು ನನಗಿಲ್ಲ. ನಿಮ್ಮ ಆಗಮನವನ್ನೇ ಆಶಿಸುತ್ತೇನೆ ಮತ್ತು ನಾನು ಕೇವಲ ನಿಮ್ಮಿಂದ ಅನುರಾಗವನ್ನು ಬಯಸುತ್ತೇನೆ. ಅದು ಪಾರ್ಸಲ್‌ ಮಾಡಿ ಕಳುಹಿಸುವ ಸೊತ್ತಲ್ಲ. ನಿಮ್ಮ ಉಪಸ್ಥಿತಿಯಿಂದ ಅನುಭವಕ್ಕೆ ಸಿಗುವ ಮುತ್ತಿನಂತಹ ಮೌಲಿಕವದು. ಅದಕ್ಕೆ ಬೆಲೆ ಕಟ್ಟಲು ಸಾಧ್ಯನೂ ಇಲ್ಲ. ಸುಸಂಗತ ಬಾಳು ಅದನ್ನೇ ಅರಸುತ್ತದೆ. ರಮಣೀಯವಾದ ಬದುಕು ಕಟ್ಟುವಲ್ಲಿ ಪ್ರೀತಿಯ ಪಾತ್ರ ಬಹಳ ಹಿರಿದು. ಅದು ಊದುಕಡ್ಡಿಯಂತೆ ಸುಗಂಧದ ಅನುಭವವನ್ನು ನೀಡುತ್ತದೆ. ಮಾನಸಿಕ ಬವಣೆ, ಕ್ಲಿಷ್ಟತೆಗಳು ಪ್ರೀತಿಯ ಮುಂದೆ ಸುಟ್ಟು ಕರಟಿ ಹೋಗುತ್ತದೆ‌. ಅದು ದಂಪತಿಗಳ ಬಾಂಧವ್ಯವನ್ನು ನಂದಾದೀಪದಂತೆ ಸದಾ ಬೆಳಗಿಸುತ್ತದೆ. ಅನುರಾಗಕ್ಕೆ ಮತ್ತಷ್ಟು ಮೆರುಗು ನೀಡಿ ಖುಷಿ ಪಡಿಸುತ್ತದೆ. ಇದು ನನ್ನ ಅಂತರಂಗದ ಭಾವನೆ. ಹೃದಯದ ವಾಣಿ. ನಾನು ಹೆಣೆದುಕೊಂಡ ಸುಂದರ ಕನಸು. ನಿಮ್ಮ ವಿರಹದ ವ್ಯಥೆಯಿಂದ ಹಪಿಹಪಿಸುವ ಹೃದಯ ಮಮತೆಯ ಪ್ರೇಮಪ್ರಪಂಚವನ್ನೇ ತಡಕಾಡುತ್ತಿದೆ. ಏನೇ ಆದರೂ ಎಂತಹ ಕಷ್ಟಗಳೆದುರಾದರೂ ನಾನು ಯಾವತ್ತೂ ಎಲ್ಲೆಡೆ ನಿಮ್ಮ ಜತೆಗಿದ್ದೇನೆ. ನಿಮ್ಮೊಂದಿಗೆ ಸುಖ-ದುಃಖ, ನೋವು-ನಲಿವನ್ನು ಹಂಚಿಕೊಳ್ಳುವುದಕ್ಕಿಂತ ಪ್ರಿಯವಾದ ವಸ್ತು ಬೇರೊಂದಿಲ್ಲ. ನನಗೆ ಅದುವೇ ಅಮೂಲ್ಯವಾದುದು. ಅಲ್ಲಾಹನಾಣೆ!

  ಇದು ನಮ್ಮಿಬ್ಬರ ಅನುರಾಗವನ್ನು ಬಲಪಡಿಸುವ ಪ್ರೀತಿಯ ಪತ್ರವೇ ಹೊರತು, ಬೇರೆ ಏನೂ ಅಲ್ಲ. ನನ್ನ ಈ ಎಡವಟ್ಟನ್ನು ನೀವು ಅರ್ಥ ಮಾಡಬೇಕು ಮತ್ತು ಕ್ಷಮಿಸ ಬೇಕು. ನಾನೆಂದೂ ನಿಮಗೆ ದ್ರೋಹ ಮಾಡಿದವಳಲ್ಲ, ಮುಂದಕ್ಕೂ ಮಾಡಲಾರೆ ಕೂಡಾ.

ಇತೀ ನಿಮ್ಮ ನಲ್ಮೆಯ, ನೂರೀ…