ಪೆಹ್ಲೂಖಾನ್ ಕೊಲೆ ಆರೋಪಿಗಳ ಖುಲಾಸೆ; ಆಶ್ಚರ್ಯ ವ್ಯಕ್ತಪಡಿಸಿದ ಪ್ರಿಯಾಂಕಾ ಗಾಂಧಿ

0
674

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.15: ಗೋ ಸಾಗಾಟ ಆರೋಪಿಸಿ ಹೈನುಗಾರ ಪೆಹ್ಲೂಖಾನ್‍ರನ್ನು ಹೊಡೆದು ಕೊಂದ ಆರೋಪಿಗಳನ್ನು ಕೋರ್ಟು ಖುಲಾಸೆಗೊಳಿಸಿದ್ದು ಆಶ್ಚರ್ಯವುಂಟು ಮಾಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಕೆಳ ಕೋರ್ಟಿನ ಕ್ರಮವು ಆಶ್ಚರ್ಯವುಂಟುಮಾಡಿದೆ. ಅಮಾನವೀಯತೆಗೆ ನಮ್ಮ ದೇಶದಲ್ಲಿ ಸ್ಥಾನವೇ ಇಲ್ಲ. ಜನರ ಗುಂಪು ಹತ್ಯೆ ನೀಚಕೃತ್ಯವಾಗಿದೆ ಎಂದು ಟ್ವೀಟ್‍ನಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದರು.

ಮೇವಾತ್‍ನ ಪೆಹ್ಲೂಖಾನ್‍ರನ್ನು ಹೊಡೆದು ಕೊಂದ ಕೇಸಿನ ಆರು ಮಂದಿ ಆರೋಪಿಗಳನ್ನು ರಾಜಸ್ಥಾನದ ಆಲ್ವಾರ್ ಅಡಿಶನಲ್ ಜಿಲ್ಲಾ ಕೋರ್ಟು ಬಿಡುಗಡೆಗೊಳಿಸಿದೆ. ಸಂಶಯದ ಅನುಕೂಲತೆಗಳನ್ನು ಆರೋಪಿಗಳಿಗೆ ನೀಡಿ ಖುಲಾಸೆಗೊಳಿಸಿದ್ದು ಪೆಹ್ಲೂಖಾನ್‍ರಿಗೆ ಹೊಡೆಯುತ್ತಿರುವ ವೀಡಿಯೊವನ್ನು ಸಾಕ್ಷ್ಯವಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೋರ್ಟು ಹೇಳಿತ್ತು.

2017 ಎಪ್ರಿಲ್‍ ಒಂದರಂದು ರಾಜಸ್ತಾನದಿಂದ ಹರ್ಯಾಣಕ್ಕೆ ದನಗಳನ್ನು ಸಾಗಿಸುತ್ತಿದ್ದಾಗ 55 ವರ್ಷದ ಪೆಹ್ಲೂಖಾನ್ ಮತ್ತು ಮಕ್ಕಳನ್ನು ಗೋರಕ್ಷಕ ಗೂಂಡಾಗಳು ಅಡ್ಡಗಟ್ಟಿ ಹೊಡೆದಿದ್ದರು. ರಾಜಸ್ತಾನದ ಜೈಪುರದ ಜಾನುವಾರುಗಳ ಸಂತೆಯಿಂದ ದನ ಕರುಗಳನ್ನು ಖರೀದಿಸಿದ ರಸೀದಿ ತೋರಿಸಿದರೂ ಪೆಹ್ಲೂಖಾನ್‍ರನ್ನು ಹೊಡೆದು ಕೊಲೆ ಮಾಡಲಾಗಿತ್ತು. ಅವರಿಗೆ ಹೊಡೆಯುವಾಗ ಜತೆಗಿದ್ದ ಇಬ್ಬರು ಮಕ್ಕಳ ಸಹಿತ ನಲ್ವತ್ತು ಸಾಕ್ಷಿಗಳು ಇವೆ. ಅಪ್ರಾಪ್ತ ವಯಸ್ಸಿನ ಇಬ್ಬರ ಸಹಿತ ಒಂಬತ್ತು ಮಂದಿ ಆರೋಪಿಗಳು ಪ್ರಕರಣದಲ್ಲಿ ಇದ್ದರು.ವಿಚಾರಣೆಯ ವೇಳೆ ಒಬ್ಬ ಸತ್ತಿದ್ದನು.