ಪವಿತ್ರ ಕುರ್ ಆನ್ ನ ಸಂದೇಶಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಎಷ್ಟು ಸಫಲರಾಗಿದ್ದೇವೆ?

0
2069

ಖದೀಜ ನುಸ್ರತ್, ಅಬು ಧಾಬಿ

ರಮಝಾನ್ ತಿಂಗಳು ಕುರ್ ಆನ್ ಅವತೀರ್ಣವಾದ ತಿಂಗಳೆಂಬುದೇ ಅದರ ವೈಶಿಷ್ಟ್ಯತೆಯಾಗಿದೆ. ಮಾನವರಿಗೆ ಮಾರ್ದರ್ಶನ ನೀಡುವುದೇ ಕುರ್ ಆನ್ ಉದ್ದೇಶ. ಪವಿತ್ರ ಕುರ್ ಆನ್ ನ ಅವತೀರ್ಣವು ಭೂಮಿಯ ಮೇಲೆ ನಡೆದ ಅತ್ಯಂತ ಮಹತ್ವ ಪೂರ್ಣ ಘಟನೆಯಾಗಿದೆ. ಅದಕ್ಕಿಂತ ಉತ್ತಮ ಘಟನೆ ಕುರ್ ಆನ್ ಅವತೀರ್ಣಕ್ಕಿಂತ ಮುಂಚೆ ಸಂಭವಿಸಿರಲಿಲ್ಲ ಹಾಗೂ ಇನ್ನು ಸಂಭವಿಸಲಿಕ್ಕೂ ಇಲ್ಲ. ಅಲ್ಲಾಹನು ಮಾನವನಿಗೆ ನೀಡಿದ ಅನುಗ್ರಹಗಳಲ್ಲಿ ಪವಿತ್ರ ಕುರ್ ಆನ್ ಗಿಂತ ಉತ್ತಮವಾದುದು ಬೇರೊಂದಿಲ್ಲ. ಇಹಜೀವನದಲ್ಲಿ ಶಾಂತಿನೆಮ್ಮದಿಯಿಂದ ಜೀವಿಸಿ ಪರಲೋಕದಲ್ಲಿ ವಿಜಯ ಹೊಂದಬಯಸುವವರಿಗೆ ಒಂದು ಮಾರ್ಗದರ್ಶಕ ಗ್ರಂಥ.

ಪವಿತ್ರ ಕುರ್ ಆನ್ ಯಾವುದೇ ಪುರೋಹಿತರ ಮಧ್ಯಸ್ಥಿಕೆಯಿಲ್ಲದೆ ಓದುಗನನ್ನು ನೇರವಾಗಿ ದೇವನೊಂದಿಗೆ ಜೋಡಿಸುತ್ತದೆ. 6 ನೆಯ ಶತಮಾನದಲ್ಲಿ ಅವತೀರ್ಣಗೊಂಡ ಗ್ರಂಥ ಅತ್ಯಾಧುನಿಕವಾದ 21 ನೆಯ ಶತಮಾನದಲ್ಲೂ ಈ ಲೋಕದಲ್ಲಿ ಅಡುಗೆ ಮನೆಯಿಂದ ಅಂತಾರಾಷ್ಟ್ರೀಯದವರೆಗೆ ಇರುವಂತಹ ಎಲ್ಲಾ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರವೂ, ಮಾರ್ಗದರ್ಶಿಯಾಗಿದೆ ಎನ್ನುವುದೇ ಇದರ ವೈಶಿಷ್ಟ್ಯ. ಎಲ್ಲಾ ಗೋತ್ರ, ರಾಷ್ಟ್ರ, ಜನಾಂಗ, ಎಲ್ಲಾ ವರ್ಗ -ಶ್ರೀಮಂತ ಬಡವ, ಕರಿಯ ಬಿಳಿಯ ರನ್ನು ಒಟ್ಟಾಗಿ ನಿಲ್ಲಿಸುವಂತಹ ತತ್ವಗಳನ್ನು ಹೊಂದಿದೆ. ಭೂಮಿಯ ಎಲ್ಲಾ ಪ್ರದೇಶದ ಜನರಿಗೆ ಅನ್ವಯಿಸುವಂತಹ ನಿಯಮಗಳನ್ನು ಹೊಂದಿದೆ. ಅದು ವರ್ತಮಾನ ಹಾಗೂ ಭವಿಷ್ಯತ್ ಕಾಲಕ್ಕೆ ಅನುಗುಣವಾಗಿದೆ. ಅದರ ಎಲ್ಲಾ ನಿಯಮಗಳು ಸಂತುಲಿತ ಸಮಾಜವನ್ನು ನಿರ್ವಹಿಸುವಲ್ಲಿ ಪ್ರಸ್ತುತವಾಗಿದೆ. ಸಾಮಾಜಿಕ ಅನ್ಯಾಯ, ದಬ್ಬಾಳಿಕೆ, ತೀವ್ರವಾದ, ಜನಾಂಗೀಯವಾದ, ಭ್ರಷ್ಟಾಚಾರ ಇತ್ಯಾದಿಗಳಿಂದ ಸಂಪೂರ್ಣ ಮುಕ್ತವಾಗಿದೆ. ಮಾನವನ ಆರ್ಥಿಕ, ಸಾಮಾಜಿಕ, ಕೌಟುಂಬಿಕ, ರಾಜಕೀಯ, ಕಾನೂನು ಇತ್ಯಾದಿ ವಿಷಯಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತದೆ. ಅದೇ ರೀತಿ ಮಾನವನ ನೈತಿಕ ,ಮಾನಸಿಕ, ಶಾರೀರಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಆರೋಗ್ಯಪೂರ್ಣ ಮಾಹಿತಿಯನ್ನು ನೀಡುತ್ತದೆ.

ಹೇಳಿರಿ- “ಮನುಷ್ಯರೂ ಯಕ್ಷರೂ ಎಲ್ಲರೂ ಒಟ್ಟಾಗಿ ಈ ಕುರ್‍ಆನಿನಂತಹ ಒಂದು ವಸ್ತುವನ್ನು ತರಲು ಪ್ರಯತ್ನಿಸಿದರೆ ಅವರೆಲ್ಲರೂ ಪರಸ್ಪರ ಸಹಾಯಕರಾದರೂ ಅವರಿಗೆ ಅದನ್ನು ತರಲಿಕ್ಕಾಗದು.” (ಬನೀ ಇಸ್ರಾಈಲ್ :88)

ಮಾನವ ಬರಹಗಾರ ಯಾವುದಾದರೂ ಒಂದು ವಿಷಯದಲ್ಲಿ ಮಾತ್ರ ಪಾಂಡಿತ್ಯ ಹೊಂದಿರುತ್ತಾರೆ. ಉದಾ: ತತ್ವಶಾಸ್ತ್ರ, ಇತಿಹಾಸ, ನೀತಿಶಾಸ್ತ್ರ, ಭೌತಶಾಸ್ತ್ರ, ಅರ್ಥಶಾಸ್ತ್ರ,ಖಗೋಳ ಶಸ್ತ್ರ, ಜೀವಶಾಸ್ತ್ರ ಅಥವಾ ಸಸ್ಯ ಶಾಸ್ತ್ರ ಇತ್ಯಾದಿಗಳಲ್ಲಿ ಯಾವುದಾದರೂ ಒಂದು ವಿಷಯದ ಕುರಿತಾಗಿ ಮಾತ್ರ ಬರೆಯಲು ಸಾಧ್ಯ. ಯಾವುದೇ ಒಬ್ಬ ಮನುಷ್ಯನಿಗೆ ಎಲ್ಲಾ ವಿಷಯಗಳ ಬಗ್ಗೆ ಅಗಾಧ ಜ್ಞಾನದೊಂದಿಗೆ ಒಂದೇ ವಿಧದ ಭಾಷಾಶೈಲಿಯಲ್ಲಿ ಬರೆಯಲು ಅಸಾಧ್ಯ. ಯಾವುದೇ ಒಬ್ಬ ಬರಹಗಾರನಿಗೆ ಒಂದು ನಿರ್ದಿಷ್ಟ ಕಾಲ ಹಾಗೂ ಪ್ರದೇಶದ ಕುರಿತು ಸೀಮಿತವಾದ ಜ್ಞಾನದೊಂದಿಗೆ ಬರೆಯಲು ಸಾಧ್ಯ. ಇದರಿಂದಾಗಿ ಕಾಲಕಳೆದಂತೆ ಮಾನವ ಜ್ಞಾನ ಮುಂದುವರಿದಾಗ ಆ ಬರಹವು ಹಳತಾಗುತ್ತದೆ ಹಾಗೂ ಉಪಯೋಗವಿಲ್ಲದಂತಾಗುತ್ತದೆ. ಕಾಲ ಕಳೆದಂತೆ ಅದರಲ್ಲಿ ಬದಲಾವಣೆಯ ಅಗತ್ಯ ಬರುತ್ತದೆ. ಆದರೆ ಪವಿತ್ರ ಕುರ್ ಆನ್ ಅವತೀರ್ಣಗೊಂಡು ಹದಿನಾಲ್ಕು ಶತಮಾನಗಳು ಕಳೆದರೂ ಜಗತ್ತು ವಿಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡರೂ ಪವಿತ್ರ ಕುರ್ ಆನ್ ನ ಯಾವುದೇ ಸೂಕ್ತದಲ್ಲಿ ತಪ್ಪು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಅಥವಾ ಬದಲಾವಣೆ ಮಾಡುವ ಅಗತ್ಯವೂ ಬರಲಿಲ್ಲ. ಯಾವುದೇ ಮಾನವ ರಚಿಸಿದ ಗ್ರಂಥ ತಿದ್ದುಪಡಿಗೊಳಗಾಗದೇ ಹದಿನಾಲ್ಕು ಶತಮಾನ ಬದುಕುಳಿಯಲು ಸಾಧ್ಯವೇ?

ಯಾವುದೇ ಒಬ್ಬ ಮಾನವ ಬರೆದ ಕೃತಿಯನ್ನು ಜಗತ್ತಿನಾದ್ಯಂತ ಜನರು ದೀರ್ಘ ಕಾಲದವರೆಗೆ ಪಠಿಸುತ್ತಲೂ ಅಧ್ಯಯಯನ ಮಾಡುತ್ತಲೂ ಇರಲು ಸಾಧ್ಯವಿದೆಯೇ? ಭೂತಕಾಲದ, ಭವಿಷ್ಯತ್ ಕಾಲದ ಹಾಗೂ ವರ್ತಮಾನಕಾಲದ ಎಲ್ಲಾ ಘಟನೆಗಳು ಓರ್ವ ಮಾನವನಿಗೆ ಯಾವ ಮರೆಯೂ ಇಲ್ಲದೆ ನಿಖರವಾಗಿ ಬರೆಯಲು ಸಾಧ್ಯವೇ?

ಓರ್ವ ನುರಿತ ಬರಹಗಾರನು ತನ್ನ ಬರಹ ಶೈಲಿ ಹಾಗೂ ಭಾಷಾ ಸಾಹಿತ್ಯವನ್ನು ಜನರ ವಯಸ್ಸು, ಅಭಿರುಚಿಗೆ ತಕ್ಕಂತೆ ಬದಲಾಯಿಸಿ ಬರೆಯಬೇಕಾಗುತ್ತದೆ. ವಿದ್ಯಾವಂತನು ಇಷ್ಟಪಡುವುದನ್ನು ಅವಿದ್ಯಾವಂತ ಇಷ್ಟಪಡಲಾರನು, ಮಕ್ಕಳು ಇಷ್ಟಪಡುವುದನ್ನು ಹಿರಿಯರು ಇಷ್ಟಪಡಲಾರರು . ಆದರೆ ಪವಿತ್ರ ಕುರ್ ಆನ್ ಮಾತ್ರ ಎಲ್ಲಾ ಕಾಲದಲ್ಲೂ ಮಕ್ಕಳನ್ನೂ, ಹಿರಿಯರನ್ನೂ,ವಿದ್ಯಾವಂತರನ್ನೂ,ಅವಿದ್ಯಾವಂತರನ್ನೂ ಒಂದೇ ಸ್ಪೂರ್ತಿಯಿಂದ ಓದಲು ಆಕರ್ಷಿಸುವ ಏಕೈಕ ಗ್ರಂಥವಾಗಿದೆ. ಇದರ ಭಾಷಾಶೈಲಿ ಹಾಗು ಓದುವ ರಾಗ ಓದುಗರಿಗೆ ಮನಃಶಾಂತಿಯನ್ನು ಒದಗಿಸುತ್ತದೆ. ಯಾವುದೇ ಒಂದು ಉತ್ತಮ ಗ್ರಂಥವನ್ನು ನಾಲ್ಕೈದು ಬಾರಿಗಿಂತ ಹೆಚ್ಚು ಓದುವಾಗ ನೀರಸವಾಗುತ್ತದೆ. ಆದರೆ ಕುರ್ ಆನ್ ಮಾತ್ರ ಪ್ರತಿ ದಿನವೂ ಹೃದಯ, ಆತ್ಮ, ಬುದ್ಧಿ ಮತ್ತು ಮನಸ್ಸಿಗೆ ಹೊಸ ಆದರ್ಶ, ಭಾವನೆ ಮತ್ತು ಜ್ಞಾನವನ್ನು ತುಂಬುತ್ತದೆ. ಓದುಗರಿಗೆ ಇನ್ನಷ್ಟು ಓದಲು, ಅಧ್ಯಯನ ಮಾಡಲು ಹುರುಪು ಉತ್ಸಾಹ ನೀಡುತ್ತದೆ.

ಆದರೆ ನಾವು ಇಂದು ನಮ್ಮ ಸಮುದಾಯ ಪವಿತ್ರ ಕುರ್ ಆನ್ ಗೆ ಎಷ್ಟು ಗೌರವವನ್ನು ನೀಡಿದೆ ಎಂದರೆ ಅದನ್ನು ಭದ್ರವಾದ ಕಪಾಟುಗಳಲ್ಲಿ ಸುರಕ್ಷಿತವಾಗಿರಿಸಿದೆ . ಇದನ್ನು ಓದಿ, ಅರ್ಥಮಾಡಿಕೊಂಡು ನಮ್ಮ ಜೀವನ ಪದ್ದತಿಯನ್ನು ಬದಲಿಸಿ ಮಹಾ ಕ್ರಾಂತಿಯನ್ನು ಮಾಡಬೇಕಾದ ಸಮುದಾಯದ ಜನರು ಇದನ್ನು ಕೇವಲ ಪ್ರಾರ್ಥನೆಗಾಗಿ , ಪುಣ್ಯಗಳಿಸಲಿಕ್ಕಾಗಿ ಮತ್ತು ಮರಣ ಹೊಂದಿದ ಮನೆಯಲ್ಲಿ ಓದುವ ಗ್ರಂಥವನ್ನಾಗಿ ಮಾಡಿದರು . ಓ ಸಮುದಾಯವೇ ಒಮ್ಮೆ ಆಲೋಚಿಸಿರಿ. ಪವಿತ್ರವಾದ ಕುರ್ ಆನ್ ನ ಸಂದೇಶಗಳನ್ನು ಜನರಿಗೆ ತಲುಪಿಸುವಲ್ಲಿ ಎಷ್ಟು ಸಫಲರಾಗಿದ್ದೇವೆ ಎಂದು ಚಿಂತಿಸಲು ಕುರ್ ಆನ್ ಅವತೀರ್ಣವಾದ ರಮಝಾನ್ ತಿಂಗಳು ಸಕಾಲವಾಗಿದೆ.