ಕುರ್ ಆನನ್ನು ಓದಬಹುದಾದ ಮೂರು ರೀತಿಗಳು ಭಾಗ- 03

0
305

ಕುರ್ ಆನನ್ನು ಓದಬಹುದಾದ ಮೂರು ರೀತಿಗಳು ಭಾಗ-03

✒ ಟಿ.ಕೆ. ಉಬೈದ್

ಒಂದು ಮುಸ್ಲಿಮ್ ರಾಷ್ಟ್ರದಲ್ಲಿ ಕೆಲವೊಮ್ಮೆ ಪ್ರತ್ಯೇಕತಾವಾದ, ಕ್ರಾಂತಿ ಅಥವಾ ಭಯೋತ್ಪಾದನಾ ಚಟುವಟಿಕೆಗಳಂತಹ ದೇಶದ್ರೋಹಿ ಕೃತ್ಯಗಳು ಧರ್ಮಭ್ರಷ್ಟತೆಯ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಅಂತಹ ಸಂದರ್ಭದಲ್ಲಿ ಗಲಭೆಗಳನ್ನು ನಿಯಂತ್ರಿಸಲು, ದೇಶದ ಅಖಂಡತೆ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಪುನಃ ಸ್ಥಾಪಿಸಲು ಸೂಕ್ತವಾದ ಕ್ರಮಕೈಗೊಳ್ಳಬೇಕಾದುದು ಅಲ್ಲಿನ ಸರ್ಕಾರದ ಜವಾಬ್ದಾರಿಯಾಗಿದೆ. ದೇವ ಮತ್ತು ಪ್ರವಾದಿಯೊಂದಿಗಿನ ಬಹಿರಂಗ ಯುದ್ಧವಿದು ಎಂದು ಕುರ್‍ಆನ್ ಅದರ ಕುರಿತು ಹೇಳುತ್ತದೆ:

“ಅಲ್ಲಾಹ್ ಹಾಗೂ ಅವನ ಸಂದೇಶವಾಹಕರ ವಿರುದ್ಧ ಸಮರ ಹೂಡುವವರಿಗೆ ಮತ್ತು ಕ್ಷೋಭೆ ಯನ್ನುಂಟು ಮಾಡಲಿಕ್ಕಾಗಿಯೇ ಭೂಮಿಯ ಮೇಲೆ ಶ್ರಮಿಸುತ್ತಿರುವವ ರಿಗೆ ಇರುವ ಶಿಕ್ಷೆಯು ವಧಿಸುವುದು ಅಥವಾ ಶಿಲುಬೆಗೇರಿಸುವುದು ಅಥವಾ ಅವರ ಕೈಯನ್ನೂ ಕಾಲನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವುದು ಅಥವಾ ಅವರನ್ನು ಗಡೀಪಾರು ಮಾಡುವುದು ಆಗಿರು ತ್ತದೆ. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಪರಲೋಕದಲ್ಲಿ ಅವರಿಗೆ ಇದಕ್ಕಿಂತಲೂ ಕಠಿಣ ಶಿಕ್ಷೆ ಕಾದಿದೆ.” (5:33)

http://sanmarga.com/quran-odabahudada-3-reethigalu/

ಈ ವಿಷಯ ದಲ್ಲಿ ಆಧುನಿಕ ಹಾಗೂ ಪ್ರಾಚೀನ ಕಾಲದ ಎಲ್ಲಾ ಆಡಳಿತಗಾರರ ನಿಲುವೂ ಇದೇ ಆಗಿತ್ತು. ಒಂದನೇಯ ಖಲೀಫ ಅಬೂಬಕರ್(ರ)ರ ಕಾಲದಲ್ಲಿ ಯಮಾಮ ಎಂಬ ಪ್ರದೇಶದಲ್ಲಿ ರಂಗಪ್ರವೇಶ ಮಾಡಿದ ಮುಸೈಲಿಮ ಎಂಬ ಕಪಟ ಪ್ರವಾದಿಯು ಹರಡಿದ ಕ್ಷೋಭೆಯು ಪ್ರತ್ಯೇಕತಾವಾದಕ್ಕೆ ಒಂದು ಪ್ರಮುಖ ಉದಾಹರಣೆ. ತಾನು ಮುಹಮ್ಮದ್‍ರಂತೆಯೇ ಓರ್ವ ಪ್ರವಾದಿಯಾಗಿದ್ದೇನೆ. ನನ್ನ ಪ್ರದೇಶದ ಆಡಳಿಗಾರ ಹಾಗೂ ಧಾರ್ಮಿಕ ನೇತಾರ ನಾನೇ ಆಗಿದ್ದೇನೆ ಎಂಬುದು ಆತನ ವಾದವಾಗಿತ್ತು. ಖಲೀಫಾ ಅಬೂಬಕರ್(ರ) ಆತನನ್ನು ದೇಶದಲ್ಲಿ ಗೊಂದಲವೆಬ್ಬಿಸುವ, ಸಮಾಜದಲ್ಲಿ ಅಶಾಂತಿ ಹರಡುವ ಕಳ್ಳ ಪ್ರವಾದಿ ಯೆಂದು ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಂಡರು.

ವ್ಯಕ್ತಿಗತವಾಗಿ ಓರ್ವ ವ್ಯಕ್ತಿ ಧರ್ಮವನ್ನು ತ್ಯಜಿಸಿ, ಇನ್ನೊಂದು ಧರ್ಮವನ್ನು ಸ್ವೀಕರಿಸುವುದರಿಂದ ದೇಶದ ಭದ್ರತೆಗೆ ಅಥವಾ ಸಾಮಾ ಜಿಕ ವ್ಯವಸ್ಥೆಗೆ ಹಾನಿ ಸಂಭವಿಸುವುದಿಲ್ಲ. ಧರ್ಮ ತ್ಯಾಗವು ಸಾಮಾ ಜಿಕ ಕ್ರಾಂತಿಯ ರೂಪ ಪಡೆಯುವಾಗ ದೇಶದ ಅಸ್ತಿತ್ವಕ್ಕೂ, ನೆಮ್ಮದಿಗೂ ಬೆದರಿಕೆಯಾಗುತ್ತದೆ. ಮುಸೈಲಿಮನ ವಿರುದ್ಧ ಸೈನಿಕ ಕಾರ್ಯಾ ಚರಣೆಗೆ ಸಿದ್ಧರಾದಾಗ ಅಬೂಬಕರ್(ರ) ಹೇಳಿದ್ದೇನೆಂದರೆ, ಆತನ ಧರ್ಮಭ್ರಷ್ಟ ಎಂಬ ಕಾರಣಕ್ಕೆ ಅವನ ವಿರುದ್ಧ ಹೋರಾಡುತ್ತಿಲ್ಲ. ಆತ ಪ್ರವಾದಿ(ಸ)ರಿಗೆ ನೀಡುತ್ತಿದ್ದ ಒಂದು ಒಂಟೆಯ ಹಗ್ಗವನ್ನು ನನಗೆ ತಡೆಹಿಡಿದರೆ ಕೂಡಾ ನಾನು ಆತನೊಡನೆ ಯುದ್ಧ ಮಾಡುತ್ತೇನೆ.” ದೇಶದ ಏಕತೆಗೆ ಭಂಗ ತಂದುಕೊಂಡು ತೆರಿಗೆ ನೀಡದೆ, ಕಾನೂ ನನ್ನು ಉಲ್ಲಂಘಿಸಿ ಅಸಹಕಾರ ತೋರುವಂತಹ ಅಪರಾಧವು ಸಣ್ಣ ಪ್ರಮಾಣದ್ದೇ ಆದರೂ ಅದರ ವಿರುದ್ಧ ಕಠಿಣ ಕ್ರಮಕೈಗೊಳ್ಳ ಬೇಕಾದುದು ಆಡಳಿತಗಾರರ ಕರ್ತವ್ಯವೆಂಬುದು ಅವರ ಮಾತಿನ ಅರ್ಥ.

ವಿವಾಹಿತ ವ್ಯಭಿಚಾರಿಗಳಿಗೆ ನೀಡಲಾಗುವ ಶಿಕ್ಷೆ ಇನ್ನೊಂದು ಉದಾಹರಣೆ. ಅಂತವರನ್ನು ಕಲ್ಲೆಸೆದು ಕೊಲ್ಲಬೇಕು ಎಂಬುದು ಕರ್ಮಶಾಸ್ತ್ರ ನೀಡುವ ಶಿಕ್ಷೆ. ಕುರ್‍ಆನ್ ಅಂತಹ ಶಿಕ್ಷೆ ವಿಧಿಸುವುದಿಲ್ಲ. ವ್ಯಭಿಚಾರಿಗೆ ಬಹಿರಂಗವಾಗಿ ನೂರು ಛಡಿಯೇಟು ಕೊಡಬೇಕೆಂದು ಕುರ್‍ಆನ್‍ನ ಆದೇಶ. ವಿವಾಹಿತ ವ್ಯಭಿಚಾರಿಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಕರ್ಮಶಾಸ್ತ್ರ ಪಂಡಿತರು ತಮ್ಮಿಷ್ಟದಂತೆ ಹೇಳಿದ್ದಲ್ಲ. ಅದಕ್ಕೆ ಅವರು ಪ್ರಬಲವಾದ ಹದೀಸ್‍ಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಅವರ ಕಾಲದ ನೈತಿಕ ಪ್ರಜ್ಞೆ ಮತ್ತು ಪರಿಸ್ಥಿತಿ ಅದರಲ್ಲಿ ಪ್ರಮುಖ ಪಾತ್ರವಹಿಸಿರಬಹುದು. ಆದರೆ ಇಂದಿನ ಆಧುನಿಕ ಜಗತ್ತಿನ ಜೀವ ಕಾರುಣ್ಯ ಭಾವನೆಗಳು ಹಾಗೂ ಮಾನವ ಜೀವದ ಪಾವಿತ್ರ್ಯದ ಬಗೆಗಿನ ಪ್ರಜ್ಞೆಯ ಕುರಿತು ಆ ಮಹಾನುಭಾವರನ್ನು ವಿಮರ್ಶಿಸಬೇಕಾಗಿಲ್ಲ. ಆದರೆ ಅವರ ಜ್ಞಾನ ಹಾಗೂ ಮಹತ್ವವು ಇಂದು ನಮಗೆ ಕುರ್‍ಆನ್‍ನ ಅಧ್ಯಯನಕ್ಕೆ ಅಡ್ಡಿಯಾಗಬಾರದು.

http://sanmarga.com/quran-nannu-odabahudada-3-reetigalu-part-2/

ಹದೀಸ್‍ಗಳು ಕುರ್‍ಆನ್‍ನ ವ್ಯಾಖ್ಯಾನ ಮತ್ತು ವಿವರಣೆಯಾಗಿದೆ. ಆದರೆ ಕುರ್‍ಆನ್‍ನ ತಿದ್ದುಪಡಿಯೋ ಅಥವಾ ಖಂಡನೆಯೋ ಅಲ್ಲ. ಆಗಲೂ ಬಹುದು. ಹದೀಸ್‍ನ ಅಧಿಕೃತತೆಯ ಮಾನದಂಡ ಪ್ರಥಮವಾಗಿ ಅದಕ್ಕೆ ಕುರ್‍ಆನ್‍ನೊಂದಿಗಿನ ಸಾಮ್ಯತೆಯಾಗಿದೆ. ಇದು ಪೂರ್ತಿಯಾದ ಬಳಿಕವೇ ವರದಿಗಾರರ ವಿಶ್ವಸ್ಥತೆ ಹಾಗೂ ಯೋಗ್ಯತೆಗಳನ್ನು ಪರಿಗಣಿಸಬೇಕು. ಆದರೆ ಹದೀಸ್ ಪಂಡಿತರು ಇದಕ್ಕೆ ಪ್ರಥಮ ಆದ್ಯತೆಯನ್ನು ನೀಡಿರುವುದು ಕಂಡುಬರುವುದಿಲ್ಲ.

ಓರ್ವನಿಗೆ ಆರೋಗ್ಯವಿದೆಯೆಂದು ಹೇಳಬೇಕಾದುದು ಆತ ಜೀವಂತ ಇರುವಾಗ ಮಾತ್ರ. ಆತ ಮರಣ ಹೊಂದಿದ ಬಳಿಕ ಆತನ ಅಂಗಸೌಷ್ಟವ ಹಾಗೂ ದೇಹದ ಅವಯವಗಳನ್ನು ನೋಡಿಕೊಂಡು ಆತ ಆರೋಗ್ಯವಂತ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹದೀಸ್‍ಗೆ ಜೀವವಿರುವುದೇ ಅದು ಕುರ್‍ಆನ್‍ನ ಸೂಕ್ತಗಳಿಗೆ ಪೂರಕವಾಗಿದ್ದರೆ ಮಾತ್ರ. ಅದರ ಬದಲಾಗಿ ಹದೀಸ್ ವರದಿಗಾರರ ವಿಶ್ವಾಸಾರ್ಹತೆ ಹಾಗೂ ಜ್ಞಾನವನ್ನು ಪರಿಗಣಿಸಿ ಪ್ರಬಲ ಹದೀಸ್‍ಗಳೆಂದು ಹೇಳುವುದು ನಿರರ್ಥಕವಾಗಿದೆ.

[ಮುಗಿಯಿತು]