ಕುರ್‍ಆನನ್ನು ಓದಬಹುದಾದ ಮೂರು ರೀತಿಗಳು

0
870

✒ ಟಿ.ಕೆ. ಉಬೈದ್

ಪವಿತ್ರ ಕುರ್‍ಆನನ್ನು ನಮಗೆ ಮೂರು ರೀತಿಯಲ್ಲಿ ಸಮೀಪಿಸಬಹುದು. ಕುರ್‍ಆನ್ ಪ್ರಪಂಚದ ಒಡೆಯನಾದ ಅಲ್ಲಾಹನಿಂದ ಅವ  ತೀರ್ಣಗೊಂಡ ವಚನಗಳೆಂದೂ, ಮನುಷ್ಯರು ಯಾರು? ಅವರ ಜೀವನದ ಗುರಿಯೇನು? ಆತನು ತನ್ನ ಗುರಿಯೆಡೆಗೆ ಯಾವ ರೀತಿ ಸಾಗಬೇಕು ಎಂಬುದನ್ನು ಅಲ್ಲಾಹನೇ ಸ್ವತಃ ಕುರ್‍ಆನ್‍ನ ವಚನಗಳ ಮೂಲಕ ತಿಳಿಸಿಕೊಡುತ್ತಿ ದ್ದಾನೆಂಬ ದೃಢ ವಿಶ್ವಾಸದೊಂದಿಗೆ  ಕುರ್‍ಆನ್‍ನೆಡೆಗೆ ಸಾಗುವುದು ಒಂದನೇಯದು. ಪೂರ್ವಗ್ರಹವಿಲ್ಲದೆ ನಿಷ್ಕಳಂಕ ಹಾಗೂ ಆತ್ಮಾರ್ಥತೆ ಬಂದ ಕೇವಲ ಸತ್ಯಾನ್ವೇಷಣೆಯ ದೃಷ್ಟಿಯಿಂದ ಕುರ್‍ಆನನ್ನು ಅಭ್ಯಸಿಸುವುದು ಎರಡನೆಯದು. ಯಾರೋ ಓರ್ವ ಮನುಷ್ಯನ ಚಿಂತನೆಗಳು, ಅಭಿರುಚಿಗಳು ಹಾಗೂ ಭಾವನೆಗಳ ಸಮಾಹಾರವೇ ಈ ಕುರ್‍ಆನ್ ಎಂಬ ಪೂರ್ವಗ್ರಹದೊಂದಿಗೆ ಓದು ವುದು ಮೂರನೇಯದು. ಕುರ್‍ಆನ್‍ನ ಅವತೀರ್ಣ ಕಾಲದಿಂದಲೇ  ಹೀಗೆ ಮೂರು ರೀತಿಯ ಅಧ್ಯಯನಗಳು ನಡೆಯುತ್ತಲೇ ಬಂದಿದೆ.

ಇದರಲ್ಲಿ ಮೊದಲನೆಯದಾಗಿ ಹೇಳಿದ ವಿಷಯವೇ ಅತ್ಯುತ್ಕೃಷ್ಟವೂ, ರಚನಾತ್ಮಕವೂ ಆದ ನಿಲುವಾಗಿದೆ. ಕುರ್‍ಆನ್ ಪ್ರಥಮವಾಗಿ ಅಂತಹ  ಓದುಗರನ್ನೇ ಗುರಿಯಾಗಿರಿಸಿದೆ. ಸೂರಃ ಅಲ್‍ಬಕರ 2-5 ಸೂಕ್ತಗಳಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಿದೆ. “ಇದು (ದೈವಿಕ) ಗ್ರಂಥ; ಸಂದೇಹಾತೀತ ವಿದು. ಭಯಭಕ್ತಿಯುಳ್ಳವರಿಗೆ ಇದು ಮಾರ್ಗದರ್ಶಿ. ಪರೋಕ್ಷ ದ ಮೇಲೆ ವಿಶ್ವಾಸವಿರಿಸುವವರಿಗೆ, ನಮಾಝನ್ನು ಸಂಸ್ಥಾಪಿಸುವವರಿಗೆ, ನಾವು ನೀಡಿರುವ ಸಂಪತ್ಸೌಕರ್ಯಗಳಿಂದ ವ್ಯಯಿಸುವವ ರಿಗೆ- ನಿಮಗೆ ಅವತೀರ್ಣಗೊಳಿಸಿದ ಗ್ರಂಥದ (ಅರ್ಥಾತ್ ಕುರ್‍ಆನ್)  ಮತ್ತು ನಿಮಗಿಂತ ಮೊದಲು ಅವತೀರ್ಣಗೊಳಿಸಿದ್ದ ಎಲ್ಲಾ ಗ್ರಂಥಗಳ ಮೇಲೆ ವಿಶ್ವಾಸವಿಡುವವರಿಗೆ ಮತ್ತು ಪರಲೋಕದ ಮೇಲೆ ದೃಢವಿಶ್ವಾಸವಿಡುವವರಿಗೆ (ಇದು ಮಾರ್ಗದರ್ಶಿ) ಅಂತಹವರು ತಮ್ಮ ಪ್ರಭುವಿನ ಸನ್ಮಾರ್ಗದಲ್ಲಿದ್ದಾರೆ ಮತ್ತು ಅವರೇ ಯಶಸ್ವಿಯಾಗುವವರು.”

ಈ  ಸೂಕ್ತದಲ್ಲಿ ಸೂಚಿಸಲಾದ ವಿಶ್ವಾಸ ಹಾಗೂ ಆದರ್ಶದೊಂದಿಗೆ ಕುರ್‍ಆನ್ ಪಾರಾ ಯಣ ಮಾಡುವವರನ್ನು ಅದು ಮಾನಸಿಕವಾಗಿ  ಉಜ್ವಲವಾದ ಅನುಭೂತಿಯೆಡೆಗೆ ಕೊಂಡೊಯ್ಯು ತ್ತದೆ. ಬುದ್ಧಿಶಕ್ತಿಯೂ, ಭಾವನೆಗಳೂ ಪ್ರಕಾಶಮಯ ವಾಗುತ್ತದೆ. ಆ ಬೆಳಕಿನಲ್ಲಿ ಅವರು  ತಮ್ಮ ಅಸ್ತಿತ್ವ ವನ್ನೂ, ಅದರ ಉದ್ದೇಶವನ್ನೂ ತಿಳಿದುಕೊಳ್ಳು ತ್ತಾರೆ. ಈ ತಿಳುವಳಿಕೆಯು ಅವರನ್ನು ರೋಮಾಂಚನಗೊಳಿಸಿ ಮನಸ್ಸಿಗೆ ಶಾಂತಿ ನೆಮ್ಮದಿ ಯನ್ನು ನೀಡುತ್ತದೆ.

ಅವರು ಸಂದೇಶವಾಹಕರ ಮೇಲೆ ಅವತೀರ್ಣ ಗೊಂಡ ಈ ವಾಣಿಯನ್ನು ಆಲಿಸುವಾಗ ಸತ್ಯಪ್ರಜ್ಞೆಯ ಪ್ರಭಾವದಿಂದ ಅವರ ನಯನಗಳು  ಅಶ್ರುಗಳಿಂದ ಒದ್ದೆಯಾಗುತ್ತಿರುವುದನ್ನು ನೀವು ಕಾಣುತ್ತೀರಿ. ಅವರು ಹೇಳುತ್ತಾರೆ, “ಓ ನಮ್ಮ ಪ್ರಭೂ, ನಾವು ವಿಶ್ವಾಸವಿರಿಸಿಕೊಂಡೆವು. ನಮ್ಮ  ಹೆಸರನ್ನು ಸಾಕ್ಷ್ಯ ನೀಡುವವರೊಂದಿಗೆ ಬರೆದುಕೋ.” (5:83)

“ಅಲ್ಲಾಹನು ಅತ್ಯುತ್ತಮ ವಾಣಿಯನ್ನು ಅವತರಿ ಸಿರುವನು. ಎಲ್ಲ ಭಾಗಗಳೂ ಸಮಾನ ಸ್ವರೂಪ ವಾಗಿರುವಂತಹ ಗ್ರಂಥವಿದು. ಇದರಲ್ಲಿ  ವಿಷಯ ಗಳು ಪುನರಾವರ್ತಿಸಲ್ಪಟ್ಟಿವೆ. ಇದನ್ನು ಕೇಳಿದಾಗ, ತಮ್ಮ ಪ್ರಭುವನ್ನು ಭಯಪಡುವವರಿಗೆ ರೋಮಾಂಚನವಾಗುತ್ತದೆ ಮತ್ತು ಅವರ  ಶರೀರ ಹಾಗೂ ಹೃದಯಗಳು ಮೃದುವಾಗಿ ಅಲ್ಲಾಹನ ಸ್ಮರಣೆಯ ಕಡೆಗೆ ವಾಲಿ ಬಿಡುತ್ತವೆ. ಇದು ಅಲ್ಲಾಹನ ಮಾರ್ಗದರ್ಶನ.” (39:23)

ಕುರ್‍ಆನ್‍ನೊಂದಿಗಿನ ಎರಡನೇ ದೃಷ್ಟಿಕೋನ ಅಥವಾ ನಿಷ್ಕಳಂಕ ಹಾಗೂ ಸತ್ಯವನ್ನು ತಿಳಿದು ಕೊಳ್ಳುವ ಏಕೈಕ ಉದ್ದೇಶದಲ್ಲಿ ಮಾಡುವ  ಕುರ್‍ಆನ್ ಅಧ್ಯಯನವು ಅತ್ಯುತ್ತಮವೂ, ಪ್ರಯೋ ಜನಕಾರಿಯೂ ಆಗಿದೆ. ಲೌಕಿಕ ಚಿಂತೆಗಳೂ, ವ್ಯಾಮೋಹಗಳೂ ಪರಂಪರಾಗತ ಆಚಾರ  ವಿಚಾರ ಗಳು, ಅಂಧವಾಗಿ ಅನುಸರಿಸುವ ದೇಶೀಯ ವಿಚಾರಗಳ ಬಂಧನದಿಂದ ಮುಕ್ತವಾಗಿ ಸತ್ಯವನ್ನು ತಿಳಿದುಕೊಳ್ಳಲೇಬೇಕೆಂಬ  ಉತ್ಸಾಹದಿಂದ ಕುರ್‍ಆನ್ ವಚನಗಳನ್ನು ಅಧ್ಯಯನ ಮಾಡುವ ವರಿಗೆ ಸತ್ಯಧರ್ಮದ ಹೊಂಗಿರಣವು ಹೊರ ಸೂಸುವ ಅನುಭವವಾಗುತ್ತದೆ. ಇದರಿಂದಾಗಿ ಅವರು ಕೂಡಾ ಮೊದಲನೆಯ ವಿಭಾಗದವರಂತೆ ಮಾನಸಿಕ ಅನುಭೂತಿಯೆಡೆಗೆ ಸಾಗುತ್ತಾರೆ. ಹೀಗೆ ಸತ್ಯಾನ್ವೇಷಣೆ ಮಾಡುವವರೊಡನೆ ಅಲ್ಲಾಹನು ಹೇಳುತ್ತಾನೆ:

“ಜನರೇ, ನಾವು ನಿಮ್ಮದೇ ಪ್ರಸ್ತಾಪವಿರು ವಂತಹ ಒಂದು ಗ್ರಂಥವನ್ನು ನಿಮ್ಮ ಕಡೆಗೆ ಕಳುಹಿಸಿರುವೆವು. ನೀವು ವಿವೇಚಿಸುವುದಿಲ್ಲವೇ?” (21:10) “ಪೈಗಂಬರರೇ, ನನ್ನ ವಚನವನ್ನು ಚೆನ್ನಾಗಿ ಆಲಿಸುವ ಹಾಗೂ ಅದರ ಅತ್ಯುತ್ತಮ ಭಾಗವನ್ನು ಅನುಸರಿಸುವ ನನ್ನ ದಾಸರಿಗೆ ಶುಭವಾರ್ತೆ ನೀಡಿರಿ. ಇವರೇ ಅಲ್ಲಾಹನಿಂದ ಸನ್ಮಾರ್ಗ ನೀಡಲ್ಪಟ್ಟವರು ಮತ್ತು ಇವರೇ ಬುದ್ಧಿ ವಂತರು.” (39:18) “ಇದು ಜನರಿಗೊಂದು  ಸುವ್ಯಕ್ತ ಎಚ್ಚರಿಕೆ ಮತ್ತು ಅಲ್ಲಾಹನನ್ನು ಭಯ ಪಡುವವರಿಗೆ ಸನ್ಮಾರ್ಗದರ್ಶಕ ಹಾಗೂ ಉಪ ದೇಶ.” (3: 138)ಈ ಬಹಿರಂಗ ಘೋಷಣೆ  ಯನ್ನು ಎಲ್ಲರೂ ಸ್ವೀಕರಿಸಿಕೊಂಡು, ಪ್ರಯೋಜನ ಪಡೆದುಕೊಳ್ಳಬೇಕಾಗಿದೆ.

“ನಾವು ಈ ಕುರ್‍ಆನನ್ನು ಉಪದೇಶಕ್ಕಾಗಿ ಸುಲಭ ಸಾಧನವಾಗಿ  ಮಾಡಿರು ವೆವು. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?” (54:17) ಯಾವುದೇ ಪೂರ್ವ ಗ್ರಹವಿಲ್ಲದೆ, ನಿಷ್ಕಳಂಕ  ಹೃದಯದೊಂದಿಗೆ ಸತ್ಯಾನ್ವೇ ಷಣೆಗೆ ಹೊರಟವರನ್ನು ಕುರ್‍ಆನ್ ಎಲ್ಲಾ ಕಾಲ ದಲ್ಲೂ ಆಕರ್ಷಿಸಿದೆ. ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ  ರಾಷ್ಟ್ರಗಳಲ್ಲಿ ಹೀಗೆ ಕುರ್‍ಆನ್‍ನಿಂದ ಆಕರ್ಷಿತರಾಗಿ, ಅದರ ಆದರ್ಶದ ವಾಹಕರೂ, ಪ್ರಚಾರಕರೂ ಆಗಿ ಬದಲಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸಂಕುಚಿತ ಮನಸ್ಸಿನಿಂದ ಪೂರ್ವಗ್ರಹಪೀಡಿತ ರಾಗಿ ಕುರ್‍ಆನನ್ನು ನೋಡುವವರು ಮೂರನೇಯ ವಿಭಾಗದವರು. ಅವರು ಕುರ್‍ಆನ್‍ನ ಅತಿ  ಮಾನುಷಿಕತೆಯನ್ನೂ, ದೈವಿಕವೆಂಬುದನ್ನೂ ನಿರಾಕರಿಸುತ್ತಾರೆ. ಹೀಗೆ ಕುರ್‍ಆನ್‍ನ ಉದಾತ್ತ ದಾರ್ಶನಿಕತೆಯೆಡೆಗೆ ತಲುಪುವ ದ್ವಾರವನ್ನು  ಮೊದಲೇ ಮುಚ್ಚಿ ಬಿಡುತ್ತಾರೆ. ಅವರ ದೃಷ್ಟಿಯಲ್ಲಿ ಕುರ್‍ಆನ್ ಓರ್ವ ಮನುಷ್ಯನ ಮಾನಸಿಕ ವಿಭ್ರಾಂತಿಯೋ ಅಥವಾ ಕಟ್ಟುಕತೆಗಳೋ  ಆಗಿರು ತ್ತದೆ. “ಅವನಿಗೆ ನಮ್ಮ ಸೂಕ್ತಗಳನ್ನು ಓದಿ ಹೇಳಲಾದಾಗ ಇವೆಲ್ಲ ಪೂರ್ವಕಾಲದ ಕಥೆಗಳು ಎನ್ನುತ್ತಾನೆ. ಖಂಡಿತ ಅಲ್ಲ! ವಾಸ್ತವದಲ್ಲಿ ಇವರ ಹೃದಯಗಳಿಗೆ ಇವರ ದುಷ್ಕರ್ಮಗಳ ತುಕ್ಕು ಹಿಡಿದು ಬಿಟ್ಟಿದೆ.” (83: 13-14)

ಅವರು ಕುರ್‍ಆನ್ ಪ್ರತಿಪಾದಿಸುವ  ಮೌಲ್ಯಯುತ ತತ್ವಗಳ ನೈಜತೆಯನ್ನು ಅರಿತುಕೊಳ್ಳಲು ಮತ್ತು ಅದರ ಉಪದೇಶಗಳು ಮಾನವ ಸಮೂಹಕ್ಕೆ ಎಷ್ಟೊಂದು ಉದಾತ್ತವೆಂಬುದನ್ನು ಪರಿಶೀಲಿಸಲು ಸಿದ್ಧರಿಲ್ಲ. ಅವರ ದೃಷ್ಟಿಯಲ್ಲಿ ಕುರ್‍ಆನ್ ಇಂತಹ ಪರಿಗಣ ನೆಗೆ ಅರ್ಹವಲ್ಲ. “ಅವನಿಗೆ ನಮ್ಮ ಸೂಕ್ತಗಳನ್ನು ಓದಿ  ಕೇಳಿಸಲಾದಾಗ ಅವನು ಅವುಗಳನ್ನು ತಾನು ಕೇಳಲೇ ಇಲ್ಲವೋ ಎಂಬಂತೆ, ಅವನ ಕಿವಿಗಳು ಕಿವುಡೋ ಎಂಬಂತೆ ದುರಹಂಕಾರದಿಂದ  ಮುಖ ತಿರುಗಿಸಿಬಿಡುತ್ತಾನೆ. (31:7) ಇಂಥವರು ಕುರ್‍ಆನನ್ನು ಅಭ್ಯಸಿಸುವುದಾದರೆ ಅದು ಕುರ್‍ಆನನ್ನು ವಿಮರ್ಶಿಸುವ ಉದ್ದೇಶದಿಂದ  ಮಾತ್ರ. ಅಥವಾ ತಮ್ಮ ನಿಲುವುಗಳನ್ನು ಸಮರ್ಥಿಸುವ ಏನಾದರೂ ಸಿಗುತ್ತದೋ ಎಂಬ ನಿರೀಕ್ಷೆಯಿಂದ ಓದುತ್ತಾರೆ.

ಕುರ್‍ಆನ್‍ನ ಮೂಲಕ  ಮನುಷ್ಯರಿಗೆ ಕಲಿಯಲು ಅಲ್ಲಾಹನು ಇಚ್ಛಿಸಿದ ಯಾವುದನ್ನೂ ಅವರು ಅದರಿಂದ ಕಲಿಯುವುದಿಲ್ಲ. ಅವರು ಅದನ್ನು ಒಂದು ಕಿವಿಯಿಂದ  ಕೇಳಿ, ಇನ್ನೊಂದು ಕಿವಿಯಿಂದ ಹೊರಗೆ ಬಿಡುತ್ತಾರೆ.

ಕುರ್ ಆನ್ ಮತ್ತು ಪ್ರವಾದಿಚರ್ಯೆ

ಹಿಂದಿನಂತೆಯೇ ಇಂದೂ ಕೂಡಾ ಕುರ್‍ಆನನ್ನು ಕಲಿಯಲು ಮತ್ತು ಹರಡಲು ಮೊದಲಿನ ಎರಡು ದೃಷ್ಟಿಕೋನವನ್ನು ಸ್ವೀಕರಿಸು ವುದು  ಅನಿವಾರ್ಯವಾಗಿದೆ. ಕುರ್‍ಆನ್ ದೇವನ ಸಂದೇಶವೆಂಬ ದೃಢವಿಶ್ವಾಸದೊಂದಿಗೆ ಅಥವಾ ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಕಳಂಕವಾಗಿ  ಸತ್ಯವನ್ನು ತಿಳಿದುಕೊಳ್ಳಬೇಕೆಂಬ ದೃಢ ನಿಶ್ಚಯ ದೊಂದಿಗೆ ಅಭ್ಯಸಿಸುವುದು. ಈ ರೀತಿ ಕುರ್‍ಆನನ್ನು ಓದುವವರಿಗೆ ಕುರ್‍ಆನ್‍ನ ತತ್ವಾದರ್ಶಗಳನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಕುರ್‍ಆನಿನ ವಚನಗಳು ಹಲವಾರು ರೀತಿ ವ್ಯಾಖ್ಯಾನಿಸಲು ಸಾಧ್ಯವಾಗುವ ರೀತಿಯಲ್ಲಿ  ಸಂಕ್ಷಿಪ್ತವಾಗಿದೆ.

ಕುರ್‍ಆನಿನಲ್ಲಿ ಅಡಕವಾಗಿರುವ ವಿಶ್ವ ಹಾಗೂ ಜೀವನದ ದರ್ಶನಗಳು ನಮ್ಮ ದೈನಂದಿನ ಜೀವನಕ್ಕೆ ಪರಿವರ್ತಿಸಲು ಅದರ  ಸರಿಯಾದ ಹಾಗೂ ಪ್ರಾಯೋಗಿಕವಾದ ವ್ಯಾಖ್ಯಾನ ಅನಿವಾರ್ಯ. ಇಲ್ಲಿ ಸುನ್ನತ್‍ನ ಪ್ರಾಮುಖ್ಯತೆಯು ಮನವರಿಕೆಯಾಗುತ್ತದೆ. ಕುರ್‍ಆನನ್ನು  ವಿಶ್ವಕ್ಕೆ ತಲುಪಿಸಿದ ಅಂತ್ಯ ಪ್ರವಾದಿಯ ಜೀವನ ಚರ್ಯೆಗಳನ್ನು ಸುನ್ನತ್ ಎನ್ನಲಾಗುತ್ತದೆ. ಅದುವೇ ಕುರ್‍ಆನ್‍ನ ಅತ್ಯಂತ ಅಧಿಕೃತ  ಪ್ರಾಯೋಗಿಕ ವ್ಯಾಖ್ಯಾನ. ಕುರ್‍ಆನ್ ಅಖೀಮುಸ್ಸಲಾತ ವಆತುಝ್ಝಕಾತ (ನಮಾಝ್ ಸಂಸ್ಥಾಪಿಸಿರಿ ಝಕಾತ್ ಕೊಡಿರಿ) ಎಂದು ಹಲವು  ಬಾರಿ ಪುನರಾವರ್ತಿಸಿದೆ. ಆದರೆ ನಮಾಝ್ ಎಷ್ಟು ಬಾರಿ, ಎಷ್ಟು ರಕಅತ್, ಯಾವ ರೂಪ? ಝಕಾತ್ ಯಾರಿಗಾಗಿ, ಎಷ್ಟು ಪ್ರಮಾಣದಲ್ಲಿ  ಕೊಡಬೇಕು ಎಂಬುದನ್ನು ಕುರ್‍ಆನ್ ತಿಳಿಸಿಲ್ಲ. ಹಾಗಿದ್ದರೂ ಮುಸ್ಲಿಮ್ ಸಮುದಾಯ ನಮಾಝ್ ಮತ್ತು ಝಕಾತನ್ನು ನಿರ್ದಿಷ್ಟ ರೂಪದಲ್ಲಿ, ಪ್ರಮಾಣದಲ್ಲಿ ಅದನ್ನು ನಿರ್ವಹಿಸುತ್ತಿದೆ. ಪ್ರವಾದಿ ಚರ್ಯೆಯಿಂದ ಇದು ಸಾಧ್ಯವಾಗಿದೆ. ಆದ್ದರಿಂದ ಕುರ್‍ಆನನ್ನು ಪ್ರಾಯೋಗಿಕ  ಜೀವನದಲ್ಲಿ ಅಳವಡಿ ಸಲು ಸುನ್ನತ್ತನ್ನು ಎರಡನೆಯ ಆಧಾರವಾಗಿ ಸ್ವೀಕರಿಸಲೇಬೇಕು.

ಸುನ್ನತ್ ಎಂಬುದು ಕುರ್‍ಆನಿನ ಅಧಿಕೃತ ವ್ಯಾಖ್ಯಾನ ಮತ್ತು ಆಧಾರವೆಂಬುದು ಕುರ್‍ಆನ್‍ಗೆ ವಿರುದ್ಧವಾದ ಆಶಯವಲ್ಲ. ಕುರ್‍ಆನ್ ಸ್ವತಃ  ಅದನ್ನು ಸ್ಪಷ್ಟಪಡಿಸಿದೆ. ಕುರ್‍ಆನನ್ನು ಒಂದು ಪುಸ್ತಕ ರೂಪದಲ್ಲಿ ಕ್ರೋಡೀಕರಿಸಿ, ಜನತೆಯ ಕೈಗಳಿಗೆ ತಲುಪಿಸಿ, ಜನರ ಸಮ್ಮುಖದಲ್ಲಿ ಓದಿ  ಕೇಳಿಸುವ ಕರ್ತವ್ಯ ಮಾತ್ರ ಪ್ರವಾದಿಯವರದ್ದಾಗಿರಲಿಲ್ಲ. ಅಲ್ಲಾಹನು ಹೇಳುತ್ತಾನೆ, ಉಮ್ಮಿಗಳ (ನಿರಕ್ಷರಿಗಳ) ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಎಬ್ಬಿಸಿದವನು ಅವನೇ. ಅವರು ಆ ಜನರಿಗೆ ಅವನ ಸೂಕ್ತಗಳನ್ನು ಓದಿ ಹೇಳುತ್ತಾರೆ, ಅವರ ಜೀವನವನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಸದ್ವಿವೇಕದ ಶಿಕ್ಷಣ ನೀಡುತ್ತಾರೆ. (62:2)

[ಮುಂದುವರಿಯುವುದು]