ರಾಜಕೀಯದಲ್ಲಿ ‘ಪ್ರಜಾತಂತ್ರ’ಕ್ಕೆ ಬದಲು ‘ತಂತ್ರ’ಗಳು ಮಾತ್ರ ಉಳಿದುಕೊಂಡಿವೆ: ಡಾ| ಸಲೀಮ್ ಇಂಜಿನಿಯರ್

0
699

ಜೈಪುರ್: ರಾಜಸ್ಥಾನದ ಫೋರಮ್ ಫಾರ್ ಡೆಮಾಕ್ರಸಿ ಆ್ಯಂಡ್ ಕಮ್ಯುನಲ್ ಅಮಿಟಿ (ಎಫ್.ಡಿ.ಸಿ.ಎ.) ವತಿಯಿಂದ ಆಯೋಜಿಸಲಾಗಿದ್ದ ಪಿಂಕ್ ಸಿಟಿ ಪ್ರೆಸ್ ಕ್ಲಬ್‍ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಜಮಾಅತೆ ಇಸ್ಲಾಮೀ ಹಿಂದ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ಎಫ್‍ಡಿಸಿಎ ನ ರಾಷ್ಟ್ರೀಯ ಕಾರ್ಯದರ್ಶಿಯಾದ ಡಾ| ಮುಹಮ್ಮದ್ ಸಲೀಮ್ ಇಂಜಿನೀಯರ್‍ರವರು ಮಾತನಾಡಿದರು.

“ಕಳೆದ ಎಪ್ಪತ್ತು ದಶಕಗಳಿಂದ ಪ್ರಜಾತಂತ್ರದ ಹೆಸರಲ್ಲಿ ನಮ್ಮನ್ನು ಆಳುತ್ತಾ ಬಂದಿರುವ ನಾಯಕರು ಅದರ ಮೌಲ್ಯಗಳನ್ನು ಕಾಪಾಡುವಲ್ಲಿ ಸೋತು ಹೋಗಿದ್ದಾರೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ ಸಾರ್ವಜನಿಕರು ಪ್ರಶ್ನಿಸದೇ ಇರುವುದೇ ಆಗಿದೆ. ಇವತ್ತು ಸುಳ್ಳು ಹಾಗೂ ದ್ವೇಷ ರಾಜಕಾರಣವು ಅಧಿಕಾರಗಳ ದಾಹ ತಣಿಸುತ್ತಿದೆ. ದೇಶದ ಜವಾಬ್ದಾರಿಯುತ ಪ್ರಜೆಗಳೆಂಬ ನೆಲೆಯಲ್ಲಿ ಪ್ರಜಾತಂತ್ರವನ್ನು ಉಳಿಸಿಕೊಳ್ಳಲು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾದ ಅಗತ್ಯತೆ ಇದೆ. ಜಾತ್ಯಾತೀತ ಗುಂಪುಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ” ಎಂದು ಅವರು ಹೇಳಿದರು.

ಭಾರತೀಯ ಅಪೆಕ್ಸ್ ನ್ಯಾಯಾಲಯದ ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್‍ರವರು “ನಮ್ಮ ಸಂವಿಧಾನವು ಸಮಾನತೆ ಮತ್ತು ಸಮಾನ ಗೌರವವನ್ನು ಪಡೆಯುವ ಹಕ್ಕು ನೀಡಿದೆ. ಒಂದು ವೇಳೆ ಸಮಾನತೆಯು ಉಳಿದುಕೊಳ್ಳದಿದ್ದರೆ ಪ್ರಜಾಪ್ರಭುತ್ವವು ಅರ್ಥಹೀನವಾಗುವುದು” ಎಂದರು.

ಈ ಸಂದರ್ಭದಲ್ಲಿ ಪ್ರಖ್ಯಾತ ಬರಹಗಾರರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಾದ ಪ್ರೊಫೆಸರ್ ರಾಮ್ ಪುಣಿಯ್ಯಾನ್‍ರವರು ಮಾತನಾಡುತ್ತಾ,” ಕಳೆದ 4 ವರ್ಷಗಳಿಂದ ದೇಶದಲ್ಲಿ ಗುಂಪು ಹತ್ಯೆಗಳು ನಡೆಯುತ್ತಲೇ ಇವೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಪುಸ್ತಕಗಳು ಇಂದು ಜನರ ನಡುವೆ ದ್ವೇಷವನ್ನು ಹರಡುತ್ತಿವೆ. ಧರ್ಮ ರಾಜಕೀಯ ಹೆಸರಿನಲ್ಲಿ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಕೊಡಲಿ ಏಟನ್ನು ನೀಡುವ ಕೃತ್ಯಗಳು ಇಂದು ಜಾರಿಯಲ್ಲಿವೆ” ಎಂದರು.

ಈ ಸಂದರ್ಭದಲ್ಲಿ ರಾಜಸ್ತಾನ ಹೈಕೋರ್ಟ್‍ನ ಮಾಜಿ ನ್ಯಾಯಾಧೀಶರಾದ ಪನಾ ಚಂದ್ ಜೈನ್, ಮಾಜಿ ಅಡ್ವೆಕೇಟ್ ಜನರಲ್ ಜಿ.ಎಸ್. ಬಾಪ್ನಾ, ರಾಜಸ್ತಾನ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ವೇದ ವ್ಯಾಸ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಪ್ರೊ. ಲಾಡ್ ಕುಮಾರ್ ಜೈನ್ ಹಾಗೂ ನಾಗರಿಕ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಅಡ್ವಕೇಟ್ ಪಕೇರ್ ಫಾರೂಕ್ ರವರು ತಮ್ಮ ವಿಚಾರಧಾರೆಗಳನ್ನು ಮುಂದಿರಿಸಿದರು. ರಾಜ್ಯ ಎಫ್‍ಡಿಸಿಎನ ಅಧ್ಯಕ್ಷರಾದ ಟಿಸಿ ರಾಹುಲ್ ಧನ್ಯವಾದ ಸಮರ್ಪಿಸಿದರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ. ಇಕ್ಬಾಲ್ ಸಿದ್ದೀಕಿ ಕಾರ್ಯಕ್ರಮವನ್ನು ನಿರೂಪಿಸಿದರು.