ರಫೇಲ್: ಎನ್. ರಾಮ್ ಅವರ ತನಿಖಾ ಬರಹದ ಬಳಿಕ

0
370

ಏ ಕೆ ಕುಕ್ಕಿಲ

1986 ಮಾರ್ಚ್ 24ರಂದು ಪ್ರಧಾನಿ ರಾಜೀವ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವು ಸ್ವೀಡನ್ನಿನ ಮದ್ದುಗುಂಡು ತಯಾರಕ ಸಂಸ್ಥೆಯಾದ ಬೋಫೋರ್ಸ್‍ನೊಂದಿಗೆ 285 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಮದ್ದುಗುಂಡುಗಳ ತಯಾರಿಯಲ್ಲಿ ಬೋಫೋರ್ಸ್‍ಗೆ ವಿಶ್ವ ಮಾರುಕಟ್ಟೆಯಲ್ಲಿಯೇ ಬಹಳ ಪ್ರಮುಖ ಸ್ಥಾನವಿದ್ದುದರಿಂದ ಈ ಒಪ್ಪಂದವನ್ನು ಭಾರತದ ವಿರೋಧ ಪಕ್ಷಗಳಾಗಲಿ, ರಕ್ಷಣಾ ತಜ್ಞರಾಗಲಿ ವಿರೋಧಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಹೀಗಾಗಿ ಈ ಒಪ್ಪಂದವು ಭಾರತೀಯ ರಾಜಕಾರಣದಲ್ಲಿ ದೊಡ್ಡಮಟ್ಟದ ಚರ್ಚೆಗೂ ಒಳಗಾಗಲಿಲ್ಲ. ಪತ್ರಿಕೆಗಳಿಗೂ ಅನುಮಾನ ಬಂದಿರಲಿಲ್ಲ. ಆದರೆ, 1986 ಮೇಯಲ್ಲಿ ಸ್ವೀಡನ್ನಿನ ರೇಡಿಯೊವೊಂದು ಮೊದಲ ಬಾರಿ ಈ ಒಪ್ಪಂದದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿತು. ಈ ಒಪ್ಪಂದವನ್ನು ಕುದುರಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ 60 ಕೋಟಿ ರೂಪಾಯಿಯನ್ನು ಬೋಫೋರ್ಸ್ ಸಂಸ್ಥೆಯು ಲಂಚವಾಗಿ ನೀಡಿದೆ ಎಂದು ಅದು ಬಹಿರಂಗಪಡಿಸಿತು. ಈ ಸಂದರ್ಭದಲ್ಲಿ ದಿ ಹಿಂದೂ ಪತ್ರಿಕೆಯ ಯುವ ಪತ್ರಕರ್ತೆ ಚಿತ್ರಾ ಸುಬ್ರಹ್ಮಣ್ಯಂ ಸ್ವೀಡನ್ನಿನಲ್ಲಿದ್ದರು. ಅವರೊಳಗಿನ ಪತ್ರಕರ್ತೆ ಜಾಗೃತರಾದರು. ಬೋಫೋರ್ಸನ್ನು ತಲೆಯೊಳಗೆ ತುಂಬಿಕೊಂಡು ಮಾಹಿತಿಗಾಗಿ ಹುಡುಕಾಡಿದರು. ಹೀಗಿರುತ್ತಾ,

1987 ಎಪ್ರಿಲ್ 16ರಂದು ಸ್ವೀಡನ್ನಿನ ಪತ್ರಿಕೆಯೊಂದು ದಂಗುಬಡಿಸುವ ಸುದ್ದಿಯನ್ನು ಪ್ರಕಟಿಸಿತು. ಸ್ಟೈನ್ ಲಿಂಡ್‍ಸ್ಟೋರ್ಮ್ ಎಂಬ ಪೊಲೀಸಧಿಕಾರಿ ಆ ಸುದ್ದಿಯ ಮೂಲ. ಅವರು ಓರ್ವ ಚೊಚ್ಚಲಿಗ(Whistle Blower)ನ ಮೂಲಕ ಪಡೆದುಕೊಂಡ ಮಾಹಿತಿಯನ್ನು ಆ ಪತ್ರಿಕೆಗೆ ಬಿಡುಗಡೆಗೊಳಿಸಿದ್ದರು. ಬೋಫೋರ್ಸ್ ಸಂಸ್ಥೆಯು ಭಾರತದ ರಾಜಕಾರಣಿಗಳಿಗೆ ಮಾತ್ರವಲ್ಲ, ವಿದೇಶದ ಬೇರೆ ಬೇರೆ ರಾಜಕೀಯ ಪ್ರಮುಖರಿಗೆ ಲಂಚವನ್ನು ನೀಡುವ ಮೂಲಕ ಗುತ್ತಿಗೆಯನ್ನು ಪಡಕೊಳ್ಳುತ್ತದೆ ಎಂಬ ಮಾಹಿತಿಯನ್ನು ಆ ಚೊಚ್ಚಲಿಗ ಹೊರಹಾಕಿದ್ದ. ದಿ ಹಿಂದೂ ಪತ್ರಿಕೆ ಚುರುಕಾಯಿತು. ಎನ್. ರಾಮ್ ಅವರ ನೇತೃತ್ವದ ಪತ್ರಕರ್ತರ ತಂಡವು ಸ್ವೀಡನ್ನಿಗೆ ತೆರಳಿತು. ಆ ತಂಡವು 350ರಷ್ಟು ದಾಖಲೆಗಳನ್ನು ಸಂಗ್ರಹಿಸಿತಲ್ಲದೆ ಚಿತ್ರಾ ಸುಬ್ರಹ್ಮಣ್ಯಂ ನಿರಂತರವಾಗಿ ದಿ ಹಿಂದೂವಿನಲ್ಲಿ ಮತ್ತು ದಿ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಬರೆದರು. ಈ ವರದಿಯು ಭಾರತೀಯ ರಾಜಕಾರಣದ ಮೇಲೆ ಎಂಥ ಪರಿಣಾಮ ಬೀರಿತೆಂದರೆ, ಯುವ ಪ್ರಧಾನಿಯಾಗಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ರಾಜೀವ್ ಗಾಂಧಿಯವರ ವರ್ಚಸ್ಸು ತೀವ್ರವಾಗಿ ಕಳೆಗುಂದಿತು. ಇವತ್ತಿನಂತೆ ಸಾಮಾಜಿಕ ಜಾಲತಾಣಗಳಿರದಿದ್ದ ಆ ಕಾಲದಲ್ಲೂ ‘ಬೋಫೋರ್ಸ್ ಹಗರಣ’ವನ್ನು ಜನರ ಬಳಿಗೆ ತಲುಪಿಸುವುದಕ್ಕೆ ವಿರೋಧ ಪಕ್ಷಗಳು ಯಶಸ್ವಿಯಾದವು. ಮುಖ್ಯವಾಗಿ, ಬಿಜೆಪಿಯು, ‘ಗಲೀ ಗಲೀಮೆ ಶೋರ್ ಹೆ, ರಾಜೀವ್ ಗಾಂಧಿ ಚೋರ್ ಹೇ’ ಎಂಬ ಸ್ಲೋಗನ್ನನ್ನೇ ಹುಟ್ಟು ಹಾಕಿತು. ಅವತ್ತು ಇದೇ ಎನ್. ರಾಮ್, ಚಿತ್ರಾ ಸುಬ್ರಹ್ಮಣ್ಯಂ ಮತ್ತು ದಿ ಹಿಂದೂ ಪತ್ರಿಕೆಯನ್ನು ಅತ್ಯಂತ ಅಭಿಮಾನದಿಂದ ನೋಡಿದ್ದು ಇದೇ ಬಿಜೆಪಿ. ಇದೀಗ ಅದೇ ದಿ ಹಿಂದೂ ಮತ್ತು ಎನ್. ರಾಮ್‍ರು ರಫೇಲ್ ಒಪ್ಪಂದದ ಬಗ್ಗೆ ಕೆಲವು ದಂಗುಬಡಿಸುವ ಸತ್ಯಗಳನ್ನು ಹೊರಹಾಕಿದ್ದಾರೆ. ಮಾತ್ರವಲ್ಲ, ತಮ್ಮ ಬರಹಕ್ಕೆ ಸಾಕ್ಷ್ಯವಾಗಿ ಮೂಲ ದಾಖಲೆಯ ಝೆರಾಕ್ಸ್ ಪ್ರತಿಯನ್ನೂ ಪ್ರಕಟಿಸಿದ್ದಾರೆ. ಆದರೆ, 1987ರಲ್ಲಿ ಬಿಜೆಪಿಯಲ್ಲಿ ಕಾಣಿಸಿದ್ದ ರೋಮಾಂಚನ ಇವತ್ತಿನ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಅದು ಎನ್. ರಾಮ್‍ರನ್ನು ಮತ್ತು ದಿ ಹಿಂದೂ ಪತ್ರಿಕೆಯನ್ನು ಖಳಪಾತ್ರಗಳಂತೆ ನೋಡುತ್ತಿದೆ. ಬಿಜೆಪಿ ಬೆಂಬಲಿಗರಂತೂ ಅತ್ಯಂತ ಕೆಳಮಟ್ಟದ ಭಾಷೆಯಲ್ಲಿ ಎನ್. ರಾಮ್‍ರನ್ನು ತೆಗಳುತ್ತಿದ್ದಾರೆ. ಅವಾಚ್ಯ ಪದಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿ ಅವಮಾನಿಸುತ್ತಿದ್ದಾರೆ. ಹಾಗಂತ, 1987ರಲ್ಲಿ ಬಿಜೆಪಿಗೆ ಅತ್ಯಂತ ಪ್ರಿಯವಾಗಿದ್ದ ಎನ್. ರಾಮ್ ಮತ್ತು ದಿ ಹಿಂದೂ ಪತ್ರಿಕೆಯು 2019ರಲ್ಲಿ ಅತ್ಯಂತ ಅಪ್ರಿಯವಾಗಿರುವುದಕ್ಕೆ ಕಾರಣಗಳೇನು?

1.MOD protested against PMO undermining Rafale negotiations (2019 ಫೆಬ್ರವರಿ 8)

2. Government waived anti -correption clauses in Rafale deal (2019 ಫೆಬ್ರವರಿ 11)

3. Rafale deal not better terms than UPA era offer (2019 ಫೆಬ್ರವರಿ 13)

4.No bank guarantees meant a more expensive new Rafale deal (2019 ಮಾರ್ಚ್ 6)

ಹೀಗೆ ಎನ್. ರಾಮ್ ಅವರು ಒಂದು ತಿಂಗಳೊಳಗೆ ನಾಲ್ಕು ತನಿಖಾ ಬರಹವನ್ನು ದಿ ಹಿಂದೂವಿನಲ್ಲಿ ಬರೆದರು. ಮಾತ್ರವಲ್ಲ, ಪ್ರತಿ ಬರಹಕ್ಕೂ ದಾಖಲೆಗಳನ್ನು ಮಂಡಿಸಿದರು. ಮೋದಿ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು ಈ ದಾಖಲೆಗಳೇ. ಪ್ರಧಾನಿ ಮನ್‍ಮೋಹನ್ ಸಿಂಗ್ ನೇತೃತ್ವದ ಸರಕಾರವು ಫ್ರಾನ್ಸ್ ನ ಯುದ್ಧ ವಿಮಾನ ತಯಾರಕ ಕಂಪೆನಿಯಾದ ಡಸಾಲ್ಟ್ ನೊಂದಿಗೆ 126 ಯುದ್ಧ ವಿಮಾನಗಳನ್ನು ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದು 2016 ಸೆಪ್ಟೆಂಬರ್‍ನಲ್ಲಿ ಮೋದಿ ನೇತೃತ್ವದ ಸರಕಾರವು ಮಾಡಿಕೊಂಡಿರುವ ಒಡಂಬಡಿಕೆಯೇ ರಫೇಲ್ ಒಪ್ಪಂದ. ರಫೇಲ್ ಯುದ್ಧ ವಿಮಾನದ ಸಾಮರ್ಥ್ಯದ ಕುರಿತಾಗಲಿ, ಡಸಾಲ್ಟ್ ಕಂಪೆನಿಯ ವಿಶ್ವಾಸಾರ್ಹತೆಯ ಕುರಿತಾಗಲಿ ಕಾಂಗ್ರೆಸ್, ಕಮ್ಯುನಿಸ್ಟ್ ಸಹಿತ ಯಾವ ಪಕ್ಷಗಳೂ ಈ ವರೆಗೆ ಅನುಮಾನಿಸಿಲ್ಲ. 2012ರಲ್ಲಿ ಮನ್‍ಮೋಹನ್ ಸಿಂಗ್ ಸರಕಾರವು ಡಸಾಲ್ಟ್ ಕಂಪೆನಿಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅಮೇರಿಕ, ರಷ್ಯಾ ಮತ್ತು ಯುರೋಪಿನ ಯುದ್ಧ ವಿಮಾನ ತಯಾರಕ ಕಂಪೆನಿಗಳ ಬಗೆಗೂ ಪರಾಮರ್ಶೆ ನಡೆಸಿತ್ತು. ಅವು ತಯಾರಿಸುವ ಯುದ್ಧ ವಿಮಾನಗಳು ಮತ್ತು ಡಸಾಲ್ಟ್ ತಯಾರಿಸುವ ಯುದ್ಧ ವಿಮಾನಗಳ ಕಾರ್ಯದಕ್ಷತೆ, ಸಾಮರ್ಥ್ಯ ಮತ್ತು ಬೆಲೆಯನ್ನು ತಜ್ಞರ ತಂಡವು ಪರಿಶೀಲಿಸಿತ್ತು. ಕೊನೆಗೆ ಡಸಾಲ್ಟ್ ಆಯ್ಕೆಯಾಯಿತು. ಈ ಬಗ್ಗೆ ಬಿಜೆಪಿಗೂ ತಕರಾರಿರಲಿಲ್ಲ. ಅಲ್ಲದೇ, ಡಸಾಲ್ಟ್ ಸಂಸ್ಥೆಯು ಈಜಿಪ್ಟ್ ಮತ್ತು ಕತಾರ್‍ ಗೂ ರಫೇಲ್ ಯುದ್ಧ ವಿಮಾನಗಳನ್ನು ಈ ಮೊದಲೇ ಮಾರಾಟ ಮಾಡಿದೆ. ಆದ್ದರಿಂದ ಪ್ರಶ್ನೆಯಿರುವುದು ರಫೇಲ್ ಯುದ್ಧ ವಿಮಾನಗಳ ಕುರಿತಲ್ಲ. ಅದನ್ನು ಖರೀದಿಸುವುದಕ್ಕೆ ಮಾಡಿಕೊಳ್ಳಲಾದ ಒಪ್ಪಂದಗಳ ಬಗ್ಗೆ. ಬೆಂಗಳೂರಿನಲ್ಲಿರುವ ಭಾರತ ಸರಕಾರದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (HAL) ಸಂಸ್ಥೆಯೊಂದಿಗೆ ಸೇರಿಕೊಂಡು ಯುದ್ಧ ವಿಮಾನ ತಯಾರಿಸುವ ತಿಳುವಳಿಕೆಯೊಂದಿಗೆ 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಮನ್‍ಮೋಹನ್ ಸಿಂಗ್ ಸರಕಾರವು ಡಸಾಲ್ಟ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದರೂ ಪ್ರಧಾನಿ ಮೋದಿ ಸರಕಾರವು ಈ ಒಪ್ಪಂದವನ್ನು ತಿರಸ್ಕರಿಸಿ 2016 ಸೆಪ್ಟೆಂಬರ್‍ನಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದಂತೆ,

ಡಸಾಲ್ಟ್ ಕಂಪೆನಿಯು 126 ಯುದ್ಧ ವಿಮಾನಗಳನ್ನು ಒದಗಿಸಬೇಕಾಗಿಲ್ಲ ಮತ್ತು HALನೊಂದಿಗೆ ಸೇರಿಕೊಂಡು ತಯಾರಿಸಬೇಕಿಲ್ಲ. ಅನಿಲ್ ಅಂಬಾನಿಯವರ ಒಡೆತನದ ಸಂಸ್ಥೆಯೊಂದಿಗೆ ಸೇರಿಕೊಂಡು 36 ಯುದ್ಧ ವಿಮಾನಗಳನ್ನು ಮಾಡಿಕೊಟ್ಟರಷ್ಟೇ ಸಾಕಾಗುತ್ತದೆ. ಇಲ್ಲೊಂದು ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಭಾರತೀಯ ವಾಯುಪಡೆಗೆ 126 ಯುದ್ಧ ವಿಮಾನಗಳು ಅಗತ್ಯವಿರುವಾಗ ಅದನ್ನು 36ಕ್ಕೆ ತಗ್ಗಿಸಲು ಕಾರಣ ಏನು? ವಾಯುಪಡೆಯನ್ನು ಬಲಪಡಿಸಬೇಕಾದ ಈ ಸಂದರ್ಭದಲ್ಲಿ ಯುದ್ಧ ವಿಮಾನಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದರಿಂದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗುವುದಿಲ್ಲವೇ? ಅಥವಾ ವಾಯುಪಡೆಗೆ 126 ಯುದ್ಧ ವಿಮಾನಗಳ ಅಗತ್ಯವಿರಲಿಲ್ಲ ಅನ್ನುವುದನ್ನಾದರೂ ಸರಕಾರ ದಾಖಲೆ ಸಹಿತ ಸ್ಪಷ್ಟಪಡಿಸಬೇಕಾಗಿತ್ತು. ಜೊತೆಗೆ ಹಿರಿಯ ರಕ್ಷಣಾ ತಜ್ಞರ ಅಭಿಪ್ರಾಯಗಳನ್ನು ನಾಗರಿಕರೊಂದಿಗೆ ಹಂಚಿಕೊಳ್ಳಬೇಕಾಗಿತ್ತು. ಮನ್‍ಮೋಹನ್ ಸಿಂಗ್ ಸರಕಾರವು ಈ ಒಪ್ಪಂದವನ್ನು ಮಾಡಿಕೊಳ್ಳುವ ಸಂದರ್ಭದಲ್ಲೂ ವಾಯುಪಡೆ ಸಹಿತ ಹಿರಿಯ ರಕ್ಷಣಾ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು. ಆಗ ಅಗತ್ಯವೆಂದು ಕಂಡುಬಂದಿದ್ದ 126 ಯುದ್ಧ ವಿಮಾನಗಳು 2016ರಲ್ಲಿ 36 ಯುದ್ಧ ವಿಮಾನಗಳು ಸಾಕು ಎಂದು ಬದಲಾದದ್ದು ಯಾಕೆ ಮತ್ತು ಏನು ಕಾರಣ? ಎರಡನೆ ಯದಾಗಿ, HAL ಅನ್ನು ಕೈ ಬಿಡುವುದಕ್ಕೆ ಮತ್ತು ಅಂಬಾನಿಯನ್ನು ಕೈ ಹಿಡಿಯುವುದಕ್ಕೆ ಕಾರಣಗಳೇನು? ಈ ಪ್ರಶ್ನೆಗಳಿಗೆ ಮೋದಿ ಸರಕಾರವು ನೀಡಿದ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟತೆಯ ಕೊರತೆ ಇದ್ದುದರಿಂದಲೇ ಸಾರ್ವಜನಿಕರಲ್ಲಿ ಸಂದೇಹ ಮೂಡತೊಡಗಿತು. ಅಲ್ಲದೇ, ಪ್ರಧಾನಿ ನೇತೃತ್ವದಲ್ಲಿ ಫ್ರಾನ್ಸ್ ಗೆ ತೆರಳಿದ ಉದ್ಯಮಿಗಳ ತಂಡದಲ್ಲಿ ಅನಿಲ್ ಅಂಬಾನಿಯವರೂ ಇದ್ದರು ಅನ್ನುವ ಸುದ್ದಿ ಗಳು ಈ ಅನುಮಾನವನ್ನು ಇನ್ನಷ್ಟು ಬಲಪಡಿಸಿದುವು. ಈ ಸಂದರ್ಭದಲ್ಲಿ ಪ್ರಕಟವಾದದ್ದೇ ಎನ್. ರಾಮ್ ಅವರ ಬರಹಗಳು. ಅದು ಒಟ್ಟು ಒಪ್ಪಂದದ ಒಳ ಮರ್ಮವನ್ನೇ ಸಮಾಜದ ಮುಂದಿಟ್ಟಿತು. ಮನ್‍ಮೋಹನ್ ಸಿಂಗ್ ಸರಕಾರವು ಮಾಡಿಕೊಂಡ ಒಪ್ಪಂದಕ್ಕಿಂತ ಮೋದಿ ಸರಕಾರವು ಮಾಡಿಕೊಂಡಿರುವ ಒಪ್ಪಂದವು ಹೇಗೆ ದುಬಾರಿ ಅನ್ನುವುದನ್ನು ರಾಮ್ ಅವರು ಪುರಾವೆ ಸಮೇತ ಬರೆದರು. ನಿಜವಾಗಿ, ಮನ್‍ಮೋಹನ್ ಸಿಂಗ್ ಸರಕಾರವು ಒಪ್ಪಂದ ಮಾಡಿಕೊಳ್ಳುವಾಗ, ಬ್ಯಾಂಕ್ ಗ್ಯಾರಂಟಿಯಾಗಿ 574 ಮಿಲಿಯನ್ ಯೂರೋ ಮೊತ್ತವನ್ನು ಡಸಾಲ್ಟ್ ಕಂಪೆನಿಯೇ ಪಾವತಿಸಬೇಕು ಎಂಬುದು ನಿರ್ಧಾರವಾಗಿತ್ತು. ಆದರೆ, ಮೋದಿ ಸರಕಾರವು ಒಪ್ಪಂದ ಮಾಡಿಕೊಳ್ಳುವಾಗ ಡಸಾಲ್ಟ್ ಈ ನಿರ್ಧಾರದಿಂದ ಹಿಂದೆ ಸರಿಯಿತು. ಇದರರ್ಥ ಏನೆಂದರೆ,

ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತ 1963 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಮೊತ್ತವನ್ನು ಮೋದಿ ಸರಕಾರವು ಡಸಾಲ್ಟ್ ಗೆ ಪಾವತಿಸಬೇಕಾಗುತ್ತದೆ ಎಂಬುದು. ಇದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯವೇ ಕಾರಣ ಎಂಬುದಾಗಿ ರಕ್ಷಣಾ ತಜ್ಞರು ಬೊಟ್ಟು ಮಾಡಿರುವುದನ್ನೂ ಎನ್. ರಾಮ್‍ರು ದಾಖಲೆ ಸಮೇತ ಸಮರ್ಥಿಸಿದ್ದಾರೆ. ಅದು ಹೇಗೆಂದರೆ,
ಮೋದಿ ಸರಕಾರವು ಡಸಾಲ್ಟ್ ನೊಂದಿಗೆ ಸಮಾಲೋಚನೆ ನಡೆಸುವುದಕ್ಕೆ 7 ಮಂದಿ ತಜ್ಞರ ಸಮಿತಿಯೊಂದನ್ನು (INT) ರಚಿಸಿತ್ತು. ಅದರಲ್ಲಿ ರಕ್ಷಣಾ ತಜ್ಞರಾದ ಎಂ.ಪಿ. ಸಿಂಗ್, ಏ.ಆರ್. ಸುಳೆ ಮತ್ತು ರಾಜೀವ್ ವರ್ಮಾ ಅವರೂ ಇದ್ದರು. ಅವರು ಒಪ್ಪಂದದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ 9 ಪುಟಗಳ ಪತ್ರವನ್ನು 2016 ಜೂನ್ 1ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ, ಈ ಒಪ್ಪಂದವು ಹಿಂದಿನ ಸರಕಾರದ ಒಪ್ಪಂದಕ್ಕಿಂತ ಉತ್ತಮವಾಗಿಲ್ಲ ಎಂದಿದ್ದರಲ್ಲದೇ, ಮೊದಲ ಕಂತಿ ನಲ್ಲಿ 18 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಒದಗಿಸುವ ಬಗ್ಗೆ ಇರುವ ನಿಬಂಧನೆಗಳು ಹಿಂದಿನ ಒಪ್ಪಂದಕ್ಕೆ ಹೋಲಿಸಿದರೆ ನಿಧಾನಗತಿಯದ್ದು ಎಂದು ಹೇಳಿದ್ದರು. ಅಂದರೆ, ಮೊದಲ ಕಂತಿನ 18 ಯುದ್ಧ ವಿಮಾನಗಳು ಭಾರತಕ್ಕೆ ವಿಳಂಬವಾಗಿ ಬರುವುದಕ್ಕೆ ಈ ಒಪ್ಪಂದವು ಅವಕಾಶ ಮಾಡಿಕೊಡುತ್ತದೆ ಎಂದರ್ಥ. ಹಾಗೆಯೇ,

7 ಮಂದಿ ತಜ್ಞರ ಸಮಾಲೋಚನಾ ಸಮಿತಿಯು ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲೇ ಪ್ರಧಾನಮಂತ್ರಿ ಕಾರ್ಯಾಲಯವು ನೇರವಾಗಿ ಡಸಾಲ್ಟ್ ಕಂಪೆನಿಯೊಂದಿಗೆ ಸಮಾನಾಂತರ ಮಾತುಕತೆಯಲ್ಲಿ ತೊಡಗಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಮಾನಾಂತರ ಮಾತುಕತೆಯ ಕಾರಣದಿಂದಲೇ ಡಸಾಲ್ಟ್ ನಿಂದ ಬ್ಯಾಂಕ್ ಗ್ಯಾರಂಟಿ ಮೊತ್ತವನ್ನು ಪಾವತಿಸುವಂತೆ ಮಾಡಲು ಸಾಧ್ಯವಾಗಲಿಲ್ಲ ಎಂದವರು ಪತ್ರದಲ್ಲಿ ದೂರಿಕೊಂಡಿದ್ದರು. ಇಡೀ ಒಪ್ಪಂದವನ್ನು ಅಗ್ಗಗೊಳಿಸಿಕೊಳ್ಳುವ ಅವಕಾಶ ಇದ್ದೂ ಪ್ರಧಾನಮಂತ್ರಿ ಕಾರ್ಯಾಲಯದ ಮಧ್ಯಪ್ರವೇಶವು ಒಪ್ಪಂದವನ್ನು ದುಬಾರಿಗೊಳಿಸಿತು ಎಂಬರ್ಥದ ನೋವು ತಜ್ಞರ ಪತ್ರದಲ್ಲಿದೆ. ಮಾತುಕತೆಗೆ ತಜ್ಞರ ಸಮಿತಿಯನ್ನು ರಚಿಸಿರುವಾಗ, ಪ್ರಧಾನಮಂತ್ರಿ ಕಾರ್ಯಾಲಯವು ಸಮಾನಾಂತರ ಸಮಾಲೋಚನೆ ನಡೆಸಿರುವುದಕ್ಕೆ ಕಾರಣಗಳೇನು ಅನ್ನುವ ಪ್ರಶ್ನೆಯನ್ನು ಆ ಪತ್ರವು ಪರೋಕ್ಷವಾಗಿ ಎತ್ತುತ್ತದೆ. ಒಂದೋ ತಾನೇ ರಚಿಸಿದ ತಜ್ಞರ ಸಮಿತಿಯ ಮೇಲೆ ನಂಬಿಕೆಯಿಲ್ಲ ಅಥವಾ ತನ್ನದೇ ಆದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿದೆ ಅನ್ನುವುದರ ಹೊರತು ಇನ್ನಾವ ಕಾರಣಗಳು ಇಲ್ಲಿ ಕಾಣಿಸುತ್ತಿಲ್ಲ. ಒಂದುವೇಳೆ, ನಂಬಿಕೆ ಇಲ್ಲದಿದ್ದರೆ ತಂಡವನ್ನು ಬದಲಿಸಬಹುದಿತ್ತು. ಹೊಸ ತಜ್ಞರನ್ನು ನೇಮಿಸಬಹುದಿತ್ತು. ಹಾಗೆ ಮಾಡಿಲ್ಲವೆಂದ ಮೇಲೆ ಈ ಸಮಾನಾಂತರ ಮಾತುಕತೆಗೆ ಬೇರೆ ಉದ್ದೇಶ ಇತ್ತು ಎಂದೇ ಅರ್ಥ. ಕೇಂದ್ರ ಸರಕಾರಕ್ಕೆ ಯಾರದಾದರೂ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶ ಇತ್ತೇ? ಅವರು ಯಾರು? ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೇಶಕ್ಕಿಂತ ಅವರು ಮುಖ್ಯವಾದರೇ? ಅದೇವೇಳೆ, ಈ ಹಿಂದಿನ ಒಪ್ಪಂದದಲ್ಲಿದ್ದ ಭ್ರಷ್ಟಾಚಾರ ವಿರೋಧಿ ಕಲಂಗಳನ್ನು ಸರಕಾರವು ಕಿತ್ತು ಹಾಕಿದೆ ಎಂಬುದಾಗಿ ಎನ್. ರಾಮ್ ಅವರು ಪುರಾವೆ ಸಮೇತ ದಾಖಲಿಸಿದ್ದಾರೆ. ಇವೆಲ್ಲ ಏನು? ಭ್ರಷ್ಟಾಚಾರ ರಹಿತ-ಪಾರದರ್ಶಕ ಆಡಳಿತದ ಬಗ್ಗೆ ಮಾತಾಡುತ್ತಲೇ ಅಧಿಕಾರಕ್ಕೆ ಬಂದ ಮೋದಿಯವರು ರಫೇಲ್‍ನಲ್ಲಿ ಯಾಕೆ ಎಡವಿದರು? ಅವರು ಏನನ್ನು ಬಚ್ಚಿಟ್ಟುಕೊಂಡಿದ್ದಾರೆ? ಯಾರದ್ದೋ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ದೇಶದ ಹಿತವನ್ನು ನಿರ್ಲಕ್ಷಿಸಿದರೇ? ಭ್ರಷ್ಟಾಚಾರಕ್ಕೆ ಬಾಗಿಲು ತೆರೆದರೇ? ತನ್ನ ತಪ್ಪನ್ನು ಅಡಗಿಸಿಕೊಳ್ಳುವುದಕ್ಕಾಗಿ ದೇಶಪ್ರೇಮದ ಮಾತಾಡುತ್ತಿರುವರೇ?

ಎನ್. ರಾಮ್ ಅವರು ನಾಲ್ಕು ಕಂತಿನಲ್ಲಿ ಬರೆದ ದಾಖಲೆಸಹಿತ ತನಿಖಾ ಬರಹಗಳು ‘ಹೌದು’ ಅನ್ನುತ್ತಿವೆ.