ಪ್ರಧಾನಿ ನರೇಂದ್ರ ಮೋದಿ ಒಬ್ಬ ಹೇಡಿ; ಚೀನಾವನ್ನು ಎದುರಿಸುವ ಧೈರ್ಯ ಅವರಿಗಿಲ್ಲ- ಕೇಂದ್ರ ಸರಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

0
370

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತಕ್ಕೆ ಸೇರಿದ ಪ್ರಾಂತ್ಯವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೇಡಿ ಎಂದು ಕರೆದ ಅವರು, ಚೀನಾವನ್ನು ಎದುರಿಸಿ ನಿಲ್ಲುವ ತಾಕತ್ತು, ಧೈರ್ಯ ಮೋದಿಯವರಿಗಿಲ್ಲ ಎಂದು ದೂಷಿಸಿದರು.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  “ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೇಶದ ಜನತೆಗೆ ನಿಖರವಾಗಿ ಉತ್ತರಿಸಬೇಕು” ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ,  ಪೂರ್ವ ಲಡಾಕ್‌, ಕೈಲಾಶ್ ವಲಯ, ಡೆಪ್ಸಂಗ್ ಪ್ರಸ್ಥಭೂಮಿ, ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್‌ಗಳಲ್ಲಿ ಚೀನಾದ ಸೇನಾ ಪ್ರಾಬಲ್ಯವು ಹೆಚ್ಚಾಗಿರುವುದರ ಕುರಿತು ರಾಹುಲ್ ಪ್ರಸ್ತಾಪಿಸಿದರು. ಪ್ರಧಾನಿ ಮೋದಿಯವರು ಭಾರತಕ್ಕೆ ಸೇರಿದ ಜಾಗವನ್ನು ಏಕೆ ಚೀನಾ ದೇಶಕ್ಕೆ ಬಿಟ್ಟುಕೊಟ್ಟಿದ್ದಾರೆ, ಚೀನಾ ಇಷ್ಟೆಲ್ಲ ಭೂ ಪ್ರದೇಶಗಳನ್ನು ಕಬಳಿಸುತ್ತಿದ್ದರೂ ಯಾಕೆ ತಲೆ ತಗ್ಗಿಸಿ ನಿಂತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ನಿನ್ನೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಒಂದು ಇಂಚು ನೆಲವನ್ನು ಕೂಡ ಬಿಟ್ಟುಕೊಡುವುದಿಲ್ಲ, ಪ್ರಧಾನ ಮಂತ್ರಿ ಮೋದಿಯವರ ಆದೇಶ, ಸೂಚನೆ ಪ್ರಕಾರ ಚೀನಾದ ಜೊತೆಗೆ ಸೇನೆ ಹಿಂತೆಗೆದುಕೊಳ್ಳುವ ಮಾತುಕತೆಯಾಗಿದ್ದು ನಾವು ಯಾರೊಬ್ಬರಿಗೂ ಒಂದು ಇಂಚು ಜಾಗವನ್ನು ಸಹ ಬಿಟ್ಟುಕೊಡುವುದಿಲ್ಲ. ನಮ್ಮ ದೃಢ ನಿರ್ಧಾರದಿಂದಾಗಿ ಒಪ್ಪಂದದ ಪರಿಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಹೇಳಿದ್ದರು.