ಪತ್ರಕರ್ತ ಸಿದ್ದೀಕ್ ಕಾಪ್ಪನ್‍ರನ್ನು ದಿಲ್ಲಿ ಏಮ್ಸ್ ನಿಂದ ಗುಟ್ಟಾಗಿ ಡಿಸ್ಚಾರ್ಜ್ ಮಾಡಿಸಿದ ಯುಪಿ ಪೊಲೀಸರು

0
810

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್‍ರನ್ನು ದಿಲ್ಲಿ ಏಮ್ಸ್ ಆಸ್ಪತ್ರೆಯಿಂದ ಗುಟ್ಟಾಗಿ ಡಿಸ್ಚಾರ್ಜ್ ಮಾಡಿಸಿಕೊಂಡು ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಕಾಪ್ಪನ್‍ರ ಪತ್ನಿ ತಿಳಿಸಿದ್ದಾರೆ. ಕುಟುಂಬ ಮತ್ತು ವಕೀಲರಿಗೆ ಗೊತ್ತಾಗದಂತೆ ಅತ್ಯಂತ ಗೌಪ್ಯವಾಗಿ ಮಥುರಾ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಕಾಪ್ಪನ್ ತನ್ನನ್ನು ಉತ್ತರ ಪ್ರದೇಶ ಜೈಲಿಗೆ ತಂದು ಹಾಕಿದ್ದಾರೆಂದು ಫೋನ್ ಮಾಡಿ ತಿಳಿಸಿದ್ದು, ಗುರುವಾರ ಗುಟ್ಟಾಗಿ ಈ ಕೆಲಸ ನಡೆದಿದೆ ಎಂದು ಹೇಳಿದ್ದಾರೆ. ಕಳೆದ ದಿನ ಮಾಡಿದ ಪರೀಕ್ಷೆಯಲ್ಲಿಯೂ ಕಾಪ್ಪನ್ ಕೊರೋನ ಮುಕ್ತರಾಗಿರಲಿಲ್ಲ. ಪೂರ್ಣ ಚಿಕಿತ್ಸೆ ಮುಗಿಸದೆ ಅವಸರವಸರದಲ್ಲಿ ಯಾಕೆ ಅವರು ಕೊಂಡು ಹೋದರು ಎಂಬುದು ಸ್ಪಷ್ಟವಾಗಿಲ್ಲ ಎಂದು ಕಾಪ್ಪನ್ ಪತ್ನಿ ಹೇಳಿದ್ದಾರೆ.

ಕೊರೊನ ಪಾಸಿಟಿವ್ ಆದ್ದರಿಂದ ಮಥುರಾದ ಜೈಲಿನ ಸಣ್ಣ ಕೋಣೆಯಲ್ಲಿ ಕೂಡಿ ಹಾಕಲಾಗಿದೆ. ಈ ಹಿಂದೆ ಬಿದ್ದು ಹಲ್ಲು ಮುರಿದುಕೊಂಡಿದ್ದು ಇನ್ನೂ ಸಂಪೂರ್ಣ ವಾಸಿಯಾಗಿಲ್ಲ. ಅವರಿಗೆ ಕೊಲಸ್ಟ್ರಾಲಿದೆ, ಶುಗರ್ ಕೂಡ ಇದೆ. ಆರೋಗ್ಯ ಪರಿಸ್ಥಿತಿ ಉತ್ತಮಗೊಳ್ಳುವ ಮೊದಲೇ ಕಾಪ್ಪನ್‍ರನ್ನು ಆಸ್ಪತ್ರೆಯಿಂದ ಜೈಲಿಗೆ ಎತ್ತಂಗಡಿ ಮಾಡಲಾಗಿದೆ ಎಂದು ಸಿದ್ದೀಕ್ ಪತ್ನಿ ಹೇಳಿದ್ದಾರೆ.