ಪ್ಯಾಸೆಂಜರ್ ರೈಲುಗಳ ಸಂಚಾರ ಸೇವೆ ಆರಂಭಿಸುವಂತೆ ವೆಲ್ಫೇರ್ ಪಾರ್ಟಿಯಿಂದ ಒತ್ತಾಯ

0
178

ಸನ್ಮಾರ್ಗ ವಾರ್ತೆ

ಬೆಂಗಳೂರು: ದೇಶದಲ್ಲೆಡೆ ಕೋರೋನ ಸೋಂಕು ಇಳಿಮುಖವಾಗಿ ಎಲ್ಲ ರಂಗಗಳಲ್ಲೂ ಸಡಿಲಿಕೆ ಕಂಡುಬರುತ್ತಿದೆ. ಆದರೆ, ಬಡವರ, ಕೂಲಿ ಕಾರ್ಮಿಕರ ಪ್ಯಾಸೆಂಜರ್ ರೈಲು ಮಾತ್ರ ಸಂಪೂರ್ಣವಾಗಿ ಚಲಿಸದಿರುವದು ಜನರಿಗೆ ತೊಂದರೆ ಆಗುತ್ತಿದೆ‌ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಹೇಳಿದರು.

ಈಗಾಗಲೇ 11 ತಿಂಗಳಿಂದ ಕೋರೋನ ಬಲೆಗೆ ಸಿಲುಕಿ ಬಡವರು, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದು ಇಂತಹ ಸಂಧರ್ಭದಲ್ಲಿ ಅವರಿಗೆ ಕಡಿಮೆ ದರದ ಪ್ರಯಾಣ ಸೇವೆ ನೀಡುವ ಪ್ಯಾಸೆಂಜರ್ ರೈಲು ಆರಂಭವಾಗದೆ ಇರುವುದು ಸಂಕಷ್ಟಕ್ಕೀಡು ಮಾಡಿದೆ.

ಸರಕಾರ ಬಸ್ ಪ್ರಯಾಣ, ಸಿನಿಮಾ ಮಂದಿರ , ಮಾರುಕಟ್ಟೆ, ಸಭೆ ಸಮಾರಂಭಗಳು ಸೇರಿ ಹಲವಾರು ಕಡೆಗಳಲ್ಲಿ ಶೇ. 100 ರಷ್ಟು ಜನರು ಸೇರುವ ಅನುಮತಿ ಕೊಟ್ಟಿದೆ.

ಬಡಜನರ, ಕೂಲಿ ಕಾರ್ಮಿಕರ ನೆರವಿಗೆ ಧಾವಿಸುವ ಮೂಲಕ ಅವರಿಗೆ ಕಡಿಮೆ ದರದಲ್ಲಿ ಪ್ರಯಾಣ ಮಾಡಲು ಸಹಾಯ ಮಾಡುವ ಪ್ಯಾಸೆಂಜರ್ ರೈಲುಗಳನ್ನು ಪ್ರಾರಂಭಿಸುವ ಅವಶ್ಯಕತೆ ಇದೆ.

ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಬಡ ಕೂಲಿಕಾರ್ಮಿಕರ ಪ್ರಯಾಣಕ್ಕೆ ಅನುಕೂಲವಾಗಲು ಸ್ಥಳೀಯ ಮಟ್ಟದಲ್ಲಿ ಪ್ಯಾಸೆಂಜರ್ ರೈಲುಗಳ ಓಡಾಟ ಆರಂಭಿಸಬೇಕೆಂದು ಅವರು ಒತ್ತಾಯಿಸಿದರು.