ರಮಝಾನ್ ವಿದಾಯ ಕೋರುವಾಗ…

0
486

ಎಂ.ಎ. ಅಬ್ದುಲ್ ಅಜೀಜ್

ರಮಝಾನ್ ವಿದಾಯ ಕೋರುತ್ತಿದೆ. ಪುಣ್ಯಗಳ ವಸಂತ ಕಾಲಕ್ಕೆ ವಿದಾಯ ಹೇಳುವುದು ಯಾರಿಗೂ ಇಷ್ಟವಾಗುವುದಿಲ್ಲ. ರಮಝಾನ್ ತಿಂಗಳಲ್ಲಿ ತಕ್ವಾ(ದೇವಭಯ)ದ ತರಬೇತಿಯನ್ನು ಪಡೆದು ನಾವು ಕರ್ಮಭೂಮಿಗೆ ಪ್ರವೇಶಿಸುತ್ತೇವೆ. ದೇಹೇಚ್ಚೆಗಳನ್ನು ಸರಿಸಿ, ದೇವೇಚ್ಛೆಗೆ ವಿಧೇಯರಾಗುವುದೇ ತಕ್ವಾ. ಈ ತಿಂಗಳಲ್ಲಿ ಗಳಿಸಿದ ತಕ್ವಾದ ಆಳ ಹಾಗೂ ಗಾತ್ರವು ಮುಂದಿನ ದಿನಗಳಲ್ಲಿ ಅರಿತುಕೊಳ್ಳಲು ಸಾಧ್ಯವಾಗುವುದು.

ಆಶೆ, ಆಮಿಷ, ವ್ಯಾಮೋಹಗಳು ನಮ್ಮನ್ನು ನಿರೀಕ್ಷಿಸುತ್ತಿವೆ. ನಮ್ಮನ್ನು ಒಳಿತಿನಿಂದ ತಡೆಯಲು ಯತ್ನಿಸಿದ ಶೈತಾನನ ಬಲೆ ಯನ್ನು ಬಿಡಿಸಿಕೊಂಡು ರಮಝಾನ್ ಪೂರ್ಣವಾಯಿತು. ಈ ಹೋರಾಟವು ನಿರಂತರವಾಗಿರಬೇಕು. ಅದರಲ್ಲಿ ಯಾವುದೇ ದೌರ್ಬಲ್ಯ ಉಂಟಾಗಬಾರದು.

ರಮಝಾನ್ ಪವಿತ್ರ ಕುರ್‍ಆನ್‍ನ ತಿಂಗಳು. ಅಲ್ಲಾಹನು ಆ ದಿವ್ಯಗ್ರಂಥವನ್ನು ನಮಗಾಗಿ ಇಳಿಸಿದ್ದಕ್ಕೆ ಕೃತಜ್ಞತೆಯಾಗಿ ಸುದೀರ್ಘ ಒಂದು ತಿಂಗಳು ಉಪವಾಸ ಹಾಗೂ ದೀರ್ಘ ರಾತ್ರಿ ನಮಾಝ್‌ಗಳನ್ನು ನಿರ್ವಹಿಸಿದೆವು. ಕುರ್‍ಆನ್‍ನ ವಚನ ಗಳ ಮೂಲಕ ಹಾದು ಹೋಗುವಾಗ ಅಲ್ಲಾಹನು ನಮ್ಮನ್ನು ಎಷ್ಟು ಪ್ರೀತಿಸುತ್ತಿದ್ದೆನೆಂಬ ಅರಿವು ನಮ್ಮಲ್ಲಿ ಮೂಡಿತು. ಕುರ್‍ಆನ್ ನಮ್ಮ ಇಹ-ಪರ ವಿಜಯವನ್ನು ಬಯಸುತ್ತದೆ. ರಮಝಾನ್‍ನ ಬಳಿಕ ನಮ್ಮ ಮಾರ್ಗದರ್ಶಕ ಕುರ್‍ಆನ್ ಆಗಿರಬೇಕು. ಅದರಲ್ಲಿ ಯಾವುದೇ ಸಂಶಯ ಇರಬಾರದು. ಕುರ್‍ಆನ್ ಕಲಿಸುವ, ದೇವನೊಡನೆ ಹಾಗೂ ಸೃಷ್ಟಿಗಳೊಂದಿಗಿನ ಕರ್ತವ್ಯವವನ್ನು ನಿರ್ವಹಿಸಬೇಕು. ಅದರಲ್ಲಿ ಯಾವುದೇ ಸಂಶಯವೂ ಉಳಿಯಬಾರದು.

ಇಂದು ಪವಿತ್ರ ಗ್ರಂಥವು ಅತ್ಯಂತ ಮಹತ್ವವೆನಿಸುತ್ತದೆ. ಏಕದೇವತ್ವ ಹಾಗೂ ಪ್ರಪಂಚದ ಏಕತೆಯು ಮಾನವ ಸಹೋದರತೆಯನ್ನು ಪ್ರಕಟಿಸುತ್ತದೆ. ಧರ್ಮ, ಜಾತಿ, ಲಿಂಗ, ದೇಶ, ಭಾಷಾ ವೈವಿಧ್ಯಗಳು ರಕ್ತ ಹರಿಸುವ ಹೋರಾಟ ಮಾಡಲು ಒಂದು ಒಳ್ಳೆಯ ಅವಕಾಶ ಎಂದು ತಿಳಿದುಕೊಂಡಿ ರುವಂತಹ ಜಗತ್ತಿನಲ್ಲಿ ನಾವು ಬಾಳುತ್ತಿದ್ದೇವೆ. ಮಾನವೀಯ ಐಕ್ಯತೆಯೆಂಬ ಮಹಾನ್ ಕಲ್ಪನೆಯನ್ನು ಸಮಾಜದ ಮುಂದಿರಿ ಸುವ ಕರ್ತವ್ಯ ಇಮ್ಮಡಿಗೊಂಡಿರುವ ಕಾಲವಿದು. ವಿಶಾಲವಾದ ಸಂಘಟನೆಗಳು, ಸಭೆಗಳು, ಸಂವಾದಗಳನ್ನು ಏರ್ಪಡಿಸಿ ಭಿನ್ನತೆ ಯೆಂಬ ಮಹಾಗೋಡೆಯನ್ನು ನಾವು ಭೇದಿಸಬೇಕು.

ಕುರ್‍ಆನ್ ನ್ಯಾಯ ಹಾಗೂ ದೇವಮಾರ್ಗದ ಹೋರಾಟವನ್ನು ಬಯಸುತ್ತದೆ. ಸಾವಿರಾರು ಸಹೋದರರು ಅನ್ಯಾಯವಾಗಿ ಸೆರೆಮನೆಯಲ್ಲಿ ಕಳೆಯುತ್ತಿರುವಂತಹ ದೇಶದಲ್ಲಿ ನಾವಿದ್ದೇವೆ. ಹಕ್ಕು ಹಾಗೂ ಸ್ವಾತಂತ್ರ್ಯದಿಂದ ವಂಚಿತರಾಗಿ ಮೂಲಭೂತ ಆವಶ್ಯಕತೆಗಳೂ ನಿರಾಕರಿಸಲ್ಪಟ್ಟ ಸಾವಿರಾರು ಜೀವಗಳು ಪರಿಸರದಲ್ಲಿವೆ. ಸಮಾಜದಲ್ಲಿ ಅರ್ಧದಷ್ಟು ಮಂದಿ ಮುಕ್ತಿಗಾಗಿ ಕಾಯುತ್ತಿದ್ದಾರೆ. ಬೇಟೆಗಾರರು ಸಂಘಟಿತರಾಗಿದ್ದಾರೆ. ಹೋರಾಟಗಾರರು ನೇಣಿಗೇರಿಸಲ್ಪಡುತ್ತಿದ್ದಾರೆ. ಅವರ ಕನಸುಗಳನ್ನು ನುಚ್ಚುನೂರು ಗೊಳಿಸಲಾಗುತ್ತಿದೆ. ಹೋರಾಟದ ಹಾದಿಯಲ್ಲಿ ಸಿದ್ಧತೆ ನಡೆಸಲು ರಮಝಾನ್ ಕರೆ ನೀಡುತ್ತದೆ. ಹೋರಾಟದ ಹಾದಿಯಲ್ಲಿ ಮುನ್ನಡೆಯಲು ರಮಝಾನ್ ನಲ್ಲಿ ಗಳಿಸಿದ ದೇವಭಯವು ಕಾರಣ ವಾಗಬೇಕು.

ಸಮಾಜದಲ್ಲಿ ಹಸಿದ ಹೊಟ್ಟೆಯಿಂದ ಕಳೆಯುವವರನ್ನು ಪರಿಗಣಿಸದ ಧರ್ಮವನ್ನು ಅಲ್ಲಾಹನು ನಿರಾಕರಿಸುತ್ತಾನೆ. ನಮ್ಮ ಸಂಪತ್ತಿನಲ್ಲಿ ಅವರಿಗೂ ಪಾಲನ್ನು ನಿಶ್ಚಯಿಸಿದ್ದಾನೆ. ರಮಝಾನ್ ದಾನ-ಧರ್ಮಗಳ ವಸಂತ ವಾಗಿತ್ತು. ಬಡ ದರಿದ್ರರಿಗೆ ಸ್ನೇಹದಿಂದ ಕೈ ತೆರೆದಾಗ ಸಾವಿರಾರು ಹೃದಯಗಳು ತುಂಬಿಬಂದವು. ಕಣ್ಣುಗಳನ್ನು ಸಂತೋಷ ಲಾಸ್ಯವಾಡಿತು. ನೂರಾರು ಸಮಾಜ ಸೇವಾ ಸಂಸ್ಥೆಗಳು ಪುನರ್‍ಜನ್ಮ ತಾಳಿದವು. ಜಾತಿ, ಮತ ಭೇದವಿಲ್ಲದೆ ಸಮಾಜ ಸೇವೆಯ ಕರಗಳು ಅರ್ಹರೆಡೆಗೆ ಚಾಚಲಿ ಎಂಬುದು ರಮಝಾನ್‍ನ ಬೇಡಿಕೆಯಾಗಿತ್ತು. ಈದ್‍ನ ದಿನವನ್ನು ಸ್ವಾಗತಿಸಬೇಕಾದರೂ ಕಡ್ಡಾಯ ಫಿತ್ರ್ ಝಕಾತ್ ನೀಡಬೇಕು. ಹಸಿವಿಲ್ಲದ ಜಗತ್ತು ಇಸ್ಲಾಮ್ ಧರ್ಮದ ಬೇಡಿಕೆಯಾಗಿದೆ.

ಹಬ್ಬಗಳ ಅಂತಃಸತ್ವ ನಷ್ಟವಾದ ಕಾಲವಿದು. ವ್ಯಕ್ತಿಗಳು ಸ್ವಂತಕ್ಕೆ ಸೀಮಿತ ವಾದಾಗ ಹಬ್ಬಗಳ ಸಾಮೂಹಿಕತೆಯೂ ಕಾಣದಾಯಿತು. ಹಬ್ಬಗಳು ತನ್ನ ಮಿತಿಯನ್ನು ಮೀರಿತು. ಸಂತೋಷದ ದಿನಗಳನ್ನು ಅನುಭವಿಸಲು ಕಲಿಯ ಬೇಕು. ಈದ್‍ನ ದಿನವ ನ್ನು ಹಾಡು ಹೇಳಿ ಸಂಭ್ರಮಿಸುತ್ತಿದ್ದ ಹುಡುಗಿಯರನ್ನು ತಡೆದ ತನ್ನ ಅನುಯಾಯಿಗಳನ್ನು ಪ್ರವಾದಿವರ್ಯರು(ಸ) ವಿರೋಧಿಸಿದರು. ಅವೆಲ್ಲವೂ ಹಬ್ಬದ ಸಂಭ್ರಮಾಚರಣೆ ಯಾಗಿದೆ. ಬೇರ್ಪಟ್ಟ ಸಂಬಂಧಗಳನ್ನು ಜೋಡಿಸಲು ನೆರೆಕರೆ ಬಾಂಧವ್ಯವನ್ನು ಸ್ಥಾಪಿಸಲು ಈದ್ ಸಹಾಯಕವಾಗ ಬೇಕು. ಹಿರಿಯರನ್ನು, ಅಸಹಾಯಕ ರನ್ನು ವಿಶೇಷವಾಗಿ ಪರಿಗಣಿಸಬೇಕು. ಕುಟುಂಬದಲ್ಲೂ ಹೊಸತನ ಮೂಡಿ ಬರಲಿ.

ಹಬ್ಬಗಳು ಪ್ರಾರ್ಥನೆಯ ಸಂದರ್ಭವೂ ಹೌದು. ಮಾತಾಪಿತರು, ಸಂಬಂಧಿಕರು, ಗೆಳೆಯರು, ಎಲ್ಲ ಸತ್ಯವಿಶ್ವಾಸಿಗಳು, ಹೋರಾಟಗಾರರು, ದೇವಮಾರ್ಗದಲ್ಲಿ ಹುತಾತ್ಮರಾದವರು, ಸಜ್ಜನ ದಾಸರು, ಮರ್ದಿತರು, ಅಸಹಾಯಕರು, ದೀನದಲಿತ ರಿಗಾಗಿ ನಮ್ಮ ಕೈಗಳನ್ನು ಅಲ್ಲಾಹನೆಡೆಗೆ ಚಾಚೋಣ.

ಈದ್ ಎಂದರೆ ಮರಳುವಿಕೆ ಎಂದರ್ಥ. ಅಲ್ಲಾಹನೆಡೆಗಿನ ಮರಳುವಿಕೆ ಯಾಗಿದೆ. ನಿಶ್ಚಿತವಾದ ಆತ್ಮಾವಲೋಕನದಿಂದ, ಕಣ್ಣೀರು ತುಂಬಿದ ಪ್ರಾರ್ಥನೆಗಳಿಂದ, ಸತ್ಕರ್ಮಗಳಿಂದ ಸಂಪನ್ನವಾಗಿ ನಾವು ಮರಳಿ ಬಂದಿದ್ದೇವೆ. ಅಲ್ಲಾಹನು ಅತ್ಯಂತ ದೊಡ್ಡವನು. ನಮ್ಮನ್ನು ಅನುಗ್ರಹಿಸಿದ ಆ ಸೃಷ್ಟಿಕರ್ತನಿಗೆ ಸರ್ವಸ್ತುತಿ. ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಮ್ದ್.