ಮೌಲ್ಯಪ್ರೇಮಿ ಸಮಾಜ ರಚನೆಯೇ ಉಪವಾಸದ ಗುರಿ – ಇಫ್ತಾರ್ ಕೂಟದಲ್ಲಿ ಮುಹಮ್ಮದ್ ಕುಂಞಿ

0
752

“ಜಗತ್ತಿನ ಎಲ್ಲ ಪ್ರಮುಖ ಧರ್ಮಗಳಲ್ಲೂ ಉಪವಾಸದ ಪರಿಕಲ್ಪನೆ ಇದೆ. ಉಪವಾಸವೆಂಬುದು ಹಸಿವಿನ ಹೆಸರಲ್ಲ. ಮುಂದಿನ 11 ತಿಂಗಳಿಗೆ ನೀಡಲಾಗುವ ತರಬೇತಿ ಕಾರ್ಯಕ್ರಮ. ಕೆಟ್ಟ ಅಭ್ಯಾಸವನ್ನು ತ್ಯಜಿಸದವ ಹಸಿವಿನಿಂದ ಇರಬೇಕಾದ ಅಗತ್ಯವಿಲ್ಲ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ಶರೀರದ ಎಲ್ಲ ಅವಯವಗಳೂ ಮೌಲ್ಯಗಳನ್ನು ಪಾಲಿಸುವುದೇ ನಿಜವಾದ ಉಪವಾಸ. ಇಂದು ವಿಜ್ಞಾನ-ತಂತ್ರಜ್ಞಾನದ ಮೂಲಕ ಜಗತ್ತನ್ನು ನಿಯಂತ್ರಿಸಲು ಹೊರಟಿರುವ ನಾವು, ನಮ್ಮನ್ನು ನಿಯಂತ್ರಿಸಿಕೊಳ್ಳಲು ವಿಫಲರಾಗುತ್ತಿದ್ದೇವೆ. ನಮ್ಮ ಅಂತರಂಗದ ಕಾಯಿಲೆಗಳಾದ ಅಸೂಯೆ, ದ್ವೇಷ, ನಾಟಕೀಯತೆ, ಸುಳ್ಳು, ಮೋಸ ಇತ್ಯಾದಿ ದುರ್ಗುಣಗಳನ್ನು ನಿಯಂತ್ರಿಸುವುದಕ್ಕೆ ಆಧ್ಯಾತ್ಮಿಕ ಸ್ಫೂರ್ತಿಯಿಂದ ಮಾತ್ರ ಸಾಧ್ಯ. ಪೈಶಾಚಿಕತೆ ರಹಿತ, ಮೌಲ್ಯಬದ್ಧ ಸಮಾಜವನ್ನು ಕಟ್ಟುವುದಕ್ಕೆ ಒಂದು ತಿಂಗಳ ತರಬೇತಿಯಾಗಿ ಉಪವಾಸ ಆಗಮಿಸಿದೆ. ಆದ್ದರಿಂದ ನಾವೆಲ್ಲರೂ ಸೇರಿ ಮೌಲ್ಯ ಪ್ರೇಮಿ ಸೌಹಾರ್ದ ಸಮಾಜವನ್ನು ಕಟ್ಟುವುದಕ್ಕೆ ಉಪವಾಸವನ್ನು ಸಂದರ್ಭವಾಗಿ ಬಳಸೋಣ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯ ಅಧ್ಯಕ್ಷ ಮುಹಮ್ಮದ್ ಕುಂಞಿ ಹೇಳಿದರು. ಅವರು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯು ಇಲ್ಲಿನ ಹಿದಾಯತ್ ಸೆಂಟರ್‍ನಲ್ಲಿ ಮೇ 15ರಂದು ಸಂಜೆ ಏರ್ಪಡಿಸಲಾದ ಇಫ್ತಾರ್ ಸೌಹಾರ್ದ ಕೂಟದಲ್ಲಿ ರಮಝಾನ್ ಸಂದೇಶ ನೀಡುತ್ತಿದ್ದರು.

ಸಮಾರೋಪ ನುಡಿಗಳನ್ನಾಡಿದ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ| ಹೆಚ್. ಮುಹಮ್ಮದ್ ಇಸ್ಮಾಈಲ್ ಅವರು, “ಆರೋಗ್ಯ ಎಂದರೆ ಕಾಯಿಲೆ ರಹಿತ ಸ್ಥಿತಿ ಎಂದರ್ಥವಲ್ಲ. ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದಿರುವುದೇ ಕಾಯಿಲೆ ರಹಿತ ಸ್ಥಿತಿ. ಇವತ್ತು ಆರೋಗ್ಯ ಕ್ಷೇತ್ರದಲ್ಲಿ ತೂಕ ಕಡಿಮೆ ಮಾಡುವುದಕ್ಕಾಗಿ ಅತ್ಯಂತ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಅನಿಯಮಿತ ಮತ್ತು ಅಸುರಕ್ಷಿತ ಆಹಾರ ಸೇವನೆಯೇ ಈ ಸ್ಥಿತಿಗೆ ಕಾರಣ. ಆದ್ದರಿಂದ ಆಹಾರ ಕ್ರಮದಲ್ಲಿ ನಿಯಂತ್ರಣವನ್ನು ಕಲಿಸುವ ಉಪವಾಸದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಲಾಭ ಇದೆ. ಆರೋಗ್ಯಪೂರ್ಣ ಮನಸ್ಸನ್ನು ಮತ್ತು ದೇಹವನ್ನು ಹೊಂದಲು ಉಪವಾಸ ಸೂಕ್ತವಾದುದು” ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಅತಿಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಮಂಗಳೂರಿನ ರೊಝಾರಿಯೋ ಕ್ಯಾಥಡ್ರಲ್ ಚರ್ಚ್‍ನ ಫಾದರ್ ಜೆ.ಬಿ. ಕ್ರಾಸ್ತ ಮಾತನಾಡಿ, “ಉಪವಾಸದಿಂದ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಪ್ರಯೋಜನಗಳಿವೆ. ಇಂದ್ರಿಯಗಳನ್ನು ನಿಯಂತ್ರಣದಲ್ಲಿಡಲು ಇದು ಉತ್ತಮ ಮಾರ್ಗ” ಎಂದರು.

ದ.ಕ. ಜಿಲ್ಲಾ ಪ್ರಾಂಶುಪಾಲರ ಅಸೋಸಿಯೇಶನ್ನಿನ ಕೋಶಾಧಿಕಾರಿ ವಿಠ್ಠಲ ಎ. ಮಾತನಾಡಿ, “ಜಿಲ್ಲೆಯಲ್ಲಿ ಹಿಂದೆ ಊರಿಗೊಂದು ಶಾಲೆ ಇತ್ತು. ಇವತ್ತು ಜಾತಿಗೊಂದು, ಧರ್ಮಕ್ಕೊಂದು ಶಾಲೆ ಸೃಷ್ಟಿಯಾಗಿದೆ. ಎಷ್ಟೋ ಮಕ್ಕಳಿಗೆ ಪಿಯುಸಿವರೆಗೆ ಇನ್ನೊಂದು ಧರ್ಮದವರ ಪರಿಚಯವೇ ಇರುವುದಿಲ್ಲ. ಜಿಲ್ಲೆ ಬುದ್ಧಿವಂತರ ನಾಡು ಎಂದು ಗುರುತಿಸಿಕೊಂಡಿದ್ದೂ ಸಾಕಷ್ಟು ವೈದ್ಯರು, ಶಿಕ್ಷಕರು, ನ್ಯಾಯವಾದಿಗಳು ತಯಾರಾಗಿದ್ದೂ ಸಾಮಾಜಿಕ ಆರೋಗ್ಯದ ವಿಷಯದಲ್ಲಿ ಹಿಂದುಳಿದಿರುವುದು ಖೇದಕರ. ಇವತ್ತು ಸೌಹಾರ್ದ ಕೆಡಿಸುವವರ ಬಗ್ಗೆ ಸುಮ್ಮನಿರುವ ಮೂಲಕ ಪರೋಕ್ಷವಾಗಿ ನಾವೂ ಅವರನ್ನು ಬೆಂಬಲಿಸುತ್ತಿದ್ದೇವೆ. ಇದು ಕೊನೆಗೊಳ್ಳಬೇಕು. ಈ ಜಿಲ್ಲೆಯನ್ನು ಸೌಹಾರ್ದ ಜಿಲ್ಲೆಯನ್ನಾಗಿ ಮಾಡುವುದಕ್ಕಾಗಿ ನಾವೆಲ್ಲ ಮೌನ ಮುರಿದು ಮಾತಾಡಬೇಕು” ಎಂದರು.

ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ| ಲಕ್ಷ್ಮಣ ಪ್ರಭು ಮಾತಾಡಿ, “ನಾಲಗೆಯು ನಮ್ಮನ್ನು ಎರಡು ರೀತಿಯ ಗುಲಾಮತನಕ್ಕೆ ಒಯ್ಯುತ್ತದೆ. ಒಂದು- ಮಾತಿನ ಗುಲಾಮತನ, 2- ರುಚಿಯ ಗುಲಾಮತನ. ಉಪವಾಸವು ಈ ಎರಡೂ ಗುಲಾಮಗಿರಿಗೆ ನಿಯಂತ್ರಣ ಹೇರುತ್ತದೆ. ನಾಲಗೆಯ ಮೇಲೆ ನಿಯಂತ್ರಣ ಸಾಧಿಸಿದವನು ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ಉಪವಾಸ ಅದಕ್ಕಿರುವ ದಾರಿ” ಎಂದರು.

ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಐವನ್ ಡಿ’ಸೋಜ ಮಾತಾಡಿ, “ಧರ್ಮದ ಕುರಿತಾದ ಅರೆಬರೆ ಜ್ಞಾನವು ಅಶಾಂತಿಗೆ ಕಾರಣವಾಗುತ್ತಿದೆ. ಇದಕ್ಕೆ ಪೂರಕವಾಗಿ ಇವತ್ತಿನ ಶೈಕ್ಷಣಿಕ ಕ್ಷೇತ್ರವೂ ವಿಭಜನೆ ಹೊಂದಿದೆ. ಜಾತಿ-ಧರ್ಮಗಳಿಗೆ ಸೀಮಿತವಾಗಿ ಶಾಲಾ-ಕಾಲೇಜುಗಳು ನಿರ್ಮಾಣವಾಗುತ್ತಿವೆ. ಇದು ತಪ್ಪು. ದೇಹಕ್ಕೆ ಬಾಧಿಸಿದ ರೋಗಕ್ಕೆ ಮದ್ದು ಮಾಡಬಹುದು. ಮನಸ್ಸಿಗೆ ತಗುಲಿದ ರೋಗಕ್ಕೆ ಔಷಧಿ ಕೊಡುವುದು ಕಷ್ಟ. ಉಪವಾಸವು ಅಂಥದ್ದೊಂದು ಔಷಧಿಯಾಗಿದೆ” ಎಂದರು.

ಮಂಗಳೂರು ಬಾರ್ ಅಸೋಸಿಯೇಶನ್ನಿನ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಅಡ್ವಕೇಟ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರಿನ ಎಲೆಕ್ಟ್ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‍ನ ಅಧ್ಯಕ್ಷ ಇಂಜಿನಿಯರ್ ಅರುಣ್ ಪ್ರಭ ಸಂದರ್ಭೋಚಿತವಾಗಿ ಮಾತಾಡಿದರು.

ಆರಂಭದಲ್ಲಿ ಸದೀದ್ ಮುಹಮ್ಮದ್ ಕುರ್‍ಆನ್ ಪಠಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಕ್ ಪುತ್ತೂರು ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಬೋಳಂಗಡಿ ಶಾಖೆಯ ಅಧ್ಯಕ್ಷ ಮುಖ್ತಾರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.ಇಫ್ತಾರ್ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.