ಝಾರ್ಖಂಡ್ ಗುಂಪು ಹತ್ಯೆ ಅಪರಾಧಿ ವಿದ್ಯುತ್ ತಂತಿ ತಗುಲಿ ಸಾವು

0
996

ಝಾರ್ಖಂಡ್ :ರಾಮಗ್ರಹದಲ್ಲಿ 2017 ರ ಜೂನ್ 29 ರಂದು ನಡೆದ ಅಲಿಮುದ್ದೀನ್ ಗುಂಪು ಹತ್ಯೆ ಪ್ರಕರಣದ ಅಪರಾಧಿ ಸಿಕಂದರ್ ರಾಮ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವುದಾಗಿ ಪೋಲಿಸರು ತಿಳಿಸಿದ್ದಾರೆ. ಕಳೆದ ಶುಕ್ರವಾರ ಮನೆಯಿಂದ ಮಾರುಕಟ್ಟೆಗೆ ತೆರಳುತ್ತಿದ್ದ ವೇಳೆ ವಿದ್ಯುತ್ ತಂತಿಯು ಕಡಿದು ಸಿಂಕದರ್ ರಾಮ್ ಮೇಲೆ ಬಿದ್ದುದರಿಂದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

2017ರ ಜೂನ್ 29 ರಂದು ರಾಮಗ್ರಹದ ಬಝಾರ್ ನಲ್ಲಿ ಬೀಫ್ ಕೊಂಡೊಯ್ಯುತ್ತಿರುವುದಾಗಿ ಶಂಕಿಸಿ ಕಾರಿನಲ್ಲಿ ಹೊರಟಿದ್ದ ಅಲಿಮುದ್ದೀನ್ ಅನ್ಸಾರಿ (40) ಎಂಬುವರನ್ನು ಹನ್ನೊಂದು ಜನರ ಗುಂಪೊಂದು ಥಳಿಸಿ ಕೊಂದುಹಾಕಿತ್ತು. ತದನಂತರ ಅಲಿಮುದ್ದೀನ್‍ರವರ ಪತ್ನಿ ಮರಿಯಮ್ಮ್ ಖಾತುನ್ 17 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ತ್ವರಿತಗತಿ ನ್ಯಾಯಾಲಯವು ಅಲಿಮುದ್ದೀನ್ ಹತ್ಯೆಗೆ ಸಂಬಂಧಿಸಿದಂತೆ ಹನ್ನೊಂದು ಆರೋಪಿಗಳಿಗೆ ಆಜೀವ ಕಾರಾಗೃಹವಾಸ ಶಿಕ್ಷೆಯನ್ನು ನೀಡಿತ್ತು.

 

ಆದರೆ ಝಾರ್ಖಂಡ್ ಹೈಕೋರ್ಟ್ ಈ ಆರೋಪಿಗಳ ಪೈಕಿ ಸಿಕಂದರ್ ರಾಮ್ ಸೇರಿದಂತೆ ಎಂಟು ಜನರಿಗೆ ಜಾಮೀನನ್ನು ನೀಡಿತ್ತು. ಅಲ್ಲದೇ ಇತ್ತೀಚೆಗಷ್ಟೇ ಆರೋಪಿಗಳ ಪೈಕಿ ಮತ್ತಿಬ್ಬರು ಜಾಮೀನು ಪಡೆದು ಹೊರಬಂದಿದ್ದರು. ಇನ್ನೋರ್ವ ಅಪರಾಧಿಯನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. 

 ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವರಾದ ಜಯಂತ್ ಸಿನ್ಹಾ ರಾಮಗ್ರಹ ಗುಂಪು ಹತ್ಯೆ ಪ್ರಕರಣದ ಅಪರಾಧಿಗಳನ್ನು ಹೂ ಹಾರ ಹಾಕಿ ಸ್ವಾಗತಿಸಿದ್ದರು.