ಹೆನ್ನಾಬೈಲಿನ ರಮಝಾನ್ ದಿನಗಳು

0
2073

ಸನ್ಮಾರ್ಗ ವಾರ್ತೆ

ಅನುಭವ

ಇರ್ಶಾದ್ ಮೂಡಬಿದ್ರಿ

[ಬರಹಗಾರ ಇರ್ಶಾದ್ ಮೂಡಬಿದ್ರಿ ಅವರು ತಾವು ಹಳ್ಳಿಯಲ್ಲಿ ಕಳೆದ ರಮಝಾನ್‍ನ ಬಾಲ್ಯದ ದಿನಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. -ಸಂಪಾದಕರು]

ನನ್ನ ಹುಟ್ಟೂರು ಕಾರ್ಕಳ. ನಾನು ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿದ್ದು ಸ್ಥಳೀಯ ಉರ್ದು ಶಾಲೆಯಲ್ಲಿ. ನಂತರ ಮೂಡಬಿದ್ರಿಗೆ ಬಂದೆವು. ಅಂದು ಅಪ್ಪ ಅರಣ್ಯಾಧಿಕಾರಿಯಾದ ಕಾರಣ ವರ್ಗಾವಣೆಗಳು ಸಾಮಾನ್ಯವಾಗಿತ್ತು.

ನಾನು ಮೂರನೇ ತರಗತಿಯಲ್ಲಿದ್ದಾಗ ಅಪ್ಪನಿಗೆ ಕುಂದಾಪುರ ತಾಲೂಕಿನ ಹೆನ್ನಾಬೈಲಿಗೆ ವರ್ಗವಾಯಿತು. ಅದು ಕಾರ್ಕಳದಿಂದ ಸುಮಾರು 70 ಕಿ.ಮೀ. ದೂರ. ಪುಟ್ಟ ಹಳ್ಳಿ. 30-40 ಜನ ವಸತಿಗಳಿರುವ ಕುಗ್ರಾಮ. ಅಪ್ಪ ಅಲಿ ಐದು ವರುಷಗಳ ಸೇವೆ ಸಲ್ಲಿಸಿದರು. ಆ ಹಳ್ಳಿಯಲ್ಲಿ ಸೂಕ್ತವಾದ ಶಾಲೆ ಇರಲಿಲ್ಲ. ಹೀಗಾಗಿ ನಾನು ಮತ್ತು ನನ್ನ ತಂಗಿ ಕಾರ್ಕಳದಲ್ಲಿಯೇ ಉಳಿದುಕೊಂಡೆವು. ನಮ್ಮ ಪಾಲನೆ-ಪೋಷಣೆಯನ್ನು ಅಜ್ಜ-ಅಜ್ಜಿ(ತಂದೆಯ ಹೆತ್ತವರು)ಯೇ ನೋಡಿಕೊಂಡರು.

ನಾವು ಕಲಿಯುತ್ತಿದ್ದ ಈ ಉರ್ದು ಶಾಲೆಯ ವಿಶೇಷ ಅಂದರೆ, ನಮಗೆ ರಮಝಾನ್ ಮಾಸಕ್ಕೆ ಒಂದು ತಿಂಗಳ ರಜೆ ಸಿಗುತ್ತಿತ್ತು. ಅದನ್ನು ಅವರು ನವರಾತ್ರಿಯ ದಸರಾ ರಜೆಯಲ್ಲೂ ಅಥವಾ ವಾರ್ಷಿಕ ರಜೆಯಲ್ಲೂ ಕಳೆದು ಬಿಡುತ್ತಿದ್ದರು. ಇದರಿಂದ ಉಪವಾಸ ಆಚರಿಸುವ ವಿದ್ಯಾರ್ಥಿಗಳಿಗೂ, ಆಯಾಸ ಪಡುವ ಶಿಕ್ಷಕರಿಗೂ ಅನುಕೂಲವಾಗುತ್ತಿತ್ತು.

ಹೆನ್ನಾಬೈಲಿಗೆ ಪ್ರಯಾಣ:

ನಮಗೆ ರಜೆ ಸಿಕ್ಕಿತು ಅಂದರೆ ನಾವು ಹೆನ್ನಾಬೈಲಿಗೆ ಹೊರಟು ಬಿಡುತ್ತಿದ್ದೆವು. ಅಲ್ಲಿ ಅಪ್ಪ-ಅಮ್ಮ ಕೂಡ ನಮ್ಮ ನಿರೀಕ್ಷೆಯಲ್ಲಿರುತ್ತಿದ್ದರು. ಅವರಿಗೆ ಬಹುದಿನಗಳ ಬಳಿಕ ಮಕ್ಕಳನ್ನು ಕಾಣುವ ಸಂಭ್ರಮ-ಸಂತೋಷವಾಗುತ್ತಿತ್ತು.

ನಮ್ಮದು ಸರಕಾರಿ ವಸತಿ. ಅಕ್ಕ-ಪಕ್ಕದಲ್ಲೂ ಫಾರೆಸ್ಟ್-ಗಾರ್ಡುಗಳ ವಸತಿ. ಮನೆಯ ಎದುರು ಹರಡಿ ಕೊಂಡಿರುವ ವಿಶಾಲವಾದ ಹಸಿರು ಗದ್ದೆಗಳು. ಅದರ ಮಧ್ಯೆ ಸದಾ ಜುಳು ಜುಳು ಎಂದು ಹರಿಯುವ ಹೊಳೆ. ಸುತ್ತಲೂ ಹತ್ತಾರು ಮನೆಗಳು. ಅದರಲ್ಲಿ ಗುಡಿಸಲುಗಳೇ ಹೆಚ್ಚು. ಹಿಂದಕ್ಕೆ ನೋಡಿದರೆ ದಟ್ಟವಾದ ಕಾಡು. ಆಕಾಶದ ಎತ್ತರಕ್ಕೆ ಬೆಳೆದ ಮರಗಳು. ರಾತ್ರಿಯಾದರೆ ಇಡೀ ಊರಿಗೇ ಊರೇ ಮೌನ. ಕಬ್ಬಿನ ಗದ್ದೆಗೆ ನುಗ್ಗುವ ನರಿಗಳ ವಿಚಿತ್ರ ಕೂಗಾಟ. ನಾಲ್ಕು ಸುತ್ತಲೂ ಗಾಢ ಕತ್ತಲು. ಬೆಂಕಿಯ ದೊಂದಿಗಳನ್ನು ಹಿಡಿದು ಹೊಳೆಯನ್ನು ದಾಟುವ ಕೆಲವು ಮಂದಿಗಳು. ಒಂದು ರೀತಿಯ ಭಯಾನಕ ವಾತಾವರಣ. ನನಗಂತೂ ಇಲ್ಲಿಯ ರಾತ್ರಿ ಅಂದರೆ ಭಯ!

ಈ ಊರಿನಲ್ಲಿ ಎರಡು ದಿನಸಿ ಅಂಗಡಿಗಳಿದ್ದವು. ಒಂದು ಬಾಪು ಸಾಹೀಬರದ್ದು ಇನ್ನೊಂದು ಚಂದ್ರಣ್ಣದ್ದು. ಇನ್ನು ಬೀಡಾ-ಬೀಡಿ-ಸಿಗರೇಟ್, ಚಾಕಲೇಟ್, ಚಕ್ಕುಲಿ-ಚಿಕ್ಕಿಗಾಗಿ ಬಸ್ಸು ಸ್ಟಾಪಿನ ಬಳಿಕ ಕಾಳಪ್ಪ ಶೆಟ್ಟರು ಪುಟ್ಟ ಗೂಡಂಗಡಿ ತೆರೆದಿತ್ತು. ಕಾಫಿ-ತಿಂಡಿಗೆ ಶೇಖು ಅವರ ಹೊಟೇಲು. ಅದರಲ್ಲಿ ಬಿಸಿ ಬಿಸಿಯಾದ ದೋಸೆ ಮತ್ತು ಖಾರ ಕಡ್ಡಿ ಸದಾ ಸಿಗುತ್ತಿತ್ತು. ಇನ್ನು ದವಾಖಾನೆಗೆ, ಔಷಧಿಗೆ, ಸಲೂನ್‍ಗೆ ಅಥವಾ ಶುಕ್ರವಾರದ ಜುಮ್ಮಾ ಪ್ರಾರ್ಥನೆಗೆ ಐದಾರು ಕಿ.ಮೀ. ದೂರದ ಸಿದ್ಧಾಪುರಕ್ಕೇ ಹೋಗಬೇಕು. ಏಕೆಂದರೆ ಹೆನ್ನಾಬೈಲಿನಲ್ಲಿ ಮಸೀದಿಯೇ ಇಲ್ಲ. ಮೂರು-ನಾಲ್ಕು ಧಾರ್ಮಿಕ ಶ್ರದ್ಧಾ ಭಕ್ತರು ಈ ಜುಮ್ಮಾ ನಮಾಝ್‍ಗೆ ಹೋದರೆ ಉಳಿದವರಿಗೆ ಯಾವುದೂ ಇಲ್ಲ. ಏಕೆಂದರೆ ಅವರಿಗೆ ಜುಮ್ಮಾದ ಬಗೆಯಾಗಲಿ, ದಿನನಿತ್ಯದ ನಮಾಝಿನ ಕುರಿತಾಗಲಿ ಮಹತ್ವವೇ ತಿಳಿದಿಲ್ಲ. ಅದನ್ನು ಅವರಿಗೆ ಗಂಭೀರವಾಗಿ ಯಾರೂ ತಿಳಿಸಿಯೂ ಕೊಟ್ಟಿಲ್ಲ. ತಿಳಿಸಿದರೂ ಅದನ್ನು ಅವರು ಗಣನೆಗೆ ತೆಗೆದುಕೊಂಡಿಲ್ಲ. ಹೊಲಗದ್ದೆಗಳಲ್ಲಿ ದಿನ ನಿತ್ಯದ ದುಡಿತ, ಸಂತೆಯ ವ್ಯಾಪಾರ, ಮೀನಿನ ಸೈಕಲು, ಐಸ್‍ಕ್ಯಾಂಡಿಯ ಡಬ್ಬ ಇತ್ಯಾದಿಗಳಲ್ಲಿಯೇ ಅವರ ಬದುಕು ಸುತ್ತಾಡುತ್ತಿತ್ತು.

ಅಪ್ಪ ಇದೇ ವೇಳೆಗೆ (1973-1978) ಈ ಹಳ್ಳಿಗೆ ಕಾಲಿಟ್ಟರು. ಅವರು ಬಾಲ್ಯದಿಂದಲೇ ಶಾಲೆಯ ವ್ಯಾಸಂಗದಲ್ಲಿ, ಮದ್ರಸದ ಧಾರ್ಮಿಕ ಶಿಕ್ಷಣದಲ್ಲಿ ಸದಾ ಮುಂದು. ಗುರು-ಹಿರಿಯರು ಅಂದರೆ ಭಯ-ಭಕ್ತಿ. ಬಡವರು-ಅನಾಥರು ಅಂದರೆ ಅದೇಕೋ ಹೆಚ್ಚು ಕರುಣೆ. ಅರಣ್ಯಾಧಿಕಾರಿಯಾಗಿ ದೊಡ್ಡ ಹುದ್ದೆಯ ಸ್ಥಾನ ಪಡೆದರೂ, ದುರ್ಬಳಕೆಯನ್ನು ಮಾಡಲಿಲ್ಲ. ಶಾಂತ ಸ್ವಭಾವ, ನಿರ್ಮಲ ಹೃದಯವಂತಿಕೆ ಹಾಗೂ ನೇರ ನಡವಳಿಕೆ. ಈ ಗುಣದಿಂದ ಅವರು ವರ್ಗವಾಗಿ ಹೋದ ಎಲ್ಲಾ ಕಡೆಯಲ್ಲೂ ಗೌರವ-ಪ್ರಶಂಶೆಗಳು `ಇಸ್ಮಾಯೀಲ್ ಸಾಹೇಬ್’ ಅಂದರೆ ಅವರು “ನಮ್ಮವರು”- “ನಮ್ಮ ಆತ್ಮೀಯರು” ಅನ್ನುವ ಅಭಿಮಾನ-ಪ್ರೀತಿಯನ್ನು ಬೆಳೆಸಿಕೊಂಡರು.

ಅಪ್ಪ ಹೆನ್ನಾಬೈಲಿನ ಮುಸ್ಲಿಮರ ಸ್ಥಿತಿ-ಗತಿಗಳನ್ನು ಹತ್ತಿರದಿಂದ ಕಂಡರು. ಮರುಗಿದರು. ಪುರುಷರು-ಮಹಿಳೆಯರು ಇಸ್ಲಾಮಿನ ಜ್ಞಾನದಿಂದ ವಂಚಿತರಾಗಿರುದ್ದನ್ನು ಗಂಭೀರವಾಗಿ ಚಿಂತಿಸಿದರು. ಒಂದು ದಿನ ಎಲ್ಲರನ್ನು ಜೊತೆಗೂಡಿಸಿ ಸಭೆ ಕರೆದರು. ಊರಿನಲ್ಲಿ ಮಸೀದಿಯೊಂದನ್ನು ನಿರ್ಮಿಸುವ ಕುರಿತು ಸಮಾಲೋಚಿಸಿದರು. ಎಲ್ಲರಿಗೂ ಸಂತೋಷವಾಯಿತು. ಆದರೆ ಮಸೀದಿಯ ಬಳಿಕ ನೀವೆಲ್ಲರೂ ಪ್ರಾರ್ಥನೆಗೆ ಮಸೀದಿಗೆ ಹಾಜರು ಇರಬೇಕು, ಅದು ಖಾಲಿ ಬೀಳಬಾರದೆಂದು ಕೇಳಿಕೊಂಡರು. ಎಲ್ಲರೂ ಒಪ್ಪಿಗೆ ನೀಡಿದರು.

ಈಗ ಮಸೀದಿಯ ನಿರ್ಮಾಣಕ್ಕೆ ಹಣ ಸಂಗ್ರಹವನ್ನು ಮಾಡಬೇಕಿತ್ತು. ಊರಿನಲ್ಲಿ ಧನಿಕರೆಂದರೆ ಬಾಪು ಸಾಹೇಬ್ ಹಾಗೂ ಸಿದ್ಧಾಪುರದ ಮೊೈಹಿದ್ದೀನ್ ಬ್ಯಾರಿಗಳು ಮಾತ್ರ. ಊರಿನ ಮಂದಿಗಳಲ್ಲಿ ಹೆಚ್ಚೇನು ನಿರೀಕ್ಷಿಸುವಂತೆ ಇರಲಿಲ್ಲ. ಎಲ್ಲರೂ ದುಡಿದು ತಿನ್ನುವ ಶ್ರಮ ಜೀವಿಗಳು. ಅಪ್ಪನ ದೃಷ್ಟಿ ನಮ್ಮೂರಿನ ಕಡೆ ಹೋಯಿತು. ಅಲ್ಲಿ ಅವರಿಗೆ ಅನೇಕ ಧನಿಕರ ಪರಿಚಯವಿತ್ತು. ಅಲ್ಲದೆ ಅಮ್ಮನ ಸಹೋದರರು ಮುಂಬೈಯಲ್ಲಿ ನೆಲೆಸಿ ವ್ಯಾಪಾರ-ವ್ಯವಹಾರ ನಡೆಸುತ್ತ ಉತ್ತಮ ಸ್ಥಿತಿಯಲ್ಲಿದ್ದರು. ಅಪ್ಪನಿಗೆ ಈ ಹಣವನ್ನು ಸಂಗ್ರಹ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ಮಸೀದಿಗೆ ಪಂಚಾಂಗ ಹಾಕಿಯೇ ಬಿಟ್ಟರು. ಗೋಡೆಗಳು ಎದ್ದು ನಿಂತವು. ನೋಡು ನೋಡುತ್ತಿದ್ದಂತೆ ಪುಟ್ಟ ಮಸೀದಿಯೊಂದು ತಲೆ ಎತ್ತಿ ನಿಂತಿತು. ಊರಿನ ಮುಸ್ಲಿಮರು ಮಸೀದಿಗೆ ಓಡೋಡಿ ಬಂದರು. ಮಕ್ಕಳೂ, ವೃದ್ಧರೂ ಜೊತೆಗೂಡಿದರು.
ಐದು ಹೊತ್ತಿನ ನಮಾಝನ್ನು ಊರಿನ ಹಿರಿಯ ವ್ಯಕ್ತಿಯೊಬ್ಬರು ನೆರವೇರಿಸಿ ಕೊಡುತ್ತಿದ್ದರು. ಆದರೆ

ಶುಕ್ರವಾರದ ಜುಮ್ಮಾದ ಖುತ್ಬಾಕ್ಕಾಗಿ ಅಪ್ಪನೇ ಮಿಂಬರ್ ಏರಿ ನಿಂತರು. ಜನರಿಗೆ ಅರ್ಥವಾಗುವ ರೀತಿಯಲ್ಲಿ, ಉಪದೇಶ ನೀಡಿದರು. ಯಾವುದು ಸರಿ-ತಪ್ಪು ಅನ್ನುವುದನ್ನು ಸರಳವಾಗಿ ವಿವರಿಸಿದರು. ದೀನಿನ ಮಾರ್ಗದಲ್ಲಿ ನಿಮ್ಮ ಹಾಗೂ ನಿಮ್ಮ ಮಹಿಳೆಯರ ಕರ್ತವ್ಯ ಏನೆಂದು ಸವಿಸ್ತಾರವಾಗಿ ಬೋಧಿಸಿದರು. ಹಳ್ಳಿ ಜನರು ಎಲ್ಲವನ್ನು ಆಸಕ್ತಿಯಿಂದ ಆಲಿಸುತ್ತಿದ್ದರು. ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಪ್ಪನಿಗೆ ಈ ಬದಲಾವಣೆಯೇ ಹೆಚ್ಚು ಸ್ಫೂರ್ತಿ ನೀಡಿತು. ಅವರು ಶುಕ್ರವಾರದ ಉಪನ್ಯಾಸಕ್ಕಾಗಿ ಮುಂಬೈಯಿಂದ ಅನೇಕ ಉರ್ದು ಕೃತಿಗಳನ್ನು ತರಿಸಿಕೊಂಡರು. ಅದರಿಂದ ಟಿಪ್ಪಣಿ ತಯಾರಿಸಿದರು. ಅದರ ಓದಿಗಾಗಿ ಸಾಕಷ್ಟು ಸಮಯ ಮೀಸಲು ಇಟ್ಟರು. ಅಂಗಸ್ನಾನದಿಂದ ಮಯ್ಯತ್ತಿನ (ಮರಣ) ಸ್ನಾನದವರೆಗೆ ಅವರು ತಿಳಿಯುವ ರೀತಿಯಲ್ಲಿ ಸುಲಭವಾಗಿ ವಿವರಿಸಿದರು.

ಅಲ್ಲಿಯವರೆಗೆ ಆ ಹಳ್ಳಿಯಲ್ಲಿ ಮರಣ ಹೊಂದಿದರೆ, ಅದಕ್ಕೊಂದು `ದೀನಿ’ ಕ್ರಮವಿರಲಿಲ್ಲ. ಕಾಡಿನಿಂದ ಕಡಿದು ತಂದ ಬಿದಿರಿನಲ್ಲಿಯೇ ಶವ ಸಾಗಿಸುತ್ತಿದ್ದರು. ಕಾಡಿನ ಬದಿಯಲ್ಲೂ, ಹೊಳೆಯ ಪಕ್ಕದಲ್ಲೂ ದಫನಕ್ರಿಯೆ ಮುಗಿಸಿ ಬಿಡುತ್ತಿದ್ದರು. ಅಪ್ಪ ಅದಕ್ಕೆ ಕಡಿವಾಣ ಹಾಕಿದರು. ಕಬರಸ್ತಾನಕ್ಕಾಗಿ ಸರಕಾರದಿಂದ ಪ್ರತ್ಯೇಕ ಜಾಗ ದೊರೆಯಬೇಕೆಂದು ಅರ್ಜಿ ಹಾಕಿದರು. ಜೊತೆಗೆ ಹೊಸತಾದ ಶವ ಮಂಚವನ್ನು ಮಸೀದಿಗೆ ತರಿಸಿಕೊಂಡರು.

ಇತ್ತ ಅಮ್ಮನಿಗೆ, ಅಪ್ಪ ಹೊಸ ಹೊಣೆಗಾರಿಕೆ ನೀಡಿದರು. ಹಳ್ಳಿಯ ಮುಸ್ಲಿಮ್ ಹೆಂಗಸರಿಗೆ, ಯುವತಿಯರಿಗೆ ಕುರ್‍ಆನ್-ಹದೀಸ್‍ಗಳ ಪಾಠ ಹೇಳಿಕೊಡಬೇಕೆಂದು ವಿನಂತಿಸಿದರು. ಅಮ್ಮ ಅಡುಗೆ ಮನೆಯಿಂದಲೇ `ಟೀಚರ್’ ಆದರು. ನೋಡು ನೋಡುತ್ತಿದ್ದಂತೆ ಅಮ್ಮನಲ್ಲಿ ಕುರ್‍ಆನ್ ಅಭ್ಯಾಸ ಮಾಡಲು ಅನೇಕ ಮಹಿಳೆಯರು ಬಂದರು. ಅಷ್ಟರಲ್ಲಿ ಅಮ್ಮನ ಮಡಿಲಿನಲ್ಲಿ ಇನ್ನೊಂದು ಮಗು ಕೂಡ ಬಂತು. ಆದರೆ ದೀನಿ ಸೇವೆಯಲ್ಲಿ ಅವರು ಯಾವ ತಕರಾರು ಮಾಡಲಿಲ್ಲ- ಬೇಸರ ವ್ಯಕ್ತಪಡಿಸಲಿಲ್ಲ. ಇದು ತನ್ನ ಕರ್ತವ್ಯವೆಂದು ಭಾವಿಸಿದರು. ಇದರ ಪ್ರತಿಫಲವು ನಾಳೆಯ ಪರಲೋಕದಲ್ಲಿ ಖಂಡಿತ ದೊರೆಯುದೆಂದು ವಿಶ್ವಾಸವಿಟ್ಟರು. ಇದಕ್ಕಾಗಿ ಅವರು ಯಾರಿಂದಲೂ ಸಂಭಾವನೆಯಾಗಲಿ, ಉಡುಗೊರೆಯಾಗಲಿ ಪಡೆಯಲೇ ಇಲ್ಲ.

ಆರಂಭದಲ್ಲಿ ನಮ್ಮನ್ನು ಊರಿನಲ್ಲಿ ತೊರೆದು ಬಂದ ಅಮ್ಮ ಹಲವು ದಿನಗಳವರೆಗೆ ಕಣ್ಣೀರು ಹಾಕಿದ್ದಳು. ಮಕ್ಕಳನ್ನು ನೆನಪಿಸುತ್ತಾ ಕೆಲವು ಬಾರಿ ಊಟವೂ ಮಾಡಲಿಲ್ಲ. ಆಕೆಗೆ ಇದಕ್ಕಿಂತ ದೊಡ್ಡ `ಶಾಕ್’ ನೀಡಿದ್ದು ಇಲ್ಲಿ ಕರೆಂಟ್!

ಏಕೆಂದರೆ ಆ ಊರಿನಲ್ಲಿಯೇ ಕರೆಂಟೇ ಇರಲಿಲ್ಲ! ರಾತ್ರಿಯಾದರೆ ಇಡೀ ಹಳ್ಳಿಗೆ ಹಳ್ಳಿಯೇ ಗಾಢ ಕತ್ತಲು. ಹೊರಗಡೆ ಇಣುಕಿದರೆ ಮನೆಗಳಲ್ಲಿ ಉರಿಯುವ ಚಿಮಣಿ ದೀಪಗಳು. ದೂರದ ಪಟೇಲರ ಮನೆಯಲ್ಲಿ ಕಾಣಿಸುವ ಲಾಟೀನುಗಳು. ಗಾಢ ಕತ್ತಲೆ- ಸುತ್ತಮುತ್ತ ಹಬ್ಬಿ ಕೊಂಡಿರುವ ದಟ್ಟ ಕಾಡು. ಎಲ್ಲಿ ಯಾವಾಗ ಹಾವು-ಚೇಳು, ಕಾಡು ಪ್ರಾಣಿಗಳ ದಾಳಿ ಅನ್ನುವುದೇ ಕಷ್ಟ. ಜೊತೆಗೆ ಕತ್ತಲೆ ಕವಿದಂತೆ ಸೊಳ್ಳೆಗಳ ವಿಪರೀತ ಕಾಟ. ಸೊಳ್ಳೆ ಪರದೆ ಇಲ್ಲದೆ ಮಲಗುವುದೇ ಅಸಾಧ್ಯ. ಮಕ್ಕಳ ಮೈ ತುಂಬಾ ಸೊಳ್ಳೆಗಳ ಕಡಿತ. ಅಮ್ಮನಿಗೆ ಮುಲಾಮು ಹಚ್ಚುವುದೇ ಕೆಲಸ. ಜೊತೆಗೆ ಮುಸ್ಸಂಜೆ ಆದಂತೆ ದೊಡ್ಡ ಲ್ಯಾಟೀನಿಗೆ ಎಣ್ಣೆ ತುಂಬಬೇಕು. ಅದರ ಗಾಜು ಒರೆಸಬೇಕು. ದೀಪ ಹಚ್ಚಬೇಕು. ಇದು ಹೆಚ್ಚುವರಿ ಕೆಲಸ. ಮನೆಗೆಲಸಕ್ಕೆ `ಅವಿೂನ’ ಅನ್ನುವ ಕೆಲಸದಾಳು ಇದ್ದರೂ, ಆಕೆಯಲ್ಲಿ ಗಾಜಿಯ ಬುಡ್ಡಿಯನ್ನು ನೀಡುತ್ತಿರಲಿಲ್ಲ. ಆಕೆ ಎರಡು-ಮೂರು ಬುಡ್ಡಿಗಳನ್ನು ಹೊಡೆದು ಹಾಕಿದ್ದೇ ಸಾಕಿತ್ತು.

ಸೆಖೆಗಾಲದಲ್ಲಂತೂ ವಿಪರೀತ ಬೆವರು. ತಡೆಯಬಾರದ ಉರಿ ಸೆಖೆ. ಹೀಗಾಗಿ ರಾತ್ರಿಯ ಅಡುಗೆಯನ್ನು ಅಮ್ಮನಿಗೆ ಸಂಜೆಯೊಳಗೆ ಮಾಡಿ ಮುಗಿಸುವ ತರಾತುರಿ. ಇಲ್ಲದಿದ್ದರೆ ಈ ಚಿಮುಣಿ ದೀಪದ ಮಂದ ಬೆಳಕಿನಲ್ಲಿ ಒದ್ದಾಡಿಕೊಂಡು ಇರಲು ಆಕೆಗೆ ಇಷ್ಟವಿಲ್ಲ. ಊರ ಜಮೀನುದಾರದ ಮನೆಯಲ್ಲಿ ಸುಖದಲ್ಲಿ ಬೆಳೆದ ಅಮ್ಮನಿಗೆ ಇಲ್ಲಿಯ ಬದುಕು ನಿಜಕ್ಕೂ ತ್ರಾಸದಾಯಕವಾಗಿ ಕಂಡಿದ್ದೂ ನಿಜ, ಆದರೆ ಅಪ್ಪನ ಪ್ರೀತಿ, ಊರಿನವರ ಮುಗ್ಧ ಮನಸ್ಸು, ಧಾರ್ಮಿಕ ಸೇವೆ ಅವಳನ್ನು ಎಲ್ಲವೂ ಹಗುರ ಮಾಡಿ ಬಿಟ್ಟಿತು. ವಾರ, ತಿಂಗಳು, ವರ್ಷಗಳು ಕಳೆದಂತೆ ಎಲ್ಲವೂ ಅಭ್ಯಾಸವಾಗಿ ಹೋಯಿತು. ಆಕೆ ಆ ಪರಿಸರಕ್ಕೆ ಹೊಂದಿಕೊಂಡಳು.

ನಾನು ರಮಝಾನಿನ ದಿನಗಳಲ್ಲಿ ಹೆನ್ನಾಬೈಲಿಗೆ ಹೋದಾಗ ಅಮ್ಮನನ್ನು ಗಮನಿಸುತ್ತಿದ್ದೆ. ಆಕೆ ಉಪವಾಸ ವ್ರತವನ್ನು ಆಚರಿಸುತ್ತಾ, ಕುರ್‍ಆನ್ ಪಾರಾಯಣ ಮಾಡುತ್ತಾ, ಮಕ್ಕಳ ಆರೈಕೆ ನೋಡಿಕೊಳ್ಳುತ್ತ, ಅಡುಗೆಯ ತಯಾರಿ ನಡೆಸುತ್ತಾ ಸದಾ ಬ್ಯುಸಿಯಾಗಿರುತ್ತಿದ್ದಳು. ಅಪ್ಪನೂ ಅಷ್ಟೇ, ಬೆಳಿಗ್ಗೆ ಕಚೇರಿಗೆ ಹೋದರೆ ಸಂಜೆ ಬರುತ್ತಿದ್ದರು. ಅವರ ವಲಯದ ವ್ಯಾಪ್ತಿ ದೊಡ್ಡದಿರುವ ಕಾರಣ ಆ ಅರಣ್ಯ- ಈ ಅರಣ್ಯ ಎಂದೂ ಹಲವು ಕಡೆ ಸುತ್ತಾಡಬೇಕಿತ್ತು. ಮರಗಳನ್ನು ಕಡಿದ ಕಳ್ಳಕೋರರ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಹೋಗಬೇಕಿತ್ತು. ಉಪವಾಸದ ಆ ದಿನಗಳಲ್ಲೂ ಅವರಿಗೆ ವಿಶ್ರಾಂತಿ ಸಿಗುತ್ತಿದ್ದದ್ದು ಕಡಿಮೆ. ರಾತ್ರಿ ಆದಂತೆ ಮತ್ತೆ ಮಸೀದಿಗೆ ಹೋಗುತ್ತಿದ್ದರು. ಆ ಲಾಟೀನುಗಳ ಮಂದ ಬೆಳಕಿನಲ್ಲಿ ಇಪ್ಪತ್ತು ರಕತಿನ ತರಾವಿಯನ್ನು ಸ್ವಯಂ ತಾವೇ ನೆರವೇರಿಸಿ ಕೊಡುತ್ತಿದ್ದರು. ಅಲ್ಲಾಹನ ಮೇಲಿನ ದೃಢವಾದ ಭಕ್ತಿಗೋ, ಅಪ್ಪಮ ಮುಲಾಜಿಗೂ ಮಸೀದಿಯಲ್ಲಿ ತುಂಬ ಜನ ಸೇರುತ್ತಿದ್ದರು. ಇಲ್ಲದಿದ್ದರೆ ಹಾಜರು ಆಗದ ವ್ಯಕ್ತಿ ಎದುರು ಸಿಕ್ಕಾಗ ಅಪ್ಪ ತರಾವಿಯ `ಚಕ್ಕರ್’ ಬಗ್ಗೆ ಕೇಳಿಯೇ ಕೇಳುತ್ತಿದ್ದರು. ಅಪ್ಪ ಅದಕ್ಕಾಗಿ ಒಂದು ಉಪಾಯವೂ ಮಾಡಿದ್ದರು.

ತರಾವೀಹ್ ಮುಗಿದು, `ಇಶಾ’ ನಮಾಝ್ ಮುಗಿದಂತೆ ದುವಾ ಅಗುತ್ತಿತ್ತು. ಹೊರಡುವ ವೇಳೆಗೆ ಅಪ್ಪ ಎಲ್ಲರಿಗೂ ಕೈ ಕುಲುಕುತ್ತಿದ್ದರು. ದೃಷ್ಟಿಗೆ ದೃಷ್ಟಿ ಇಟ್ಟು ಕಣ್ಣುಗಳಲ್ಲಿಯೇ ಕೃತಜ್ಞತೆ ಹೇಳುತ್ತಿದ್ದರು. ಹಳ್ಳಿಯ ಜನರಿಗೆ, ಇಷ್ಟೊಂದು ದೊಡ್ಡ ಅಧಿಕಾರಿಯು ತ್ಮಮ ಕೈ ಕುಲುಕಿದರು ಎಂಬ ಸಂತೋಷವಾದರೆ, ಅಪ್ಪನಿಗೆ ಎಲ್ಲರ ಹಾಜರಿ ತೆಗೆದುಕೊಂಡ ಲೆಕ್ಕಚಾರ! ಅಲ್ಲದೆ ಊರಿನಲ್ಲಿ ಅಪ್ಪನ ಈ ಸರಳ ನಡತೆ ಆರಂಭದಲ್ಲಿ ಎಲ್ಲಡೆ ಗರಂ ಸುದ್ದಿಯಾಗಿತ್ತು. ದುಡಿಯುವ ಕೂಲಿಯಾಲಿನಿಂದ ಹಿಡಿದು ಮೀನು ಮಾರುವ ವ್ಯಕ್ತಿಯ ವರೆಗೆ ಕೈಕುಲುಕಿಸಿಕೊಳ್ಳುತ್ತಾರೆ ಎಂಬ ವಿಶೇಷತೆ. ಈ ಕಾರಣವಾಗಿ ಅಪ್ಪ ಸುತ್ತ-ಮುತ್ತಲಿನ ಊರಿನಲ್ಲಿ ಜನಪ್ರಿಯರಾದರು.

ನಾನು ಹಗಲು ಹೊತ್ತಿನಲ್ಲಿ ಮನೆಯೊಳಗೆ ಇರುತ್ತಿದ್ದದ್ದೇ ಕಡಿಮೆ. ಅಲ್ಲಿಯ ಹಳ್ಳಿ ಹುಡುಗರ ಜೊತೆಗೆ ಆಟವಾಡುತ್ತಾ, ನಲಿಯುತ್ತಾ, ಗುಡ್ಡ-ಬೆಟ್ಟ ಅಲೆದಾಡುತ್ತಾ ಇರುತ್ತಿದ್ದೆ. ವಾರದಲ್ಲಿ ಒಮ್ಮೆ (ಬುಧವಾರ) ಸಿದ್ಧಾಪುರದ ಸಂತೆಗೂ ಹೋಗಿ ಬರುತ್ತಿದ್ದೆ.

ಹೆನ್ನಾಬೈಲಿನಲ್ಲಿ ಭಾಷ ಸಾಹೇಬ್ ಅವರು ಜನಪ್ರಿಯ ವ್ಯಕ್ತಿ. ಅವರಿಗೆ `ಶಿಕಾರಿ ಭಾಷ ಸಾಯಿ’ ಎಂದು ಕರೆಯುವುದೇ ಹೆಚ್ಚು. ಅವರ ಮನೆಯ ಪಕ್ಕದಲ್ಲಿ `ಕಮ್ಮಾರ’ದ ಕೊಟ್ಟಿಗೆ ಇತ್ತು. ಅದರಲ್ಲಿ ಅವರು ಪಾತ್ರೆಗಳಿಗೆ ಕಲಾಯಿ ಹಾಕುತ್ತಿದ್ದರು. ಕತ್ತಿ-ನೇಗಿಲುಗಳನ್ನು ಮಾಡಿ ಕೊಡುತ್ತಿದ್ದರು. ಅವರು ಶಿಕಾರಿ ಪ್ರಿಯ. ಪ್ರಾಣಿಯಾಗಲಿ ಅಥವಾ ಪಕ್ಷಿಗಳಿಗಾಗಲಿ ಬಂದೂಕಿನ ಗುರಿ ಇಟ್ಟರೆ, ಅದು ನೆಲಕಚ್ಚಲೇ ಬೇಕು. ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಹುಲಿಯೋ, ಕಾಡು ಹಂದಿಯೋ ಕಾಟ ಕೊಟ್ಟರೆ ಇವರಿಗೇ ಬುಲಾವ್. ಭಾಷ ಬಾಯಿ ಹೆಗಲಿಗೆ ಬಂದೂಕು ಏರಿಸಿ ನಡೆದರೆ ಸಾಕು ಅದರ ಉಸಿರಿಲ್ಲ-ದಮ್ಮಿಯಿಲ್ಲ. ಅದಕ್ಕೆ ಮರಣವೇ ಖಾತ್ರಿ. ಆಗ ಇಡೀ ಊರಿಗೆ ಊರೇ ನಿಟ್ಟಿಸಿರು.

ಅಂದು ಬಾಷಾ ಭಾಯಿಯೇ ನಿಜವಾದ ಹೀರೋ.

ನಾನು ಆರು-ಏಳನೇ ತರಗತಿಗೆ ತಲುಪಿದಾಗ ಬಾಷಾ ಭಾಯಿಯ ಗಟ್ಟಿ ಸಂಬಂಧ ಬೆಳೆಸಿಕೊಂಡೆ. ನನಗೂ ಈ ಶಿಕಾರಿಯ ತಂತ್ರ-ಮಂತ್ರಗಳು ಹೇಳಿಕೊಡಿಯೆಂದು ದುಂಬಾಲು ಬಿದ್ದೆ. ಭಾಷ ಭಾಯಿ ನನಗೆ ಕೋವಿಗೆ ಮದ್ದು, ಗುಂಡು, ಕೇಪು ಹೇಗೆ ತುಂಬಿಸುವುದನ್ನು ಕಲಿಸಿಕೊಟ್ಟರು. ಗುರಿ ಹಿಡಿದು ಬಂದೂಕು ಚಲಾಯಿಸುವ ವಿದ್ಯೆಯನ್ನೂ ಹೇಳಿಕೊಟ್ಟರು. ನಾನು ಆಸಕ್ತಿಯಲ್ಲಿ ಬೇಗನೇ ಕಲಿತುಕೊಂಡೆ. (ನನ್ನ ಹೆಸರಿನ ಲೈಸನ್ಸ್, ಬಂದೂಕು ಈಗಲೂ ನನ್ನಲ್ಲಿ ಇದೆ)

ಭಾಷ ಭಾಯಿಯಲ್ಲಿ ನಾನು ಶಿಕಾರಿಗಳ ಅನುಭವವನ್ನು ಕೇಳುತ್ತಿದ್ದೆ. ಅದನ್ನು ಅವರು ರೋಚಕವಾಗಿ ವಿವರಿಸುತ್ತಿದ್ದರು. (ಅವರ ಒಂದು ಕಥೆಯನ್ನು ನಾನು ಈಗಾಗಲೇ `ಅನುಪಮ’ದ ಓದುಗಾರರ ಜೊತೆಗೆ ಹಂಚಿಕೊಂಡಿದ್ದೇನೆ.)

ರಮಝಾನಿನ ದಿನಗಳಲ್ಲಿ ಸಹ್ರಿಗೆ-ಇಫ್ತಾರ್ ಗೆ ಮಾಂಸದ ಅಡುಗೆ ಇದ್ದರೆ ಬಲು ರುಚಿ. ಅಕ್ಕಿಯ ರೊಟ್ಟಿ, ಇಡ್ಲಿ-ದೋಸೆಗಳ ಜೊತೆಗೆ ತಿಂದರೆ ಮಜಾವೇ ಬೇರೆ. ಅದಕ್ಕೆ ಅನುಕೂಲ ಮಾಡಿಕೊಡುತ್ತಿದ್ದವರು ಭಾಷ ಬಾಯಿ. ರವಿವಾರ ಅವರ ಕುಲುಮೆಯ ಕೊಟ್ಟಿಗೆಗೆ ರಜೆ. ಮುಂಜಾನೆ ಎದ್ದು ಅವರ ಮನೆಗೆ ಹೋದರೆ ಸಾಕು ಅವರು ಕೋವಿ ಮದ್ದಿನ ಚೀಲ ನನಗೆ ನೀಡುತ್ತಿದ್ದರು. ಅದರಲ್ಲಿ `ಹಲಾಲ್’ ಮಾಡುವ ಹರಿತವಾದ ಚೂರಿಯೂ ಇರುತಿತ್ತು. ಭಾಷ ಬಾಯಿ ಕೋವಿಯನ್ನು ಹೆಗಲಿಗೆ ಏರಿಸಿ ಹೊರಟರೆ ನನಗೆ ಸಂಭ್ರಮವೋ ಸಂಭ್ರಮ. ಗದ್ದೆ ದಾಟಿಕೊಂಡು, ಕಾಡಿನತ್ತ ಮುಖ ಮಾಡಿದರೆ ಸಾಕು ಅಂದು ಐದಾರು ಮೊಲಗಳು, ಏಳೆಂಟು ಕಾಡು ಕೋಳಿಗಳು ಚೀಲದೊಳಗೆ ತುಂಬುತ್ತಿದ್ದವು. ಅದರಲ್ಲಿ ಹೆಚ್ಚಿನ ಪಾಲು ನಮಗೆ ಕೊಟ್ಟು, ಉಳಿದ ಪಾಲು ಭಾಷ ಬಾಯಿ ಮನೆಗೆ ಕೊಂಡು ಹೋಗುತ್ತಿದ್ದರು.

ನಾನು ಆರಂಭದಲ್ಲಿ ಹೇಳಿದಂತೆ ನಮ್ಮ ಮನೆಯ ಎದುರುಗಡೆ ಹರಿದು ಹೋಗುವ ಹೊಳೆ- ಅಲ್ಲಿ ಬಟ್ಟೆ ಒಗೆಯಲು, ದನ-ಕರುಗಳಿಗೆ ಸ್ನಾನ ಮಾಡಿಸಲು ಹಳ್ಳಿಗರು ಬರುತ್ತಿದ್ದರು. ನನಗೆ ಸೈಯದ್ ಸಾಹೇಬರ ಮಗ ಇಬ್ರಾಹೀಮ್ ಗಾಳದಲ್ಲಿ ಮೀನು ಹಿಡಿಯಲು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದ. ಆತನಿಗೆ ಅಲ್ಲಿ ಸಿಗುವ ಮೀನಿನ ಗಾತ್ರ-ಗೋತ್ರ ಎಲ್ಲವೂ ತಿಳಿದಿತ್ತು. ನನ್ನ ಗಾಳಕ್ಕೆ ಎರೆಹುಳವನ್ನು ಸಕ್ಕಿಸಿ, ಕೈಗೆ ನೀಡುತ್ತಿದ್ದ. ನನಗೇಕೋ ಆ ಎರೆಹುಳ ಕೈಯಲ್ಲಿ ಹಿಡಿಯಲು ಅಸಹ್ಯ. ಹೀಗೆ ಕೊಟ್ಟ ಗಾಳವನ್ನು ನೀರಿಗೆ ಎಸೆದು ಅನೇಕ ಮೀನುಗಳನ್ನು ಹಿಡಿಯುತ್ತಿದ್ದೆ.

ಒಂದು ದಿನ ನನ್ನ ಗಾಳವು ಜೋರಾಗಿ ಎಳೆಯಲು ಆರಂಭವಾಯಿತು. ನಾನು ಎಲ್ಲಾ ಭಾರವನ್ನು ಹಾಕಿ ಈಚೆಗೆ ಎಳೆದುಕೊಂಡೆ. ಗಾಳದಲ್ಲಿ ಹಾವು ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿತ್ತು. ನಾನು ಬೆಚ್ಚಿ ಬಿದ್ದು, ಗಾಳವನ್ನು ಎಸೆದು ಮನೆಯತ್ತ ಓಡಿದೆ. ಹಿಂದಕ್ಕೆ ತಿರುಗಿ ನೋಡಲೇ ಇಲ್ಲ. ಅಮ್ಮ ನನ್ನ ಅವತಾರ ನೋಡಿ ಭಯಗೊಂಡರು. ಎಲ್ಲೋ ಇಬ್ರಾಹೀಮ್ ಹೊಳೆಗೆ ಬಿದ್ದು, ತೇಲಿ ಹೋದನೋ ಎಂದು ದಿಗಿಲುಗೊಂಡರು. ಅಷ್ಟರಲ್ಲಿ ಇಬ್ರಾಹೀಮ್ ನನ್ನನ್ನು ಹುಡುಕುತ್ತ ಬಂದ. ಗಾಳದಲ್ಲಿ ಸೆರೆ ಸಿಕ್ಕ ಹಾವು ಮೀನನ್ನು ತಂದಿದ್ದ. ಅದು ಅಪರೂಪದ ರುಚಿಕರ ಮೀನಂತೆ! ನಾನು ಎಣಿಸಿದಂತೆ, ನಾಗರ ಹಾವೋ -ನೀರಿನ ಕೇರೆ ಹಾವೋ ಆಗಿರಲಿಲ್ಲ. ಅಮ್ಮ ಅದನ್ನು ನೀನೇ ಇಟ್ಟುಕೊಳ್ಳು ಎಂದು ಸಾಗ ಹಾಕಿದರು.

ಹೆನ್ನಾಬೈಲಿನಲ್ಲಿ ಮೀನಿಗೆ ಬರವಿರಲಿಲ್ಲ. ಹಳ್ಳಿಗರು ಹೊಳೆಯಲ್ಲಿ ಹಿಡಿದ ಮೀನುಗಳನ್ನು ನಮ್ಮ ಮನೆಗೆ ತಂದು ಕೊಡುತ್ತಿದ್ದರು. ಸಮುದ್ರದ ಮೀನು ಕುಂದಾಪುರದಿಂದ ಮಾರಾಟಕ್ಕೆ ಬರುತಿತ್ತು. ಅದರಲ್ಲಿ ಬಂಗುಡೆ-ಬೂತಾಯಿಗಳೇ ಹೆಚ್ಚು.

ಇಲ್ಲಿಯ ಹಳ್ಳಿಯ ರೈತರು ಕಬ್ಬು ಬೆಳೆಸುತ್ತಿದ್ದರು. ಅದನ್ನು ಕಡಿದು ಬೆಲ್ಲ ತಯಾರಿಸುತ್ತಿದ್ದರು. ಬೆಲ್ಲ ಕಾಯಿಸಲು ಅಲೆ ಮನೆ ಸಿದ್ಧವಾಗುತ್ತಿತ್ತು. ನಮಗೆ ಅಲೆಮನೆಗಳು ಅಲೆಯುವುದೇ ಸಂತೋಷ. ಅಲ್ಲಿ ಕಬ್ಬಿನ ಹಾಲು ನೀಡುತ್ತಿದ್ದರು. ಅ ಹಾಲಿನ ರಸದಲ್ಲಿ ಶುಂಠಿಯೂ ಸೇರಿಸುತ್ತಿದ್ದರು. ಹೆಚ್ಚಿನ ಅಲೆಮನೆಯವರು ನಮ್ಮ ಮನೆಗೆ ಸಾಕಷ್ಟು ಕಬ್ಬಿನ ಹಾಲು ತಂದು ಕೊಡುತ್ತಿದ್ದರು. ಇಫ್ತಾರ್‌ಗೆ ಅದು ಪಾನೀಯವಾಗುತ್ತಿತ್ತು.

ರಮಝಾನ್ ಮಾಸ ಮುಗಿಯುತ್ತಾ ಬಂದಂತೆ, ಅಪ್ಪ ಊರಿನ ಎಲ್ಲರೂ ಹೊಸ ಬಟ್ಟೆಗಳಲ್ಲಿ ಹಬ್ಬ ಆಚರಿಸಬೇಕೆಂದು ಆಶಿಸುತ್ತಿದ್ದರು. ತನ್ನ ನಾಲ್ಕು ಮಾವಂದಿರು ಸ್ಥಿತಿವಂತರಾದ ಕಾರಣ, ಅವರು ಪ್ರತಿ ವರುಷವು ಜೊತೆ ಸೇರಿ `ಝಕಾತ್’ (ಕಡ್ಡಾಯ ದಾನ) ಹಂಚುತ್ತಿದ್ದರು. ಊರಿನ ನೂರಾರು ಮಂದಿಗಳಿಗೆ, ಸಂಬಂಧಿಕರಿಗೆ ಹಣ ಹಾಗೂ ಬಟ್ಟೆಗಳನ್ನು ನೀಡುತ್ತಿದ್ದರು. ಈ ಸೀರೆ-ಪಂಚೆ-ಅಂಗಿ ಬಟ್ಟೆ ಇತ್ಯಾದಿ ಮುಂಬೈಯಿಂದಲೇ ರಖಂ ದರದಲ್ಲಿ ಬರುತ್ತಿತ್ತು. ಅಪ್ಪ ಅವರಿಂದ ಒಂದಿಷ್ಟು ಬಟ್ಟೆ-ಬರೆಗಳನ್ನು ಪಡೆದು, ಉಳಿದ ಮೊತ್ತವನ್ನು ತಾನೇ ಬರಿಸಿಕೊಂಡು ಮತ್ತಷ್ಟು ಸೀರೆ-ಪಂಜೆಗಳು ಖರೀದಿಸುತ್ತಿದ್ದರು. ಅದು ಹೆನ್ನಾಬೈಲಿನ ಎಲ್ಲಾ ಬಡವರಿಗೆ ಸಿಗುವಂತೆ ನೋಡುತ್ತಿದ್ದರು. ಹೆಚ್ಚಾಗಿ ಈ ಬಟ್ಟೆ-ಬರೆಗಳನ್ನು ನಾನು ಮನೆ ಮನೆಗೆ ಹೋಗಿ ಹಂಚಿ ಬರುತ್ತಿದ್ದೆ. ಅಪ್ಪನಿಗೆ ಅವರು ಮನ ತುಂಬಿ ಆಶೀರ್ವಾದ ನೀಡುತ್ತಿದ್ದರು. ಇಲ್ಲಿಯವರೆಗೆ ಬಂದ ಯಾವುದೇ ಇಲಾಖೆಯ ಅಧಿಕಾರಿಯಾಗಲಿ ನಮ್ಮ ಮೇಲೆ ಇಷ್ಟು ಉದಾರತೆ-ಕಾಳಜಿ ವಹಿಸಲಿಲ್ಲ ಎಂದು ಹೊಗಳುತ್ತಿದ್ದರು. ಆಗ ಅಪ್ಪನಿಗೆ ನನಗೆ ಹೆಮ್ಮೆ ಅನಿಸುತ್ತಿತ್ತು.

ಮೂರು ವರ್ಷಗಳ ಹಿಂದೆ ಅಪ್ಪ ತೀರಿಕೊಂಡಿದ್ದಾರೆ. ಈ ಲೋಕಕ್ಕೆ ಶಾಶ್ವತ ವಿದಾಯ ಹೇಳಿದ್ದಾರೆ. ಅವರ ಮರಣದಿನದಂದು ನೂರಾರು ಮಂದಿ ಕಣ್ಣೀರು ಹಾಕಿದ್ದಾರೆ.

ನನಗೆ ಈಗಲೂ ನೆನಪಿದೆ-

ಅಂದು ಅಪ್ಪನಿಗೆ ಹೆನ್ನಾಬೈಲಿನಿಂದ ವರ್ಗವಾಯಿತು. ಎಲ್ಲರನ್ನು ಬೀಳ್ಕೊಡುವ ಸಮಯ. ಮನೆಯ ಮುಂದೆ ಸಾಮಾನು ತುಂಬಿದ ಲಾರಿ ನಿಂತಿದೆ. ಹತ್ತಿರದಲ್ಲಿ ನಮ್ಮನ್ನು ಕರೆದುಕೊಂಡು ಹೋಗುವ ಬಾಡಿಗೆ ಕಾರು ಕೂಡ ಇತ್ತು. ಹಳ್ಳಿಗೆ ಹಳ್ಳಿಯೇ ನಮ್ಮನ್ನು ನೋಡುತ್ತ ನಿಂತಿವೆ. ಎಲ್ಲರ ಎದೆಯಾಳದಲ್ಲಿ ನೋವು-ದುಃಖ. ಅಪ್ಪ-ಅಮ್ಮರ ನಾಲಗೆಯಲ್ಲಿ ಮಾತುಗಳೇ ಇಲ್ಲ. ಅಪ್ಪ ಕೊನೆಯ ಬಾರಿ ಎಲ್ಲರಿಗೂ ಕೈ ಬೀಸುತ್ತಾ ಕಾರಿನೊಳಗೆ ಕಾಲಿಟ್ಟರು. ನಾನು ಕಾರಿನ ಕಿಟಕಿಯ ಪಕ್ಕದಲ್ಲಿ ಕೂತಿದ್ದೆ. ಹೊರಗಡೆ ಇಣುಕಿ ನೋಡಿದೆ. ಎಲ್ಲರ ಕಣ್ಣುಗಳಲ್ಲಿ ಹರಿಯುವ ಕಣ್ಣೀರು. ಓರ್ವ ವ್ಯಕ್ತಿಗೆ ನಿಜವಾದ ವಿದಾಯ ಹೀಗೇ ಸಿಗಬೇಕು. ಅದು ಮನುಷ್ಯನ ವ್ಯಕ್ತಿತ್ವಕ್ಕೆ ಪೂರ್ಣ ಸಾಕ್ಷಿ!

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.