ಸೋತ ಲಕ್ಷ್ಮಣ ಸವದಿಗೆ ಯಾಕೆ ಸಚಿವ ಸ್ಥಾನ ಕೊಟ್ಟಿರಿ? ರೇಣುಕಾಚಾರ್ಯ ಸಿಟ್ಟು; ಬಿಜೆಪಿಯೊಳಗೆ ತಳಮಳ

0
517

ಸನ್ಮಾರ್ಗ ವಾರ್ತೆ-

ಬೆಂಗಳೂರು: ಆ.20- ರಾಜ್ಯ ಸಚಿವ ಸಂಪುಟ ರಚನೆಯಾಗಿ ಇಪ್ಪತ್ನಾಲ್ಕು ಗಂಟೆ ಕಳೆದಿದ್ದರೂ ಮುನಿಸು ಮುಗಿದಂತಿಲ್ಲ. ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಅನೇಕ ಶಾಸಕರು ಅಲ್ಲಲ್ಲಿ ತಮ್ಮ ಸಿಟ್ಟು ವ್ಯಕ್ತಪಡಿಸುತ್ತಿದ್ದಾರೆ. ಇವರಲ್ಲಿ ರೇಣುಕಾಚಾರ್ಯ ಒಬ್ಬರು. ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಅವರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ನಿಜಕ್ಕೂ ಬೇಸರ ಇದೆ, ಇದನ್ನು ನಾನು ಎಲ್ಲರೆದುರೇ ಹೇಳುತ್ತೇನೆ. ಹಾಗೇನಾದರೂ ಕಷ್ಟ ಎದುರಾದಲ್ಲಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ಧ ಎಂದಿರುವ ಅವರು,

ಗೆದ್ದವರಿಗೆ ಸಚಿವ ಸ್ಥಾನ ಕೊಡುವುದನ್ನು ಬಿಟ್ಟು ಸೋತವರಿಗೆ ನೀಡಿದ್ದಾರೆ. ಕೊಡುವುದಿದ್ದರೆ ಬೆಳಗಾವಿಯ ಹಿರಿಯ ನಾಯಕರಾಗಿರುವ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಆದರೆ, ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಬೇಸರ ತಂದಿದೆ. ನಾನು ಯಾವುದೇ ಕಾರಣಕ್ಕೂ ಬಂಡಾಯ ಏಳುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ ಹೇಳಿದರು.

ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಸಚಿವ ಸ್ಥಾನ ಕೊಡಲಿ, ಬಿಡಲಿ, ನಾನು ಯಡಿಯೂರಪ್ಪನವರ ಜೊತೆ ಇರುತ್ತೇನೆ. ಸಚಿವ ಸ್ಥಾನಕ್ಕೆ ನಾನು ಯಾವುದೇ ಲಾಬಿ ಮಾಡಿಲ್ಲ. ಕೆಲವರಿಗೆ ಅಸಮಾಧಾನ ಇರುವುದು ನಿಜ. ಆದರೆ ಯಾವುದೇ ಗುಪ್ತ ಸಭೆಗಳನ್ನು ಮಾಡಿಲ್ಲ ಎಂದು ಅವರು ಹೇಳಿದರು.