ಸಾಣೇಹಳ್ಳಿ ಸ್ವಾಮೀಜಿಯವರಿಗೆ ಅಭಿನಂದನೆಗಳು

0
1188

ಸನ್ಮಾರ್ಗ ಸಂಪಾದಕೀಯ

ಚಿತ್ರದುರ್ಗದಿಂದ ಬೆಂಗಳೂರಿಗೆ ಮಹಿಳೆಯರ ಪಾದಯಾತ್ರೆಯೊಂದು ಹೊರಟಿದೆ. ಸುಮಾರು ಎರಡ್ಮೂರು ಸಾವಿರದಷ್ಟಿರುವ ಈ ಮಹಿಳಾ ಗುಂಪಿನಲ್ಲಿ ರೈತ ಮತ್ತು ಕೂಲಿಕಾರ್ಮಿಕ ಕುಟುಂಬದವರೇ ಅಧಿಕವಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ 20-25 ಕಿಲೋ ಮೀಟರ್ ಸಾಗಬೇಕೆಂಬುದು ಈ ಗುಂಪಿನ ಗುರಿ. ಹೀಗೆ ಸಾಗುವ ಮಾರ್ಗ ಮಧ್ಯದ ಗ್ರಾಮಗಳು ಈ ಗುಂಪಿಗೆ ಊಟ-ವಸತಿಯನ್ನು ಕಲ್ಪಿಸುವ ಉಮೇದು ತೋರಿವೆ. ಲೆಕ್ಕಾಚಾರದಂತೆ ಪ್ರತಿದಿನ ಪಾದಯಾತ್ರೆ ಸಾಗಿದರೆ ಹಿರಿಯೂರು, ಶಿರಾ, ತುಮಕೂರು ಮಾರ್ಗವಾಗಿ ಜನವರಿ 30ರಂದು ಬೆಂಗಳೂರಿಗೆ ತಲುಪಬಹುದು ಎಂಬ ಭರವಸೆ ಈ ಗುಂಪಿನದು. ಹಾಗಂತ, ಸುಮಾರು 213 ಕಿಲೋಮೀಟರ್ ಸಾಗುವ ಗುರಿಯೊಂದಿಗೆ ಹೊರಟ ಈ ಗುಂಪಿನಲ್ಲಿ ಸಿನಿಮಾ ನಟರಿಲ್ಲ. ಬೃಹತ್ ಉದ್ಯಮಿಗಳಿಲ್ಲ. ರಾಜಕಾರಣಿಗಳಿಲ್ಲ. ಟ್ವಿಟರ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಲ್ಲಿ ಬ್ಯುಸಿಯಾಗಿರುವವರೂ ಇಲ್ಲ. ಆದ್ದರಿಂದಲೇ, ಈ ಪಾದಯಾತ್ರೆಯ ಯಶಸ್ಸಿನ ಬಗ್ಗೆ ಈಗಲೇ ಕಣಿ ಹೇಳುವುದಕ್ಕೆ ಸಾಧ್ಯವೂ ಇಲ್ಲ. ಆದರೂ ರಾಯಚೂರು, ಬೀದರ್, ಕಲಬುರ್ಗಿಯಿಂದ ಬಂದಿರುವ ಮಹಿಳೆಯರು ಹೀಗೆ ಒಟ್ಟಾಗಿರುವುದಕ್ಕೆ ಏಕೈಕ ಕಾರಣ ಮದ್ಯಪಾನ. ಈ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಮದ್ಯಪಾನದ ಸಂತ್ರಸ್ತರು. ಗಂಡನೆಂದೋ ಅಪ್ಪನೆಂದೋ ಗುರುತಿಸಿಕೊಳ್ಳುವ ವ್ಯಕ್ತಿಯ ಮದ್ಯಪಾನದ ಚಟದಿಂದ ನೆಮ್ಮದಿಯನ್ನು ಕಳಕೊಂಡವರು. ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕಾದರೆ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧವಾಗಬೇಕು ಎಂದು ನಂಬಿದವರು. ಇವರ ಈ ಬಯಕೆಗೆ ‘ಮದ್ಯ ನಿಷೇಧ ಆಂದೋಲನ’ ಎಂಬ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಖುಷಿಯ ವಿಚಾರ ಏನೆಂದರೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ಪಾದಯಾತ್ರೆಗೆ ಚಾಲನೆ ನೀಡಿರುವುದು. ಅಷ್ಟಕ್ಕೂ,

ಸಮಾಜದ ಪ್ರಗತಿಗೆ ಮದ್ಯದ ಕೊಡುಗೆಯೇನು ಎಂದು ಪ್ರಶ್ನಿಸಿದಾಗಲೆಲ್ಲ ಆದಾಯದ ಉದ್ದದ ಪಟ್ಟಿಯೊಂದನ್ನು ಸರಕಾರ ಮುಂದಿಡುವುದಿದೆ. ಮದ್ಯದ ಆದಾಯವಿಲ್ಲದೇ ಸರಕಾರ ನಡೆಸಲು ಸಾಧ್ಯವಿಲ್ಲ ಅನ್ನುವ ರೀತಿಯಲ್ಲಿ ಅದು ವರ್ತಿಸುತ್ತಿದೆ. ಜೊತೆಗೇ, ಈ ಆದಾಯದ ಹಿಂದೆ ಕರುಣಾಜನಕವಾದ ಕತೆಯಿದೆ ಎಂಬುದನ್ನೂ ಅದು ಒಪ್ಪಿಕೊಳ್ಳುತ್ತಿದೆ. ಆದ್ದರಿಂದಲೇ, ಸರಕಾರವೇ ಮುಂದೆ ನಿಂತು ಮದ್ಯವರ್ಜನಾ ಶಿಬಿರವನ್ನು ನಡೆಸುತ್ತಿರುವುದು. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತನ್ನೂ ಪ್ರಕಟಿಸುತ್ತಿರುವುದು. ಏಕಕಾಲದಲ್ಲಿ ನಡೆಯುವ ದ್ವಂದ್ವ ಇದು. ಮದ್ಯದ ಆದಾಯವನ್ನೇ ನೆಚ್ಚಿಕೊಂಡಿರುವ ಸರಕಾರವೊಂದು ಮದ್ಯವರ್ಜನಾ ಶಿಬಿರವನ್ನೂ ನಡೆಸುತ್ತದೆ ಎಂದರೆ ಏನರ್ಥ? ಆಡಳಿತ ನಡೆಸುವ ಪಕ್ಷವೇ ವಿರೋಧ ಪಕ್ಷವನ್ನೂ ರಚಿಸಿ ಅದಕ್ಕೆ ಸಂಪನ್ಮೂಲವನ್ನು ಒದಗಿಸಿ ಮುನ್ನಡೆಸಿಕೊಂಡು ಹೋಗುವ ರೀತಿಯಂಥಲ್ಲವೇ ಇದು? ಒಂದುಕಡೆ, ಮದ್ಯದ ಆದಾಯವೂ ಬೇಕು, ಇನ್ನೊಂದು ಕಡೆ, ತಾನು ಮದ್ಯದ ಪರ ಅಲ್ಲ ಎಂದೂ ಬಿಂಬಿಸಿಕೊಳ್ಳಬೇಕು ಎಂಬ ಚಟವನ್ನು ಬಿಟ್ಟರೆ ಇದರಲ್ಲಿ ಬೇರೆ ಏನಿದೆ? ನಿಜವಾಗಿ,

ಮದ್ಯಪಾನದ ವಿರುದ್ಧ ಒಂದು ಸರಕಾರ ಜಾಹೀರಾತನ್ನು ಕೊಡುತ್ತದೆಂದರೆ, ಮದ್ಯಪಾನ ಸಮಾಜದ ಆರೋಗ್ಯಕ್ಕೆ ಹಾನಿಕರ ಎಂದು ಅದು ಒಪ್ಪಿಕೊಳ್ಳುತ್ತದೆ ಎಂದೇ ಅರ್ಥ. ಹೀಗಿರುವಾಗ, ಹಾನಿಕರವಾದುದರ ಮಾರಾಟಕ್ಕೆ ಸರಕಾರ ಅನುಮತಿ ಕೊಡುವುದಾದರೂ ಯಾಕೆ? ಸರಕಾರ ಇರುವುದೇ ಜನರಿಗೆ ಆರೋಗ್ಯಪೂರ್ಣ ಮತ್ತು ನೆಮ್ಮದಿದಾಯಕ ಬದುಕನ್ನು ಖಾತರಿಪಡಿಸಲು. ಸರಕಾರವೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಜನರಿಗೆ ಸುಲಭ ಬದುಕನ್ನು ಒದಗಿಸುವುದಕ್ಕಾಗಿ ಮನುಷ್ಯರೇ ಸೇರಿಕೊಂಡು ಮಾಡಿಕೊಂಡ ವ್ಯವಸ್ಥೆ ಅದು. ಸರಕಾರದಲ್ಲಿರುವವರು ಜನಪ್ರತಿನಿಧಿಗಳೇ ಹೊರತು ಮದ್ಯ ಪ್ರತಿನಿಧಿಗಳಲ್ಲ. ಮದ್ಯವನ್ನು ತಯಾರಿಸುವ ಉದ್ಯಮದಿಂದ ಶಾಸನ ಸಭೆಗಳಿಗೆ ನಾಮಕರಣ ಮಾಡಬೇಕೆಂಬ ಕಡ್ಡಾಯ ನಿಯಮವಿಲ್ಲ. ಆದರೆ ಸಾಹಿತ್ಯ, ಸಂಗೀತ, ಕ್ರೀಡೆ ಇತ್ಯಾದಿ ಕ್ಷೇತ್ರದಿಂದ ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ನಾಮಕರಣ ಮಾಡುವ ಕ್ರಮ ಇದೆ. ಇಷ್ಟೆಲ್ಲ ಇದ್ದೂ ಮದ್ಯೋದ್ಯಮವನ್ನು ಸರಕಾರ ಆಧರಿಸುತ್ತಿರುವುದೇಕೆ? ಈ ಆದಾಯದಾಚೆಗೆ ಕೋಟ್ಯಾಂತರ ಬಡ ಗುಡಿಸಲುಗಳು ಮತ್ತು ಅಲ್ಲಿನ ಆಕ್ರಂದನಗಳು ಸರಕಾರಕ್ಕೆ ಮುಖ್ಯವಾಗುವುದಿಲ್ಲವೇ? ಬೆಳಗ್ಗಿನಿಂದ ಸಂಜೆಯವರೆಗೆ ದುಡಿದ ಹಣವನ್ನು ಮದ್ಯದಂಗಡಿಗೆ ಸುರಿದು ತೂರಾಡಿಕೊಂಡು ಬರುವ ಅಪ್ಪನನ್ನು ಒಂದು ಮಗು ಹೇಗೆ ಸ್ವಾಗತಿಸೀತು? ಪತ್ನಿಯಾದವಳು ಹೇಗೆ ಸ್ವೀಕರಿಸಿಯಾಳು? ಆ ಮನೆಯ ಪರಿಸ್ಥಿತಿ ಹೇಗಿದ್ದೀತು? ಹೊಡೆತ, ಬಡಿತ, ಥಳಿತ, ಬೈಗುಳ, ಬೊಬ್ಬೆಗಳ ನೆಮ್ಮದಿರಹಿತ ಜಗತ್ತು ಅದು. ಪ್ರತಿನಿತ್ಯ ನಮ್ಮ ಸುತ್ತ-ಮುತ್ತಲೇ ಈ ಮನುಷ್ಯರು ಬದುಕುತ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿರುವ ಈ ಮನುಷ್ಯರ ಕುಟುಂಬ ಹಾಳಾಗಿದೆ. ಮಕ್ಕಳ ಮನಸ್ಸು ಹಾಳಾಗಿದೆ. ಮನೆ ಹಾಳಾಗಿದೆ. ಇವರೆಲ್ಲರ ಬದುಕನ್ನು ಹೀಗೆ ಬೀದಿಪಾಲು ಮಾಡಿಕೊಂಡು ಸರಕಾರಕ್ಕೆ ಆದಾಯ ಗಳಿಸಬೇಕೇ?

ಆಹಾರ, ಉದ್ಯೋಗ, ಆರೋಗ್ಯ, ವಸತಿ ಇತ್ಯಾದಿ ಜೀವನಾವಶ್ಯಕ ವಸ್ತುಗಳ ಪಟ್ಟಿಯಲ್ಲಿ ಮದ್ಯಕ್ಕೆ ಸ್ಥಾನವಿಲ್ಲ. ಯಾಕೆಂದರೆ, ಅದು ಸಾಮಾಜಿಕ ಅನಿವಾರ್ಯತೆ ಅಲ್ಲ. ಮದ್ಯ ಇಲ್ಲದೆ ಬದುಕಬಹುದು. ಆದರೆ ಆಹಾರ, ಆರೋಗ್ಯ, ಉದ್ಯೋಗ, ವಸತಿ ಇಲ್ಲದೇ ಬದುಕಲು ಕಷ್ಟಸಾಧ್ಯ. ದುರಂತ ಏನೆಂದರೆ, ಈ ಅಗತ್ಯತೆಗಳನ್ನು ಪೂರೈಸಲು ವಿಫುಲವಾದ ಸರಕಾರಗಳು ತಮ್ಮ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಮದ್ಯವನ್ನು ವಿತರಿಸುತ್ತಿದೆ. ಒಮ್ಮೆ ಮದ್ಯದ ದಾಸನಾದ ವ್ಯಕ್ತಿ ಆ ಬಳಿಕ ಸರಕಾರದ ಉಳಿದೆಲ್ಲ ವೈಫಲ್ಯಗಳನ್ನು ಮರೆತು ಬಿಡುತ್ತಾನೆ/ಳೆ. ಇದೊಂದು ಸಂಚು. ಮದ್ಯದ ಆದಾಯವನ್ನು ತೋರಿಸಿ ಈ ಸಂಚನ್ನು ಸದ್ಯ ಸಮರ್ಥಿಸಲಾಗುತ್ತಿದೆ. ಜನರನ್ನು ಹಿಂಡಿ, ಅವರ ಆರೋಗ್ಯವನ್ನು ಕೆಡಿಸಿ ಸಂಗ್ರಹಿಸುವ ಆದಾಯದ ಅಗತ್ಯವಾದರೂ ಏನಿದೆ? ಆ ಹಣದಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಎಷ್ಟು ನೈತಿಕ? ಅಂದಹಾಗೆ,

ಚಿತ್ರದುರ್ಗದಿಂದ ಹೊರಟ ಪಾದಯಾತ್ರೆಯ ತುಂಬಾ ಮಹಿಳೆಯರೇ ಇದ್ದಾರೆ. ಅದೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು. ಗ್ರಾಮೀಣ ಪ್ರದೇಶವೆಂಬುದು ನಗರ ಪ್ರದೇಶದಂತಲ್ಲ. ನಗರದಲ್ಲಿ ಪ್ರತಿಭಟನೆಗಳು, ರ್ಯಾಲಿಗಳು ಪ್ರತಿದಿನವೆಂಬಂತೆ ನಡೆಯುತ್ತಲೇ ಇರುತ್ತವೆ. ನಗರದಲ್ಲಿ ಅದು ಸುಲಭ. ಆದರೆ ಗ್ರಾಮೀಣ ಪ್ರದೇಶದ ಮಂದಿ ಪಾದಯಾತ್ರೆ ಹಮ್ಮಿಕೊಳ್ಳುವುದು ಅಪರೂಪ. ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮಷ್ಟಕ್ಕೆ ಬದುಕುವ ಈ ಮಂದಿ ಪಾದಯಾತ್ರೆಯಲ್ಲಿ ರಾಜಧಾನಿಗೆ ಹೊರಟಿದ್ದಾರೆಂದರೆ, ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಹಾಗಂತ, ಈ ಪಾದಯಾತ್ರೆಯಲ್ಲಿರುವ ಮಹಿಳೆಯರಷ್ಟೇ ಮದ್ಯಪಾನದ ಸಂತ್ರಸ್ತರಲ್ಲ. ಒಂದುವೇಳೆ, ರಾಜ್ಯದಲ್ಲಿ ಯಾರಾದರೂ ಸಮೀಕ್ಷೆ ನಡೆಸಿದರೆ, ಸರಕಾರವನ್ನೇ ಉರುಳಿಸುವಷ್ಟು ಪ್ರಮಾಣದಲ್ಲಿ ಅವರ ಸಂಖ್ಯೆ ಇದ್ದೀತು. ಸರಕಾರ ಈ ಮಹಿಳೆಯರ ಆಗ್ರಹಕ್ಕೆ ಕಿವಿಯಾಗಬೇಕು. ಸಕಲ ಕೆಡುಕುಗಳ ತಾಯಿ ಎಂದು ಇಸ್ಲಾಮ್ ಧರ್ಮ ಸೂಚಿಸಿರುವ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಇಂದಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾಣೇಹಳ್ಳಿ ಸ್ವಾಮೀಜಿಯವರಂತೆ ಈ ರಾಜ್ಯದ ಇತರ ಮಠ-ಮಂದಿರಗಳಿಂದಲೂ ಮದ್ಯ ವಿರೋಧಿ ಬೃಹತ್ ಚಳವಳಿ ರೂಪುತಾಳಬೇಕು. ಚರ್ಚ್-ಮಸೀದಿಗಳೂ ಇದರಲ್ಲಿ ಪಾಲುಗೊಳ್ಳಬೇಕು. ಇದೇನೂ ಅಸಾಧ್ಯವಲ್ಲ.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಅಭಿನಂದನೆಗಳು.