ಕೋಮು ಧ್ರುವೀಕರಣವನ್ನು ತಡೆಯಲು ಜನಾಂದೋಲನದ ಅಗತ್ಯವಿದೆ: ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಸದತುಲ್ಲಾ ಹುಸೇನಿ

0
442

ಸನ್ಮಾರ್ಗ ವಾರ್ತೆ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣವನ್ನು ತಡೆಯುವ ಅಗತ್ಯವಿದೆ. ಇದನ್ನು ಎದುರಿಸಲು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸುವ ಜನರ ಆಂದೋಲನದ ಅಗತ್ಯವಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ (ಜೆಐಹೆಚ್) ಅಧ್ಯಕ್ಷ ಸೈಯದ್ ಸದತುಲ್ಲಾ ಹುಸೇನಿ ಕರೆ ನೀಡಿದ್ದಾರೆ.

ದೆಹಲಿಯ ಕೇಂದ್ರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಮತಾಂತರ ವಿರೋಧಿ ಕಾನೂನುಗಳು, ಮಧ್ಯಪ್ರದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ರೈತರ ಆಂದೋಲನ, ಪತ್ರಕರ್ತರ ಸುರಕ್ಷತೆ ಮತ್ತು 2020 ರ ಪ್ರಮುಖ ಘಟನೆಗಳ ಆತ್ಮಾವಲೋಕನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಾತನಾಡಿದರು.

“ಕಾನೂನುಗಳನ್ನು ರೂಪಿಸಿರುವ ದೇಶದಲ್ಲಿ ಧ್ರುವೀಕರಣದ ಯೋಜನೆಯನ್ನು ನಡೆಸಲಾಗುತ್ತಿದೆ ಎಂಬುದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ಕೋಮು ಗಲಭೆಗೆ ಪ್ರಚೋದಿಸುವಂತಹ ಘಟನೆಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ. ಇದು ಅತ್ಯಂತ ಆತಂಕಕಾರಿಯಾಗಿದೆ ಎಂದು ಹೇಳಿದ ಅವರು, ಎಲ್ಲಾ ಸಮುದಾಯಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಜನರಿದ್ದಾರೆ. ದ್ವೇಷ ಮತ್ತು ವಿಭಜನೆಯ ವಾತಾವರಣವನ್ನು ಸೃಷ್ಟಿಸುವುದು ದೇಶಕ್ಕೆ ಬಹಳ ಹಾನಿಕಾರಕವಾಗಿದೆ. ಧ್ರುವೀಕರಣ ಮಾಡಲು ಪ್ರಯತ್ನಿಸುತ್ತಿರುವವರನ್ನು ಪ್ರಶ್ನಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಬೆಳೆಯುತ್ತಿರುವ ಕೋಮು ಧ್ರುವೀಕರಣವನ್ನು ಮಟ್ಟ ಹಾಕಲು ನಾಗರಿಕ ಸಮಾಜ, ಸಾಮಾಜಿಕ ಸಂಸ್ಥೆಗಳು ಕೈಜೋಡಿಸಬೇಕು ಮತ್ತು ಪ್ರೀತಿ, ಸಹನೆ ಮತ್ತು ಸಾಮರಸ್ಯದಿಂದ ಎದುರಿಸಬೇಕು ಎಂದಿರುವ ಅವರು, ಜಮಾಅತೆ ಇಸ್ಲಾಮಿ ಹಿಂದ್ ಈ ಬೆಳೆಯುತ್ತಿರುವ ಭೀತಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನವನ್ನು ಮಾಡುತ್ತಿದೆ ಮತ್ತು ಕೋಮು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಸಾಮಾಜಿಕ ಮತ್ತು ಸಾರ್ವಜನಿಕ ಆಂದೋಲನವನ್ನು ರಚಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರವು ಎಲ್ಲಾ ನಾಗರಿಕರಿಗೆ ಸೇರಿದೆ ಮತ್ತು ನಿರ್ದಿಷ್ಟ ಪಕ್ಷ ಅಥವಾ ಸಮುದಾಯಕ್ಕೆ ಸೇರಿಲ್ಲ. ನಮ್ಮ ಸಂದೇಶ ಮತ್ತು ವಿವಿಧ ವಿಷಯಗಳ ನಿಲುವನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸದತುಲ್ಲಾ ಹುಸೇನಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜೆಐಹೆಚ್ ಉಪಾಧ್ಯಕ್ಷ ಪ್ರೊ.ಮೊಹಮ್ಮದ್ ಸಲೀಮ್ ಇಂಜಿನಿಯರ್, ಶರಿಯಾ ಕೌನ್ಸಿಲ್ ಕಾರ್ಯದರ್ಶಿ ಮೌಲಾನಾ ಡಾ.ರಜಿಯುಲ್ ಇಸ್ಲಾಂ ನದ್ವಿ, ಸಯ್ಯದ್ ತನ್ವೀರ್ ಅಹ್ಮದ್ ಉಪಸ್ಥಿತರಿದ್ದರು.