ಸಮುದಾಯದ ಸಮಗ್ರ ಹಿತಕ್ಕೆ ಮಾರಕವಾದ ಚಿಂತನೆಗಳು

0
422

ಅಬೂ ಅನೀಸ್, ಕಲ್ಲಾಪು


ಅಂತ್ಯ ಪ್ರವಾದಿ ಹ. ಮುಹಮ್ಮದ್(ಸ)ರು ತನ್ನ ಜನತೆಯ ಮುಂದಿರಿಸಿದ ಪ್ರಪ್ರಥಮ ಸಂದೇಶವು ಏಕದೇವ ಭಯಾನಿಷ್ಠೆ (ತೌಹೀದ್) ಆಗಿದೆ. ‘ಜನರೇ, ಅಲ್ಲಾಹನಲ್ಲದೇ ಅನ್ಯ ಆರಾಧ್ಯ ನಿಲ್ಲವೆಂದು ಹೇಳಿರಿ. ನೀವು ಸರ್ವಾಂಗೀಣ ಯಶಸ್ಸು ಹೊಂದುವಿರಿ.’ ಈ ಸಂದೇಶದ ಮೂಲಕ ಪ್ರವಾದಿವರ್ಯ(ಸ)ರು ಇಸ್ಲಾಮಿನ ಯಶೋಗಾಥೆಯನ್ನು ಆರಂಭಿಸಿದರು. ಮನುಷ್ಯ ಮತ್ತು ಸೃಷ್ಟಿಕರ್ತನ ನಡುವೆ ಮತ್ತು ಮನುಷ್ಯ ಮತ್ತು ಮನುಷ್ಯರೊಳಗೆ ಇರಬೇಕಾದ ಹಕ್ಕುಬಾಧ್ಯತೆ ಗಳು ಅದರ ಅಂತರ್ ಸತ್ವವು ಈ ವಿಶ್ವಾಸದ ದೃಢೀಕರಣದ ಮೂಲಕ ಮಾತ್ರವಿದೆ.

ಈ ವಿಶ್ವಾಸ ಮತ್ತು ಅದಕ್ಕೆ ಪೂರಕವಾದ ನಡವಳಿಕೆಗಳನ್ನು ಬುನಾದಿಯಾಗಿಸಿಕೊಂಡು ಲೌಕಿಕ ಮತ್ತು ಪಾರತ್ರಿಕ ಬದುಕಿನ ಉಜ್ವಲವಾದ ಜೀವನ ವ್ಯವಸ್ಥೆಯನ್ನು ಪ್ರವಾದಿವರ್ಯ(ಸ)ರು ಸಾದರಪಡಿಸಿದರು. ಭವಿಷ್ಯದಲ್ಲಿ ಅದಕ್ಕೆ ಸೂಕ್ತವಾದ ನೀತಿ-ನಿಯಮಗಳು, ವಿಧಿ-ನಿಷೇಧಗಳನ್ನು ಜಾರಿಗೆ ತಂದರು. ಪರಸ್ಪರ ಬಾಂಧವ್ಯ, ವ್ಯಾಪಾರ ವ್ಯವ ಹಾರ, ಕೌಟುಂಬಿಕ ಮತ್ತು ಸಹೋದರ ಸಂಬಂಧ ಗಳು, ಸಾಮಾಜಿಕ ಹಕ್ಕು ಬಾಧ್ಯತೆಗಳು ಇಸ್ಲಾಮೀ ನೀತಿ ನಿಯಮಗಳಾಗಿ ನಡವಳಿಕೆಯಲ್ಲಿ ಬಂದವು.
ದೇಹೇಚ್ಛೆಗಳಿಗೆ ಬಲಿಯಾಗುವ ದುಷ್ಟ ಪ್ರಚೋ ದನೆಗಳನ್ನು ವೈಯಕ್ತಿಕ ಸ್ವಾತಂತ್ರ್ಯದ ಪಟ್ಟಿಯಿಂದ ದೂರ ದೂಡಿ ಅಪರಾಧಗಳ ಪಟ್ಟಿಯಲ್ಲಿ ಬೇರ್ಪಡೆಗೊಳಿಸಲಾಯಿತು. ವ್ಯಭಿಚಾರ, ಕುಡಿತ (ಮದ್ಯಪಾನ), ಜೂಜಾಟ ಇತ್ಯಾದಿಗಳು ದಂಡ ನಾರ್ಹ ಅಪರಾಧವಾಗಿದೆಯೇ ಹೊರತು ವೈಯಕ್ತಿಕ ಸ್ವಾತಂತ್ರ್ಯವಲ್ಲವೆಂದು ಘೋಷಿಸಲಾಯಿತು. ಬಡ್ಡಿ ರಹಿತವಾದ ಆರ್ಥಿಕ ವ್ಯವಸ್ಥೆ ಜಾರಿಗೆ ತರಲಾ ಯಿತು. ಝಕಾತ್ ಮತ್ತು ಉಶ್ರ್ (ಕಡ್ಡಾಯ ದಾನ) ಅನ್ನು ಇಸ್ಲಾಮೀ ಆರ್ಥಿಕತೆಯಲ್ಲಿ ಸೇರ್ಪಡೆಗೊಳಿಸಲಾಯಿತು. ಈ ದೈವಿಕ ಆದೇಶಗಳ ಪಾಲನೆ ಇಸ್ಲಾಮೀ ಬದುಕಿನ ಅವಿಭಾಜ್ಯ ಅಂಗ ವೆಂದು ಜನರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಪ್ರವಾದಿವರ್ಯ(ಸ)ರು ಯಶಸ್ವಿಯಾದರು.
ತನ್ಮೂಲಕ ತೌಹೀದ್‍ನ ಅರ್ಥವ್ಯಾಪ್ತಿಯು ಅಲ್ಲಾಹನೊಂದಿಗೆ ಇರುವ ಹಕ್ಕುಬಾಧ್ಯತೆಗಳು (ಹುಕೂಕುಲ್ಲಾಹ್) ಮತ್ತು ಅಲ್ಲಾ ಹನ ದಾಸರೊಂದಿ ಗಿರುವ ಅರ್ಥಾತ್ ಜನರೊಂದಿಗೆ ಇರಬೇಕಾದ ಹಕ್ಕುಬಾಧ್ಯತೆಗಳು (ಹುಕೂಕುಲ್ ಇಬಾದ) ಎಂಬ ವಿಶಾಲಾರ್ಥದ ಸಮಗ್ರ ಇಸ್ಲಾಮೀ ಸ್ವರೂಪವಾಗಿದೆ
ಎಂದು ಸಾದರಪಡಿಸಿದರು.

ಮುಹದ್ದಿಸ್‍ಗಳು(ಹದೀಸ್ ಪಂಡಿತರು) ತೌಹೀದ್‍ಗೆ ನೀಡುವ ವ್ಯಾಖ್ಯಾನವು ಇದೇ ಆಗಿದೆ. ಅಕೀದಾ(ಸಂಕಲ್ಪ), ಇಬಾದಾತ್ (ಪ್ರಾರ್ಥನೆ), ಮುಆಮಿಲಾತ್(ವ್ಯವಹಾರಗಳು) ಮತ್ತು ಅಖ್ಲಾಕ್(ಸಜ್ಜನಿಕೆ) ತೌಹೀದ್‍ನ ಸರಿಯಾದ ಅರ್ಥ ಮತ್ತು ವ್ಯಾಖ್ಯಾನವಾಗಿದೆ. ಇದರಲ್ಲಿ ಅಕೀದಾ ಮತ್ತು ಇಬಾದಾತ್‍ಗಳು ಹುಕೂಕುಲ್ಲಾಹ್ ಗಳಾದರೆ ಮುಆಮಿಲಾತ್ ಮತ್ತು ಅಖ್ಲಾಕ್‍ಗಳು ಹುಕೂಕುಲ್ ಇಬಾದಾ ಆಗಿವೆ. ಮುಹದ್ದಿಸ್‍ಗಳು ಸಾದರಪಡಿಸಿದ ಪೂರ್ಣರೂಪದ ತೌಹೀದ್ ಸಮಾಜದಲ್ಲಿ ಬೇರೂರಬೇಕಾಗಿದೆ. ಅಲ್ಲಾಹನೇ ಆರಾಧ್ಯನೆನ್ನುವ ಸಂಕಲ್ಪ(ಅಖೀದಾ)ದೊಂದಿಗೆ ಅದನ್ನು ಸಾಕ್ಷಾತ್ಕರಿಸುವ ಆರಾಧನೆ(ಇಬಾದಾತ್) ಗಳು, ಪ್ರಾಮಾಣಿಕ(ಬಡ್ಡಿಯ ಕೊಡು-ಕೊಳ್ಳು ವಿಕೆಯಿಲ್ಲದ)ವಾದ ವಂಚನೆಯಿಲ್ಲದ, ವಚನ ಪಾಲನೆ(ಮುಆಮಿಲಾತ್)ಯಿಂದ ಕೂಡಿದ ವ್ಯವಹಾರ ಮತ್ತು ರಚನಾತ್ಮಕ ಮತ್ತು ಸುಧಾರಣಾ ತ್ಮಕವಾದ ಸಜ್ಜನಿಕೆ(ಅಖ್ಲಾಕ್)ಯಿಂದ ಕೂಡಿದ ಬರಹ, ಭಾಷಣ, ನುಡಿ-ನಡೆಗಳು, ದೇವಭಯಾ (ತೌಹೀದ್)ನಿಷ್ಠೆಯಿರುವವರ ವಿಶಾಲ ರೂಪ ವಾಗಿದೆ. ಅದನ್ನೇ ಇಸ್ಲಾಮೀ ಜೀವನ ವ್ಯವಸ್ಥೆ ಯೆನ್ನಲಾಗುತ್ತಿದೆ.
ಪವಿತ್ರ ಕುರ್‍ಆನ್ ಇದನ್ನೇ ಪ್ರತಿಪಾದಿಸುತ್ತದೆ. ಅಲ್ಲಾಹನೆಡೆಗೆ ಕರೆಯುವ ಸತ್ಕರ್ಮ (ಅಮಲೆ ಸಾಲಿಹಾ)ವನ್ನು ಎಸಗುವ ಮತ್ತು ತಾನು ಮುಸ್ಲಿಮ್ ಎಂದು ಹೇಳುವ ವ್ಯಕ್ತಿಯ ಮಾತಿಗಿಂತ ಶ್ರೇಷ್ಠವಾದ ಮಾತು ಇನ್ನಾರದಾಗಿರಲು ಸಾಧ್ಯ? (ಕುರ್‍ಆನ್: 41-33). ಇಲ್ಲಿ ಆಂಶಿಕ ತೌಹೀದ್ ಗಿಂತಲೂ ಪೂರ್ಣರೂಪದ ಇಸ್ಲಾಮಿನತ್ತ ಕರೆ ಕೊಡುವುದು ಸಂದೇಶ(ದಾವಾ) ಪ್ರಚಾರದ ಸರಿ ಯಾದ ಮಾರ್ಗವಾಗಿದೆ. ಈ ಮೂಲಕ ತಕ್ವಾ (ವಿಶ್ವಾಸಾರ್ಪಣೆ)ದ ಆಧಾರದಲ್ಲಿ ಸತ್ವಪೂರ್ಣವಾದ ಇಸ್ಲಾಮೀ ಬದುಕಿನತ್ತ ಹೆಜ್ಜೆ ಹಾಕಬೇಕಾಗಿದೆ. ಇಸ್ಲಾಮೀ ಪರಿವಾರದಲ್ಲಿ ಮುಸ್ಲಿಮ್ ಎಂದು ಅವಕಾಶ ಪಡುವ ಪ್ರತಿಯೊಬ್ಬನೂ ನಿಷ್ಠ ಅನು ಯಾಯಿ ಆಗುತ್ತಾನೆ. ಅವನ ಇಸ್ಲಾಮೀ ಸ್ಥಾನ ಮಾನಕ್ಕೆ ತಕ್ವಾ ಮಾತ್ರ ಮಾನದಂಡವಾಗಿರುತ್ತದೆ. ಅದನ್ನೇ ಕುರ್‍ಆನ್ ಒತ್ತಿ ಹೇಳುತ್ತದೆ, (ಇನ್ನ ಅಕ್‍ರಕುಮ್ ಇಂದಲ್ಲಾಹಿ ಅತ್‍ಕಾಕುಂ) ನಿಮ್ಮಲ್ಲಿ ಅತ್ಯಂತ ಹೆಚ್ಚು ದೇವಭಯಾನಿಷ್ಠೆಯುಳ್ಳವನೇ ಗೌರವಾರ್ಹನಾಗಿದ್ದಾನೆ. (ಹುಜುರಾತ್)

ಇದಕ್ಕೆ ವ್ಯತಿರಿಕ್ತವಾಗಿ ಕೇವಲ ಆರಾಧನೆಯ ತರ್ಕ-ತಗಾದೆಗಳಿಗೆ ಸೀಮಿತಗೊಂಡಿರುವ ತೌಹೀದ್ ಆಂದೋಲನವು ಮುಸ್ಲಿಮ್ ಸಮಾಜ ದೊಳಗೆ ಸದಾ ತೌಹೀದ್ ಇಲ್ಲದವರ ಅನ್ವೇಷಣೆ ಯಲ್ಲಿ ಹೆಚ್ಚಾಗಿ ಮಗ್ನವಾಗಿರುತ್ತದೆ. ಅದನ್ನೇ ದಾವಾದ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಸಮುದಾಯದೊಳಗೆ ಪ್ರತ್ಯೇಕವಾದ ತೌಹೀದ್‍ವಾದಿ ಗುಂಪುಗಳು, ತೌಹೀದ್ ಮಸೀದಿಗಳು ಹುಟ್ಟಿಕೊಳ್ಳು ತ್ತವೆ. ಮುಸ್ಲಿಮ್ ಉಮ್ಮಃ ಎರಡು ಬೃಹತ್ ಹೋಳಾಗಿ ಒಡೆಯುತ್ತದೆ. ಅದುವೇ ದೊಡ್ಡ ಸಾಧನೆಯೆಂಬ ಭಾವನೆಗಳು ಗರಿಗೆದರಿ ತರ್ಕ-ತಗಾದೆಯ ಬಜಾರು ಗರಂ ಆಗುತ್ತದೆ. ಮುಸ್ಲಿಮರ ಒಂದು ವಿಭಾಗವು ಮುಶ್ರಿಕ್‍ಗಳಾಗಿ ಚಿತ್ರೀಕರಿಸಲ್ಪಡು ತ್ತದೆ. ಇದು ಇಸ್ಲಾಮೀ ದಾವಾದ ರೂಪವಲ್ಲ. ಇದರಿಂದಾಗಿ ಶತ್ರುಗಳಿಗೆ (ಯಹೂದಿ, ಫ್ಯಾಸಿಸ್ಟರಿಗೆ) ಪ್ರಯೋಜನವಾಗಬಹುದಲ್ಲದೇ ಹೊರತು ಮುಸ್ಲಿಮ್ ಉಮ್ಮಃಕ್ಕೆ ದುಃಖದಾಯಕ ನಷ್ಟವುಂಟಾಗಬಹುದು. ಈ ಬಗ್ಗೆ ಪವಿತ್ರ ಕುರ್‍ಆನ್ ಪ್ರತಿಪಾದಿಸುತ್ತದೆ… ಪ್ರವಾದಿಗಳೇ ಯುಕ್ತಿ ಮತ್ತು ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಅತ್ಯುತ್ತಮ ರೀತಿಯಲ್ಲಿ ಸಂಪಾದಿಸಿರಿ. ಯಾರು ಅವನ ಮಾರ್ಗದಿಂದ ಭ್ರಷ್ಟರಾಗಿದ್ದಾರೆ ಮತ್ತು ಯಾರು ನೇರ ಮಾರ್ಗದಲಿ ್ಲದ್ದಾರೆ ಎಂಬುದನ್ನು ನಿನ್ನ ಪ್ರಭು ಚೆನ್ನಾಗಿ ಬಲ್ಲನು. (16: 125)
ಈ ದೃಷ್ಟಿಯಲ್ಲಿ ಒಂದು ಗುಂಪು ಇನ್ನೊಂದು ಗುಂಪನ್ನು ಮುಶ್ರಿಕರನ್ನಾಗಿ ಪ್ರಖ್ಯಾಪಿಸುವುದು ಸರಿಯೇ…? ಪವಿತ್ರ ಕುರ್‍ಆನ್ ದಾರಿ ತಪ್ಪಿದವರನ್ನು ಅಲ್ಲಾಹನ ಮಾರ್ಗದತ್ತ ಕರೆಯುವ ಅವಕಾಶವನ್ನು ನೀಡಿದೆಯಲ್ಲದೆ ಮುಶ್ರಿಕರನ್ನಾಗಿ ಚಿತ್ರಿಸುವ ಅಧಿಕಾರವನ್ನಲ್ಲ.
ಹದೀಸ್ ಕೂಡಾ ಇದನ್ನೇ ಪ್ರತಿಪಾದಿಸುತ್ತದೆ. “ಅನಸ್(ರ)ರಿಂದ ನಿವೇದನೆ: ಪ್ರವಾದಿಯವರು(ಸ) ಹೇಳಿದರು, “ನಮ್ಮಂತೆ ನಮಾಝ್ ಮಾಡುವವನು, ನಮ್ಮ ಕಿಬ್ಲಾದ ಬಗ್ಗೆ ಮುಖ ಮಾಡುವವನು ಮತ್ತು ನಾವು ದಿಬ್ಹ ಮಾಡಿದ ಪ್ರಾಣಿಯನ್ನು ತಿನ್ನುವವನು ಮುಸ್ಲಿಮ್ ಆಗಿದ್ದಾನೆ. ಅವನ ಮೇಲಿನ ಹೊಣೆಗಾರಿಕೆ ಅಲ್ಲಾಹ್ ಮತ್ತು ಅವನ ಪ್ರವಾದಿಯ ಮೇಲಿದೆ. ಆದುದರಿಂದ ಅವನ ಬಗೆಗಿರುವ ಅಲ್ಲಾಹನ ವಚನವನ್ನು ಭಂಗಗೊಳಿಸದಿರಿ.” (ಬುಖಾರಿ)
ತೌಹೀದನ್ನು ಅಪಭ್ರಂಶಗೊಳಿಸುವ ಇನ್ನೂ ಕೆಲವು ಕಂದಾಚಾರಗಳು ಸಮುದಾಯದೊಳಗೆ ನುಸುಳಿಕೊಂಡಿವೆ. ಕಬರ್ ಝಿಯಾರತ್‍ನಂತಹ ಐಚ್ಛಿಕ ಪ್ರಾರ್ಥನೆಗಳನ್ನು ವಿಕೃತಗೊಳಿಸಿ ಗೋರಿಯ ಸಮಾಧಿಸ್ತರ ಮೇಲೆ (ಮುಸ್ಲಿಮೇತರರಿಗೂ) ಅನುಚಿತವಾದ ನಂಬಿಕೆ ಕುದುರುವಂತೆ ಮಾಡು ತ್ತಾರೆ. ಮುಸ್ಲಿಮೇತರ ಮಹಿಳೆಯರಿಗೂ ಗೋರಿಗೆ ಹಾಕಿದ ಒಣ ಹೂ ಮತ್ತು ಬೂದಿಯನ್ನು ಪ್ರಸಾದವಾಗಿ ನೀಡುತ್ತಾರೆ. ಕುರ್‍ಆನ್‍ನ ಆದೇಶ ದಂತೆ ಅಲ್ಲಾಹನೆಡೆಗೆ ಆಹ್ವಾನಿಸಬೇಕಾದ ಜನರನ್ನು ದೇವೇತರರ ಮೇಲೆ ವಿಶ್ವಾಸ ಬರುವಂತೆ ಮಾಡಲಾಗುತ್ತದೆ.

ವಾಸ್ತವದಲ್ಲಿ ಕಬರ್ ಝಿಯಾರತ್ ಎಂಬುದು ಮೂಅïಮಿನನೊಬ್ಬನನ್ನು ತನ್ನ ಐಹಿಕ ಬದುಕು ಮತ್ತು ಪರಲೋಕವನ್ನು ಅವಲೋಕನಡೆಗೊಯ್ಯುವ ಒಂದು ಪ್ರಾರ್ಥನಾ ಪ್ರಕ್ರಿಯೆಯಾಗಿದೆ. ಅದೊಂದು ಸುನ್ನತ್ ಆದ ಪ್ರಾರ್ಥನೆಯಾಗಿದೆ. ಗಂಭೀರವಾದ ಸನ್ನಿವೇಶದಲ್ಲಿ ದೇವಾನುಗ್ರಹವನ್ನು ಬಯಸುವ ಸ್ತುತಿ ಕೀರ್ತನೆಗಳನ್ನು ಹೇಳಬೇಕಾಗಿದೆ. ಇದಕ್ಕೆ ಹೊರತಾದ ಅತಿರೇಕದ ಕಾರ್ಯಗಳು ನಿಜಾರ್ಥ ದಲ್ಲಿ ಉಲೆಮಾಗಳ ಕಾರ್ಯವಲ್ಲ. ದುರದೃಷ್ಟವ ಶಾತ್ ಸಮುದಾಯದೊಳಗೆ ಬೆಳೆದಿರುವ ಪುರೋ ಹಿತಶಾಹಿತಗಳು ಈ ತರದ ಮಾತ್ರವಲ್ಲ ಇನ್ನೂ ಕೆಲವು ಕಂದಾಚಾರಗಳನ್ನು ಹುಟ್ಟು ಹಾಕಿ ಮುಗ್ಧ ಜನರನ್ನು ದಾರಿಗೆಡಿಸುತ್ತಿದ್ದಾರೆ.

ಏತನ್ಮಧ್ಯೆ ಮೇಲುದ್ಧರಿಸಿದ ಉಭಯ ಪ್ರಕ್ರಿಯೆ ಗಳಲ್ಲಿ ಮೊದಲನೆಯದು ಇಸ್ಲಾಮೀ ಕಾರ್ಯ ವಿಧಾನಕ್ಕೂ ಎರಡನೆಯದು ಇಸ್ಲಾಮೀ ವಿಶ್ವಾಸಾಚಾರಕ್ಕೂ ಪೂರಕವಾಗಿರುವುದಿಲ್ಲ. ಈ ಅನುಚಿತ ವಿಚಾರಗಳು ಗರಿಗೆದರಿ ಸಮುದಾಯದೊಳಗೆ ಅನಾವಶ್ಯಕ ಗೊಂದಲ, ದಾಂಧಲೆಗೆ ದಾರಿ ಮಾಡಿಕೊಡುತ್ತದೆ. ಕುರ್‍ಆನ್ ಮತ್ತು ಪ್ರವಾದಿ ವಚನಗಳನ್ನು ಅತಿರೇಕದ ಶಬ್ದ ಪ್ರಯೋಗಿಸಿ ಇನ್ನೊಂದು ವಿಭಾಗವನ್ನು ಧರ್ಮಭ್ರಷ್ಟರೆಂದು ಘೋಷಿಸಲಾಗುತ್ತದೆ. ಇನ್ನೊಂದೆಡೆ ಇಸ್ಲಾಮೀ ಆಜ್ಞೋಪದೇಶಗಳಿಗೆ ವ್ಯತಿರಿಕ್ತವಾದ ಕೆಲವು ಕಂದಾಚಾರಗಳನ್ನು ಜೀವಂತ ವಾಗಿರಿಸಲು ಹೆಣಗಾಡುವ ವಿಭಾಗವು ಸಕ್ರಿಯ ವಾಗುತ್ತದೆ. ಈ ಉಭಯ ವಿಭಾಗಗಳು ದೇಶದ ಇಸ್ಲಾಮೀ ಏಕತೆ ಮತ್ತು ಸಮಗ್ರತೆಗೆ ತೀವ್ರ ತರದ ಮರ್ಮಾಘಾತವನ್ನು ನೀಡಿದೆ. 20 ಕೋಟಿಗೂ ಮಿಕ್ಕಿರುವ ಬೃಹತ್ ಸಮುದಾಯವು ಅನುಚಿತ ತರ್ಕಕುತರ್ಕಗಳಿಗೆ ಬಲಿಯಾಗಿ ಸ್ವಯಂ ದುರ್ಬಲ ಮತ್ತು ಮರ್ದಿತ ವಿಭಾಗವಾಗಿ ಮಾರ್ಪಟ್ಟಿದೆ.
ವಾಸ್ತವದಲ್ಲಿ ಭಾರತೀಯ ಮುಸ್ಲಿಮರು ಈ ದೇಶದಲ್ಲಿ ಒಂದು ಮಾದರಿ (ಉಮ್ಮತುನ್ ವಸತ) ಮಧ್ಯಮ ಸಮುದಾಯವಾಗಬೇಕಾಗಿತ್ತು. ದುರದೃಷ್ಟವಶಾತ್ ಪಾರ್ಟಿ ಚಿಂತನೆಗಳಲ್ಲಿ ಹರಿ ಹಂಚಾಗಿ ಮುಸ್ಲಿಮ್ ಉಮ್ಮಃ ಅರೆಜ್ಞಾನ ಮತ್ತು ಪುರೋಹಿತಶಾಹಿತ್ವದ ತೆಕ್ಕೆಯಲ್ಲಿ ಒಡಕು ಮತ್ತು ಪ್ರತ್ಯೇಕತೆಗೆ ಜಯಕಾರ ಹಾಡುತ್ತಾ ಅಧಃಪತನದತ್ತ ದಾಪುಗಾಲು ಹಾಕುತ್ತಿದೆಯೇ?

1985ರಲ್ಲಿ ಶರೀಅತ್ ಕಾನೂನನ್ನು ರಕ್ಷಿಸುವ ನಿಟ್ಟಿನಲ್ಲಿ ದೇಶದ ಮುಸ್ಲಿಮ್ ಸಂಘಟನೆಗಳು ಒಗ್ಗೂಡಿಕೊಂಡು ಪ್ರತಿಭಟನಾ ಸಮ್ಮೇಳನಗಳನ್ನು ಹಮ್ಮಿಕೊಂಡಿತ್ತು. ಸುಪ್ರೀಮ್ ಕೋರ್ಟಿನ ಶಿಫಾರಸ್ಸಿನಂತೆ ಸಮಾನ ಸಿವಿಲ್ ಕಾಯ್ದೆಯನ್ನು ಮಂಡಿಸಿದ ಅಂದಿನ ರಾಜೀವ್ ಗಾಂಧಿ ಸರಕಾರವು, ಮುಸ್ಲಿಮರು ಪ್ರಸ್ತುತ ಮಸೂದೆಗೆ ಪರವಾಗಿಲ್ಲವೆಂದು ಮನಗಂಡು ಮಸೂದೆಯನ್ನು ಹಿಂತೆಗೆಯಿತು. ಇದನ್ನು ಮುಸ್ಲಿಮ್ ಸಂಘಟನೆಗಳ ಸಂಘಟಿತ ಹೋರಾಟವೆನ್ನಬಹುದಾದರೂ ವೇದಿಕೆಯಿಂದ ಇಳಿದು ಹೋದ ನಂತರ ಆ ಸಂಘಟನೆಗಳು ಏನು ಮಾಡಿದವು? 2016ರಲ್ಲಿ ಕೇಂದ್ರದ ಭಾಜಪ ನೇತೃತ್ವದ ಸರಕಾರವು ಇನ್ನೊಮ್ಮೆ ಶರೀಅತ್‍ನ ಮೇಲೆ ಹಸ್ತಕ್ಷೇಪ ನಡೆಸಿದಾಗ ಮುಸ್ಲಿಮ್ ಸಂಘಟನೆಗಳು ಇನ್ನೊಮ್ಮೆ ವೇದಿಕೆಗಳಲ್ಲಿ ಸಮ್ಮಿಳಿತವಾಗಿ ಪ್ರಸ್ತುತ ಮಸೂದೆ ಯನ್ನು ವಿರೋಧಿಸಿತಾದರೂ ಅದನ್ನು ಗಣನೆಗೆ ತೆಗೆಯದ ಸರಕಾರವು ಲೋಕಸಭೆಯಲ್ಲಿ ಮಸೂದೆ ಯನ್ನು ಮಂಡಿಸಿ ಅಂಗೀಕಾರ ಪಡೆಯಿತು. ರಾಜ್ಯ ಸಭೆಯಲ್ಲಿ ಬಹುಮತವಿಲ್ಲದೆ ಬಿದ್ದು ಹೋಯಿತು ಎಂಬುದು ಬೇರೆ ವಿಷಯ.
ಇಲ್ಲಿ ವಿವೇಚಿಸಬೇಕಾದ ವಿಷಯವೆಂದರೆ 1985ರಿಂದ 2016ರ ವರೆಗಿನ ಸುದೀರ್ಘ 31 ವರ್ಷಗಳಲ್ಲಿ ದೇಶದ ಮುಸ್ಲಿಮ್ ಸಂಘಟನೆಗಳು, ಅದರ (ಉಲೆಮಾ-ಉಮರಾ) ನೇತಾರರು ಶರೀಅತ್‍ನ ಬಗ್ಗೆ ವೈವಿಧ್ಯತೆಯಲ್ಲಿ ಏಕತೆಯಿರುವ ಯಾವುದೇ ಸಂತುಲಿತವಾದ ವಿಧಿ-ನಿ ಯಮಗಳನ್ನು ಸಾದರ ಪಡಿಸಲು ವಿಫಲವಾಗಿದೆ.
ಏತನ್ಮದ್ಯೆ ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಶರೀಅತ್ ಕಾನೂನಿನ ಮೇಲೆ ಹಸ್ತಕ್ಷೇಪ ನಡೆಸು ವುದರ ಮೂಲಕ ಮುಸ್ಲಿಮರನ್ನು ಅತಂತ್ರರನ್ನಾಗಿಸಿ ತೇಜೋವಧೆಗೈಯ್ಯುವ ಪ್ರಯತ್ನದಲ್ಲಿದೆ.

ಈ ನಿಟ್ಟಿನಲ್ಲಿ ಸಮುದಾಯದ ಉತ್ತರ ದಾಯಿತ್ವವನ್ನು ಸ್ವೀಕರಿಸಿಕೊಂಡು ಸರಕಾರದ ಮುಂದೆ ಪ್ರತಿನಿಧಿಯಾಗಿ ನಿಲ್ಲುವ ಒಂದು ನಿರ್ಲಿಪ್ತ ಸಂಘಟನೆಯ ಅಗತ್ಯವಿದೆ. ಅದನ್ನು ದೇಶೀಯ ಮಟ್ಟದಲ್ಲಿ ಮಸೀದಿ ಒಕ್ಕೂಟಗಳನ್ನು ಸ್ಥಾಪಿಸುವುದರ ಮೂಲಕ ಸಾಧ್ಯವಾದೀತು. ಆ ಬಗ್ಗೆ ಸಮುದಾಯದೊಳಗೆ ಚಿಂತನ-ಮಂಥನ, ಚರ್ಚೆಗಳು ವ್ಯಾಪಕವಾಗಿ ನಡೆಯಬೇಕಾಗಿದ್ದು ಒಂದು ತೀರ್ಮಾನಕ್ಕೂ ಬರಬೇಕಾದ ಅಗತ್ಯವಿದೆ. ಒಂದು ಸಮುದಾಯವು ಸ್ವಯಂ ಬದಲಾಗದೆ ಅಲ್ಲಾಹನು ಅವರನ್ನು ಬದಲಿಸುವುದಿಲ್ಲ. (13:11)