ಅಣು ಒಪ್ಪಂದ ನಿಬಂಧನೆ ಪಾಲಿಸುವವರೆಗೂ ಇರಾನ್ ಮೇಲಿನ ಆರ್ಥಿಕ ದಿಗ್ಬಂಧನವನ್ನು ತೆರವುಗೊಳಿಸುವುದಿಲ್ಲ: ಜೊ ಬೈಡನ್

0
2393

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಫೆ.8: ಅಣು ಒಪ್ಪಂದದ ನಿಬಂಧನೆಯನ್ನು ಪಾಲಿಸುವವರೆಗೆ ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನವನ್ನು ತೆರವುಗೊಳಿಸಲಾಗದು ಎಂದು ಬೈಡನ್ ಹೇಳಿದರು. 2015ರಲ್ಲಿ ಮಾಡಿಕೊಂಡ ಅಣು ಒಪ್ಪಂದದ ನಿಬಂಧನೆಗಳನ್ನು ಇರಾನ್ ಪಾಲಿಸಬೇಕೆಂದು ಅವರು ಆಗ್ರಹಿಸಿದರು. ಸಿಬಿಎಸ್‍ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಅಣು ಒಪ್ಪಂದ ಮರುಸ್ಥಾಪನೆಗೆ ಮುಂಚೆ ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನ ತೆರವುಗೊಳಿಸಲು ಅಮೆರಿಕ ತಯಾರಾಗಬೇಕೆಂದು ಇರಾನ್‍ನ ಪರಮೋಚ್ಛ ನಾಯಕ ಆಯತುಲ್ಲ ಖಾಮ್‍ನಾಯಿ ಹೇಳಿದ್ದರು. ಜೊ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿ ಖಾಮ್‍ನಾಯಿ ಬಹಿರಂಗ ಪ್ರತಿಕ್ರಿಯೆ ನೀಡಿದ್ದಾರೆ. ಒಪ್ಪಂದ ನಿಬಂಧನೆಯನ್ನು ಇರಾನ್ ಪಾಲಿಸಬೇಕೆಂದು ಅಮೆರಿಕ ಬಯಸುವುದಿದ್ದರೆ ಎಲ್ಲ ದಿಗ್ಬಂಧಗಳನ್ನು ಹಿಂಪಡೆಯಬೇಕೆಂದು ಅವರು ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ಇರಾನ್‍ನೊಂದಿನ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಪಡಿಸಿದ್ದರು. ನಂತರ ಇರಾನ್ ಮೇಲೆ ದಿಗ್ಬಂಧವನ್ನು ಮರು ಹೇರಿಕೆ ಮಾಡಿತ್ತು. 2015ರಲ್ಲಿ ಜಾಗತಿಕ ರಾಷ್ಟ್ರಗಳು ಇರಾನ್ ಅಣು ಒಪ್ಪಂದದಲ್ಲಿ ಸಹಿಹಾಕಿದ್ದವು. ಒಪ್ಪಂದದ ಬಳಿಕ ವಿಶ್ವಸಂಸ್ಥೆಯ ದಿಗ್ಬಂಧನವನ್ನು ಟ್ರಂಪ್ ಸರಕಾರ ಪುನಃ ಆರಂಭಿಸಿತ್ತು. ಆದರೆ ವಿಶ್ವಸಂಸ್ಥೆಯ ಮೂಲಕ ದಿಗ್ಬಂಧನವನ್ನು ಹಾಕಿಸುವ ಯತ್ನದಲ್ಲಿ ಅಮೆರಿಕ ವಿಫಲವಾಗಿತ್ತು. ಅಮೆರಿಕ ಮಾತ್ರ ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧವನ್ನು ಘೋಷಿಸಿತ್ತು. ಅಮೆರಿಕದ ಕ್ರಮವನ್ನು ಫ್ರಾನ್ಸ್, ಇಂಗ್ಲೆಂಡ್ ,ಜರ್ಮನಿ ಮುಂತಾದ ಮಿತ್ರ ದೇಶಗಳು ವಿರೋಧಿಸಿದ್ದವು.