ಸನ್ಮಾರ್ಗ: ಸತ್ಯನಿಷ್ಠೆಗೆ 41 ವರ್ಷಗಳು

0
238

ಸನ್ಮಾರ್ಗ ಸಂಪಾದಕೀಯ

ಮಾಧ್ಯಮವು ಉದ್ಯಮ ಸ್ವರೂಪವನ್ನು ಪಡೆದಿರುವ ಈ ದಿನಗಳಲ್ಲಿ ಸತ್ಯನಿಷ್ಠೆ, ನ್ಯಾಯನಿಷ್ಠೆ, ಮೌಲ್ಯನಿಷ್ಠೆ ಇತ್ಯಾದಿಗಳನ್ನೆಲ್ಲ ಮಾಧ್ಯಮಗಳಿಂದ ಬಯಸುವುದು ಮತ್ತು ಹುಡುಕುವುದು ಬಾಲಿಶವಾಗಿ ಕಾಣಿಸುತ್ತದೆ. ಉದ್ಯಮವೊಂದರ ಬಹುಮುಖ್ಯ ಗುರಿಯೇನೆಂದರೆ, ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದು, ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪುವುದು ಮತ್ತು ಗ್ರಾಹಕರ ಬಯಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಮತ್ತು ಲಾಭಾಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ಪನ್ನದಲ್ಲಿ ಮಾರ್ಪಾಡುಗಳನ್ನು ಮಾಡುವುದು. ಒಂದು ಉತ್ಪನ್ನವು ರುಚಿಕಟ್ಟಾಗಿಲ್ಲ ಎಂಬುದು ಗಮನಕ್ಕೆ ಬಂದಾಗ ಅದನ್ನು ರುಚಿಕಟ್ಟಾಗಿಸುವ ರಾಸಾಯನಿಕಗಳನ್ನು ಬಳಸಿ ಗ್ರಾಹಕರಿಗೆ ರುಚಿಕಟ್ಟಾಗಿಸಿ ವಿತರಿಸುವುದು. ಇಲ್ಲಿ ಗ್ರಾಹಕರ ಆರೋಗ್ಯಕ್ಕಿಂತ ಉತ್ಪನ್ನದ ಮಾರಾಟವೇ ಬಹುಮುಖ್ಯ ಗುರಿ. ಇವತ್ತು ಗದ್ದೆಯಿಂದ ಹಿಡಿದು ಕೋಳಿಫಾರಮ್‍ನವರೆಗೆ ಈ ಬಗೆಯ ಅಪಾಯಕಾರಿ ಚಟುವಟಿಕೆಗಳು ನಡೆಯುತ್ತಿವೆ. ನಾಗರಿಕರಲ್ಲಿ ಅಕ್ಕಿ, ಗೋಧಿ, ರಾಗಿ ಇತ್ಯಾದಿ ಧಾನ್ಯಗಳು, ತರಕಾರಿಗಳು ಮತ್ತು ಹಣ್ಣು ಹಂಪಲುಗಳು ಮುಂತಾದ ಎಲ್ಲವುಗಳ ಬಗ್ಗೆಯೂ ಸಂದೇಹಗಳಿವೆ. ತಾವು ಬಳಸುವ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕಗಳಿವೆಯೇ ಎಂಬ ಭಯದೊಂದಿಗೆ ಮತ್ತು ಬಳಸದೇ ಉಪಾಯವಿಲ್ಲ ಎಂಬ ಅನಿವಾರ್ಯತೆಯೊಂದಿಗೆ ಬದುಕುತ್ತಿದ್ದಾರೆ. ದುರಂತ ಏನೆಂದರೆ,

ಇಂಥದ್ದೊಂದು ಇಕ್ಕಟ್ಟಿನ ಸ್ಥಿತಿ ಮಾಧ್ಯಮ ಕ್ಷೇತ್ರದ ಬಗ್ಗೆಯೂ ತಲೆದೋರಿರುವುದು. ಮಾಧ್ಯಮ ರಂಗವು ಇವತ್ತು ವಿಶ್ವಾಸಾರ್ಹತೆಯ ಅತ್ಯಂತ ಕೆಳಮಟ್ಟಕ್ಕೆ ತಲುಪಿಬಿಟ್ಟಿದೆ. ಪತ್ರಿಕೆಗಳು ಮತ್ತು ಟಿ.ವಿ.ಗಳನ್ನು ಜನರು ಸಂದೇಹದ ಮೊನೆಯಲ್ಲಿಟ್ಟೇ ತೂಗುತ್ತಿದ್ದಾರೆ. ಯಾವುದೇ ಒಂದು ಸುದ್ದಿ ಯಾವ ಯಾವ ಪತ್ರಿಕೆಯಲ್ಲಿ ಹೇಗ್ಹೇಗೆ ಪ್ರಕಟವಾಗಬಹುದು ಮತ್ತು ಯಾವ ಚಾನೆಲ್‍ನಲ್ಲಿ ಯಾವ್ಯಾವ ರೀತಿ ಬಿಂಬಿಸಲ್ಪಡಬಹುದು ಎಂಬುದನ್ನು ಮೊದಲಾಗಿಯೇ ಕಣಿ ಹೇಳುವಷ್ಟು ಮಾಧ್ಯಮ ರಂಗದ ಬಗ್ಗೆ ಜನರು ಭ್ರಮನಿರಸರಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಇಂಥ ಸ್ಥಿತಿಯಲ್ಲಿ, ಸತ್ಯನಿಷ್ಠೆ ಮತ್ತು ಮೌಲ್ಯನಿಷ್ಠೆಯನ್ನು ಪ್ರತಿಪಾದಿಸುವ ಯಾವುದೇ ಪತ್ರಿಕೆಯ ಮುಂದೆ ಹೆಚ್ಚು ಆಯ್ಕೆಗಳಿರುವುದಿಲ್ಲ. ಸನ್ಮಾರ್ಗ ಪ್ರತಿ ಸಂದರ್ಭದಲ್ಲೂ ಇಂಥ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ ಮತ್ತು ಏನೇ ಎದುರಾದರೂ ಸತ್ಯನಿಷ್ಠೆ ಮತ್ತು ಮೌಲ್ಯನಿಷ್ಠೆಯೊಂದಿಗೆ ರಾಜಿಯಾಗಲಾರೆ ಎಂಬ ತನ್ನ ಮೂಲಭೂತ ತತ್ವವನ್ನು ಎತ್ತಿ ಹಿಡಿಯುತ್ತಲೇ ಸಾಗಿದೆ. ಪತ್ರಿಕೆಗೆ 41 ವರ್ಷಗಳು ಪೂರ್ಣಗೊಂಡು 42ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲೂ ಪತ್ರಿಕೆ ಇದೇ ಭರವಸೆಯನ್ನು ಮತ್ತೊಮ್ಮೆ ಓದುಗರ ಮುಂದಿಡುತ್ತಿದೆ.

1978 ಎಪ್ರಿಲ್ 24ರಂದು ಸನ್ಮಾರ್ಗದ ಮೊದಲ ಸಂಚಿಕೆ ಬಿಡುಗಡೆಗೊಂಡಾಗ ಮಾರುಕಟ್ಟೆಯಲ್ಲಿ ಪತ್ರಿಕೆಗಳಿದ್ದುದು ಕಡಿಮೆ. ಅದರಲ್ಲೂ ಸನ್ಮಾರ್ಗದಂಥ ಪತ್ರಿಕೆಗಳು ಮತ್ತೂ ಕಡಿಮೆ. ಇವತ್ತಿನಂತೆ ಸಾರಿಗೆ ವ್ಯವಸ್ಥೆ, ಸಂವಹನ ಸೌಲಭ್ಯಗಳು ಲಭ್ಯವಿಲ್ಲದಿದ್ದ 41 ವರ್ಷಗಳ ಹಿಂದಿನ ಕಾಲದಲ್ಲಿ ಪತ್ರಿಕೆಯೊಂದನ್ನು ಪ್ರಾರಂಭಿಸುವುದೇ ಬಹುದೊಡ್ಡ ಸಾಹಸ. ವಾಟ್ಸಾಪ್, ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂ ಇತ್ಯಾದಿ ಇತ್ಯಾದಿ ಇಂಟರ್‍ನೆಟ್ ಆಧಾರಿತ ಆಧುನಿಕ ಸಂವಹನ ಸೌಲಭ್ಯಗಳು ಅಂದಿನ ಕಾಲಕ್ಕೆ ಅಪರಿಚಿತವಾಗಿತ್ತು. ಇವತ್ತಿನಂಥ ಮುದ್ರಣ ವ್ಯವಸ್ಥೆಗಳೂ ಅಂದು ಇರಲಿಲ್ಲ. ಅಕ್ಷರಸ್ಥರೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಪತ್ರಿಕೆಯನ್ನು ಸಾಗಿಸಬೇಕಾದುದಕ್ಕೆ ಇರುವ ತೊಡಕುಗಳೂ ಅನೇಕ. ಅಲ್ಲದೇ,

ಸತ್ಯ, ನ್ಯಾಯ, ಮೌಲ್ಯ ಇತ್ಯಾದಿ ದುಬಾರಿ ತತ್ವಗಳನ್ನು ಧ್ಯೇಯವಾಗಿಸಿಕೊಂಡು ಮಾರುಕಟ್ಟೆಗೆ ಬರುವ ಪತ್ರಿಕೆಯೊಂದು ಇತರ ಪತ್ರಿಕೆಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. `ಒಂದೋ ನನ್ನಂತಾಗು ಇಲ್ಲವೇ ಉಸಿರುಗಟ್ಟಿ ಸಾಯು’ ಎಂಬ ಸವಾಲನ್ನು ಅವು ಒಡ್ಡುತ್ತಲೇ ಇರುತ್ತವೆ. ಸನ್ಮಾರ್ಗಕ್ಕೆ ಕಳೆದ 4 ದಶಕಗಳುದ್ದಕ್ಕೂ ಈ ಸವಾಲು ಎದುರಾಗುತ್ತಲೇ ಬಂದಿದೆ. ಮಾರುಕಟ್ಟೆಯಲ್ಲಿರುವ ಪತ್ರಿಕೆಗಳನ್ನು ಮತ್ತು ಅವುಗಳ ದರಗಳನ್ನು ನೋಡಿಕೊಂಡು ಸನ್ಮಾರ್ಗವನ್ನು ತುಲನೆ ಮಾಡುವವರಿದ್ದಾರೆ. ಅವುಗಳ ಸೌಂದರ್ಯಕ್ಕೆ ಮಾರು ಹೋಗಿ ಸನ್ಮಾರ್ಗವನ್ನು ತೂಗುವವರಿದ್ದಾರೆ. ಅವುಗಳ ಪುಟಗಳನ್ನು ಲೆಕ್ಕ ಹಾಕಿಕೊಂಡು ಸನ್ಮಾರ್ಗವನ್ನು ಅಳೆಯುವವರಿದ್ದಾರೆ. ಹಾಗಂತ ಇವೆಲ್ಲ ತಪ್ಪೂ ಅಲ್ಲ, ಅಸಹಜವೂ ಅಲ್ಲ. ಮಾಧ್ಯಮ ರಂಗವು ತನ್ನ ನಿಷ್ಠೆಯನ್ನು ಮೌಲ್ಯದ ಬದಲು ಹಣದ ಮೇಲೆ ಕೇಂದ್ರೀಕರಿಸಿರುವಾಗ ಓದುಗರೂ ಅದರಿಂದ ಪ್ರಭಾವಿತಗೊಳ್ಳುವುದು ಸಹಜ. ಆದರೆ,

ಸನ್ಮಾರ್ಗ ಅವುಗಳಂತೆ ಅಲ್ಲ. ಸನ್ಮಾರ್ಗವನ್ನು ಪ್ರಕಟಿಸುವಾಗ ಇದ್ದ ಧ್ಯೇಯ ಏನೆಂದರೆ, ಸತ್ಯಕ್ಕೆ ನಿಷ್ಠವಾಗಿರುವ ಸುದ್ದಿ-ವಿಶ್ಲೇಷಣೆಗಳು ಜನರಿಗೆ ತಲುಪಬೇಕು ಎಂಬುದಾಗಿತ್ತು ಮತ್ತು ಮೌಲ್ಯವನ್ನು ಮೆಚ್ಚುವ ಹಾಗೂ ಪ್ರಾಮಾಣಿಕತೆಗೆ ನಿಷ್ಠವಾಗಿರುವ ಸಮಾಜವನ್ನು ಕಟ್ಟುವುದು ಆಗಿತ್ತು. ನಿಜವಾಗಿ, ಇಂಥದ್ದೊಂದು ಧ್ಯೇಯವು ಕೆಲವು ದುಬಾರಿ ಷರತ್ತುಗಳನ್ನು ವಿಧಿಸುತ್ತದೆ. ಮದ್ಯಪಾನದ ಜಾಹೀರಾತನ್ನು ಒಂದು ಪುಟದಲ್ಲಿ ಪ್ರಕಟಿಸಿ ಇನ್ನೊಂದು ಪುಟದಲ್ಲಿ ಮದ್ಯವಿರೋಧಿ ಲೇಖನವನ್ನು ಪ್ರಕಟಿಸುವುದಕ್ಕೆ ಈ ಷರತ್ತು ಅನುಮತಿಸುವುದಿಲ್ಲ. ಬಡ್ಡಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಡ್ಡಿ ಆಧಾರಿತ ಬ್ಯಾಂಕ್‍ನ ಜಾಹೀರಾತನ್ನು ಪ್ರಕಟಿಸುವುದು ಈ ಷರತ್ತಿನ ಪ್ರಕಾರ ಅಪರಾಧ. ಕೋಮುವಾದವನ್ನು ಧರ್ಮದ ಹಂಗಿಲ್ಲದೇ ಖಂಡಿಸುವುದು, ಸೌಹಾರ್ದತೆಯನ್ನು ಉಳಿಸಿ ಬೆಳೆಸುವುದಕ್ಕೆ ಆದ್ಯತೆ ಕೊಡುವುದು; ಅನ್ಯಾಯ, ಅಕ್ರಮ, ಅತ್ಯಾಚಾರ, ಹತ್ಯಾಕಾಂಡ ಇತ್ಯಾದಿಗಳನ್ನು ಧರ್ಮಾಧಾರಿತವಾಗಿ ನೋಡದೇ ಇರುವುದು; ದೇಶದ ಒಳಿತು ಮತ್ತು ಸಮಾಜದ ಒಳಿತಿಗೆ ಒತ್ತು ಕೊಟ್ಟು ಬರೆಯುವುದು; ಸರ್ವಧರ್ಮಗಳೂ ಒಪ್ಪುವ ಕೆಡುಕುಗಳ ನಿರ್ಮೂಲನೆಗೆ ನಾಗರಿಕ ಮನಸ್ಸುಗಳನ್ನು ಸಜ್ಜುಗೊಳಿಸುವುದು; ಭ್ರಷ್ಟಾಚಾರ, ಲೈಂಗಿಕ ಅರಾಜಕತೆ, ಜನಾಂಗೀಯತೆ, ಅಸಮಾನತೆ, ಅಸ್ಪೃಶ್ಯತೆ, ಮಹಿಳಾ ಕಡೆಗಣನೆ, ಅಂಧವಿಶ್ವಾಸ ಇತ್ಯಾದಿ ಇತ್ಯಾದಿ ವಿಷಯಗಳಲ್ಲಿ ರಾಜಿಮಾಡಿಕೊಳ್ಳುವುದಕ್ಕೂ ಈ ಷರತ್ತು ಅವಕಾಶ ನೀಡುವುದಿಲ್ಲ. ಇದರ ಜೊತೆಗೇ ಇದ್ದ ಇನ್ನೊಂದು ಪ್ರಮುಖ ಷರತ್ತು ಏನೆಂದರೆ, ಜನರಿಗೆ ಅವರ ಬದುಕಿನ ನೈಜ ಉದ್ದೇಶವನ್ನು ಮನವರಿಕೆ ಮಾಡಿಸುವುದು ಮತ್ತು ಅವರ ನೈಜ ಒಡೆಯನನ್ನು ಪರಿಚಯಿಸುವುದು. ನಿಜವಾಗಿ,

ಯಾವುದೇ ಪತ್ರಿಕೆಯ ಪಾಲಿಗೆ ಈ ಬಗೆಯ ಷರತ್ತುಗಳು ಮೌಂಟ್ ಎವರೆಸ್ಟನ್ನು ಏರುವಷ್ಟೇ ಸವಾಲಿನದ್ದು. ಸನ್ಮಾರ್ಗ ಕಳೆದ ನಾಲ್ಕು ದಶಕಗಳಲ್ಲಿ ಈ ಸವಾಲನ್ನು ಮೀರಿ ಬೆಳೆಯುವುದಕ್ಕೆ ಪ್ರಯತ್ನಿಸುತ್ತಲೇ ಇದೆ. ಮಾತ್ರವಲ್ಲ, ಸತ್ಯಕ್ಕೆ ನಿಷ್ಠವಾದ ಪತ್ರಿಕೆಯೊಂದು ದೀರ್ಘಕಾಲ ಉಳಿಯುವುದಕ್ಕೂ ಸಾಧ್ಯ ಅನ್ನುವುದನ್ನು ಈ ಕಳೆದ ನಾಲ್ಕು ದಶಕಗಳಲ್ಲಿ ಸಾಬೀತುಪಡಿಸುತ್ತಲೂ ಇದೆ. ಆದರೆ,

ಮಾಧ್ಯಮ ಕ್ಷೇತ್ರದಲ್ಲಿ ಇವತ್ತು ಆಗಿರುವ ಅಭೂತಪೂರ್ವ ಬದಲಾವಣೆಗಳು ಮೌಲ್ಯನಿಷ್ಠೆಗೆ ಬದ್ಧವಾಗಿರುವ ಯಾವುದೇ ಪತ್ರಿಕೆಯ ಪಾಲಿಗೂ ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ ಎಂಬುದೂ ಸುಳ್ಳಲ್ಲ. ಸತ್ಯ, ನ್ಯಾಯ, ಮೌಲ್ಯ ಇತ್ಯಾದಿ ತತ್ವಗಳನ್ನು ಪ್ರತಿಪಾದಿಸುತ್ತಾ ಮತ್ತು ಅದಕ್ಕೆ ಬದ್ಧತೆ ತೋರುತ್ತಾ ಪ್ರಕಟವಾಗುವ ಯಾವ ಪತ್ರಿಕೆಯೂ ಸುರಕ್ಷಿತವಲ್ಲ ಎಂಬ ಸನ್ನಿವೇಶವನ್ನು ಮಾಧ್ಯಮ ಕ್ಷೇತ್ರದ ಇವತ್ತಿನ ‘ರಾಜಿ’ ಮನೋಭಾವವು ಸೃಷ್ಟಿಸಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸನ್ಮಾರ್ಗ ಸತ್ಯನಿಷ್ಠರಾದ ಓದುಗರ ಮೇಲೆಯೇ ಭರವಸೆ ಇರಿಸುತ್ತದೆ. ಸನ್ಮಾರ್ಗ ಜನರ ಪತ್ರಿಕೆ. ಲಾಭ ಈ ಪತ್ರಿಕೆಯ ಉದ್ದೇಶ ಅಲ್ಲ. ಸ್ವಸ್ಥ ಮತ್ತು ಸಂತುಲಿತ ಸಮಾಜದ ನಿರ್ಮಾಣವೇ ಈ ಪತ್ರಿಕೆಯ ಪಾಲಿನ ಲಾಭ. ಆದ್ದರಿಂದ, ಸನ್ಮಾರ್ಗವನ್ನು ಖರೀದಿಸುವುದು ಮತ್ತು ನಿಮ್ಮವರಿಗೂ ಪರಿಚಯಿಸುವುದೇ ಈ ಲಾಭದ ವ್ಯವಹಾರದಲ್ಲಿ ನೀವು ಹೂಡಬಹುದಾದ ಅತ್ಯುತ್ತಮ ಬಂಡವಾಳ. ಈ ಹೂಡಿಕೆ ನಿಮಗೆ ದುಬಾರಿಯಾಗದು ಎಂಬ ನಿರೀಕ್ಷೆ ನಮ್ಮದು. ಎಲ್ಲರಿಗೂ 42ನೇ ವರ್ಷದ ಶುಭಾಶಯಗಳು.