ಪೌರತ್ವ ಮಸೂದೆ: ಸಂಚು, ಪಿತೂರಿ, ದುರುದ್ದೇಶ, ಸಂವಿಧಾನ ವಿರೋಧಿ ಮತ್ತೂ…

0
1089

ಸನ್ಮಾರ್ಗ ಸಂಪಾದಕೀಯ

ಅಸ್ಸಾಮ್‍ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ (NRC) ಆದೇಶಿಸಿದ್ದು ಸುಪ್ರೀಮ್ ಕೋರ್ಟು. ಆ ಇಡೀ ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡದ್ದೇ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್. ಅಲ್ಲದೇ, ಕೇಂದ್ರ ಸರಕಾರ ಮತ್ತು ಅಸ್ಸಾಮ್‍ನ ರಾಜ್ಯ ಸರಕಾರಗಳು ಈ ನೋಂದಣಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಇವೆರಡೂ ಬಿಜೆಪಿ ಸರಕಾರಗಳೇ. ಇಷ್ಟಿದ್ದೂ ಅಸ್ಸಾಮ್‍ನಲ್ಲಿ ಪುನಃ NRC ನಡೆಸಲಾಗುವುದು ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಅರ್ಥವೇನು? ಅವರು ಏನನ್ನು ಬಯಸುತ್ತಿದ್ದಾರೆ? ಒಂದುವೇಳೆ, ಕೇಂದ್ರದಲ್ಲಿ ಅಥವಾ ಅಸ್ಸಾಮ್‍ನಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಇದ್ದಿರುತ್ತಿದ್ದರೆ NRC ಬಗೆಗಿನ ಅಪಸ್ವರವನ್ನು ಪರಾಮರ್ಶೆಗೆ ಒಡ್ಡಬಹುದಿತ್ತು. ಆದರೆ, ಅದಕ್ಕೂ ಈಗ ಆಸ್ಪದವಿಲ್ಲ. ಹೀಗಿರುವಾಗ, ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರ ನಿರ್ಗಮನದ ಬಳಿಕ ಅಮಿತ್ ಶಾ ಹೀಗೆ ಹೇಳಿರುವುದನ್ನು ಏನೆಂದು ಅರ್ಥೈಸಬೇಕು?

ಅಸ್ಸಾಮ್‍ನಲ್ಲಿ NRCಯ ಅಂತಿಮ ಪಟ್ಟಿ ಬಿಡುಗಡೆಗೊಂಡು ತಿಂಗಳುಗಳೇ ಕಳೆದಿವೆ. 19 ಲಕ್ಷ ಮಂದಿಯ ಪೌರತ್ವವನ್ನು ಅಮಾನತಿನಲ್ಲಿ ಇಡಲಾಗಿದೆ. ಇದೀಗ ಮತ್ತೆ ಅಸ್ಸಾಮ್‍ನಲ್ಲಿ NRC ಕೈಗೊಳ್ಳುವುದೆಂದರೆ, ಸುಪ್ರೀಮ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆದ NRCಯನ್ನು ಅಸಮರ್ಪಕ ಎಂದು ಘೋಷಿಸಿದಂತಲ್ಲವೇ? ಇದು ಸುಪ್ರೀಮ್ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ? ಅಮಿತ್ ಶಾ ಅವರು ಈ ಹೇಳಿಕೆಯನ್ನು ಕೊಡುವುದಕ್ಕೆ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ಹುದ್ದೆಯಿಂದ ನಿರ್ಗಮಿಸುವವರೆಗೆ ಕಾದದ್ದೇಕೆ?

ಅಸ್ಸಾಮ್‍ನ NRCಗೆ ದೀರ್ಘ ಹಿನ್ನೆಲೆಯಿದೆ. ಬಾಂಗ್ಲಾ ಮತ್ತು ಅಸ್ಸಾಮ್‍ಗಳು 1947ರ ವರೆಗೆ ಜೊತೆಯಾಗಿಯೇ ಇದ್ದ ಭೂಪ್ರದೇಶ. ಭಾರತ ಎಂಬ ಒಂದೇ ದೇಶದ ಪ್ರದೇಶಗಳಾಗಿ ಅವು ಅಸ್ತಿತ್ವದಲ್ಲಿದ್ದುವು. ಕರುಳಬಳ್ಳಿ ಸಂಬಂಧದೊಂದಿಗೆ ಅಲ್ಲಿಯ ಜನರು ಬದುಕುತ್ತಿದ್ದರು. 1947ರಲ್ಲಿ ಭಾರತವು ಹೇಗೆ ಇಬ್ಭಾಗವಾಯಿತೋ ಮತ್ತು ಇಬ್ಭಾಗವಾದ ಭೂಮಿ ಹೇಗೆ ಪಾಕಿಸ್ತಾನವಾಗಿ ಗುರುತಿಸಿಕೊಂಡಿತೋ ಆ ಪಾಕಿಸ್ತಾನದಲ್ಲಿ ಈಗಿನ ಬಾಂಗ್ಲಾವೂ ಇತ್ತು. ಹಾಗಂತ, ಒಂದೇ ಆಗಿದ್ದ ಭೂಮಿಯನ್ನು ಭಾರತ-ಪಾಕ್ ಎಂದು ವಿಭಜಿಸಿದ ತಕ್ಷಣ, ಜನರ ನಡುವಿನ ಸಂಬಂಧಗಳು ವಿಭಜನೆಗೊಳ್ಳುವುದಕ್ಕೆ ಸಾಧ್ಯವಿಲ್ಲ. ಅಣ್ಣ ಭಾರತದಲ್ಲಾದರೆ ಅಕ್ಕ ಪಾಕಿಸ್ತಾನದಲ್ಲಿ. ತಂದೆ-ತಾಯಿ ಭಾರತದಲ್ಲಾದರೆ, ಮಕ್ಕಳು ಪಾಕಿಸ್ತಾನದಲ್ಲಿ. ಮಾವ ಪಾಕಿಸ್ತಾನದಲ್ಲೂ ಅಳಿಯ ಭಾರತದಲ್ಲೂ ಇರುವಂತಹ ಸ್ಥಿತಿಯೂ ನಿರ್ಮಾಣವಾಯಿತು. ಕೊನೆಗೆ ಪಾಕಿಸ್ತಾನದಲ್ಲಾದ ರಾಜಕೀಯ ಸಂಘರ್ಷದ ಫಲಿತಾಂಶವಾಗಿ ಆ ಭೂಮಿಯೂ ವಿಭಜನೆಗೊಂಡು ಬಾಂಗ್ಲಾದೇಶವೆಂಬ ಸ್ವತಂತ್ರ ರಾಷ್ಟ್ರ ನಿರ್ಮಾಣವಾಯಿತು. ಆಗಲೂ ಜನರ ನಡುವೆ ಇದೇ ರೀತಿಯ ವಿಭಜನೆಗಳು ನಡೆದುವು. ನಿಜವಾಗಿ,

ಈ ವಿಭಜನೆ, ಸಂಘರ್ಷ, ರಾಜಕೀಯ ಸ್ವಾರ್ಥಗಳನ್ನೆಲ್ಲ ಜನರ ಬೇಡಿಕೆ ಎಂದು ಹೇಳುವಂತಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶಗಳಿದ್ದುವು. ನಾಯಕರ ಸ್ವಾರ್ಥಗಳಿದ್ದುವು. ಸಾಮ್ರಾಜ್ಯಶಾಹಿ ಕುತಂತ್ರಗಳಿದ್ದುವು. ಆದರೆ ಈ ಎಲ್ಲದರ ಅಡ್ಡಪರಿಣಾಮವನ್ನು ಬಡಪಾಯಿ ಜನರೇ ಅನುಭವಿಸಬೇಕಾಯಿತು. ಅವರು ಸಂಘರ್ಷ ಭರಿತ ಪಾಕ್ ಮತ್ತು ಬಾಂಗ್ಲಾದಿಂದ ತಾವು ಈ ಹಿಂದೆ ವಾಸಿಸಿದ್ದ ಭೂಮಿಗೇ ಮರಳಿ ಬಂದರು. ಅಸ್ಸಾಮ್‍ನಲ್ಲಿರುವ ತಮ್ಮ ಬಂಧುಗಳು, ನೆರೆಕರೆಯವರೊಂದಿಗೆ ಸಹಜವಾಗಿ ಸೇರಿಕೊಂಡರು. ಭೂಮಿಗೆ ಬೇಲಿ ಬಿದ್ದಿದ್ದರೂ ಸಂಬಂಧಗಳಿಗೆ ಬೇಲಿ ಹಾಕಲು ಭೂಮಿಯನ್ನು ತುಂಡು ಮಾಡಿದವರಿಗೆ ಸಾಧ್ಯವಿರಲಿಲ್ಲ. ಆದರೆ,

ಈ ವಲಸೆ ಪ್ರಕ್ರಿಯೆಯು ಅಭೂತಪೂರ್ವ ಮಟ್ಟದಲ್ಲಿ ನಡೆದಾಗ ಮತ್ತು ಅಸ್ಸಾಮ್‍ನ ಜನಸಂಖ್ಯಾ ಲೆಕ್ಕಾಚಾರವನ್ನೇ ಬುಡಮೇಲುಗೊಳಿಸುವ ಭೀತಿ ವ್ಯಕ್ತವಾದಾಗ ಚಳವಳಿ ಹುಟ್ಟಿಕೊಂಡಿತು. ವಲಸಿಗರ ವಿರುದ್ಧ ಸ್ಥಳೀಯರ ಪ್ರತಿಭಟನೆ ಪ್ರಾರಂಭವಾಯಿತು. ಇವರೊಂದಿಗೆ ರಾಜಕೀಯವೂ ಸೇರಿಕೊಂಡು ಒಟ್ಟು ವಾತಾವರಣವೇ ಕಲುಷಿತಗೊಳ್ಳುವ ಸೂಚನೆ ಸಿಕ್ಕಿತು. ಇದರ ಪರಿಣಾಮವಾಗಿ 1985ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಒಪ್ಪಂದಕ್ಕೆ ಬಂದುವು. 1971 ಮಾರ್ಚ್ 25ಕ್ಕಿಂತ ಮೊದಲು ಯಾರು ಅಸ್ಸಾಮ್‍ನಲ್ಲಿ ನೆಲೆಸಿದ್ದರೋ ಮತ್ತು ಆ ಬಗ್ಗೆ ಯಾರಲ್ಲಿ ದಾಖಲೆ ಪತ್ರಗಳು ಇವೆಯೋ ಅವರು ಭಾರತೀಯರು ಮತ್ತು ಉಳಿದವರು ಗಡೀಪಾರಿಗೆ ಅರ್ಹರು ಎಂದು ಒಪ್ಪಂದದಲ್ಲಿ ನಿರ್ಧರಿಸಲಾಯಿತು. ಅದನ್ನೇ ಆಧರಿಸಿ ಅಸ್ಸಾಮ್‍ನಲ್ಲಿ NRC ನಡೆದಿದೆ. ಸುಪ್ರೀಮ್ ಕೋರ್ಟೇ ಇದಕ್ಕೆ ನೇತೃತ್ವವನ್ನು ನೀಡಿದೆ. ಆದರೆ, ಇಷ್ಟೆಲ್ಲ ನಡೆದೂ ಈಗ ಪುನಃ ಅಸ್ಸಾಮ್‍ನಲ್ಲಿ NRC ನಡೆಸುವುದೆಂದರೆ ಅದರ ಹಿಂದೆ ರಾಜಕೀಯ ದುರುದ್ದೇಶ ಇದೆ ಅನ್ನುವುದು ಸ್ಪಷ್ಟ. ಈ ದುರುದ್ದೇಶವನ್ನು ಅಮಿತ್ ಶಾ ಅಡಗಿಸಿಯೂ ಇಲ್ಲ. ‘ಪೌರತ್ವ ತಿದ್ದುಪಡಿ ಮಸೂದೆ’(CAB)ಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಿಕೊಂಡ ಬಳಿಕ ಅಸ್ಸಾಮ್‍ನಲ್ಲಿ ಮತ್ತು ಇಡೀ ದೇಶದಲ್ಲೂ NRC ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಎಂಬುದು ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಭಾರತೀಯ ಪೌರತ್ವವನ್ನು ಖಾತರಿಪಡಿಸುವ ವ್ಯವಸ್ಥೆ. 2014ರ ಕೊನೆಯವರೆಗೆ ಬಾಂಗ್ಲಾ, ಪಾಕ್, ಅಫಘಾನ್‍ನಿಂದ ಧಾರ್ಮಿಕ ದೌರ್ಜನ್ಯದ ಕಾರಣದಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲದ ಎಲ್ಲರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಈ ಮಸೂದೆಯ ಉದ್ದೇಶ. ಈ ಮೇಲಿನ ಮೂರೂ ರಾಷ್ಟ್ರಗಳು ಮುಸ್ಲಿಮ್ ಬಹುಸಂಖ್ಯಾತವಾಗಿರುವುದರಿಂದ ಅಲ್ಲಿಂದ ಬಂದಿರುವ ಮುಸ್ಲಿಮರಿಗೆ ಈ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಹಾಗಿದ್ದರೆ ಬೌದ್ಧ ಬಹುಸಂಖ್ಯಾತವಾಗಿರುವ ಮ್ಯಾನ್ಮಾರ್ ನಿಂದ ಭಾರತಕ್ಕೆ ಬಂದ ಮುಸ್ಲಿಮರಿಗೆ ಯಾಕೆ ಈ ಪೌರತ್ವವನ್ನು ನೀಡಬಾರದು ಅನ್ನುವ ಪ್ರಶ್ನೆಗೆ ಈ ಸರಕಾರ ತೃಪ್ತಿದಾಯಕ ಉತ್ತರವನ್ನು ಈವರೆಗೂ ನೀಡಿಲ್ಲ. ನಿಜವಾಗಿ,

ಪೌರತ್ವ ತಿದ್ದುಪಡಿ ಮಸೂದೆ (CAB)ಯೇ ಸಂವಿಧಾನ ವಿರೋಧಿ. ಸಂವಿಧಾನದ 14ನೇ ಪರಿಚ್ಛೇದವು ನೀಡುವ ಸಮಾನತೆ ಮತ್ತು ಸಮಾನ ಸಂರಕ್ಷಣೆ ಎಂಬ ಖಾತರಿಯನ್ನು ಇದು ಸಂಪೂರ್ಣ ಉಲ್ಲಂಘಿಸುತ್ತದೆ. ಮುಸ್ಲಿಮರನ್ನು ಗುರಿ ಮಾಡುವುದೇ ಈ ಮಸೂದೆಯ ಉದ್ದೇಶ ಅನ್ನುವುದು ಸುಲಭವಾಗಿಯೇ ಗೊತ್ತಾಗುತ್ತದೆ. ಸಂವಿಧಾನ ವಿರೋಧಿ ಮಸೂದೆಯೊಂದನ್ನು ಹಿಡಿದುಕೊಂಡು ದೇಶದಾದ್ಯಂತ NRCಗೆ ಹೊರಡುವುದು ಬಹುತ್ವ ವಿರೋಧಿ, ಅತಾರ್ಕಿಕ ಮತ್ತು ಮನುಷ್ಯ ವಿರೋಧಿ. ಅಸ್ಸಾಮ್‍ನಲ್ಲಿ ಮರು NRCಗೆ ಕೇಂದ್ರ ಸರಕಾರ ತೀರ್ಮಾನಿಸಿರುವುದೇ ಈ ಪ್ರಕ್ರಿಯೆ ಎಷ್ಟು ದೋಷಪೂರ್ಣ ಅನ್ನುವುದನ್ನು ಹೇಳುತ್ತದೆ. ಅಸ್ಸಾಮ್‍ನ ಅಂತಿಮ ಪೌರತ್ವ ಪಟ್ಟಯಿಂದ ಹೊರಗಿರುವ 19 ಲಕ್ಷದಲ್ಲಿ ಸುಮಾರು 13 ಲಕ್ಷ ಮಂದಿ ಹಿಂದೂ ವಲಸಿಗರು ಎಂಬುದು ಬಹಿರಂಗವಾಗಿದೆ. ಇವರೆಲ್ಲರನ್ನೂ ದೇಶರಹಿತರು ಎಂದು ಘೋಷಿಸಿಬಿಟ್ಟರೆ ತನ್ನ ರಾಜಕೀಯ ವರ್ಚಸ್ಸಿಗೆ ಧಕ್ಕೆ ತಗುಲೀತು ಎಂಬ ಭಯದಿಂದ ಬಿಜೆಪಿಯು ಮರು ಓಖಅಗೆ ಮನಸು ಮಾಡಿದೆ. ತನಗೆ ಬೇಕಾದ ಫಲಿತಾಂಶವನ್ನು ಪಡಕೊಳ್ಳುವ ದೃಷ್ಟಿಯಿಂದ ಮೊದಲು ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ ಬಳಿಕ ಈ NRCಗೆ ಅದು ಮುಂದಾಗುವ ಸೂಚನೆ ನೀಡಿದೆ. ಕೇವಲ ಅಸ್ಸಾಮ್‍ನಲ್ಲಿ ಮಾತ್ರ ಮರು NRC ಮಾಡುವುದರಿಂದ ವ್ಯಕ್ತವಾಗಬಹುದಾದ ಟೀಕೆಗಳನ್ನು ತಪ್ಪಿಸುವುದಕ್ಕಾಗಿ ಇಡೀ ಭಾರತದಲ್ಲೇ NRC ಮಾಡಲಾಗುವುದು ಎಂಬ ಹೇಳಿಕೆಯನ್ನು ಅವರು ಕೊಟ್ಟಂತಿದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಒತ್ತಡವನ್ನು ಮೀರುವ ತಂತ್ರ. ದೇಶದಾದ್ಯಂತ NRC ಮಾಡುವಾಗ ಸಹಜವಾಗಿಯೇ ಅಸ್ಸಾಮ್‍ನಲ್ಲೂ NRC ಮಾಡಲಾಗುತ್ತದೆ ಎಂದು ಹೇಳಿ ಸುಪ್ರೀಮ್‍ನಲ್ಲಿ ದಕ್ಕಿಸಿಕೊಳ್ಳುವುದಕ್ಕೆ ಹೂಡಿರುವ ಸಂಚು. ನಿಜವಾಗಿ,

ದೇಶದಾದ್ಯಂತ NRC ಎಂಬುದೇ ಒಂದು ದುರುದ್ದೇಶದ ನಡೆ. ಪೌರತ್ವ ತಿದ್ದುಪಡಿ ಮಸೂದೆಯಂತೂ ಸಂವಿಧಾನ ವಿರೋಧಿ ಮತ್ತು ಸಮಾಜ ವಿರೋಧಿ. ಅಂದಹಾಗೆ, ಅಸ್ಸಾಮ್‍ನ NRCಗೆ ಸುಪ್ರೀಮ್ ಕೋರ್ಟೇ ಒಪ್ಪಿಕೊಂಡಿರುವ 1971 ಮಾರ್ಚ್ 25 ಎಂಬ ಅಂತಿಮ ದಿನಾಂಕವಾದರೂ (Cut off date) ಇದೆ. ಆದರೆ ಇಡೀ ದೇಶಕ್ಕೆ ಸಂಬಂಧಿಸಿ ಇಂಥ ದಿನಾಂಕವನ್ನು ನಿರ್ಧರಿಸುವುದು ಹೇಗೆ? ಯಾವ ರಾಜ್ಯಕ್ಕೆ ಯಾವ ದಿನಾಂಕ? ಅದರ ಮಾನದಂಡ ಏನು? ಇದು ಸುಲಭ ಅಲ್ಲ. ಕೇಂದ್ರದ ಈ ನಿರ್ಧಾರದಲ್ಲಿ ಪ್ರಾಮಾಣಿಕತೆಯೂ ಇಲ್ಲ.