ನಾವು ಮಣಿಸಬೇಕಾಗಿರುವ ನಮ್ಮೊಳಗಿನ ವೈರಸ್ಸು

0
1759

ಸನ್ಮಾರ್ಗ ಸಂಪಾದಕೀಯ

ಮನುಷ್ಯನಿಗೆ ಸಂಬಂಧಿಸಿ ಅತಿ ಹೆಚ್ಚು ಅಮಾನವೀಯವಾಗಿ ನಡೆದುಕೊಂಡಿರುವುದು ಯಾರು ಅನ್ನುವ ಬಹುಮುಖ್ಯವಾದ ಪ್ರಶ್ನೆಗೆ ಕೊರೋನಾ ಮತ್ತೊಮ್ಮೆ ಜೀವವನ್ನು ಕೊಟ್ಟಿದೆ. ಮನುಷ್ಯರ ಪ್ರಾಣಗಳಿಗೆ ಎರಡು ವಿಧದಲ್ಲಿ ಅಪಾಯಗಳು ಎದುರಾಗುತ್ತವೆ.

ಒಂದು- ನಿಸರ್ಗದತ್ತವಾದುದು.

ಎರಡು- ಮಾನವ ಜನ್ಯವಾದುದು.

ಸಾಂಕ್ರಾಮಿಕ ರೋಗಗಳು, ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿಗಳು ಮಾನವ ನಿಯಂತ್ರಣವನ್ನು ಮೀರಿದ್ದಾಗಿದೆ. ಇವುಗಳಲ್ಲಿ ಮನುಷ್ಯನ ನೇರಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಮನುಷ್ಯ ನೇರವಾಗಿ ಸುನಾಮಿಯನ್ನು ಉತ್ಪಾದಿಸುವುದಿಲ್ಲ. ಭೂಕಂಪನವನ್ನು ಹುಟ್ಟುಹಾಕಿ ಸಂಭ್ರಮಿಸುವುದಿಲ್ಲ. ಕೊರೋನಾವಾಗಲಿ, ಪ್ಲೇಗ್, ಸ್ಪಾನಿಶ್ ಫ್ಲೂ, ನಿಫಾ ಯಾವುದೇ ಇರಲಿ, ಮನುಷ್ಯ ಉದ್ದೇಶಪೂರ್ವಕವಾಗಿ ಅದನ್ನು ಉತ್ಪಾದಿಸಿ ಹಂಚುವುದಿಲ್ಲ. ಹಾಗಂತ,

ಇವುಗಳಲ್ಲಿ ಮನುಷ್ಯನ ಪರೋಕ್ಷ ಪಾತ್ರವನ್ನು ಸಂಪೂರ್ಣವಾಗಿ ನಿರಾಕರಿಸುವ ಹಾಗೆಯೇ ಇಲ್ಲ. ನಿಸರ್ಗದ ಮೇಲೆ ಮನುಷ್ಯ ನಡೆಸುವ ಅತ್ಯಾಚಾರವಾಗಲಿ, ಪ್ರವಾಹ, ಭೂಕಂಪ, ಸುನಾಮಿ ಇತ್ಯಾದಿಗಳಿಗೆ ಕಾರಣ ಎಂದು ತಜ್ಞರು ಹೇಳುವುದಿದೆ. ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ ಮತ್ತು ಗಣಿಗಾರಿಕೆಗಾಗಿ ಭೂಮಿಯನ್ನು ಕೊರೆಯಲಾಗುತ್ತದೆ. ಸ್ಫೋಟಕಗಳನ್ನು ಸಿಡಿಸಲಾಗುತ್ತದೆ. ನಗರ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲಾಗುತ್ತದೆ. ಗುಡ್ಡಗಳನ್ನು ಕಡಿದು ಬೇಕಾಬಿಟ್ಟಿ ರೆಸಾರ್ಟ್‍ಗಳನ್ನು ನಿರ್ಮಿಸಿರುವುದಕ್ಕೂ ಕೊಡಗಿನ ಪ್ರವಾಹಕ್ಕೂ ಸಂಬಂಧ ಇದೆ ಎಂಬ ವಾದ ಇದೆ. ಜಾಗತಿಕ ತಾಪಮಾನವನ್ನು ಏರಿಸಿರುವುದರಲ್ಲಿ, ಪರಿಸರವನ್ನು ಕೆಡಿಸಿರುವುದರಲ್ಲಿ ಮತ್ತು ಅಣುಬಾಂಬ್‍ಗಳಂತಹ ಮಾರಕ ಸಮೂಹ ನಾಶಕ ಅಸ್ತ್ರಗಳ ಪರೀಕ್ಷೆಯಲ್ಲಿ- ಹೀಗೆ ಮಾನವ ಅನೂಚಾನೂಚವಾಗಿ ಪ್ರಕೃತಿಯ ಮೇಲೆ ಹಸ್ತಕ್ಷೇಪ ನಡೆಸುತ್ತಾ ಬಂದಿರುವುದರ ಒಟ್ಟು ಫಲಿತಾಂಶವೇ ನಿಸರ್ಗದತ್ತ ಅವಗಢಗಳು ಎಂದು ಹೇಳುವುದಿದೆ. ಇವು ಏನೇ ಇದ್ದರೂ,

ಈ ಎಲ್ಲ ಕೃತ್ಯಗಳಲ್ಲಿ ಬಹುತೇಕ ಎಲ್ಲ ಮನುಷ್ಯರ ಪಾತ್ರ ಇರುತ್ತದೆ. ಇದರಲ್ಲಿ ಕೆಲವರು ದೊಡ್ಡ ಪಾತ್ರವನ್ನು ನಿರ್ವಹಿಸಿದ್ದರೆ, ಬಹುಸಂಖ್ಯಾತರು ಇದಕ್ಕೆ ಸಣ್ಣ ಕೊಡುಗೆಯನ್ನಾದರೂ ನೀಡಿರುತ್ತಾರೆ. ಅಧಿಕಾರಕ್ಕೆ ಬಂದರೆ ಹೈಡ್ರೋಜನ್ ಬಾಂಬ್ ತಯಾರಿಸುವೆ ಎಂದು ಘೋಷಿಸುವ ಪಕ್ಷಕ್ಕೆ ಮತ ಹಾಕುವುದೂ ಈ ಕೊಡುಗೆಗಳಲ್ಲಿ ಒಂದು. ಗಣಿಗಾರಿಕೆಗೆ ದಿಕ್ಕು ದೆಸೆಯಿಲ್ಲದೇ ಅನುಮತಿ ಕೊಡುವ, ಅಭಿವೃದ್ಧಿ ಹೆಸರಲ್ಲಿ ಕಾಡುಗಳನ್ನೇ ಕಡಿಯುವ, ಪ್ರಕೃತಿದತ್ತವಾದ ನೆರೆ ಇತ್ಯಾದಿ ಜಲಮೂಲಗಳ ಮೇಲೆ ಬುಲ್ಡೋಜರ್ ಹರಿಸಿ ಕಾಂಕ್ರೀಟು ಕಟ್ಟಡ ಕಟ್ಟುವ ಸರಕಾರವನ್ನು ಬೆಂಬಲಿಸುವುದು ಕೂಡ ಈ ಪಾತ್ರದಲ್ಲಿ ಸೇರುತ್ತದೆ. ಆದ್ದರಿಂದಲೋ ಏನೋ ನಿಸರ್ಗದತ್ತವಾದ ಅನಾಹುತಗಳು ನಿರ್ದಿಷ್ಟ ಧರ್ಮ, ಜಾತಿ, ವ್ಯಕ್ತಿ, ಹುದ್ದೆಗಳಲ್ಲಿರುವವರನ್ನು ಹುಡುಕಿಕೊಂಡು ಬರುವುದಿಲ್ಲ. ಕೊರೋನಾ ದಾಳಿಗೆ ಸಿಲುಕಿದವರಲ್ಲಿ ಸಂಸತ್ ಸದಸ್ಯರೂ ಇದ್ದಾರೆ, ಮಂತ್ರಿಗಳೂ ಇದ್ದಾರೆ, ವೈದ್ಯರೂ ಇದ್ದಾರೆ, ದೇಶದ ಉಪಾಧ್ಯಕ್ಷರೂ ಇದ್ದಾರೆ, ಸೆಲೆಬ್ರಿಟಿಗಳು, ಕ್ರೀಡಾಳುಗಳು ಎಲ್ಲರೂ ಇದ್ದಾರೆ. ಸುನಾಮಿಯ ರಭಸಕ್ಕೆ ಸಿಲುಕಿದವರು ಧರ್ಮದ ಆಧಾರದಲ್ಲಿ ವಿಭಜಿಸಲಾಗದಷ್ಟು ಏಕರೂಪದಲ್ಲಿರುತ್ತಾರೆ. ಸಾಂಕ್ರಾಮಿಕ ರೋಗಗಳು, ಭೂಕಂಪ ಮುಂತಾದುವುಗಳು ಮನುಷ್ಯರನ್ನು ಸಮಾನವಾಗಿ ನೋಡುತ್ತವೆ. ಧರ್ಮ ಜಾತಿಗಳ ಹಂಗಿಲ್ಲದೇ ಆಕ್ರಮಿಸುತ್ತವೆ. ಮಸೀದಿ, ಮಂದಿರ, ಚರ್ಚ್, ಗುರುದ್ವಾರ ಎಲ್ಲವೂ ಏಕಪ್ರಕಾರವಾಗಿ ಅದಕ್ಕೆ ಪ್ರತಿಕ್ರಿಯಿಸುತ್ತವೆ. ಆದರೆ,

ಮಾನವ ಜನ್ಯವಾದ ಅಪಾಯಗಳು ಹೀಗಲ್ಲ. ಕೊರೋನಾ ಈ ದೇಶಕ್ಕೆ ಪ್ರವೇಶಿಸುವುದಕ್ಕಿಂತ ಮೊದಲು ಈ ದೇಶದ ರಾಜಧಾನಿಯಲ್ಲಿ ಮಾನವ ಜನ್ಯ ಹಿಂಸಾಚಾರವೊಂದು ನಡೆಯಿತು. ಸುಮಾರು 50ರಷ್ಟು ಪ್ರಾಣಗಳು ಅದಕ್ಕೆ ಎರವಾದುವು. ಇವುಗಳಲ್ಲಿ ಹಿಂದೂಗಳ ಪ್ರಾಣ ಎಷ್ಟು ಮತ್ತು ಮುಸ್ಲಿಮರ ಪ್ರಾಣ ಎಷ್ಟು ಎಂಬುದನ್ನು ಆ ಬಳಿಕ ಮಾಧ್ಯಮಗಳು ಹೆಸರು ಸಮೇತ ಪ್ರಕಟಿಸಿದುವು. ಮಾನವಜನ್ಯ ಅಪಾಯಗಳು ಎಷ್ಟು ಅಮಾನವೀಯ ಅನ್ನುವುದಕ್ಕೆ ಈ ಹೆಸರುಗಳ ವರ್ಗೀಕರಣವೇ ಅತ್ಯುತ್ತಮ ಪುರಾವೆ. ಇಲ್ಲಿ ಎರವಾದ ಪ್ರಾಣಗಳೆಲ್ಲ ಒಂದೋ ಮುಸ್ಲಿಮ್ ಆದುದಕ್ಕಾಗಿ ಇಲ್ಲವೇ ಹಿಂದೂ ಆದುದಕ್ಕಾಗಿ ಆಗಿವೆಯೇ ಹೊರತು ಇನ್ನಾವ ಅಪರಾಧಕ್ಕಾಗಿಯೂ ಅಲ್ಲ. ಇದೇವೇಳೆ,

ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ನರಳುತ್ತಿರುವವರು, ಅತ್ಯಾಚಾರಕ್ಕೋ ದೈಹಿಕ ಹಿಂಸೆಗೋ ಒಳಗಾದವರು, ಅಪ್ಪನನ್ನು ಕಳಕೊಂಡ ಮಕ್ಕಳು, ಮಕ್ಕಳನ್ನು ಕಳಕೊಂಡ ವೃದ್ಧ ಹೆತ್ತವರು, ವಿಧವೆಯಾದ ಪತ್ನಿ, ವಿದುರನಾದ ಪತಿ, ಹೊಟ್ಟೆ ತುಂಬಿಸುತ್ತಿದ್ದ ವ್ಯಾಪಾರವನ್ನೂ, ನೆರಳಾಗಿದ್ದ ಮನೆಯನ್ನೂ- ಹೀಗೆ ಎಲ್ಲವನ್ನೂ ಕಳಕೊಂಡು ಹತಾಶೆಯಲ್ಲಿರುವವರು ಇವೆಲ್ಲಕ್ಕೂ ಇನ್ನೊಂದು ಧರ್ಮದ ಮನುಷ್ಯರನ್ನು ಹೊಣೆ ಮಾಡುತ್ತಾರೆ. ಸಂಕಟದಲ್ಲಿರುವವರೂ ಮನುಷ್ಯರೇ, ಅದಕ್ಕೆ ಕಾರಣರಾದವರೂ ಮನುಷ್ಯರೇ. ಇವೆಲ್ಲಕ್ಕೂ ಕಾರಣ ಏನೆಂದರೆ, ಧರ್ಮ, ಜಾತಿ, ರಾಜಕೀಯ ಇತ್ಯಾದಿಗಳು. ಹಾಗಂತ,

ನಿಸರ್ಗದತ್ತ ಅಪಾಯಗಳ ಸಂದರ್ಭದಲ್ಲೂ ಮನುಷ್ಯ ಇಂಥದ್ದೇ ಸಂಕಟಕ್ಕೆ ಒಳಗಾಗುತ್ತಾನೆ. ತನ್ನವರನ್ನು ಕಳಕೊಳ್ಳುತ್ತಾನೆ. ಮನೆ-ಮಠ, ವ್ಯಾಪಾರ ಕೇಂದ್ರಗಳೆಲ್ಲವೂ ಆತನ ಕಣ್ಣೆದುರೇ ಕಳೆದು ಹೋಗುವುದಿದೆ. ಆದರೆ, ಆತ ಅದಕ್ಕಾಗಿ ಇನ್ನೊಂದು ಧರ್ಮದವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವುದಿಲ್ಲ. ಆ ಸಂದರ್ಭದಲ್ಲಿ ಧರ್ಮಜಾತಿಗಳು ಅಡ್ಡ ಗೋಡೆಗಳಾಗಿ ನಿಲ್ಲುವುದೂ ಇಲ್ಲ. ಅಪಾಯದಲ್ಲಿರುವವರ ನೆರವಿಗೆ ಮಸೀದಿ, ಮಂದಿರಗಳ ಹಂಗಿಲ್ಲದೇ ಮತ್ತು ಧರ್ಮ-ಜಾತಿಗಳ ಸೋಂಕು ತಗಲದೇ ಸರ್ವರೂ ಧಾವಿಸುತ್ತಾರೆ. ಮಸೀದಿಯಲ್ಲೂ ಅವರಿಗಾಗಿ ಪ್ರಾರ್ಥಿಸಲಾಗುತ್ತದೆ. ನೆರವು ಸಂಗ್ರಹವಾಗುತ್ತದೆ. ಮಂದಿರ, ಚರ್ಚ್‍ಗಳಲ್ಲೂ ಇದೇ ವಾತಾವರಣ ಇರುತ್ತದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎಂಬ ಬೇಧವಿಲ್ಲದೇ ಎಲ್ಲರೂ ಪೀಡಿತರ ನೆರವಿಗೆ ಧಾವಿಸುತ್ತಾರೆ. ನಿಸರ್ಗದ ವೈಶಿಷ್ಟ್ಯ ಇದು. ಅದು ಮನುಷ್ಯರನ್ನು ಒಂದುಗೂಡಿಸುತ್ತದೆ. ಅದರ ಜಾತ್ಯತೀತ ಗುಣವೇ ಇದಕ್ಕೆ ಕಾರಣ. ಕೊರೋನಾ ಇವತ್ತು ಭಾರತೀಯರನ್ನು ಒಂದುಗೂಡಿಸಿದೆ. ಹಿಂದೂ-ಮುಸ್ಲಿಮ್, ಬಿಜೆಪಿ-ಕಾಂಗ್ರೆಸ್ ಎಂಬ ಭಾವವಿಲ್ಲದೇ ಎಲ್ಲರೂ ಕೊರೋನಾ ವಿರುದ್ಧ ಹೋರಾಟದಲ್ಲಿ ಜೊತೆಜೊತೆಯಾಗಿ ಸಾಗುತ್ತಿದ್ದಾರೆ. ಕಾಯಿಲೆ ಪೀಡಿತರು ಹಿಂದೂವೋ ಮುಸ್ಲಿಮೋ ಎಂದು ಯಾರೂ ವಿಭಜಿಸಿ ನೋಡುವುದಿಲ್ಲ. ಮನುಷ್ಯ ಎಂಬ ಏಕೈಕ ಗುರುತನ್ನು ಕೊರೋನಾ ಎಲ್ಲ ಮಾನವರಿಗೂ ನೀಡಿಬಿಟ್ಟಿದೆ. ಆದರೆ,

ಮಾನವ ಜನ್ಯ ಅಪಾಯಗಳಿಗೆ ಈ ಗುಣ ಇಲ್ಲ. ಅದು ಮೊಟ್ಟಮೊದಲಾಗಿ ಮನುಷ್ಯರನ್ನು ವಿಭಜಿಸುತ್ತದೆ. ಅದು ಹುಟ್ಟು ಪಡೆಯುವುದೇ ಧರ್ಮ ಮತ್ತು ರಾಜಕೀಯ ವಿಚಾರಧಾರೆಯ ವಿಭಜನೆಯಲ್ಲಿ. ಇಲ್ಲಿ ಪೀಡಿತರಾದವರಿಗೆ ನೆರವು ಸಂಗ್ರಹಿಸುವ ವಿಧಾನದಲ್ಲೂ ನಾವು ಮತ್ತು ಅವರು ಎಂಬ ವಿಭಜನೆಯಿರುತ್ತದೆ. ಸಂಕಷ್ಟದಲ್ಲಿರುವವರ ಸಂಕಟಕ್ಕೂ ಧರ್ಮವನ್ನು ಅಂಟಿಸಿ ಬಿಟ್ಟು ನಮ್ಮವರು ಮತ್ತು ಅನ್ಯರು ಎಂದು ಪ್ರತ್ಯೇಕಿಸುವುದು ಮಾನವ ಜನ್ಯ ಅಪಾಯಗಳ ಅತಿ ಭೀಕರ ಮುಖಗಳಲ್ಲಿ ಒಂದು. ನಿಸರ್ಗದತ್ತ ಅಪಾಯಗಳಿಗೆ ಈ ದುರ್ಗುಣ ಇಲ್ಲ. ಆದ್ದರಿಂದಲೇ,

ಮಾನವ ಜನ್ಯ ಅಪಾಯಗಳಲ್ಲಿ ಅಮಾನವೀಯತೆ ಅತಿಹೆಚ್ಚು. ಮಾತ್ರವಲ್ಲ, ನಿಸರ್ಗದತ್ತ ಅಪಾಯಗಳಿಗೆ ಹೋಲಿಸಿದರೇ ಮಾನವಜನ್ಯ ಅಪಾಯಗಳೇ ಮನುಷ್ಯರ ಪ್ರಾಣಕ್ಕೆ ಅತಿಹೆಚ್ಚು ಹಾನಿ ಮಾಡಿರುವುದು. ಇತಿಹಾಸದ ಉದ್ದಕ್ಕೂ ಇದಕ್ಕೆ ರಾಶಿಗಟ್ಟಲೆ ಸಾಕ್ಷ್ಯಗಳು ಲಭಿಸುತ್ತವೆ. ರಾಜರು, ಚಕ್ರವರ್ತಿಗಳು, ಸರ್ವಾಧಿಕಾರಿಗಳು ಈ ಮಾನವ ಪ್ರಾಣಗಳ ಹರಣದಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಹಿಟ್ಲರ್, ಮುಸೋಲೋನಿಯಂತವರು ಮನುಷ್ಯರ ಧರ್ಮ, ಭಾಷೆ, ವಿಚಾರಧಾರೆಯನ್ನು ನೋಡಿ ಸಂಹಾರ ನಡೆಸಿದ್ದಾರೆ. ಭಾರತ-ಪಾಕ್ ವಿಭಜನೆಯಾದಾಗ ಹಿಂದೂ-ಮುಸ್ಲಿಮ್ ರಕ್ತಪಾತ ನಡೆಯಿತು. ಆ ಬಳಿಕವೂ ಇದು ನಿಲ್ಲಲಿಲ್ಲ. ದೆಹಲಿ ಸಿಕ್ಖ್ ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡಗಳ ಸಹಿತ ಧರ್ಮದ ಆಧಾರದಲ್ಲಿ ಮನುಷ್ಯರ ಪ್ರಾಣಗಳು ಆಹುತಿಯಾಗುತ್ತಲೇ ಹೋದುವು. ಆಫ್ರಿಕಾದ ಹುಟು ಮತ್ತು ತುತ್ಸಿ ಜನಾಂಗಗಳು ಪರಸ್ಪರ ಕಾದಾಡಿಕೊಂಡು ಹರಿಸಿದ ರಕ್ತಕ್ಕೆ ಎಣೆಯಿಲ್ಲ.

ನಿಸರ್ಗ ಮತ್ತು ಮಾನವ ಇವೆರಡರಲ್ಲಿ ಮಾನವ ಕುಲಕ್ಕೆ ಅತ್ಯಂತ ಹೆಚ್ಚು ಹಾನಿ ಮಾಡಿರುವುದು ಯಾರು ಎಂದು ಪ್ರಶ್ನಿಸಿದರೆ, ಅದಕ್ಕೆ ಸರಿಯಾದ ಉತ್ತರ ಮಾನವ ಎಂಬುದಾಗಿದೆ. ಹೆಚ್ಚು ಅಮಾನವೀಯವಾದುದೂ ಮಾನವ ನಿರ್ಮಿತ ಅಪಾಯಗಳೇ. ಕೊರೋನಾದ ಈ ಸಂದರ್ಭದಲ್ಲಿ ನಾವೆಲ್ಲ ನಮ್ಮೊಳಗನ್ನು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳಬೇಕಿದೆ. ಕೊರೋನಾವನ್ನು ನಾವು ಮಣಿಸಬಹುದು. ಆದರೆ, ನಮ್ಮೊಳಗಿನ ವೈರಸನ್ನು ನಾವು ಎಂದು ಮಣಿಸಬಲ್ಲೆವು? ಕೊರೋನಾ ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಒಳಪಡಿಸಲಿ.