ಹಾಗೇನಾದರೂ ಆಗಿಬಿಟ್ಟರೆ ಅವರು ಹೂಡಿರುವ ಕೋಟ್ಯಂತರ ರೂಪಾಯಿಯ ಪಾಡೇನು? ಕೊರೋನಾ ಕಥೆ

0
444

ಸನ್ಮಾರ್ಗ ವಾರ್ತೆ

ಸನ್ಮಾರ್ಗ ಸಂಪಾದಕೀಯ

ಕೊರೋನಾ ಏನು, ಅದರಿಂದ ಹಾನಿ ಎಷ್ಟು ಮತ್ತು ನಾಗರಿಕರು ಏನೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಂಬಲರ್ಹ ಹಾಗೂ ಅಧಿಕೃತ ಮಾಹಿತಿಗಳಿಗಿಂತ ನೂರು ಪಟ್ಟು ಹೆಚ್ಚು ನಂಬಲನರ್ಹ ಮತ್ತು ಅನಧಿಕೃತ ಮಾಹಿತಿಗಳು ಸಾರ್ವಜನಿಕವಾಗಿ ಇವತ್ತು ಲಭ್ಯವಿವೆ. ಕೊರೋನಾ ಸುತ್ತ ಹುಟ್ಟು ಹಾಕಲಾಗಿರುವ ಭಯವೇ ರೋಗಿಗಳ ಪಾಲಿಗೆ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂಬ ಮಾತು ತಜ್ಞರಿಂದಲೇ ಕೇಳಿ ಬರುತ್ತಿದೆ. ಕೊರೋನಾ ಇವತ್ತು ಬಿಂಬಿಸಲಾಗುತ್ತಿರುವಷ್ಟು ಅಪಾಯಕಾರಿಯೇ, ಔಷಧಕ್ಕೆ ಬಗ್ಗದಷ್ಟು ಮಾರಣಾಂತಿಕವೇ ಅಥವಾ ಅದನ್ನು ಅಗತ್ಯಕ್ಕಿಂತ ಹೆಚ್ಚು ಉಬ್ಬಿಸಲಾಗುತ್ತಿದೆಯೇ ಎಂಬಲ್ಲಿಂದ ಹಿಡಿದು, ಕೊರೋನಾದ ನೆಪದಲ್ಲಿ ಮೆಡಿಕಲ್ ಮಾಫಿಯಾ ಸಕ್ರಿಯವಾಗಿದೆಯೇ ಎಂಬಲ್ಲಿ ವರೆಗೆ ಸಾರ್ವಜನಿಕ ಚರ್ಚೆಗಳೂ ಅಲ್ಲಲ್ಲಿ ನಡೆಯತೊಡಗಿವೆ. ಹಾಗಂತ,
ಇಂಥ ಬೆಳವಣಿಗೆಗಳು ಶೂನ್ಯದಿಂದ ಹುಟ್ಟಿಕೊಂಡಿರುವುದಲ್ಲ. ದೇಶದಾದ್ಯಂತದ ವಿವಿಧ ಪ್ರಕರಣಗಳು ಇಂಥ ಅನುಮಾನಗಳಿಗೆ ಪ್ರೇರಣೆಯನ್ನು ಒದಗಿಸುತ್ತಿವೆ.

ಕೊರೋನಾ ಪುರಾತನ ಕಾಲದ ಕಾಯಿಲೆಯಲ್ಲ. 2019 ಡಿಸೆಂಬರ್‍ನಲ್ಲಿ ಚೀನಾ ಈ ಕಾಯಿಲೆಯ ಉಪಸ್ಥಿತಿಯ ಕುರಿತಂತೆ ಅಧಿಕೃತವಾಗಿ ಘೋಷಿಸುವಾಗ ಈ ಜಗತ್ತಿನ 600 ಕೋಟಿ ಜನಸಂಖ್ಯೆಯನ್ನು ಒಂದೇ ಬಾರಿ ಸಾಯಿಸಿ ಬಿಡಬಹುದಾದಷ್ಟು ಅಣುಬಾಂಬುಗಳನ್ನು ಕೇವಲ ಒಂದೇ ರಾಷ್ಟ್ರ ತನ್ನ ಗೋದಾಮಿನಲ್ಲಿ ಪೇರಿಸಿಟ್ಟಿರುವ ವಾಸ್ತವ ಕೂಡ ಈ ಜಗತ್ತಿಗೆ ಗೊತ್ತಿತ್ತು. ಮಾನವ ಹತ್ಯೆಯ ಹೊರತಾಗಿ ಈ ಅಣುಬಾಂಬುಗಳಿಗೆ ಬೇರೆ ಯಾವ ಉದ್ದೇಶವೂ ಇಲ್ಲ. ಈ ಅಣುಬಾಂಬಿಗೆ ಬಲಿಯಾಗುವವರು ಸಾಯಿಸಲೇಬೇಕಾದ ಅಪರಾಧಿಗಳೂ ಅಲ್ಲ. ಯಾರದೋ ಹುಚ್ಚಿಗೆ, ತಪ್ಪಿಗೆ ಅಥವಾ ಅಹಂಕಾರಕ್ಕೆ ಪ್ರತಿಯಾಗಿ ಈ ಅಣುಬಾಂಬುಗಳು ಇನ್ನಾರನ್ನೋ ಸಾಯಿಸುತ್ತವೆ. ಕೊರೋನಾವೂ ಅಷ್ಟೇ. ಯಾವುದೋ ಪ್ರಯೋಗಾಲಯದ ತಪ್ಪಿನಿಂದಲೋ ಅಥವಾ ಪ್ರಕೃತಿ ಸಹಜವಾಗಿಯೋ ಹುಟ್ಟಿಕೊಂಡ ಕೊರೋನಾವು ಇವತ್ತು ಅಪರಾಧಿ, ನಿರಪರಾಧಿ ಎಂಬ ವರ್ಗೀಕರಣವನ್ನೇ ಮಾಡದೇ ಸರ್ವರನ್ನೂ ಕಾಡತೊಡಗಿದೆ. ದುರಂತ ಏನೆಂದರೆ,

ಜಗತ್ತಿನ ಅಷ್ಟೂ ಮಂದಿಯನ್ನು ಸಾಯಿಸಿಬಿಡಬಹುದಾದಷ್ಟು ಬಾಂಬುಗಳನ್ನು ತಯಾರಿಸಿಟ್ಟುಕೊಂಡಿರುವ ಜಗತ್ತೇ ಯಕಶ್ಚಿತ್ ಒಂದು ಜ್ವರಕ್ಕೆ ಮಂಡಿಯೂರಿ ಬಿಟ್ಟಿರುವುದು.

ಇದು ಪುರಾತನ ಕಾಲವಲ್ಲ. ಚೀನಾದ ಯಾವುದೋ ಭೂಗರ್ಭದಲ್ಲಿ ನಡೆಯುವ ಸಂಶೋಧನೆಯನ್ನು ಅಲ್ಲಿಂದ ಲಕ್ಷಾಂತರ ಕಿಲೋಮೀಟರ್ ದೂರದ ಇನ್ನಾವುದೋ ಪ್ರದೇಶದಲ್ಲಿ ನಿಂತು ಗ್ರಹಿಸಬಹುದಾದ ಕಾಲ. ಕೊರೋನಾ 20ನೇ ಶತಮಾನದ ಕಾಯಿಲೆ. ಸ್ಪ್ಯಾನಿಷ್ ಫ್ಲೂ, ಪ್ಲೇಗ್‍ಗಳ ಕಾಲಕ್ಕೆ ಹೋಲಿಸಿದರೆ, ಕೊರೋನಾದ ಕಾಲ ಅತ್ಯಂತ ಆಧುನಿಕವಾದುದು. ಕೊರೋನಾ ಕಾಯಿಲೆಯ ಲಕ್ಷಣಗಳು ಏನೇನು ಮತ್ತು ಯಾವೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿದರೆ ಅದನ್ನು ಅನ್ಯಗೊಳಿಸಬಹುದು ಎಂಬ ಮಾಹಿತಿಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಜನರಿಗೆ ತಲುಪಿಸಬಹುದಾದಷ್ಟು ತಂತ್ರಜ್ಞಾನಗಳು ಆವಿಷ್ಕಾರಗೊಂಡಿರುವ ಕಾಲ. ಸ್ಪ್ಯಾನಿಷ್ ಫ್ಲೂ, ಪ್ಲೇಗ್‍ನಂಥ ಸಾಂಕ್ರಾಮಿಕ ರೋಗಗಳು ಈ ಜಗತ್ತಿನ ಮೇಲೆ ದಾಳಿ ಮಾಡಿದ ಕಾಲದಲ್ಲಿ ಈ ಅವಕಾಶಗಳು ಇರಲಿಲ್ಲ.

ಒಂದು ಪ್ರದೇಶಕ್ಕೆ ಪ್ಲೇಗ್ ಬಂದಿದೆಯೆಂಬುದು ಇನ್ನೊಂದು ಪ್ರದೇಶಕ್ಕೆ ತಿಳಿಯುವುದಕ್ಕೆ ಬೇಕಾದ ವ್ಯವಸ್ಥೆಯಿರಲಿಲ್ಲ. ಪ್ಲೇಗ್‍ನ ಲಕ್ಷಣಗಳೇನು ಮತ್ತು ಅದಕ್ಕಿರುವ ಔಷಧಿಗಳೇನು ಎಂಬಂತಹ ಬಹುಮುಖ್ಯ ಮಾಹಿತಿಗಳೂ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ದಾರಿಗಳಿರಲಿಲ್ಲ. ಆದರೆ ಕೊರೋನಾ ಹಾಗಲ್ಲ. ಕೊರೋನಾ ವೈರಸ್‍ನ ಚಿತ್ರದಿಂದ ಹಿಡಿದು ಚಿಕಿತ್ಸೆ ಪಡೆಯುತ್ತಿರುವವರ ವರೆಗೆ ಮತ್ತು ಪಿಪಿಇ ಕಿಟ್ ಧರಿಸಿದ ಶುಶ್ರೂಕರಿಂದ ಆರಂಭವಾಗಿ ಮನೆ ಮದ್ದುಗಳ ಪಟ್ಟಿಯ ವರೆಗೆ ಪ್ರತಿಯೊಂದೂ ಜನರ ಬೆರಳಿಗೆ ದಕ್ಕುವ ಸ್ಥಿತಿಯಿದೆ. ಹೀಗಿದ್ದೂ ಕೊರೋನಾ ಕುರಿತು ಸತ್ಯಕ್ಕಿಂತ ಭೀತಿಯೇ ಮತ್ತು ಅವಾಸ್ತವವೇ ಮೇಲುಗೈ ಪಡೆದಿರಲು ಕಾರಣವೇನು? ಮೃತದೇಹದೊಂದಿಗೆ ಅತ್ಯಂತ ಅನಾಗರಿಕವಾಗಿ ನಡೆದುಕೊಳ್ಳುತ್ತಿರುವ ಪ್ರಕರಣಗಳ ಹಿನ್ನೆಲೆಯೇನು? ಅಂದಹಾಗೆ,

ಕೊರೋನಾ ಪೀಡಿತರನ್ನು ಮತ್ತು ಕೊರೋನಾದಿಂದಾಗಿ ಸಾವಿಗೀಡಾದವರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿರುವುದು ಜನಸಾಮಾನ್ಯರಲ್ಲ. ಪಿಪಿಇ ಕಿಟ್ ಧರಿಸಿರುವ ಮತ್ತು ಕೊರೋನಾದ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಇರುವವರೇ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೊಂದು ಒಗಟು. ಈ ಒಗಟನ್ನು ಬಿಡಿಸುವುದು ಹೇಗೆ? ಜನರನ್ನು ಎಜುಕೇಟ್ ಮಾಡಬೇಕಾಕಿದ್ದ ತಂತ್ರಜ್ಞಾನಗಳು, ಅದಕ್ಕಿಂತಲೂ ಹೆಚ್ಚಾಗಿ ಭೀತಿಗೆ ಮತ್ತು ಅಸತ್ಯಗಳ ಪ್ರಸಾರಕ್ಕೆ ಬಳಕೆಯಾಗುತ್ತಿವೆಯೇ ಎಂಬುದನ್ನು ಈ ದುರಿತ ಕಾಲದಲ್ಲಿ ವಿಶ್ಲೇಷಿಸಬೇಕಿದೆ. ಅದೇವೇಳೆ,

ಸಾರ್ವಜನಿಕವಾಗಿ ಇರುವ ಭೀತಿಗೂ ಕೊರೋನಾಕ್ಕೂ ನಡುವೆ ಏನು ಸಂಬಂಧ ಮತ್ತು ಎಷ್ಟು ವಾಸ್ತವ ಅನ್ನುವ ಚರ್ಚೆ-ಸಂವಾದಗಳು ಆರಂಭಗೊಂಡಿರುವುದು ಸ್ವಾಗತಾರ್ಹ. ಇದು ಮುಂದುವರಿಯಬೇಕು. ಕೊರೋನಾ ಪ್ರಕೃತಿ ಸಹಜವೋ ಅಥವಾ ಮಾನವ ಎಡವಟ್ಟೋ ಅನ್ನುವ ಸಂದೇಹದಂತೆಯೇ ಕೊರೋನಾ ಕಾಲದ ಬೆಳವಣಿಗೆಗಳ ಸುತ್ತಲೂ ಸಂದೇಹವೊಂದನ್ನು ಇಟ್ಟುಕೊಳ್ಳುವುದು ಮತ್ತು ಸೂಕ್ಷ್ಮವಾಗಿ ಅವಲೋಕಿಸಿಕೊಳ್ಳುವುದು ಅತ್ಯಂತ ಅಗತ್ಯ. ಈ ಕಾಯಿಲೆಯು ಸಾಮುದಾಯಿಕ ಹರಡುವಿಕೆಯನ್ನು ಪ್ರಾರಂಭಿಸಿದೆ. ಹಾಗೆಯೇ ಅತ್ಯಂತ ದುಬಾರಿ ಯಂತ್ರಗಳು ಆಸ್ಪತ್ರೆಗಳ ಕೋಣೆ ಸೇರಿಕೊಳ್ಳತೊಡಗಿವೆ. ಕೊರೋನಾ ಪರೀಕ್ಷೆಯ ದೃಷ್ಟಿಯಿಂದ ಅವುಗಳು ಎಷ್ಟು ಅಗತ್ಯವೋ ಆ ಯಂತ್ರಕ್ಕೆ ಸುರಿದಿರಬಹುದಾದ ಮೊತ್ತವನ್ನು ರೋಗಿಗಳಿಂದ ಭರಿಸಿಕೊಳ್ಳಬೇಕಾದುದೂ ಆಸ್ಪತ್ರೆಗಳ ಅಗತ್ಯ. ನಿಜವಾಗಿ,

ಈ ಜಗತ್ತಿನ ಎಲ್ಲ ಕಾಯಿಲೆಗಳೂ ಮಾನವ ದ್ರೋಹಿಯಾದುದು ಆ ಕಾಯಿಲೆಗಳಿಗಿಂತ ಹೆಚ್ಚಾಗಿ ಆ ಕಾಯಿಲೆಯ ಹೆಸರಲ್ಲಿ ನಡೆಯುವ ಪರೀಕ್ಷೆಗಳು, ಔಷಧಗಳು ಮತ್ತು ಅದಕ್ಕೆ ತಗಲುವ ದುಬಾರಿ ವೆಚ್ಚಗಳಿಂದಾಗಿದೆ. ಕೊರೋನಾಕ್ಕೆ ಮದ್ದು ಕಂಡು ಹಿಡಿಯುವ ಪೈಪೋಟಿ ಇವತ್ತು ಜಾಗತಿಕ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಇದೊಂದು ಬಹು ದುಬಾರಿ ಪ್ರಕ್ರಿಯೆ. ಸಂಶೋಧನೆಗೆಂದು ಕೋಟಿ ಕೋಟಿ ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. ಸಂಶೋಧಿತ ಔಷಧವನ್ನು ಜನರ ಮೇಲೆ ಪ್ರಯೋಗಿಸುವುದು, ಔಷಧ ಪರಿಣಾಮಕಾರಿಯೆಂದು ದೃಢಪಡಿಸಿಕೊಳ್ಳುವುದು ಹಾಗೂ ಔಷಧ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದು-ಇತ್ಯಾದಿ ಪ್ರಕ್ರಿಯೆಗಳಿಗೆ ದೀರ್ಘ ಸಮಯ ಹಿಡಿಯುತ್ತದೆ. ಇದು ಕೇವಲ ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಇರುವ ಸಮಸ್ಯೆಯಲ್ಲ. ಯಾವುದೇ ಕಾಯಿಲೆಗೆ ಸಂಬಂಧಿಸಿದ ಔಷಧವೂ ಇಂಥ ಪ್ರಕ್ರಿಯೆಗಳಿಗೆ ತನ್ನನ್ನು ಒಡ್ಡಿಕೊಳ್ಳಲೇಬೇಕು. ಒಂದುವೇಳೆ,

ಇಂಥ ಸಂಶೋಧನಾ ಪ್ರಕ್ರಿಯೆಗಳು ನಡೆಯುವ ಸಂದರ್ಭದಲ್ಲೇ ಆ ಕಾಯಿಲೆಯು ಪ್ರಾಕೃತಿಕ ಕಾರಣದಿಂದಲೋ ಅಥವಾ ನಾಟಿ ಔಷಧಗಳಿಗೆ ಶರಣಾಗಿಯೋ ಕಾಣೆಯಾದರೆ, ಈ ಸಂಶೋಧನೆಗೆ ಸುರಿದ ಕೋಟಿಗಟ್ಟಲೆ ರೂಪಾಯಿಗಳ ಪಾಡೇನು? ಇದು ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಉದ್ಭವವಾಗಿರುವ ಪ್ರಶ್ನೆಯಲ್ಲ. ಯಾವುದೇ ಕಾಯಿಲೆಗೆ ಸಂಬಂಧಿಸಿ ಮಾಡಲಾಗುವ ಸಂಶೋಧನೆಯೂ ಇಂಥದ್ದೊಂದು ಅಪಾಯವನ್ನು ಎದುರಿಸಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಒಂದೋ ಈ ಔಷಧ ಸಂಶೋಧನಾ ನಿರತ ರಾಷ್ಟ್ರಗಳು ಆ ಕಾಯಿಲೆಯನ್ನು ಮತ್ತಷ್ಟು ಅವಧಿ ವರೆಗೆ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು ಅಥವಾ ತಾವು ಸಂಶೋಧನೆಗೆಂದು ಹೂಡಿಕೆ ಮಾಡಿರುವ ಹಣದ ಬಗ್ಗೆ ಚಿಂತೆ ಬಿಡಬೇಕು. ಆದ್ದರಿಂದಲೇ,

ಇವತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳ ಬಗ್ಗೆ ಅ ನುಮಾನ ಮೂಡುವುದು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುವುದು ಮತ್ತು ಹಳೆ ಕಾಯಿಲೆಗಳು ಮತ್ತಷ್ಟು ವೃದ್ಧಿಗೊಂಡು ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದನ್ನು ಸಂದೇಹದಿಂದ ನೋಡುವುದು. ಇವೆಲ್ಲ ಸಹಜವೇ, ಅಸಹಜವೇ? ಔಷಧ ಮಾಫಿಯಾ ಇದರ ಹಿಂದಿರಬಹುದೇ? ಕೊರೋನಾದ ಸುತ್ತ ನಡೆಯುತ್ತಿರುವ ಬೆಳವಣಿಗೆಯನ್ನು ಇದೇ ಕನ್ನಡಕವನ್ನಿಟ್ಟು ನೋಡಬಹುದೇ?

ಚರ್ಚೆಗಳು ನಡೆಯಲಿ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here