ಬೀದರ್ ನ ಶಾಹೀನ್ ‘ದೇಶದ್ರೋಹ’ ಪ್ರಕರಣ: ನಾಟಕದ ಮರೆಯಲ್ಲಿ ಅವರು ಗುರಿಯಿರಿಸಿದ್ದು ಏನನ್ನು?

0
1719

ಸನ್ಮಾರ್ಗ ಸಂಪಾದಕೀಯ

ಪ್ರಾಥಮಿಕ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ನಾಟಕದ ಸಂಭಾಷಣೆಯಿಂದ ಒಂದೆರಡು ವಾಕ್ಯಗಳನ್ನು ಪ್ರತ್ಯೇಕಗೊಳಿಸಿ, ಅದರಲ್ಲಿ ದೇಶದ್ರೋಹವನ್ನು ಪತ್ತೆ ಹಚ್ಚುವುದು ಮತ್ತು ತನಿಖೆಯ ಹೆಸರಲ್ಲಿ ಪೊಲೀಸರು ಸುಮಾರು 70ರಷ್ಟು ಮಕ್ಕಳನ್ನು ಮೂರ್ನಾಲ್ಕು ದಿನಗಳ ಕಾಲ ಹಿಂಸಿಸುವುದು ಬಹುಶಃ ದೇಶದಲ್ಲೇ ಮೊದಲು ಇರಬೇಕು. ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಇಂಥದ್ದೊಂದು ಆಶ್ಚರ್ಯಕರ ಬೆಳವಣಿಗೆ ನಡೆದಿದೆ. ಈ ಪುಟ್ಟ ಮಕ್ಕಳು “ಎನ್‍ಆರ್ ಸಿ ಎವಾರ್ ನೆಸ್” (ಎನ್‍ಆರ್ ಸಿ ಜಾಗೃತಿ) ಎಂಬ ನಾಟಕವನ್ನು ವಾರಗಳ ಹಿಂದೆ ಪ್ರಸ್ತುತಪಡಿಸಿದ್ದರು. ದೇಶದಾದ್ಯಂತ ಎನ್‍ಆರ್ ಸಿ ವಿರುದ್ಧ ಧರಣಿ, ಪ್ರತಿಭಟನೆ, ಭಾಷಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೋಡಿದರೆ, ನಾಟಕದ ಮೇಲೆ ಈ ಬೆಳವಣಿಗೆಗಳು ಪ್ರಭಾವ ಬೀರುವುದು ಸಹಜ. ಯಾವುದೇ ಚಳವಳಿ ಸ್ವರೂಪದ ಹೋರಾಟಕ್ಕೆ ಬೇರೆ ಬೇರೆ ಆಯಾಮಗಳಿರುತ್ತವೆ. ಸಮಸ್ಯೆಗೆ ಹತ್ತು ಮಂದಿ ಹತ್ತು ರೀತಿಯ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ, ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಮತ್ತು ನಿರ್ಭಯ ಪ್ರಕರಣದಲ್ಲಿ ಬಿಜೆಪಿ ನಾಯಕರು ಮತ್ತು ಮುಖ್ಯವಾಗಿ ನರೇಂದ್ರ ಮೋದಿಯವರು ಆಗಿನ ಪ್ರಧಾನಿ ಮನ್‍ಮೋಹನ್ ಸಿಂಗ್‍ರನ್ನು ಯಾವ ರೀತಿ ತಿವಿದಿದ್ದರು ಅನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತು. ಪ್ರಧಾನಿ ಮನ್‍ಮೋಹನ್ ಸಿಂಗ್‍ರನ್ನು ಮೌನಮೋಹನ ಎಂಬ ಅವಮಾನಕರ ಪದ ಪ್ರಯೋಗದಿಂದ ಹಿಡಿದು ಅನೇಕಾರು ರೀತಿಯಲ್ಲಿ ಪ್ರತಿದಿನ ಗೇಲಿಗೆ ಒಳಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರಧಾನಿ ಮನ್‍ಮೋಹನ್ ಸಿಂಗ್ ಈ ಎಲ್ಲ ಟೀಕೆಗಳಿಗೆ ಎರಡು ರೀತಿಯಲ್ಲಿ ಉತ್ತರಿಸಬಹುದಿತ್ತು.

1. ಪ್ರಧಾನಿ ಎಂಬ ನೆಲೆಯಲ್ಲಿ ತನ್ನ ಹುದ್ದೆಗೆ ಅವಮಾನವಾಯಿತೆಂದು ಕೇಸು ದಾಖಲಿಸುವುದು.

2. ತನ್ನ ನೀತಿಗಳ ಬಗ್ಗೆ ತನ್ನದೇ ಪ್ರಜೆಗಳು ತೋರುವ ಭಿನ್ನಾಭಿಪ್ರಾಯ ಎಂದು ಅವನ್ನು ಪರಿಗಣಿಸುವುದು.

ಮನ್‍ಮೋಹನ್ ಸಿಂಗ್ ಅವರು ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ತನ್ನನ್ನು ವೈಯಕ್ತಿಕವಾಗಿ ವಿಮರ್ಶಿಸಿದ ಮತ್ತು ಟೀಕಿಸಿದವರ ವಿರುದ್ಧ ಈ ದೇಶದ ಯಾವ ಪೊಲೀಸು ಠಾಣೆಯಲ್ಲೂ ಪ್ರಕರಣ ದಾಖಲಾಗದಂತೆ ನೋಡಿಕೊಂಡರು. ಪ್ರಜಾತಂತ್ರದ ನಿಜ ಸೌಂದರ್ಯ ಇದು. ಆದರೆ, ಈಗಿನ ಕೇಂದ್ರ ಸರಕಾರ ಮತ್ತು ಅವರ ಬೆಂಬಲಿಗರು ಪ್ರಜಾತಂತ್ರದ ಈ ಸ್ವಾತಂತ್ರ್ಯವನ್ನೇ ಅಸಹನೆಯಿಂದ ನೋಡುತ್ತಿದ್ದಾರೆ. ದೇಶದ್ರೋಹದ ಪ್ರಕರಣ ದಾಖಲಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಂತೆ ಕವಿ ಸಿರಾಜ್ ಬಿಸರಳ್ಳಿ ಅವರ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಿಕೊಳ್ಳಲಾಯಿತು. ಅವರು ವಾಚಿಸಿದ ಕವನದಲ್ಲಿ ಪ್ರಧಾನಿ ಮೋದಿಯನ್ನು ಅವಮಾನಿಸಲಾಗಿದೆ ಎಂಬ ದೂರನ್ನಾಧರಿಸಿ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದರು. ಎನ್‍ಪಿಆರ್ ಅನ್ನು ಪ್ರಶ್ನಿಸಿ ರಚಿಸಲಾದ ಆ ಕವನವು ಆ ಬಳಿಕ ಸುಮಾರು 13 ಭಾಷೆಗಳಿಗೆ ಅನುವಾದಗೊಂಡು ದೇಶದಾದ್ಯಂತ ಲಕ್ಷಾಂತರ ಮಂದಿಯನ್ನು ತಲುಪಿತು. ಆ ಬಳಿಕ ಮೈಸೂರಿನ ನಳಿನಿ ನಂದಕುಮಾರ್ ಮೇಲೆ ದೇಶದ್ರೋಹ ಪ್ರಕರಣ ದಾಖಲಾಯಿತು. ಇದೀಗ ಶಾಹೀನ್ ಶಿಕ್ಷಣ ಸಂಸ್ಥೆ. ನಿಜಕ್ಕೂ ಈ ದೇಶದ್ರೋಹ ಅಂದರೆ ಏನು? ದೇಶದ್ರೋಹ ಪ್ರಕರಣವನ್ನು ದಾಖಲಿಸುವ ಮೊದಲು ಪೊಲೀಸರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು? 124 A (ದೇಶದ್ರೋಹ) ಕಲಂನಡಿ ಪ್ರಕರಣ ದಾಖಲಿಸಿ ಎಂದು ವ್ಯಕ್ತಿಯೋರ್ವ ಬಂದು ಪೊಲೀಸು ಠಾಣೆಯಲ್ಲಿ ದೂರು ನೀಡಿದರೆ ಅದನ್ನು ಪರಿಶೀಲಿಸದೆಯೇ ಮತ್ತು ಪ್ರಕರಣ ಆ ಕಲಂನಡಿ ಬರುತ್ತದೆಯೇ ಎಂದು ನೋಡದೆಯೇ ಕ್ರಮ ಜರಗಿಸಬೇಕೆಂಬ ಆದೇಶವನ್ನು ಪೊಲೀಸರಿಗೆ ನೀಡಲಾಗಿದೆಯೇ? ಶಾಹೀನ್ ಶಿಕ್ಷಣ ಸಂಸ್ಥೆಯ ಪುಟ್ಟ ಮಕ್ಕಳು ಪ್ರಸ್ತುತಪಡಿಸಿದ ನಾಟಕದಲ್ಲಿ ಅನಗತ್ಯ ಸಂಭಾಷಣೆಗಳಿದ್ದುವು ಎಂದೇ ಒಪ್ಪಿಕೊಳ್ಳೋಣ. ಆ ಸಂಭಾಷಣೆಯ ಮೂಲಕ ಯಾವ ಸಂದೇಶವನ್ನು ರವಾನಿಸಲು ಉದ್ದೇಶಿಸಲಾಗಿತ್ತೋ ಅದನ್ನು ಇನ್ನಷ್ಟು ಮಾನ್ಯ ರೀತಿಯಲ್ಲಿ ಹೇಳಬಹುದಿತ್ತು ಎಂಬುದನ್ನೂ ಒಪ್ಪೋಣ. ಹಾಗಂತ,

ಹೀಗೆ ವಾದಿಸುವಾಗ, ಆ ನಾಟಕದಲ್ಲಿ ಬಳಸಲಾಗಿರುವ ಗ್ರಾಮೀಣ ಉರ್ದು ಭಾಷೆಯನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು. ಗ್ರಾಮ್ಯ ಭಾಷೆಯ ಆಡುನುಡಿಗಳು ಆ ಭಾಷೆಯ ಪರಿಚಯ ಇಲ್ಲದವರಿಗೆ ಬೇರೆಯದೇ ರೀತಿಯ ಅರ್ಥವನ್ನು ಕೊಡುವುದಿದೆ. ಆಡುನುಡಿಗಳ ಸಹಜ ಸಂಭಾಷಣೆಗಳು ಅವರಿಗೆ ಬೈಗುಳವಾಗಿಯೋ ದೂಷಣೆಯಾಗಿಯೋ ಕಾಣಿಸುವುದಿದೆ. ಅಷ್ಟಕ್ಕೂ,

ದೂರುದಾರರಿಗೆ ಸ್ಥಳೀಯ ಉರ್ದು ಭಾಷೆಯ ಆಡುನುಡಿಗಳ ಪರಿಚಯ ಇದೆಯೋ ಇಲ್ಲವೋ? ಆದರೆ, ದೂರು ದಾಖಲಿಸುವ ಪೊಲೀಸರಲ್ಲಾದರೂ ಈ ಎಚ್ಚರಿಕೆ ಇರಬೇಡವೇ? ದೂರುದಾರ ಅಪೇಕ್ಷಿಸಿದ ಎಂಬುದೇ ದೇಶದ್ರೋಹ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಆಧಾರವೇ? ಕಳೆದ 3 ದಶಕಗಳಿಂದ ಕಾರ್ಯಾಚರಿಸುತ್ತಿರುವ ಮತ್ತು ದೇಶದಾದ್ಯಂತ ಸುಮಾರು 50ರಷ್ಟು ಶಾಖೆಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಪೊಲೀಸರಿಗೆ ಅರಿವಿಲ್ಲವೇ ಅಥವಾ ಉದ್ದೇಶಪೂರ್ವಕವಾಗಿಯೇ ಇಂಥದ್ದೊಂದು ಷಡ್ಯಂತ್ರವನ್ನು ಹೆಣೆಯಲಾಗಿದೆಯೇ? ದೇಶದಲ್ಲಿಯೇ ಅತ್ಯಂತ ಹೆಚ್ಚು ಉಚಿತ ಸರಕಾರಿ ಮೆಡಿಕಲ್ ಸೀಟುಗಳನ್ನು ವಿದ್ಯಾರ್ಥಿಗಳಿಗೆ ದೊರಕಿಸಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಿದು. ಕಳೆದ ವರ್ಷ ಕೇವಲ ಬೀದರ್ ಶಿಕ್ಷಣ ಕೇಂದ್ರವೊಂದರ 327 ವಿದ್ಯಾರ್ಥಿಗಳು ಸರಕಾರದ ಉಚಿತ ಮೆಡಿಕಲ್ ಸೀಟುಗಳನ್ನು ಪಡೆದುಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿಯ ಬಳಿಕ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಸಂಸ್ಥೆಯನ್ನು ಸೇರುತ್ತಿದ್ದಾರೆ. ಸರಕಾರದ ಉಚಿತ ವೈದ್ಯಕೀಯ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಅರ್ಹಗೊಳಿಸುವ ತರಬೇತಿಯೊಂದು ಇಲ್ಲಿ ಭಾರೀ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲದೇ, ಒಟ್ಟು ವಿದ್ಯಾರ್ಥಿಗಳ ಪೈಕಿ ಅರ್ಧದಷ್ಟು ಮಂದಿ ಮುಸ್ಲಿಮೇತರ ವಿದ್ಯಾರ್ಥಿಗಳೇ. ಕಳೆದ 3 ದಶಕಗಳಲ್ಲಿ ದೇಶದ್ರೋಹ ಬಿಡಿ, ಒಂದೇ ಒಂದು ಪ್ರಕರಣವನ್ನೂ ತನ್ನ ಮೇಲೆ ಎಳೆದುಕೊಳ್ಳದ ಸಂಸ್ಥೆಯೊಂದರ ಮೇಲೆ ಈಗ ದಿಢೀರ್ ಆಗಿ ದೇಶದ್ರೋಹದ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಈ ಸಂಸ್ಥೆಯ ಈ ಯಶಸ್ಸೂ ಕಾರಣವಿರಬಹುದೇ? ಶಾಹೀನ್ ವಿರುದ್ಧ ಬೀದರ್ ನಲ್ಲಿ ಎಬಿವಿಪಿ ನಡೆಸಿರುವ ಪ್ರತಿಭಟನೆಗಳು ಮತ್ತು ಆ ಪ್ರತಿಭಟನೆಗೆ ಇತರ ಕಾಲೇಜುಗಳ ಶಾಲಾ ಬಸ್ಸುಗಳಲ್ಲೇ ವಿದ್ಯಾರ್ಥಿಗಳು ಆಗಮಿಸಿರುವುದನ್ನು ಇದಕ್ಕೆ ಪುರಾವೆಯಾಗಿ ನೋಡಬಹುದೇ?

ನಾಟಕ, ಸಿನಿಮಾ, ಕವನ, ಲೇಖನ ಇತ್ಯಾದಿ ಇತ್ಯಾದಿಗಳೆಲ್ಲ ಸೃಜನಶೀಲ ಅಭಿವ್ಯಕ್ತಿ ಮಾದರಿಯೇ ಹೊರತು ಅದು ಚಾಕು, ಚೂರಿ, ಬಂದೂಕು, ತಲವಾರುಗಳಲ್ಲ. ವ್ಯವಸ್ಥೆಯನ್ನು ಪ್ರಶ್ನಿಸುವಾಗ ಈ ಅಭಿವ್ಯಕ್ತಿಯ ಸ್ವರೂಪದಲ್ಲಿ ಎಡವಿಕೆಗಳು ನಡೆಯಬಹುದು. ಪ್ರಭುತ್ವದ ನೀತಿಗಳಲ್ಲಿ ಜನವಿರೋಧಿ ಅಂಶಗಳ ಪ್ರಮಾಣ ಎಷ್ಟು ತೀವ್ರವಾಗಿರುತ್ತದೋ ಈ ಅಭಿವ್ಯಕ್ತಿಯ ರೂಪದಲ್ಲೂ ಆ ಪ್ರಮಾಣದ ತೀವ್ರತೆ ಗೋಚರಿಸಬಹುದು. ಅಂದಹಾಗೆ,

ಎನ್‍ಆರ್ ಸಿಯ ಕುರಿತಂತೆ ದೇಶದಾದ್ಯಂತ ತೀವ್ರಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ಜನರಲ್ಲಿ ಮಡುಗಟ್ಟಿದ ಆತಂಕ ಇದೆ. ಹೀಗಿರುವಾಗ, ಪುಟ್ಟ ಮಕ್ಕಳು ಪ್ರದರ್ಶಿಸಿದ ನಾಟಕವನ್ನು ಈ ಬೆಳವಣಿಗೆಗಳಿಂದ ಪ್ರತ್ಯೇಕಿಸಿ ನೋಡುವುದು ತಪ್ಪು ಮತ್ತು ಅವಿವೇಕತನ. ದೂರುದಾರನ ಉದ್ದೇಶ ಏನೇ ಇರಬಹುದು ಮತ್ತು ಅವರ ವಿಚಾರಧಾರೆ ಏನೇ ಆಗಿರಬಹುದು, ಆದರೆ ಪೊಲೀಸರು ಪ್ರಕರಣ ದಾಖಲಿಸುವ ಮೊದಲು ಪೂರ್ವಾಪರ ಯೋಚಿಸಬೇಕಿತ್ತು. ನಾಟಕದ ಬಗ್ಗೆ ಪೊಲೀಸರು ತಮ್ಮ ಅಭಿಪ್ರಾಯವನ್ನು ಶಿಕ್ಷಣ ಸಂಸ್ಥೆಯೊಂದಿಗೆ ಹಂಚಿಕೊಂಡು ಎಚ್ಚರಿಕೆ ವಹಿಸಿಕೊಳ್ಳುವಂತೆ ಕೋರಿಕೊಳ್ಳಬಹುದಿತ್ತು. ಅದುಬಿಟ್ಟು ಶಿಕ್ಷಣ ಸಂಸ್ಥೆಯ ಮೇಲೆ ಏಕಾಏಕಿ ದೇಶದ್ರೋಹದ ಪ್ರಕರಣ ದಾಖಲಿಸುವುದು ಮತ್ತು ಮುಖ್ಯೋಪಾಧ್ಯಾಯರಾದ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೋರ್ವನ ತಾಯಿ ನಜ್ಮುನ್ನಿಸಾ ಎಂಬಿಬ್ಬರು ಮಹಿಳೆಯರನ್ನು ಬಂಧಿಸುವುದು ದುರುದ್ದೇಶದ ಕ್ರಮವಾಗಿದೆ. ಆದ್ದರಿಂದಲೇ,

ದೇಶದ್ರೋಹದಡಿ ಪ್ರಕರಣ ದಾಖಲಿಸಿಕೊಂಡಿರುವುದಕ್ಕೆ ಮತ್ತು ಬಂಧನಕ್ಕೆ ನಾಟಕದ ಸಂಭಾಷಣೆಯ ಹೊರತಾದ ಇನ್ನೇನೋ ಕಾರಣ ಇದೆ ಎಂಬ ಅನುಮಾನ ಮೂಡಿರುವುದು. ಇದರ ಹಿಂದೆ ಇನ್ಯಾವುದೋ ಉದ್ದೇಶ, ಷಡ್ಯಂತ್ರವಿರುವಂತೆ ಕಾಣಿಸುತ್ತಿದೆ. ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಭಿನ್ನ ಧ್ವನಿಯನ್ನು ದಮನಿಸುವುದು ಈ ಷಡ್ಯಂತ್ರದ ಒಂದು ಭಾಗವಾದರೆ, ಶಿಕ್ಷಣ ಸಂಸ್ಥೆಯ ಹೆಸರನ್ನು ಕೆಡಿಸುವುದು ಇನ್ನೊಂದು ಭಾಗವಾಗಿರುವ ಸಾಧ್ಯತೆಯೂ ಇದೆ. ಅಷ್ಟಕ್ಕೂ,

ಬಾಬರಿ ಮಸೀದಿಯ ಧ್ವಂಸವನ್ನು ಕಾನೂನುಬಾಹಿರವೆಂದು ಸುಪ್ರೀಮ್ ಕೋರ್ಟು ಬಹಿರಂಗವಾಗಿ ತೀರ್ಪಿತ್ತ ಬಳಿಕವೂ ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಬಾಬರೀ ಮಸೀದಿಯ ಪ್ರತಿಕೃತಿಯನ್ನು ಧ್ವಂಸ ಮಾಡುವ ಪ್ರದರ್ಶನವನ್ನು ನೀಡಿದ್ದರು. ಅದೂ ಉನ್ನತ ಅಧಿಕಾರಿಗಳು ಮತ್ತು ಪುದುಚ್ಚೇರಿ ಗವರ್ನರ್ ಕಿರಣ್ ಬೇಡಿಯವರ ಸಮ್ಮುಖದಲ್ಲೇ. ಆದರೂ ಆ ಶಾಲೆಯ ಮೇಲೆ ದಾಖಲಾಗದ ದೇಶದ್ರೋಹವು ಶಾಹೀನ್ ಸಂಸ್ಥೆಯ ಹಾಲುಗಲ್ಲದ ಮಕ್ಕಳ ನಾಟಕದ ಮೇಲೆ ದಾಖಲಾಗಲು ಕಾರಣವೇನು?