ಅವಮಾನಿತನಾಗಬೇಕಾದವ ಆರಾಮವಾಗಿ ಇರುವಂಥ ಸ್ಥಿತಿ ಏಕೆ ನಿರ್ಮಾಣವಾಯಿತು?

0
687

ಸನ್ಮಾರ್ಗ ವಾರ್ತೆ

ಸನ್ಮಾರ್ಗ ಸಂಪಾದಕೀಯ

ಬೆಂಗಳೂರು ಮತ್ತು ಶೃಂಗೇರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಘಟನೆಗಳು ನಡೆದಿವೆ. ಈ ಎರಡೂ ಘಟನೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ ಏಕಪ್ರಕಾರವಾಗಿರಲಿಲ್ಲ. ಬೆಂಗಳೂರು ಮತ್ತು ಶೃಂಗೇರಿ ಘಟನೆಗಳಿಗೆ ಮೂಲ ಕಾರಣ ನವೀನ್ ಮತ್ತು ಮಿಲಿಂದ್. ಪ್ರವಾದಿ ಮುಹಮ್ಮದ್‍ರನ್ನು(ಸ) ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ನವೀನ್ ಒಂದು ಪೋಸ್ಟ್ ಹಾಕುತ್ತಾನೆ. ನಡೆದಿರುವುದು ಇಷ್ಟೇ. ಆದರೆ ಆ ಬಳಿಕದಿಂದ ಇವತ್ತಿನ ವರೆಗೆ ಚರ್ಚೆಯಲ್ಲಿರುವುದು ನವೀನನಲ್ಲ, ಮುಸ್ಲಿಮ್ ಸಮುದಾಯ. ಪೊಲೀಸರು ಬಂಧಿಸುತ್ತಿರುವುದು ಮುಸ್ಲಿಮರನ್ನು. ಸರಕಾರವು ಆಸ್ತಿ ಜಪ್ತಿ ಮಾಡಲು ಹೊರಟಿರುವುದು ಮುಸ್ಲಿಮರದ್ದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಖಳನಾಯಕರಂತೆ ಬಿಂಬಿಸುತ್ತಿರುವುದೂ ಮುಸ್ಲಿಮರನ್ನು. ಒಂದೇ ಒಂದು ಪೋಸ್ಟ್ ಒಂಡಿದೀ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದ್ದರೆ ಅದರ ಹೊಣೆಯನ್ನು ಯಾರು ಹೊರಬೇಕು? ನಿಜವಾಗಿ ತಲೆ ತಗ್ಗಿಸಬೇಕಾದದ್ದು ನವೀನ್. ಕ್ಷಮೆ ಕೇಳಬೇಕಾದದ್ದೂ ಆತನೇ. ಆದರೆ ಪರಿಸ್ಥಿತಿ ತದ್ವಿರುದ್ಧವಾಗಿರುವುದಕ್ಕೆ ಯಾರು ಕಾರಣ? ಇದನ್ನು ಸರಿಪಡಿಸುವುದು ಹೇಗೆ?

ಶೃಂಗೇರಿಯಲ್ಲಿ ಶಂಕಾರಾಚಾರ್ಯರ ಪುತ್ಥಳಿಗೆ ಹಸಿರು ಧ್ವಜವನ್ನು ಹಾಕಲಾದ ಘಟನೆ ಬೆಳಕಿಗೆ ಬಂದ ತಕ್ಷಣ ಅದನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನವನ್ನು ಅಲ್ಲಿನ ಮಾಜಿ ಶಾಸಕರೇ ಮಾಡಿದ್ದಾರೆ. ಪೋಲೀಸರನ್ನು ಬೀದಿಯಲ್ಲಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಿಲಿಂದ್‍ನ ಬಂಧನವಾಗಿದೆ. ನಿಜವಾಗಿ, ಮಿಲಿಂದ್‍ನ ಬಂಧನದ ಬಳಿಕ ಮುಸ್ಲಿಮರ ಪ್ರತಿಕ್ರಿಯೆ ಏನು ಅನ್ನುವುದು ಬಹಳ ಮುಖ್ಯವಾಗಿತ್ತು. ಆ ಪ್ರತಿಕ್ರಿಯೆಯೇ ಮುಸ್ಲಿಮರನ್ನು ಅಳೆಯುವ ಮಾನದಂಡವಾಗಿತ್ತು. ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆದುಕೊಂಡ ಮುಸ್ಲಿಮ್ ಯುವಕರ ವರ್ತನೆಯು ಶೃಂಗೇರಿ ಘಟನೆಯ ಸಂದರ್ಭದಲ್ಲಿ ಹಸಿಹಸಿಯಾಗಿತ್ತು. ಅಲ್ಲದೇ, ಮುಸ್ಲಿಮರೇ ಅಪರಾಧಿಗಳು ಎಂದು ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರು ಷರಾ ಬರೆದು, ಬೆದರಿಕೆಯನ್ನೂ ಹಾಕಿದ್ದರು. ಆದರೆ, ಶೃಂಗೇರಿಯ ಮುಸ್ಲಿಮರು ಎಷ್ಟು ಬುದ್ಧಿವಂತಿಕೆಯಿಂದ ವರ್ತಿಸಿದರೆಂದರೆ, ಇವತ್ತಿಗೂ ಅಲ್ಲಿ ಮಿಲಿಂದ್ ಖಳನಾಯಕನೇ ಹೊರತು ಮುಸ್ಲಿಮರಲ್ಲ. ಒಂದು ಪತ್ರಿಕಾಗೋಷ್ಠಿಯನ್ನು ಕರೆದು ಮುಸ್ಲಿಮರು ಹೇಳಬೇಕಾದುದನ್ನೆಲ್ಲ ಹೇಳಿದರು. ಅಲ್ಲಿಗೆ ಮಾಜಿ ಶಾಸಕರ ಬಣ್ಣ ಬಯಲಾಯಿತು. ಇದು ಶಾಸಕರಿಗೆ ಮಾತ್ರ ಸಂಬಂಧಿಸಿದ ಸಂಗತಿ ಅಲ್ಲ. ಅವರನ್ನು ಬೆಂಬಲಿಸುವವರು, ಅವರ ಪರವಾಗಿ ನಿಲುವುಳ್ಳವರು ಮತ್ತು ಅವರು ಪ್ರತಿನಿಧಿಸುವ ಪಕ್ಷದ ಹಿತೈಷಿಗಳು… ಎಲ್ಲರ ಪಾಲಿಗೂ ಮುಜುಗರ ತಂದಿಕ್ಕಿದ ಪ್ರಕರಣ.

ಆರೋಪಿ ಯಾರು ಎಂಬುದು ಬಯಲಾಗುವ ಮೊದಲೇ ಆರೋಪಿ ಇಂಥವನೇ ಮತ್ತು ಇಂತಿಂಥ ಧರ್ಮಕ್ಕೆ ಸೇರಿದವನೇ ಎಂದು ಕಡ್ಡಿ ಮುರಿದಂತೆ ಹೇಳುವುದು ಎಷ್ಟು ಸಮರ್ಥನೀಯ ಎಂಬ ಅವಲೋಕನಕ್ಕೆ ಅವರೆಲ್ಲರನ್ನೂ ಖಂಡಿತ ಈ ಪ್ರಕರಣ ಒಳಪಡಿಸಿರಬಹುದು. ರಾಜಕೀಯಕ್ಕಾಗಿ ಸಮಾಜದ ಆರೋಗ್ಯವನ್ನು ಕೆಡಿಸುವುದನ್ನು ನಾವೇಕೆ ಬೆಂಬಲಿಸಬೇಕು ಎಂಬ ಪ್ರಶ್ನೆ ಅವರೊಳಗೆ ಮೂಡಿರಬಹುದು. ಇಂಥದ್ದೊಂದು ಮುಜುಗರ ಅವರಲ್ಲಿ ಉಂಟಾಗಿದ್ದರೆ ಅದಕ್ಕೆ ಕಾರಣ ಮಿಲಿಂದ್ ಅಲ್ಲ, ಮುಸ್ಲಿಮರು. ಮಿಲಿಂದ್ ಅಥವಾ ನವೀನ್ ಒಂದು ದಾಳ ಮಾತ್ರ. ಇಂಥವರ ಸಂಖ್ಯೆ ಸಾಕಷ್ಟಿರಬಹುದು. ಇವರನ್ನು ಹೀರೋ ಮಾಡಬೇಕೇ ಅಥವಾ ಖಳರನ್ನಾಗಿ ಪರಿವರ್ತಿಸಬೇಕೇ ಎಂಬುದು ಪ್ರತಿಕ್ರಿಯಿಸುವವರ ಬುದ್ಧಿವಂತಿಕೆಯನ್ನು ಹೊಂದಿಕೊಂಡಿದೆ.

ನವೀನ್ ಅನ್ನುವ ಏಕ ವ್ಯಕ್ತಿ ನಾಲ್ವರು ಯುವಕರ ಸಾವಿಗೆ, ನೂರಾರು ಮಂದಿಯ ಬಂಧನಕ್ಕೆ ಮತ್ತು ಕೋಟ್ಯಂತರ ರೂಪಾಯಿಯ ಆಸ್ತಿ ಜಪ್ತಿಯ ಭೀತಿಯನ್ನು ತಂದೊಡ್ಡುವುದಕ್ಕೆ ಹೇಗೆ ಸಫಲನಾದ? ಇವತ್ತು ನವೀನ್ ಸುದ್ದಿಯು ಕೇಂದ್ರವಲ್ಲ. ಆತನ ಆಸ್ತಿಯ ಜಪ್ತಿಯೂ ಆಗಲ್ಲ. ಪುಟ್ಟದೊಂದು ಮೊತ್ರವನ್ನು ಪಾವತಿಸಿ ಆತ ಜಾಮೀನು ಪಡೆದು ಹೊರಬರಬಲ್ಲ. ಇಷ್ಟೇ ಸರಳವಾಗಿ ಜೈಲಿಗೆ ಹೋದ ಮುಸ್ಲಿಮ್ ಯುವಕರ ಬಗ್ಗೆ ಹೇಳುವುದಕ್ಕೆ ಸಾಧ್ಯವೇ? ಆ ಅರೆಕ್ಷಣದ ಆವೇಶಕ್ಕೆ ತೆರಬೇಕಾದ ಮೊತ್ತ ಎಷ್ಟು? ಬಂಧಿತ ಒಬ್ಬೊಬ್ಬ ವ್ಯಕ್ತಿಗೂ ಖರ್ಚು ಮಾಡಬೇಕಾದ ಹಣವೆಷ್ಟು? ಜೈಲಲ್ಲಿರುವವರ ಕುಟುಂಬ-ಪತ್ನಿ-ಮಕ್ಕಳು ಅನುಭವಿಸುತ್ತಿರುವ ಸಂಕಟಗಳ ಭಾರ ಎಷ್ಟು? ಈ ಬಂಧಿತರಿಗಾಗಿ ಖರ್ಚಾಗುವ ಲಕ್ಷಾಂತರ ರೂಪಾಯಿಗಳು, ಕಾನೂನು ಪ್ರಕ್ರಿಯೆ, ಕೋರ್ಟು-ಕಚೇರಿಯೆಂದು ವ್ಯಯವಾಗುವ ಮಾನವ ಶ್ರಮಗಳನ್ನು ಒಟ್ಟು ಸೇರಿಸಿದರೆ ಅದರ ಪ್ರಮಾಣ ಎಷ್ಟಾಗಬಹುದು? ಇವೆಲ್ಲ ಅನಿವಾರ್ಯವಾಗಿತ್ತೇ? ಪ್ರವಾದಿಯನ್ನು ಓರ್ವ ಅವಮಾನಿಸಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗಿರುವುದು ಅವಮಾನಿಸಿದವನೇ ಹೊರತು ಅವಮಾನಕ್ಕೊಳಗಾದವರಲ್ಲ. ಆದರೆ,

ಪದೇ ಪದೇ ಈ ಸರಳ ಸತ್ಯಕ್ಕೆ ಸೋಲಾಗುತ್ತಿದೆ. ನಿಂದಿಸಿದವರು ಆರಾಮವಾಗಿಯೂ ಆರಾಮವಾಗಿ ಇರಬೇಕಾದವರು ಅವಮಾನಿತರಾಗಿಯೂ ಮತ್ತೆ ಮತ್ತೆ ಗುರುತಿಗೀಡಾಗುತ್ತಿದ್ದಾರೆ. ಇದೊಂದು ವೈಫಲ್ಯ ಮತ್ತು ಯಾವುದೇ ವೈಫಲ್ಯ ದೀರ್ಘಕಾಲ ವೈಫಲ್ಯವಾಗಿಯೇ ಮುಂದುವರಿಯುವುದು ಆ ಸಮುದಾಯದ ಪಾಲಿಗೆ ಅತ್ಯಂತ ಅಪಾಯಕಾರಿ. ಸದ್ಯ ಇಂಥದ್ದೊಂದು ನಿರ್ಣಾಯಕ ಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯ ಇದೆ. ಈ ಸಮುದಾಯವನ್ನು ಪ್ರಚೋದಿಸಿ, ಗಲಭೆಗೆ ಹಚ್ಚುವುದು ಸುಲಭ ಎಂಬ ಭಾವನೆ ಸಮಾಜಘಾತುಕ ಶಕ್ತಿಗಳಲ್ಲಿ ಬಲವಾಗತೊಡಗಿದೆ. ಶೃಂಗೇರಿ ಘಟನೆಯ ಹಿಂದೆ ಈ ಧೈರ್ಯವೇ ಕೆಲಸ ಮಾಡಿರುವಂತಿದೆ. ಮುಸ್ಲಿಮರನ್ನು ಪ್ರಚೋದಿಸುವುದು, ಬೀದಿಗಿಳಿಸುವುದು ಮತ್ತು ಒರಟಾಗಿ ವರ್ತಿಸುವಂತೆ ಬಲವಂತಪಡಿಸುವುದು ಈ ಸಮಾಜ ದ್ರೋಹಿ ಶಕ್ತಿಗಳ ಆರಂಭಿಕ ಹಂತ. ಅದರಲ್ಲಿ ಅವರು ಯಶಸ್ವಿಯಾಗತೊಡಗಿದಂತೆಯೇ ಎರಡನೇ ಹಂತ ಜಾರಿಗೆ ಬರುತ್ತದೆ. ಮುಸ್ಲಿಮರು ಹೀಗೆಯೇ ಎಂದು ಪದೇಪದೇ ಸಮಾಜಕ್ಕೆ ಸಂದೇಶವನ್ನು ಕೊಡುವುದು, ಮುಸ್ಲಿಮರು ಒರಟರು, ಅವರು ಕಾನೂನನ್ನು ಪಾಲಿಸದವರು ಎಂಬ ಭಾವ ಸಾರ್ವತ್ರಿಕವಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾಯಿತೆಂದರೆ, ಆ ಬಳಿಕದ ಮೂರನೇ ಹಂತವನ್ನು ಜಾರಿಗೊಳಿಸುವುದು ಸುಲಭ. ನವೀನ್ ಮತ್ತು ಮಿಲಿಂದ್ ಆ ಮೂರನೇ ಹಂತದ ದಾಳಗಳು.

ಸದ್ಯ ಮುಸ್ಲಿಮ್ ಸಮುದಾಯದ ಜವಾಬ್ದಾರಿ ಏನೆಂದರೆ, ಸಮಾಜ ಘಾತುಕ ಶಕ್ತಿಗಳ ತಂತ್ರಕ್ಕೆ ಪ್ರತಿ ತಂತ್ರವನ್ನು ಹೆಣೆಯುವುದು. ಶೃಂಗೇರಿಯ ಮುಸ್ಲಿಮರು ಮಾಡಿರುವಂತೆ ಅತ್ಯಂತ ಬುದ್ಧಿವಂತಿಕೆಯಿಂದ ನಡೆದುಕೊಳ್ಳುವುದು. ಯಾವುದೇ ಸಂದರ್ಭದಲ್ಲೂ ಆವೇಶಕ್ಕೋ ಪ್ರಚೋದನೆಗೋ ಒಳಗಾಗದೆಯೇ ಪ್ರತಿಕ್ರಿಯಿಸಲು ಕಲಿಯುವುದು. ಹಾಗಂತ, ಇವೇನೂ ಬಹಳ ಸವಾಲಿನ ಕೆಲಸ ಅಲ್ಲ. ಈ ಸಮುದಾಯಕ್ಕೆ ಗಲ್ಲಿಗೊಂದರಂತೆ ಮಸೀದಿಗಳಿವೆ. ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಧಾರ್ಮಿಕ, ಸಾಮಾಜಿಕ ಮುಖಂಡರಿದ್ದಾರೆ. ಸಂಘಟನೆಗಳಿವೆ. ಪ್ರತಿ ಶುಕ್ರವಾರ ಮಸೀದಿಗಳು ಸಮುದಾಯವನ್ನು ತಿದ್ದುವ ಕೇಂದ್ರವಾಗಿ ಬದಲಾಗಬೇಕು. ಧಾರ್ಮಿಕ ಸಂಘಟನೆಗಳು ಮುಸ್ಲಿಮ್ ಸಮುದಾಯದ ಗಲ್ಲಿಗಲ್ಲಿಗೆ ತೆರಳಿ ಅಲ್ಲಿಯ ಸಮಸ್ಯೆಗಳಿಗೆ ಕಣ್ಣಾಗುವ ಮತ್ತು ಗಾಂಜಾದಂಥ ವ್ಯಸನಗಳಿಗೆ ತುತ್ತಾಗಿರುವ ಯುವಕರನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮುಸ್ಲಿಮ್ ಸಮುದಾಯದ ಕೇರಿಗಳು ಮೂಲಭೂತ ಸೌಲಭ್ಯಗಳನ್ನು ಹೊಂದುವಂತೆ ಮಾಡುವುದಕ್ಕೆ ಸಕಲ ಪ್ರಯತ್ನವನ್ನೂ ಮಾಡಬೇಕು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವ ದೀರ್ಘಕಾಲಿಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಆರೋಗ್ಯ ಕೇಂದ್ರಗಳ ಸ್ಥಾಪನೆಗೆ, ಕೌಶಲ್ಯ ಅಭಿವೃದ್ಧಿಯಂತಹ ಯೋಜನೆಗಳಿಗೆ ಕಾಳಜಿ ತೋರಬೇಕು. ಆಯಾ ಪ್ರದೇಶಕ್ಕೆ ತಕ್ಕಂತೆ ಅತ್ಯಂತ ಪರಿಣಾಮಕಾರಿ ನೀಲನಕಾಶೆಯನ್ನು ತಯಾರಿಸಿ ಮುಂದಡಿಯಿಟ್ಟರೆ ಯಶಸ್ಸು ಅಸಾಧ್ಯವಿಲ್ಲ. ಒಂದುವೇಳೆ,

ಇಂಥ ದೂರದೃಷ್ಟಿಯಿಂದ ಸಮುದಾಯ ಸಂಘಟನೆಗಳು, ನಾಯಕರು ಮ್ತು ಧಾರ್ಮಿಕ ಮುಖಂಡರು ಕಾರ್ಯಪ್ರವೃತ್ತವಾದರೆ ಓರ್ವ ನವೀನ್ ಬಿಡಿ, ನೂರಾರು ನವೀನ್‍ರೂ ಈ ಸಮುದಾಯಕ್ಕೆ ಸವಾಲು ಆಗಲಾರರು. ಅವರಿಗೆ ಯಶಸ್ಸು ಸಿಗಲಾರದು. ಪ್ರವಾದಿಯನ್ನು ನಿಂದಿಸಿದರೆ ಅದಕ್ಕೆ ಪ್ರತಿಯಾಗಿ ಪ್ರವಾದಿ ಸಂದೇಶವನ್ನು ಸಾರುವ ಲಕ್ಷಾಂತರ ಯುವಕರು ತಯಾರಾಗಬಹುದು. ಅವರನ್ನು ಕಂಡು ನವೀನ್ ಮತ್ತು ಅವನ ಹಿಂದಿರುವಂಥ ಸಮಾಜ ಘಾತುಕರು ಅವಮಾನದಿಂದ ತಲೆ ತಗ್ಗಿಸುವಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಇಂದಿನ ತುರ್ತು ಅಗತ್ಯ.