ಅವರು ಗಾಳ ಎಸೆದರು, ಇವರು ಗಾಳವನ್ನೇ ನುಂಗಿ ಪ್ರೀತಿಸಿದರು: ನನ್ನ ಭಾರತವೇ, ಒಮ್ಮೆ ಎದ್ದು ನಿಂತು ಚಪ್ಪಾಳೆ ತಟ್ಟು…

0
3264

ಸನ್ಮಾರ್ಗ ಸಂಪಾದಕೀಯ

ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಎಂಬಲ್ಲಿಯ ನಾಲ್ವರು ಮುಸ್ಲಿಮ್ ಯುವಕರು ಇವತ್ತು ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಅವರನ್ನು ಟಿ.ವಿ. ಚಾನೆಲ್‍ಗಳು ಮಾತಾಡಿಸುತ್ತಿವೆ. ಬೈಟ್ ಪಡಕೊಳ್ಳುತ್ತಿವೆ. ಪತ್ರಿಕೆಗಳು ಅವರನ್ನು ಗುರುತಿಸಿ ಕೊಂಡಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರು ತುಂಬಿಹೋಗಿದ್ದಾರೆ. ಕರಾವಳಿ ಭಾಗದ ಪ್ರತಿ ಮನೆಯೂ ಅವರ ಬಗ್ಗೆ ಮಾತಾಡುತ್ತಿದೆ. ಘಟನೆ ಇಷ್ಟೇ-

ಆತ್ಮಹತ್ಯೆ ಮಾಡಲೆಂದು ನಿಶಾಂತ್ ಎಂಬ ತರುಣ ಇಲ್ಲಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾನೆ. ಈದ್‍ನ ಸಂಭ್ರಮದಲ್ಲಿದ್ದ ಈ ಯುವಕರಿಗೆ ಸುದ್ದಿ ತಲುಪಿದ ತಕ್ಷಣ ಹಿಂದು-ಮುಂದು ನೋಡದೇ ಜೀವದ ಹಂಗು ತೊರೆದು ನದಿಗೆ ಹಾರಿದ್ದಾರೆ. ನಿಶಾಂತ್‍ನನ್ನು ದಡಕ್ಕೆ ತಂದಿದ್ದಾರೆ. ಈ ನಾಲ್ವರ ಪೈಕಿ ಆರಿಫ್ ಎಂಬ ತರುಣನಂತೂ ಕೊರೋನಾ ಭೀತಿಯನ್ನೂ ಲೆಕ್ಕಿಸದೆಯೇ ನಿಶಾಂತ್‍ನ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನೀಡಲು ಪ್ರಯತ್ನಿಸಿದ್ದಾರೆ. ನಿಶಾಂತ್ ನ ಹೊಟ್ಟೆ ಸೇರಿದ್ದ ನೀರನ್ನು ತನ್ನ ಬಾಯಲ್ಲಿ ಹೀರಿ ಹೊರಚೆಲ್ಲಿದ್ದಾರೆ. ಆದರೂ ನಿಶಾಂತ್ ಬದುಕುಳಿದಿಲ್ಲ. ನಿಜವಾಗಿ,

ನೇತ್ರಾವತಿ ಸೇತುವೆಗೆ ತಾಗಿಕೊಂಡಿರುವ ಈ ಗೂಡಿನಬಳಿ ಎಂಬ ಪುಟ್ಟ ಊರಿನಲ್ಲಿ ಇಂಥ ಸಾಹಸಿ ಮುಸ್ಲಿಂ ಯುವಕರ ಬಳಗವೇ ಇದೆ. ಸೇತುವೆಯಿಂದ ಯಾರಾದರೂ ಧುಮುಕಿದರೆ, ಇನ್ನೇನಾದರೂ ಅನಾಹುತವಾದರೆ ಈ ಯುವಕರು ತಮ್ಮನ್ನೇ ಮರೆತು ನದಿಗೆ ಹಾರುತ್ತಾರೆ. ಧುಮುಕಿದವರನ್ನು ಬದುಕಿಸಿ ದಡ ಸೇರಿಸುತ್ತಾರೆ. ಈ ಹಿಂದೆಯೂ ಇಂಥ ಘಟನೆಗಳು ನಡೆದಿವೆ. ಇದು ಅವರ ಉದ್ಯೋಗ ಅಲ್ಲ, ಸಹಜ ಬದುಕು. ಹೀಗಿದ್ದೂ, ಈ ಘಟನೆ ಭಾರೀ ಪ್ರಚಾರ ಪಡೆದುಕೊಳ್ಳಲು ಕಾರಣವೇನು ಎಂದು ಅನ್ವೇಷಿಸಿದರೆ ಮೂರು ಮುಖ್ಯ ಕಾರಣಗಳು ಕಾಣಿಸುತ್ತವೆ.

1. ‘ಕೊರೋನಾ ಭಾರತದಲ್ಲಿ’ ಮಾಧ್ಯಮಗಳು ಮತ್ತು ಪ್ರಭುತ್ವ ಪೋಷಿತ ವ್ಯಕ್ತಿಗಳು ಮುಸ್ಲಿಮರ ಮೇಲೆ ಮಾಡಿದ ನಿರಂತರ ದಾಳಿ, ಹೀನಾತಿಹೀನ ನಿಂದನೆ; ಅವಮಾನ, ಬೈಗುಳ. ಆದರೆ ಇದಕ್ಕೆ ಪ್ರತಿಯಾಗಿ ಮುಸ್ಲಿಮರಿಂದ ಸೇವೆಯ ಮೂಲಕ ಪ್ರತಿಕ್ರಿಯೆ.

2. ಕೆಡುಕಿಗೆ ಧರ್ಮವಿಲ್ಲ ಮತ್ತು ಜನಾಂಗೀಯ ದ್ವೇಷ ಅಪಾಯಕಾರಿ ಎಂಬುದನ್ನು ಅರಿತುಕೊಂಡಿರುವ ಈ ನಾಡಿನ ಸದ್ಗುಣಪ್ರೇಮಿ ಜನರು ಈ ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಸಾರಬೇಕೆಂದು ಬಯಸಿದ್ದು.

3. ಕಲ್ಲಡ್ಕ ಎಂಬ ಊರು ಈ ಘಟನಾ ಸ್ಥಳಕ್ಕಿಂತ ಕೂಗಳತೆಯ ದೂರದಲ್ಲಷ್ಟೇ ಇರುವುದು.

ಕೊರೋನಾ ಈ ದೇಶವನ್ನು ಪ್ರವೇಶಿಸಿದಾಗ ಅದನ್ನು ಎದುರಿಸುವುದಕ್ಕೆ ದೇಶದ ಆಡಳಿತ ಮಾಡಿಕೊಂಡಿರುವ ತಯಾರಿ ಅತ್ಯಂತ ದುರ್ಬಲವಾಗಿತ್ತು. ಭಾರತದಲ್ಲಿ ಲಾಕ್‍ಡೌನ್ ಘೋಷಣೆಯಾದದ್ದು ಮಾರ್ಚ್ 23ರಂದು. ಅದೂ ದಿಢೀರ್ ಆಗಿ. ಆದರೆ ಕೊರೋನಾದ ಇರುವಿಕೆಯನ್ನು 2019 ಡಿಸೆಂಬರ್ 19ರಂದೇ ಚೀನಾ ಜಗತ್ತಿನ ಮುಂದೆ ತೆರೆದಿಟ್ಟು ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಕೊರೋನಾ ಚೀನಾದಿಂದ ದಕ್ಷಿಣ ಕೊರಿಯಾ, ಇರಾನ್, ಇಟಲಿ, ಸ್ಪೈನ್, ಅಮೇರಿಕ ಇತ್ಯಾದಿ ರಾಷ್ಟ್ರಗಳಲ್ಲಿ ಸುತ್ತಾಡಿ ಭಾರತಕ್ಕೆ ಲಗ್ಗೆ ಹಾಕುವಾಗ ಎರಡ್ಮೂರು ತಿಂಗಳುಗಳೇ ಕಳೆದಿತ್ತು. ಆದರೆ, ಕೊರೋನಾ ಪೀಡಿತ ರಾಷ್ಟ್ರಗಳನ್ನು ನೋಡಿ ಭಾರತೀಯ ಸ್ಥಿತಿಗತಿಗೆ ಪೂರಕವಾದ ಕೊರೋನಾ ವಿರೋಧಿ ಯೋಜನೆಗಳನ್ನು ರೂಪಿಸಬೇಕಾಗಿದ್ದ ಪ್ರಭುತ್ವ ಈ ದಿಸೆಯಲ್ಲಿ ಎಂಥ ವೈಫಲ್ಯಕ್ಕೆ ಒಳಗಾಯಿತೆಂದರೆ, ಕೋಟ್ಯಂತರ ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಯಾವ ಪರಿಜ್ಞಾನವೂ ಇಲ್ಲದೇ ದಿಢೀರ್ ಲಾಕ್‍ಡೌನ್ ಘೋಷಿಸಿತು. ಇಟಲಿ, ಇರಾನ್, ದಕ್ಷಿಣ ಕೊರಿಯಾ ರಾಷ್ಟ್ರಗಳ ಸ್ಥಿತಿ-ಗತಿ ಏನೋ ಅದುವೇ ಭಾರತದ್ದು ಅನ್ನುವ ರೀತಿಯಲ್ಲಿ ಪ್ರಭುತ್ವ ವರ್ತಿಸಿತು. ನಿಜವಾಗಿ,

ಭಾರೀ ಜನಸಂಖ್ಯೆಯಿರುವ ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದುಡಿಯಲು ಹೋಗುವ ಕಾರ್ಮಿಕರ ಬೃಹತ್ ಸಂಖ್ಯೆಯು ಇನ್ನಾವ ರಾಷ್ಟ್ರದಲ್ಲೂ ಇರುವ ಸಾಧ್ಯತೆ ಇಲ್ಲ. ಆದ್ದರಿಂದಲೇ, ಕೊರೋನಾವನ್ನು ಎದುರಿಸುವುದಕ್ಕೆ ಭಾರತ ಕೈಗೊಳ್ಳಬೇಕಾದ ಕ್ರಮಗಳು ಅಮೇರಿಕದ್ದೋ ಇಟಲಿಯದ್ದೋ ತದ್ರೂಪಿ ಆಗಬಾರದಿತ್ತು. ದಿಢೀರ್ ಲಾಕ್‍ಡೌನ್ ಭಾರತಕ್ಕೆಷ್ಟು ಸೂಕ್ತ ಎಂಬುದಾಗಿ ವಲಸೆ ಕಾರ್ಮಿಕರನ್ನು ಎದುರಿಟ್ಟು ಆಲೋಚಿಸಬೇಕಿತ್ತು. ಆದರೆ ಈ ವಿಷಯದಲ್ಲಾದ ಭಾರೀ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕೆ ಪ್ರಭುತ್ವ ಮತ್ತು ಅದರ ಕೃಪಾಪೋಷಿತ ಮಾಧ್ಯಮ ಸಂಸ್ಥೆಗಳು ಆಯ್ಕೆ ಮಾಡಿಕೊಂಡದ್ದೇ ಮುಸ್ಲಿಮರನ್ನು. ಇಲ್ಲಸಲ್ಲದ ಆರೋಪ, ನಕಲಿ ವೀಡಿಯೋ, ನಿಂದನೆ, ಬೈಗುಳ, ಬಹಿಷ್ಕಾರ ಇತ್ಯಾದಿಗಳನ್ನು ಮುಸ್ಲಿಮರ ಮೇಲೆ ಹೇರಿ ಕೊರೋನಾದ ಬದಲು ಮುಸ್ಲಿಮರ ವಿರುದ್ಧ ಹೋರಾಟವನ್ನು ಕೈಗೊಳ್ಳಲಾಯಿತು. ವಿಶೇಷ ಏನೆಂದರೆ, ಈ ಎಲ್ಲ ದ್ವೇಷಪೂರಿತ ದಾಳಿಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ.

ಭಾರತೀಯ ಇತಿಹಾಸದಲ್ಲಿಯೇ ದಪ್ಪಕ್ಷರಗಳಲ್ಲಿ ದಾಖಲಿಸಿಡಬೇಕಾದಷ್ಟು ವಿವೇಕಯುತವಾದ ಮತ್ತು ಅತ್ಯಂತ ಮಾನವೀಯವಾದ ಉತ್ತರವನ್ನು ಮುಸ್ಲಿಮ್ ಸಮುದಾಯ ಇದಕ್ಕೆ ಪ್ರತಿಯಾಗಿ ನೀಡಿತು. ಕೊರೋನೋತ್ತರ ಭಾರತ ಎಂದೂ ನೆನಪಿಸಬಹುದಾದಂತಹ ಮಾನವೀಯ ಸೇವಾ ಕಾರ್ಯವನ್ನು ಮುಸ್ಲಿಮ್ ಸಮುದಾಯ ಮುಂಚೂಣಿಯಲ್ಲಿ ನಿಂತು ನೆರವೇರಿಸಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿಯೂ ಅತ್ಯಂತ ದುರ್ಬಲವಾಗಿರುವ ಮುಸ್ಲಿಮ್ ಸಮುದಾಯವು ಕೊರೋನಾ ಪೀಡಿತ ಭಾರತದಲ್ಲಿ ಗೈದಿರುವ ಸೇವೆಯು ಆರ್ಥಿಕವಾಗಿ ಅತ್ಯಂತ ಪ್ರಬಲವಾಗಿರುವ ಯಾವುದೇ ಸಮುದಾಯ ಮಾಡಿರುವ ಸೇವೆಗಿಂತಲೂ ಎಷ್ಟೋ ಪಟ್ಟು ಮಿಗಿಲಾದುದು. ಮುಸ್ಲಿಮ್ ಸಮುದಾಯದ ಅತಿ ಸಣ್ಣ ಸಂಘಟನೆಯಿಂದ ಹಿಡಿದು ರಾಷ್ಟ್ರಮಟ್ಟದ ಸಂಘಟನೆಗಳವರೆಗೆ ಎಲ್ಲವೂ ಜಿದ್ದಿಗೆ ಬಿದ್ದು ಜನರ ಸೇವೆಗೆ ಇಳಿದುವು. ಧರ್ಮ ನೋಡದೆಯೇ ಮನೆ ಮನೆಗೆ ಆಹಾರ ವಸ್ತುಗಳನ್ನು ವಿತರಿಸಿದುವು. ವಿದೇಶದಿಂದ ಆಗಮಿಸಿದವರಿಗೆ ತಮ್ಮ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು, ಮದುವೆ ಸಭಾಂಗಣ, ಆಸ್ಪತ್ರೆ, ಮದರಸ ಮತ್ತು ಮಸೀದಿಯನ್ನೂ ಕ್ವಾರೆಂಟೈನ್‍ಗಾಗಿ ಬಿಟ್ಟುಕೊಟ್ಟಿತು. ಕೊರೋನಾ ಪೀಡಿತ ಮುಸ್ಲಿಮೇತರ ವ್ಯಕ್ತಿಗಳ ಶವಸಂಸ್ಕಾರ ನಡೆಸಿತು. ವಲಸೆ ಕಾರ್ಮಿಕರ ಪಾಲಿಗೆ ಆಪದ್ಭಾಂಧವರಾಗಿ ಕೆಲಸ ಮಾಡಿದ್ದು ಇದೇ ಮುಸ್ಲಿಮ್ ಸಮುದಾಯವೇ. ಪ್ರತಿ ಮಸೀದಿಗಳೂ ತಮ್ಮ ವ್ಯಾಪ್ತಿಯ ಮನೆಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದ ಅಭೂತಪೂರ್ವ ಬೆಳವಣಿಗೆಯೂ ನಡೆಯಿತು. ಅಂದಹಾಗೆ,

ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯವೊಂದು ಕೊರೋನಾ ಪೀಡಿತ ಭಾರತದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸಿದ್ದು ದೇಶವೇ ಎದ್ದು ನಿಂತು ಚಪ್ಪಾಳೆ ತಟ್ಟಬೇಕಾದಷ್ಟು ಮಹತ್ವಪೂರ್ಣವಾದುದು. ವಿಶೇಷ ಏನೆಂದರೆ, ದೇಶದ ಮುಖ್ಯವಾಹಿನಿಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಪ್ರಭುತ್ವ ಬೆಂಬಲಿತ ನಾಯಕರು ಹೀನಾತಿಹೀನವಾಗಿ ನಿಂದಿಸುತ್ತಿರುವ ಮತ್ತು ಅವಮಾನಿಸುತ್ತಿರುವ ಸಂದರ್ಭದಲ್ಲೇ ಮುಸ್ಲಿಮರಿಂದ ಇಂಥದ್ದೊಂದು ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ ಎಂಬುದು. ದ್ವೇಷದ ಯಾವ ಪ್ರಚಾರಕ್ಕೂ ಮುಸ್ಲಿಮರು ಹತಾಶರಾಗಲಿಲ್ಲ. ಬೈಗುಳಕ್ಕೆ ಜಗ್ಗಲಿಲ್ಲ. ಪ್ರಭುತ್ವವೇ ತೋಳೇರಿಸಿಕೊಂಡು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಹೊರಟಾಗಲೂ ಮುಸ್ಲಿಮರು ಹಿಂಜರಿಯಲಿಲ್ಲ. ಅವರು ನಿಂದನೆಗೆ ಪ್ರತಿಯಾಗಿ ಮುಗುಳ್ನಕ್ಕರು. ಬೈಗುಳಕ್ಕೆ ಪ್ರತಿಯಾಗಿ ಪ್ರೀತಿಸಿದರು. ಸುಳ್ಳಿಗೆ ಪ್ರತಿಯಾಗಿ ಪ್ರತಿ ಸುಳ್ಳನ್ನು ಉತ್ಪಾದಿಸದೆಯೇ ಸತ್ಯವನ್ನು ನಿರೀಕ್ಷಿಸಿದರು. ಹಾಗಂತ,

ಹೀಗೆ ಪ್ರತಿಕ್ರಿಯಬೇಕಾದುದು ಅವರ ಅನಿವಾರ್ಯತೆಯೇನೂ ಆಗಿರಲಿಲ್ಲ. ಅವರಿಗೂ ಪ್ರತಿನಿಂದೆ, ಪ್ರತಿ ಸುಳ್ಳು, ಪ್ರತಿ ಬೈಗುಳ ಸುರಿಸಿಕೊಂಡು ಸುಮ್ಮನಿರಬಹುದಿತ್ತು. ನಯಾ ಪೈಸೆಯನ್ನೂ ಖರ್ಚು ಮಾಡದೇ ಪ್ರಭುತ್ವದೊಂದಿಗೆ ಅಸಹಕಾರ ತೋರಬಹುದಿತ್ತು. ಸಂಕಷ್ಟ ಭಾರತದ ಚಿತ್ರಗಳು ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ನಕಾರಾತ್ಮಕವಾಗಿ ಮಾತ್ರ ಆಲೋಚಿಸಬಹುದಿತ್ತು. ಆದರೆ ಇಲ್ಲಿನ ಮಾಧ್ಯಮಗಳು ಮತ್ತು ಪ್ರಭುತ್ವ ಬೀಸಿದ ಗಾಳಕ್ಕೆ ಮುಸ್ಲಿಮ್ ಸಮುದಾಯ ಸಿಲುಕಿಕೊಳ್ಳದೇ ಸ್ವತಃ ಆ ಗಾಳವನ್ನೇ ನುಂಗಿತಲ್ಲದೇ ಪ್ರತಿಯಾಗಿ ನಗು ಚೆಲ್ಲಿತು. ಗಾಳದ ಮೊನೆಯು ಅವರ ಹೊಟ್ಟೆಯಲ್ಲಿ ಇಂಚಿಂಚೂ ಗಾಯ ಮಾಡುತ್ತಿದ್ದರೂ ಮುಸ್ಲಿಮರು ಅದನ್ನು ತೋರಗೊಡಲೇ ಇಲ್ಲ. ಅವರು ಎಸೆದ ಗಾಳಗಳನ್ನೆಲ್ಲ ಮುಸ್ಲಿಮರು ನುಂಗುತ್ತಾ ಹೋದರು. ಗಾಳ ದೇಹದಲ್ಲಿ ಮಾಡುತ್ತಿರುವ ಗಾಯಗಳನ್ನೆಲ್ಲ ಸಹಿಸುತ್ತಾ ಹೋದರು. ಎಂಥ ಸಂದರ್ಭ ಬಂದರೂ ನೋವಿಗೆ ಪ್ರತಿಯಾಗಿ ನೋವನ್ನೇ ಮರಳಿಸಲಾರೆವು ಎಂದು ಪಣ ತೊಟ್ಟರು. ಅವುಡುಗಚ್ಚಿ ಪ್ರೀತಿಯನ್ನು ಹಂಚಿದರು. ಗೂಡಿನಬಳಿಯ ಘಟನೆಯೂ ಇದರಲ್ಲಿ ಒಂದು. “ಕಲ್ಲಡ್ಕದ” ಮುಸ್ಲಿಮ್ ದ್ವೇಷಿ ಭಾಷಣವು ನಿಶಾಂತ್‍ನಿಗಾಗಿ ಮರುಗದಂತೆ ಮತ್ತು ಆತನನ್ನು ಬದುಕಿಸಲಿಕ್ಕಾಗಿ ನೀರಿಗೆ ಹಾರದಂತೆ ಆ ಯುವಕನನ್ನು ತಡೆಯಲಿಲ್ಲ. ಆದ್ದರಿಂದಲೇ, ದೇಶದಾದ್ಯಂತ ಮುಸ್ಲಿಮರು ಇವತ್ತು ಶ್ಲಾಘನೆಗೆ ಒಳಗಾಗುತ್ತಿದ್ದಾರೆ, ಅವರ ಸೇವಾಕಾರ್ಯಗಳನ್ನು ನಿಂದನೆಗೈದವರೇ ಒಳಗೊಳಗೇ ಮೆಚ್ಚಿಕೊಂಡು ಆಡುತ್ತಿದ್ದಾರೆ. ಇಷ್ಟೆಲ್ಲಾ ಆರೋಪಗಳನ್ನು ಎದುರಿಸಿಯೂ ಈ ಮಟ್ಟದಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಮುಸ್ಲಿಮರಿಗೆ ಹೇಗೆ ಸಾಧ್ಯವಾಯಿತು ಎಂದು ಅಚ್ಚರಿಪಡುತ್ತಿದ್ದಾರೆ.

ಕೊರೋನೋತ್ತರ ಭಾರತವು ಮುಸ್ಲಿಮರ ಈ ವಿವೇಕಪೂರ್ಣ ಮತ್ತು ಪ್ರಬುದ್ಧ ವರ್ತನೆಯನ್ನು ಖಂಡಿತ ಬಹುಕಾಲ ನೆನಪಿನಲ್ಲಿಡಲಿದೆ.