ಈದ್: ಒಂದು ಮನೆಯ ಕತೆ

0
598

ಸನ್ಮಾರ್ಗ ಈದ್ ಸಂಪಾದಕೀಯ

ನಾವು ಇಷ್ಟಪಟ್ಟು ಕಟ್ಟಿಕೊಳ್ಳುವ ಮನೆ ಹೇಗಿರುತ್ತೆ? ಅದರ ವಿನ್ಯಾಸ ಹೇಗಿರುತ್ತೆ? ಇಂಜಿನಿಯರ್ ಮಾಡಿಕೊಟ್ಟ ವಿನ್ಯಾಸದಂತೆಯೇ ಮನೆ ರಚನೆಯಾಗಬೇಕೆಂಬ ಉಮೇದಿನಲ್ಲಿ ನಾವು ಏನೆಲ್ಲ ಮಾಡುತ್ತೇವೆ? ಹೇಗೆಲ್ಲ ಕಾರ್ಯಪ್ರವೃತ್ತರಾಗುತ್ತೇವೆ? ಎಲ್ಲೂ ಯಾವ ಮೂಲೆಯಲ್ಲೂ ಒಂದೇ ಒಂದೇ ನಕಾರಾತ್ಮಕ ಅಂಶ ಸೇರಿಕೊಳ್ಳದಂತೆ ಎಷ್ಟೆಲ್ಲ ಶ್ರಮ ವಹಿಸುತ್ತೇವೆ? ಭೌತಿಕ ಲೋಕದಲ್ಲಿ ಇವೆಲ್ಲ ಸಹಜ. ಕೇವಲ ಮನೆಯೊಂದೇ ಅಲ್ಲ, ಮಗುವನ್ನು ಬೆಳೆಸುವಾಗಲೂ ನಮ್ಮಲ್ಲಿ ಇಂಥದ್ದೊಂದು ಕಟು ಎಚ್ಚರಿಕೆ ಇರುತ್ತದೆ. ಮಗು ಯಾವ ಲೋಪದೋಷವೂ ಇಲ್ಲದೇ ಬೆಳೆಯಬೇಕು ಮತ್ತು ಯಾವ ಕೆಟ್ಟತನಗಳೂ ಸುಳಿಯದೇ ಪೂರ್ಣ ಶುದ್ಧಿಯೊಂದಿಗೆ ಬಾಳಬೇಕು ಎಂಬ ಮಹದಾಸೆ ಹೆತ್ತವರಲ್ಲಿರುತ್ತದೆ. ರಮಝಾನ್ ಅನ್ನುವುದು ನಾವು ಕಟ್ಟಬಯಸುವ ಇಂಥದ್ದೇ ಒಂದು ಮನೆ ಅಥವಾ ಇಂಥದ್ದೇ ಒಂದು ಮಗು. ನಾವು ಸದ್ಯ ವಾಸಿಸುತ್ತಿರುವ ಮನೆಯನ್ನು ರಮಝಾನ್‍ನ 30 ದಿನಗಳಲ್ಲಿ ಹೇಗೆ ಇಟ್ಟುಕೊಂಡಿದ್ದೇವೆ ಎಂಬುದನ್ನೊಮ್ಮೆ ಅವಲೋಕಿಸಿಕೊಳ್ಳಿ. ರಮಝಾನ್‍ಗಿಂತ ಮೊದಲಿದ್ದ ಮನೆಯಲ್ಲ ರಮಝಾನ್‍ನದ್ದು. ರಮಝಾನ್‍ಗಿಂತ ಮೊದಲು ನಮ್ಮ ಮನೆಯಲ್ಲಿ ಕುರ್‍ಆನ್ ಪಾರಾಯಣ ಕಡಿಮೆಯಿತ್ತು. ಟಿ.ವಿ. ವೀಕ್ಷಣೆಗೆ ಅತ್ಯಧಿಕ ಸಮಯ ವ್ಯಯವಾಗುತ್ತಿತ್ತು. ರಾತ್ರಿ ನಮಾಝï ನಿರಂತರವಾಗಿರಲಿಲ್ಲ. ಐಚ್ಛಿಕ ನಮಾಝïಗಳು ಸಂದರ್ಭಾನುಸಾರವಷ್ಟೇ ಇತ್ತು… ಆಹಾರ ಸೇವನೆಯಲ್ಲೂ ಕ್ರಮಪ್ರಕಾರವಿರಲಿಲ್ಲ. ಮನೆ ಮಂದಿಯೆಲ್ಲ ಜೊತೆಸೇರಿ ಊಟ ಮಾಡುವಷ್ಟು ಸಮಯಾವಕಾಶವೋ ಸಂದರ್ಭವೋ ಕಡಿಮೆ ಇತ್ತು. ಅನಗತ್ಯ ಮಾತುಕತೆಗಳೇ ಅಧಿಕವಿದ್ದುವು. ನೆರಮನೆಯವರ ಬಗ್ಗೆ, ಕುಟುಂಬಿಕರ ಬಗ್ಗೆ, ಗೆಳೆಯ-ಗೆಳತಿಯರ ಬಗ್ಗೆ… ಕುಹಕದ ಮಾತುಗಳು, ತಮಾಷೆ, ವ್ಯಂಗ್ಯಗಳು ಆಗಾಗ ಬಂದು ಹೋಗಬಹುದಾದ ರೀತಿಯಲ್ಲಿ ಚರ್ಚೆಗಳಾಗುತ್ತಿದ್ದುವು. ಊಟ-ತಿಂಡಿಗೂ ಮಿತಿ ಇರಲಿಲ್ಲ. ನಮಾಝನ್ನು ಸಂಘಟಿತವಾಗಿ ನಡೆಸುವ ಕಾಳಜಿ ಕಡಿಮೆ ಇತ್ತು. ಹೀಗೆ ಈ ಪಟ್ಟಿ ಉದ್ದವಿದೆ. ಆದರೆ, ರಮಝಾನ್‍ನ ಆಗಮನವು ಈ ಎಲ್ಲವುಗಳನ್ನು ಎಷ್ಟು ಬಲವಾಗಿ ಅದುಮಿ ಬಿಡುತ್ತದೆಂದರೆ, ಪ್ರತಿ ಮನೆಯ ವಾತಾವರಣವೇ ಸಂಪೂರ್ಣ ಬದಲಾಗಿ ಬಿಡುತ್ತದೆ. ಈ ಬದಲಾವಣೆಯು ರಮಝಾನ್‍ಗಿಂತ ಒಂದುವಾರ ಮೊದಲೇ ಪ್ರಾರಂಭವಾಗುತ್ತದೆ. ‘ಮನೆ ಸ್ವಚ್ಛ’ ಎಂದು ಇದಕ್ಕೆ ಹೆಸರು. ಆ ಬಳಿಕ ಈ ಸ್ವಚ್ಛತೆಯ ಕಸಬರಿಕೆ ಮನೆಯ ಒಳಗೆ ಪ್ರವೇಶಿಸುತ್ತದೆ. ಮನೆಯೊಳಗಿನ ಭೌತಿಕ ಕಸಗಳನ್ನೆಲ್ಲ ಗುಡಿಸಿದ ಬಳಿಕ ಅದು ಆಧ್ಯಾತ್ಮಿಕ ಕಸದ ವಿಲೇವಾರಿಯ ಕೆಲಸ ಪ್ರಾರಂಭಿಸುತ್ತದೆ. ಆವರೆಗೆ ಮನೆಯ ವಾತಾವರಣ ಹೇಗಿತ್ತೋ ಬಹುತೇಕ ಅದಕ್ಕೆ ವಿರುದ್ಧವಾದ ಮತ್ತು ಮನಸ್ಸು ಉಲ್ಲಸಿತಗೊಳ್ಳುವ ವಾತಾವರಣವೊಂದು ಆ ಬಳಿಕ ಮನೆಯೊಳಗೆ ನಿರ್ಮಾಣವಾಗತೊಡಗುತ್ತದೆ. ಮ ನೆವಾಸಿಗಳು ಪ್ರತಿಕ್ಷಣವೂ ಮೌಲ್ಯವಂತರಾಗುತ್ತಾ ಹೋಗುತ್ತಾರೆ. ಮನೆಯೊಳಗಿನ ವಾತಾವರಣವೂ ಮೌಲ್ಯಯುತವಾಗುತ್ತಾ ಹೋಗುತ್ತದೆ. ಒಳ್ಳೆಯ ಮಾತುಕತೆಗಳು, ಇನ್ನೊಬ್ಬರ ಬಗೆಗಿನ ಈಷ್ರ್ಯೆರಹಿತ ಮಾತುಗಳು, ಎಲ್ಲರ ಒಳಿತನ್ನೇ ಬಯಸುವ ಹೃದಯ, ಅಧ್ಯಾತ್ಮದ ಸ್ಫೂರ್ತಿ ತುಂಬಿ ತುಳುಕುವ ಕಣ್ಣುಗಳು, ಮನೆಯ ಪ್ರತಿ ಇಂಚಿಂಚಿಗೂ ಕೇಳಿಸಬಹುದಾದ ಕುರ್‍ಆನ್ ಪಾರಾಯಣ ಮುಂತಾದುವುಗಳಿಂದ ಮನೆ ತುಂಬಿಕೊಂಡಿರುತ್ತದೆ.

ರಮಝಾನ್ ನಿರ್ಗಮನದ ಬಳಿಕವೂ ಈ ನಮ್ಮ ಮನೆಯನ್ನು ನಾವು ಹೀಗೆಯೇ ಉಳಿಸಿಕೊಳ್ಳುತ್ತೇವೆಯೋ ಅಥವಾ ರಮಝಾನ್‍ನ ನಿರ್ಗಮನದೊಂದಿಗೆ ಮನೆಯ ಈ ವಾತಾವರಣಕ್ಕೂ ನಿರ್ಗಮನದ ದಾರಿಯನ್ನು ತೋರಿಸುತ್ತೇವೆಯೋ ಎಂಬುದೇ ಈದ್ ಎತ್ತುವ ಬಹು ಮುಖ್ಯ ಪ್ರಶ್ನೆ. ಇದಕ್ಕೆ ನಾವು ಕೊಡಬಹುದಾದ ಪ್ರಾಮಾಣಿಕ ಉತ್ತರವೇ ನಮ್ಮ ನಮ್ಮ ಈದ್. ರಮಝಾನ್‍ನಲ್ಲಿ ಕಟ್ಟಿದ ಸುಂದರ ಮನೆಯನ್ನು ಶವ್ವಾಲ್‍ನಲ್ಲಿ ಉರುಳಿಸದಿರಿ ಅನ್ನುವುದೇ ಈದ್‍ನ ಕಳಕಳಿ. ಆಯ್ಕೆಯಂತೂ ಮುಕ್ತವಾಗಿದೆ.

ಇನ್ನು ತೀರ್ಮಾನ ನಮ್ಮದು.