ಈ ಪ್ರಶ್ನೆಗಳು ಹೊರಗೆ ಕಂಡಷ್ಟು ಮುಗ್ಧವಲ್ಲ

0
500

ಸನ್ಮಾರ್ಗ ಸೀರತ್ ಸಂಪಾದಕೀಯ

ಎರಡು ಪ್ರಶ್ನೆಗಳಿವೆ.

1. ಪ್ರವಾದಿ ಮುಹಮ್ಮದ್‍ರ(ಸ) ವಿಷಯದಲ್ಲಿ ಮುಸ್ಲಿಮರೇಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ?

2. ಮುಸ್ಲಿಮರ ಧೋರಣೆಯೇಕೆ ಆಕ್ರಮಣಕಾರಿ ರೂಪದಲ್ಲಿರುತ್ತದೆ?

ನಿಜವಾಗಿ, ಮೇಲಿನ ಎರಡೂ ಪ್ರಶ್ನೆಗಳು ಬಾಹ್ಯವಾಗಿ ಕಂಡಷ್ಟು ಮುಗ್ಧವಲ್ಲ. ಭಾವನಾತ್ಮಕ ಪ್ರತಿಕ್ರಿಯೆ ಮತ್ತು ಆಕ್ರಮಣಕಾರಿ ಧೋರಣೆ- ಎಂಬೆರಡು ಪದ ಪ್ರಯೋಗಗಳಲ್ಲಿ ಹೊರಗೆ ಕಾಣದ ಕೆಲವು ಅಂತರ್ಗತ ಸಂಗತಿಗಳಿವೆ. ಪ್ರವಾದಿಗೆ ಸಂಬಂಧಿಸಿ ಮುಸ್ಲಿಮರು ಯಾವಾಗೆಲ್ಲ ಆಕ್ರಮಣಕಾರಿಯಾಗಿ ಮತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬ ಉಪ ಪ್ರಶ್ನೆಯನ್ನು ಕೇಳಿದಾಗ ಮೂಲ ಪ್ರಶ್ನೆ ಬಿಚ್ಚಿಕೊಳ್ಳತೊಡಗುತ್ತದೆ.

ಪ್ರವಾದಿ ಮುಹಮ್ಮದರನ್ನು(ಸ) ಪ್ರಶ್ನಾತೀತವಾಗಿ ಒಪ್ಪಿಕೊಳ್ಳಬೇಕು ಮತ್ತು ಅವರನ್ನು ನಿಕಷಕ್ಕೆ ಒಡ್ಡುವುದು ಅಪರಾಧ ಎಂದು ಯಾವುದೇ ಜನಸಮೂಹದ ಮೇಲೆ ಒತ್ತಡವನ್ನು ಹೇರುವುದು ಸ್ವತಃ ಪ್ರವಾದಿಯವರ(ಸ) ಶಿಕ್ಷಣಕ್ಕೇ ವಿರುದ್ಧ. ಮುಹಮ್ಮದರಿಗೆ ಪ್ರವಾದಿತ್ವ ಲಭಿಸಿದ್ದು 40ನೇ ವರ್ಷದಲ್ಲಿ. ಇಲ್ಲಿಂದ 53 ವರ್ಷಗಳ ವರೆಗೆ ಅವರು ಮಕ್ಕಾದಲ್ಲಿದ್ದರೂ ಅವರಿಗೆ ಅನುಯಾಯಿಗಳು ಸಿಕ್ಕಿದ್ದು ಜುಜುಬಿ ಸಂಖ್ಯೆಯಲ್ಲಿ. ಆ ಬಳಿಕ ಮದೀನಕ್ಕೆ ಹೋದರು. ಮಕ್ಕಾದ ಪ್ರಮಾಣಕ್ಕೆ ಹೋಲಿಸಿದರೆ, ಅಲ್ಲಿನ ಅನುಯಾಯಿಗಳ ಸಂಖ್ಯೆ ಹೆಚ್ಚು. ಆ ಬಳಿಕ ಪುನಃ ಮಕ್ಕಾಕ್ಕೆ ಬಂದರು. ಈ ಮೂರೂ ಹಂತಗಳು ಪ್ರವಾದಿಯವರ ಬದುಕಿನ ಬೇರೆ ಬೇರೆ ಮಜಲುಗಳು. ಆದರೆ,

ಈ ಮೂರು ಹಂತಗಳಲ್ಲೂ ಪ್ರವಾದಿ ವಿಮರ್ಶಾತೀತರಾಗಿರಲಿಲ್ಲ. ಅವರು ಮತ್ತು ಅವರ ವಿಚಾರಧಾರೆ ವಿಮರ್ಶೆಗೆ ಒಳಗಾಗಿದೆ. ಸ್ವತಃ ಪವಿತ್ರ ಕುರ್‍ಆನೇ ಅವರ ನಿಲುವನ್ನು ಪ್ರಶ್ನಿಸಿದೆ. ತಪ್ಪು ಎಂದು ಹೇಳಿ ತಿದ್ದಿದೆ. ಪತ್ನಿಯರೇ ಪ್ರಶ್ನಿಸಿದ್ದಾರೆ. ಅವರ ಅನುಯಾಯಿಗಳು ಅವರಿಗಿಂತ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಈ ಯಾವ ಸಂದರ್ಭದಲ್ಲೂ ಪ್ರವಾದಿ ಇವುಗಳಿಗೆ ಭಾವ ನಾತ್ಮಕವಾಗಿ ಅಥವಾ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿಲ್ಲ. ಅಂದು ಮಾತ್ರವಲ್ಲ, ಇಂದು ಕೂಡ ಜಾಗತಿಕವಾಗಿ ವಿಮರ್ಶೆ ಮತ್ತು ಪ್ರ ಶ್ನೆಗಳು ಕೇಳಿ ಬರುತ್ತಲೂ ಇವೆ. ಪ್ರವಾದಿ ಪ್ರಸ್ತುತ ಪಡಿಸಿರುವ ಆಹಾರಕ್ರಮ, ಶಿಕ್ಷಾ ನೀತಿ, ಮದ್ಯ ವಿರೋಧಿ- ಬಡ್ಡಿ ವಿರೋಧಿ ನಿಲುವುಗಳು, ಕೌಟುಂಬಿಕ ನೀತಿ-ನಿಯಮಗಳು, ಮಹಿಳೆಯರ ಕುರಿತಾಗಿರುವ ಧೋರಣೆಗಳು, ಪವಿತ್ರ ಕುರ್‍ಆನಿನ ವಚನಗಳು… ಎಲ್ಲವೂ ವಿಮರ್ಶೆಗೆ ಒಳಗಾಗುತ್ತಲೇ ಇವೆ ಮತ್ತು ಈ ವಿಮರ್ಶೆಗಳು ಆಕ್ರಮಣಕಾರಿ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ತುತ್ತಾದದ್ದು ಶೂನ್ಯ ಅನ್ನುವಷ್ಟು ಕಡಿಮೆ. ಹಾಗಿದ್ದರೆ,
ಡಿ.ಜೆ. ಹಳ್ಳಿಯಲ್ಲಿ ನಡೆದಿದ್ದೇನು, ಫ್ರಾನ್ಸ್ ನಲ್ಲಿ ಅಥವಾ ಇನ್ನಿತರ ಕಡೆ ನಡೆದಿರುವುದೆಲ್ಲ ಏನು ಎಂಬ ಪ್ರಶ್ನೆ ಉದ್ಭವಿಸಬಹುದು. ನೇರವಾಗಿ ಹೇಳುವುದಾದರೆ ಅವು ವಿಮರ್ಶೆ ಅಲ್ಲ. ವ್ಯಂಗ್ಯ, ಅಣಕ, ದೂಷಣೆ, ಅಪಹಾಸ್ಯ ಇತ್ಯಾದಿ ಇತ್ಯಾದಿಗಳು. ಆದ್ದರಿಂದ ಭಾವನಾತ್ಮಕ ಮತ್ತು ಆಕ್ರಮಣಕಾರಿ ಪ್ರತಿಕ್ರಿಯೆಗಳು ಎಂಬ ಏಕ ವಾಕ್ಯವನ್ನು ಬಿಡಿಸಿ, ಅವಲೋಕಿಸುವ ಅಗತ್ಯ ಇದೆ. ಹಾಗಂಥ,

ಇಂಥ ಪ್ರತಿಕ್ರಿಯೆಗಳು ಸಮರ್ಥನೀಯ ಎಂದಲ್ಲ. ಅವು ಖಂಡನೀಯ ಮತ್ತು ಕಾನೂನು ಪ್ರಕಾರ ಅಂಥವುಗಳಿಗೆ ಶಿಕ್ಷೆಯಾಗಬೇಕು. ಅಂಥ ಪ್ರತಿಕ್ರಿಯೆಗಳು ಪ್ರವಾದಿಯವರ(ಸ) ವರ್ಚಸ್ಸಿನ ಮೇಲೆ ಹಾನಿಯೆಸಗುತ್ತವೆ ಮತ್ತು ಅಪಹಾಸ್ಯ ಮಾಡಿದವರ ಮೇಲೆಯೇ ಸಾರ್ವಜನಿಕ ಅನುಕಂಪಕ್ಕೆ ಕಾರಣವಾಗುತ್ತದೆ.

ಇದಕ್ಕೆ ಇನ್ನೊಂದು ಮಗ್ಗುಲೂ ಇದೆ.

ಪ್ರವಾದಿ ಮುಹಮ್ಮದರು(ಸ) ನಿರ್ದಿಷ್ಟ ದಿನ, ತಿಂಗಳು, ವರ್ಷದಲ್ಲಿ ಮಾತ್ರ ಸ್ಮರಣೆಗೆ ಒಳಗಾಗಿರುವ ವ್ಯಕ್ತಿ ಅಲ್ಲ. ಅವರನ್ನು ಪ್ರತಿದಿ ನವೂ ಸ್ಮರಿಸದ, ಅವರ ವಚನಗಳನ್ನು ಉಲ್ಲೇಖಿಸದ, ಅವರ ಬಗ್ಗೆ ಅಭಿಮಾನ ಪಡದ ಒಂದೇ ಒಂದು ಮುಸ್ಲಿಮ್ ಮನೆ ಇರುವ ಸಾಧ್ಯತೆ ಇಲ್ಲ. ಪ್ರವಾದಿಯವರು(ಸ) ಮುಸ್ಲಿಮರಿಗೆ ಅಷ್ಟು ನಿಕಟ ಮತ್ತು ಆಪ್ತ. ಇಂಥದ್ದೊಂದು ಸಂಬಂಧವನ್ನು ತನ್ನ ಸಮುದಾಯದ ಜೊತೆ ಬೇರೆ ಯಾವುದೇ ನಾಯಕರು ಇರಿಸಿಕೊಂಡಿದ್ದಾರೋ ಎಂಬುದು ಸಂಶಯ. ಪ್ರವಾದಿಯವರ(ಸ) ಜೊತೆಗೆ ಮುಸ್ಲಿಮ್ ಸಮುದಾಯದ ಈ ನಿಕಟ ಸಂಬಂಧವೇ ಅವರ ಶೀಘ್ರ ಮತ್ತು ಕೆಲವೊಮ್ಮೆ ಆವೇಶಭರಿತ ಪ್ರತಿಕ್ರಿಯೆಗಳ ಹಿಂದಿನ ಕಾರಣ ಎಂದೂ ಹೇಳಬಹುದು. ವಿಷಾದ ಏನೆಂದರೆ,
ಪ್ರವಾದಿ(ಸ)ಯನ್ನು ವ್ಯಂಗ್ಯವಾಗಿ ಇರಿಯುವ, ಹೀನಾಯವಾಗಿ ಚಿತ್ರಿಸುವ ಮತ್ತು ಅವಹೇಳ ನಕಾರಿಯಾಗಿ ವಿವರಿಸುವವರು ಅವರನ್ನು(ಸ) ಆಳವಾಗಿ ಓದಿರುವುದಿಲ್ಲ ಅಥವಾ ವಿರೋಧಕ್ಕಾಗಿಯೇ ವಿರೋಧಿಸುವವರ ಬರಹಗಳನ್ನಷ್ಟೇ ಓದಿರುತ್ತಾರೆ ಎಂಬುದು. ಇತಿಹಾಸದ ಯಾವುದೇ ವ್ಯಕ್ತಿಯನ್ನು ನೀವು ದಕ್ಕಿಸಿಕೊಳ್ಳಬೇಕಾದರೆ ಅವರನ್ನು ವಿವರಿಸುವ ಎಲ್ಲ ಮೂಲಗಳ ಬರಹಗಳನ್ನೂ ಓದಬೇಕು. ಮುಕ್ತ ಮನಸ್ಸೂ ಬೇಕು. ಸದ್ಯ ಅಲಭ್ಯವಾಗಿರುವುದೇ ಇವೆರಡು. ಅಂದಹಾಗೆ,

ಪ್ರವಾದಿ ಮುಹಮ್ಮದರನ್ನು ಈ ಸಮಾಜಕ್ಕೆ ಸರಿಯಾದ ರೂಪದಲ್ಲಿ ಪರಿಚಯಿಸುವುದೇ ಇಂದಿನ ದಿನಗಳಲ್ಲಿ ಪ್ರವಾದಿಯವರಿಗೆ ಮುಸ್ಲಿಮ್ ಸಮುದಾಯ ನೀಡಬಹುದಾದ ಅತಿದೊಡ್ಡ ಗೌರವ.