ಸತ್ಯಾಗ್ರಹ ಮತ್ತು ಬಂದೂಕಿನ ಮುಖಾಮುಖಿ

0
1052

ಏ ಕೆ ಕುಕ್ಕಿಲ

1896 ಡಿಸೆಂಬರ್ ತಿಂಗಳು

ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ಡರ್ಬನ್‍ನ ಬಂದರಿನಲ್ಲಿ ಇಳಿದರು. ಆ ಇಳಿಯುವಿಕೆಯೂ ಸುಲಭದ್ದಾಗಿರಲಿಲ್ಲ. ಬಾಂಬೆಯಿಂದ ಹೊರಟ ಎರಡು ಹಡಗುಗಳಲ್ಲಿ ಒಟ್ಟು 800ರಷ್ಟು ಜನರಿದ್ದರು. ಇವರಲ್ಲಿ ಮಹಾತ್ಮಾ ಗಾಂಧಿ ಮತ್ತು ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ವಿಧವೆ ಸಹೋದರಿಯ ಪುತ್ರನೂ ಸೇರಿದ್ದರು. ಆ ಕಾಲದಲ್ಲಿ ಹಡಗಿನ ಪ್ರಯಾಣಿಕರು ನೇರವಾಗಿ ಇನ್ನೊಂದು ರಾಷ್ಟ್ರದ ಬಂದರಿನಲ್ಲಿ ಇಳಿಯುವಂತಿರಲಿಲ್ಲ. ವೈದ್ಯ ಕೀಯ ಪರೀಕ್ಷೆ ನಡೆಯಬೇಕು. 800 ಮಂದಿಯ ವೈದ್ಯಕೀಯ ಪರೀಕ್ಷೆ ನಡೆಯುವುದೆಂದರೆ ಅದು ಸುಲಭದ ಮಾತೂ ಆಗಿರಲಿಲ್ಲ. ಅಲ್ಲದೇ, ಈ ಎರಡು ಹಡಗುಗಳು ಬಾಂಬೆಯಿಂದ ಹೊರಡುವಾಗ ದೇಶದಲ್ಲಿ ಪ್ಲೇಗ್ ಹಾವಳಿಯಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ಗಾಂಧೀಜಿಯವರ ಸಹೋದರಿಯ ಪತಿಯೂ ಅದಕ್ಕೆ ಬಲಿಯಾಗಿದ್ದ. ಸ್ವತಃ ಗಾಂಧೀಜಿಯವರೇ ತನ್ನ ಮನೆಗೆ ಕರೆತಂದು ಆರೈಕೆ ಮಾಡಿದರೂ ಆತ ಬದುಕುಳಿದಿರಲಿಲ್ಲ. ಆದ್ದರಿಂದ ಈ ಪ್ರಯಾಣಿಕರ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಆಫ್ರಿಕಾದ ವೈದ್ಯರ ಮೇಲಿತ್ತು. ಇದರ ನಡುವೆ ಈ ಹಡಗಿನಲ್ಲಿರುವ ಭಾರತೀಯರ ವಿರುದ್ಧ ಡರ್ಬನ್‍ನ ಬಿಳಿಯರು ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಹಡಗಿನಿಂದ ಕೆಳಗಿಳಿಯಲು ಬಿಡಲಾರೆವು ಎಂದು ಘೋಷಿಸುತ್ತಿದ್ದರು. ಎರಡು ಹಡಗುಗಳಲ್ಲಿ ಭಾರತೀಯರನ್ನು ಅಲ್ಲಿಗೆ ಕರೆಸಿಕೊಂಡಿದ್ದು ದಾದಾ ಅಬ್ದುಲ್ಲಾ  ಆಂಡ್ ಕಂಪೆನಿ. ಅದರ ಕಾರ್ಯನಿರ್ವಾಹಕ ಪಾಲುದಾರರಾಗಿದ್ದ ಶೇಕ್ ಅಬ್ದುಲ್ ಕರೀಮ್ ರಾಣೆಯವರಿಗೆ ಈ ಪ್ರತಿಭಟನಾ ನಿರತ ಬಿಳಿಯರು ಬಗೆಬಗೆಯ ಆಮಿಷಗಳನ್ನು ಒಡ್ಡಿದರು. ಅವರನ್ನು ಹಿಂದಕ್ಕೆ ಕಳಿಸಿದರೆ ಕಂಪೆನಿಗಾದ ನಷ್ಟವನ್ನು ತುಂಬಿಕೊಡುವುದಾಗಿಯೂ ಭರವಸೆ ನೀಡಿದರು. ಅಲ್ಲಿನ ಆಡಳಿತದ ಬೆಂಬಲವೂ ಪ್ರತಿಭಟನಾಕಾರರಿಗಿತ್ತು. ಆದರೆ ಶೇಕ್ ಬಗ್ಗಲಿಲ್ಲ. ಯಾವ ಬೆಲೆ ತೆತ್ತಾದರೂ ಈ ಮಂದಿಯನ್ನು ಉಳಿಸಿಕೊಳ್ಳುವೆ ಎಂದು ಸಾರಿದರು. ಕೊನೆಗೆ 23 ದಿನಗಳ ಕಾಲ ಹಡಗಿನಲ್ಲಿ ಬಂಧಿಯಾದ ಗಾಂಧಿ ಮತ್ತು ಇತರ 800 ಮಂದಿ ಡರ್ಬನ್ ಬಂದರಿನಲ್ಲಿ ಇಳಿದರು. ಈ ನಡುವೆ,

ಮಹಾತ್ಮಾ ಗಾಂಧೀಜಿಯವರು ಇಳಿದು ನಾಲ್ಕು ಹೆಜ್ಜೆ ಇಡುತ್ತಲೇ ಎರಡ್ಮೂರು ಬಿಳಿಯರು ಅವರನ್ನು ಗುರುತಿಸಿ ಗಾಂಧಿ, ಗಾಂಧಿ ಎಂದು ಕೂಗಿದರು. ಜನರ ಸಂಖ್ಯೆ ಹೆಚ್ಚಾಯಿತು. ಗಾಂಧೀಜಿಯ ಜೊತೆಗಿದ್ದವರು ಒಂದು ರಿಕ್ಷಾವನ್ನು ಕೂಗಿ ಕರೆದರೂ ಗಾಂಧೀಜಿಯನ್ನು ರಿಕ್ಷಾ ಹತ್ತಲು ಆ ಗುಂಪು ಬಿಡಲಿಲ್ಲ. ರಿಕ್ಷಾ ಚಾಲಕನಿಗೆ ಜೀವ ಬೆದರಿಕೆ ಒಡ್ಡಿ ಹಿಂದಕ್ಕೆ ಕಳುಹಿಸಿದರು. ಗುಂಪು ದೊಡ್ಡದಾಗುತ್ತಾ ಹೋಯಿತು. ಜೊತೆಗೆ ಗಾಂಧೀಜಿಯವರನ್ನು ಥಳಿಸಲು ಪ್ರಾರಂಭಿಸಿತು. ಇಟ್ಟಿಗೆ ಚೂರುಗಳಿಂದ ಮತ್ತು ಕೊಳೆತ ಮೊಟ್ಟೆಗಳಿಂದ ಹಲ್ಲೆ ನಡೆಸಿತು. ಅವರ ಮುಂಡಾಸನ್ನು ಯಾರೋ ಕಸಿದರು. ಮತ್ತೊಬ್ಬರು ಅವರಿಗೆ ಒದ್ದರು. ಮೈಮೇಲೆ ಕೈಹಾಕಿ ಥಳಿಸಿದರು. ಗಾಂಧೀಜಿ ಎಷ್ಟರ ವರೆಗೆ ಅಸಹಾಯಕರಾದರೆಂದರೆ, ಒಂದು ಮನೆಯ ಮುಂದಿರುವ ಕಂಬಿಗಳನ್ನು ಹಿಡಿದುಕೊಂಡರು. ಸರಾಗ ಉಸಿರಾಟವೂ ಕಷ್ಟಕರವಾದ ಪರಿಸ್ಥಿತಿ. ನಗರದ ಪೊಲೀಸ್ ಠಾಣೆಗೆ ಓಡಿ ಹೋಗಿ ಭಾರತೀಯ ಯುವಕನೋರ್ವ ಸುದ್ದಿ ಮುಟ್ಟಿಸದೇ ಇರುತ್ತಿದ್ದರೆ ಅಪಾಯಕಾರಿ ಸನ್ನಿವೇಶವೊಂದು ನಿರ್ಮಾಣವಾಗುವ ಎಲ್ಲ ಸಾಧ್ಯತೆಯೂ ಇತ್ತು. ಬಳಿಕ ಪೊಲೀಸರ ಬೆಂಗಾವಲಿನಲ್ಲಿ ಗಾಂಧೀಜಿಯವರನ್ನು ರುಸ್ತೋಮ್‍ಜಿಯವರ ಮನೆಗೆ ಬಿಡಲಾಯಿತು. ಅದಾಗಲೇ ಅವರ ಪತ್ನಿ, ಮಕ್ಕಳನ್ನು ಅಲ್ಲಿಗೆ ತಲುಪಿಸಲಾಗಿತ್ತು. ಆದರೆ ಪ್ರತಿಭಟನಾಕಾರರ ಗುಂಪು ತಣ್ಣಗಾಗಲಿಲ್ಲ. ಅವರು ರುಸ್ತೋಮ್‍ಜಿಯವರ ಮನೆಯನ್ನು ಸುತ್ತುವರಿದರು. ‘ನಮಗೆ ಗಾಂಧಿ ಬೇಕು, ಆತನನ್ನು ಒಪ್ಪಿಸಿ’ ಎಂದು ಗುಂಪು ಕೂಗುತ್ತಿತ್ತು. ಪರಿಸ್ಥಿತಿ ತೀರಾ ಹದಗೆಡುತ್ತಿದೆ ಎಂದು ಅನಿಸತೊಡಗಿದಾಗ ಪೊಲೀಸ್ ಸುಪರಿಂಟೆಂಡೆಂಟ್ ಅಲೆಕ್ಸಾಂಡರ್ ಅವರು ಒಂದು ತಂತ್ರ ಪ್ರಯೋಗಿಸಿದರು. ಗಾಂಧೀಜಿಯವರ ಬಗ್ಗೆ ಅಲೆಕ್ಸಾಂಡರ್‍ಗೆ ಒಳ್ಳೆಯ ಅಭಿಪ್ರಾಯವಿತ್ತು. ಅವರನ್ನು ಹೇಗಾದರೂ ಉಳಿಸಿ ಕೊಳ್ಳಬೇಕು ಎಂಬ ಹಠ ಇದ್ದಂತಿತ್ತು. ‘ನಿಮಗೆ ಗೆಳೆಯ ರುಸ್ತೋಮ್‍ಜಿಯವರ ಮನೆಯನ್ನು, ಅವರ ಕುಟುಂಬವನ್ನು ಮತ್ತು ಅವರ ಆಸ್ತಿಯನ್ನು ಉಳಿಸಬೇಕೆಂದಿದ್ದರೆ ವೇಷ ಬದಲಾಯಿಸಿಕೊಂಡು ಪಾರಾಗಿ’ ಎಂಬ ಸಂದೇಶವನ್ನು ಕಳಿಸಿ ಕೊಟ್ಟರು. ಅಲೆಕ್ಸಾಂಡರ್‍ರ ಸಂದೇಶವನ್ನು ಒಪ್ಪಿಕೊಂಡ ಗಾಂಧೀಜಿಯವರು ಭಾರತೀಯ ಪೊಲೀಸರ ಸಮವಸ್ತ್ರವನ್ನು ಧರಿಸಿಕೊಂಡರು ಮತ್ತು ತಲೆಯ ಮೇಲೆ ಒಂದು ತಟ್ಟೆಗೆ ಸುತ್ತಿದ್ದ ಮದರಾಸಿ ಉತ್ತರೀಯವನ್ನು ಇಟ್ಟುಕೊಂಡರು. ಅದು ಹೆಲ್ಮೆಟ್ ನಂತೆ ಕಾಣಿಸುತ್ತಿತ್ತು. ಇವರೊಂದಿಗೆ ಇಬ್ಬರು ಪತ್ತೆದಾರರೂ ಹೊರಟರು. ಅವರಲ್ಲಿ ಒಬ್ಬ ಭಾರತೀಯ ವರ್ತಕನಂತೆ ವೇಷ ತೊಟ್ಟಿದ್ದ. ಹಾಗಂತ,

ಬಿಳಿಯರಿಗೆ ಗಾಂಧೀಜಿಯವರ ಮೇಲೆ ದ್ವೇಷ ಹುಟ್ಟಲು ಕಾರಣವೊಂದಿತ್ತು.

ಗಾಂಧೀಜಿಯವರು ಮೊದಲ ಬಾರಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದು 1893ರಲ್ಲಿ. ಆಗ ಆಫ್ರಿಕಾಕ್ಕೆ ಅವರೋರ್ವ ಸಾಮಾನ್ಯ ವ್ಯಕ್ತಿ. ಅಲ್ಲಿ ಅವರು ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಜನರ ಸಮಸ್ಯೆ ಗಳಿಗೆ ಕಿವಿಯಾದರು. ಹೀಗೆ ಮೂರು ವರ್ಷಗಳು ಕಳೆದ ಬಳಿಕ 1896ರಲ್ಲಿ ಅವರು ಭಾರತಕ್ಕೆ ಮರಳಿದರು. ದಕ್ಷಿಣ ಆಫ್ರಿಕಾದ ಬಗ್ಗೆ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಪುಸ್ತಕ ‘ಹಸಿರು ಕಿರು ಪುಸ್ತಕ’ ಎಂಬ ಹೆಸರಲ್ಲಿ ಪ್ರಕಟವಾಯಿತು. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಚಿತ್ರಣವನ್ನು ಅತ್ಯಂತ ಮೆದುವಾಗಿ ಮತ್ತು ಆವೇಶರಹಿತ ಭಾಷೆಯಲ್ಲಿ ಈ ಪುಸ್ತಕದಲ್ಲಿ ಅವರು ಚಿತ್ರಿಸಿದ್ದರು. ಈ ಹಸಿರು ಕಿರು ಪುಸ್ತಕದ 10 ಸಾವಿರ ಪ್ರತಿಗಳನ್ನು ಆ ಕಾಲದಲ್ಲಿ ಅವರು ಮುದ್ರಿಸಿದರು ಮತ್ತು ಎಲ್ಲ ಪತ್ರಿಕೆಗಳಿಗೂ ಮತ್ತು ಎಲ್ಲ ನಾಯಕರಿಗೂ ಕಳುಹಿಸಿಕೊಟ್ಟರು. ಪಯೋನೀರ್ ಪತ್ರಿಕೆಯು ಆ ಪುಸ್ತಕದ ಬರಹಕ್ಕೆ ಮಹತ್ವ ಕೊಟ್ಟು ಪ್ರಕಟಿಸಿತು. ರಾಯಿಟರ್ ಪತ್ರಿಕೆಯಂತೂ ಲೇಖನದ ಸಾರಾಂಶವನ್ನು ಇಂಗ್ಲೆಂಡ್‍ಗೆ ತಂತಿ ಸಂದೇಶ ರವಾನಿಸಿತು. ಮಾತ್ರವಲ್ಲ, ಈ ಸಾರಾಂಶದ ಸಾರಾಂಶವನ್ನು ರಾಯಿಟರ್ ಪತ್ರಿಕೆಯ ಲಂಡನ್ ಕಚೇರಿಯಿಂದ ಆಫ್ರಿಕಾದ ನಟಾಲ್‍ಗೆ ತಂತಿ ಸಂದೇಶದ ಮೂಲಕ ಕಳುಹಿಸಿಕೊಡಲಾಯಿತು. ಆ ಬಳಿಕ ಎಲ್ಲವೂ ವಿಚಿತ್ರ ತಿರುವನ್ನು ಪಡೆದುಕೊಂಡಿತು. ಆಫ್ರಿಕಾದ ನಟಾಲ್‍ನಲ್ಲಿ ಪತ್ರಿಕೆಗಳು ಬಿತ್ತರಿಸಿದ ಸಂದೇಶದಲ್ಲಿ ಗಾಂಧಿಯ ಮಾತುಗಳಿಗಿಂತ ಅವರದೇ ಮಾತುಗಳು ಹೆಚ್ಚಿದ್ದುವು. ಗಾಂಧೀಜಿಯವರು ಭಾರತಕ್ಕೆ ತೆರಳಿ ಬಿಳಿಯರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ, ಭಾರತೀಯರನ್ನು ಆಫ್ರಿಕನ್ನರು ಕೆಟ್ಟದಾಗಿ ನೋಡುತ್ತಿದ್ದಾರೆ ಎಂದು ಬರೆದಿದ್ದಾರೆ ಎಂಬೆಲ್ಲಾ ವದಂತಿಗಳನ್ನು ಹರಡಲಾಯಿತು. ನಿಜವಾಗಿ, ‘ಹಸಿರು ಪುಸ್ತಕ’ದಲ್ಲಿ ಗಾಂಧೀಜಿ ಹಾಗೆ ಬರೆದೇ ಇರಲಿಲ್ಲ. ಅವರು ಬರೆಯದೇ ಇರುವುದನ್ನು ಬರೆದಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಆದ್ದರಿಂದಲೇ, ಗಾಂಧೀಜಿಯವರು 1896 ಡಿಸೆಂಬರ್‍ನಲ್ಲಿ ಕುಟುಂಬ ಸಮೇತ ಮರಳಿ ಆಫ್ರಿಕಾಕ್ಕೆ ತಲುಪಿದಾಗ ಬಿಳಿಯರು ಅವರ ವಿರುದ್ಧ ಡರ್ಬನ್ ಬಂದರಿನಲ್ಲಿ ಒಟ್ಟು ಸೇರಿದ್ದು. ಅಂದಹಾಗೆ,

ಮೊನ್ನೆ ಜನವರಿ 30ರಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಎಂಬವರು ಗಾಂಧೀಜಿಯವರ ಪ್ರತಿಕೃತಿಗೆ ಗುಂಡು ಹಾರಿಸಿದ್ದು ಮತ್ತು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದು ಬಹುಶಃ ಇಂಥದ್ದೇ  ವದಂತಿಯನ್ನು ನಂಬಿದ ಪರಿಣಾಮದಿಂದಾಗಿರಬಹುದೇ ಎಂದೇ ಅನ್ನಿಸುತ್ತದೆ. ಗೋಡ್ಸೆಯ ಗುಂಡಿಗೂ ಇದನ್ನು ಅನ್ವಯಿಸಿ ನೋಡಬಹುದು. ಗಾಂಧೀಜಿ ಪ್ರಕಟಿಸಿದ ‘ಹಸಿರು ಕಿರು ಪುಸ್ತಕ’ದ ಸಾರಾಂಶವನ್ನು ರಾಯಿಟರ್ ಪತ್ರಿಕೆ ಲಂಡನ್ನಿಗೆ ಕಳುಹಿಸುವಾಗ ಏನೇನೋ ಆಯಿತು. ಲಂಡನ್‍ನಿಂದ ನಟಾಲ್‍ಗೆ ಮತ್ತೆ ಆ ಸಾರಾಂಶವನ್ನು ಕಿರಿದುಗೊಳಿಸಿ ಕಳುಹಿಸುವಾಗ ಮತ್ತಿನ್ನೇನೋ ಆಯಿತು. ನಟಾಲ್‍ನ ಪತ್ರಿಕೆಗಳಲ್ಲಿ ಅದು ಪ್ರಕಟವಾಗುವಾಗ ಇನ್ನಷ್ಟು ಅದು ಕುರೂಪಗೊಂಡಿತು. ಮೂಲ ಬರಹಕ್ಕೆ ವಿಪರೀತಾರ್ಥ ಬರುವ ರೀತಿಯಲ್ಲಿ ಅದು ಆಫ್ರಿಕಾದಲ್ಲಿ ಪ್ರಕಟಗೊಂಡಿತು. ಈ ಶಕುನ್ ಪಾಂಡೆ ಓದಿರುವ ಗಾಂಧೀಜಿಯೂ ಹೀಗೆಯೇ ಆಗಿರಬಹುದೇ? ಗಾಂಧೀಜಿಯಲ್ಲದ ಗಾಂಧೀಜಿಯನ್ನು ಅವರು ಓದಿರಬಹುದೇ? ಅಥವಾ ಓದಿಯೇ ಇಲ್ಲವೇ? ಗಾಂಧೀಜಿ ಯವರ ಆತ್ಮಕತೆಯನ್ನು ಅವರು ಓದಿರಬಹುದೇ? ಹಿಂದೂ ಧರ್ಮದ ಬಗ್ಗೆ, ರಾಮನ ಬಗ್ಗೆ, ಮಂದಿರಗಳ ಬಗ್ಗೆ, ಆಧ್ಯಾತ್ಮದ ಬಗ್ಗೆ ಗಾಂಧೀಜಿಯವರ ನಿಲುವುಗಳನ್ನು ಅವರು ಅಧ್ಯಯನ ಮಾಡಿರಬಹುದೇ? ಗಾಂಧೀಜಿಯವರ ಆತ್ಮಕತೆಯನ್ನು ಓದಿದ ಯಾರಿಗೇ ಆಗಲಿ, ಅವರೆಷ್ಟು ಒಳ್ಳೆಯ ಶ್ರದ್ಧಾವಂತ ಹಿಂದೂ ಅನ್ನುವುದು ಗೊತ್ತಾಗುತ್ತದೆ ಮತ್ತು ಅವರ ಮೇಲೆ ಅಭಿಮಾನ ಮೂಡುತ್ತದೆ. ಗೋಡ್ಸೆಗೂ ಅವರ ಅನುಯಾಯಿಗಳಿಗೂ ಇರುವ ಸಮಸ್ಯೆ ಏನೆಂದರೆ, ಅವರು ಸಂವಾದಕ್ಕೆ ಸಿದ್ಧರಾಗುವುದಿಲ್ಲ. ಗಾಂಧೀಜಿಯವರು ಮೈಗೆ ಮಾತ್ರ ಬಟ್ಟೆ ಧರಿಸದೇ ಇದ್ದುದಲ್ಲ, ವಿಚಾರಗಳಿಗೂ ಬಟ್ಟೆ ಧರಿಸುತ್ತಿರಲಿಲ್ಲ. ಅವರು ಮುಕ್ತವಾಗಿದ್ದರು. ಆದರೆ, ಗೋಡ್ಸೆಯ ಬಗ್ಗೆ ಇಂಥದ್ದೊಂದು ವಿವರ ಸಿಗುವುದೇ ಇಲ್ಲ. ಮುಂಬೈ-ಪುಣೆಯ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಗೋಡ್ಸೆ 16ನೇ ವರ್ಷಕ್ಕೇ ಬಟ್ಟೆಯಂಗಡಿಯನ್ನು ತೆರೆದ. ಬಾಗಿಲು ಮುಚ್ಚಿದ. ಆ ಬಳಿಕ ಟೈಲರಿಂಗ್ ವೃತ್ತಿಯನ್ನು ಪ್ರಾರಂಭಿಸಿದ. ವಿಶೇಷ ಏನೆಂದರೆ, ಈ ಎರಡೂ ವೃತ್ತಿಗಳು ಬ್ರಾಹ್ಮಣ ಕುಟುಂಬ ನಿರ್ವಹಿಸುವಂಥದ್ದಾಗಿರಲಿಲ್ಲ. ಟೈಲರಿಂಗ್ ಎಂಬುದು ಕೆಳಜಾತಿಯ ವೃತ್ತಿ. ಇವತ್ತೂ ಬ್ರಾಹ್ಮಣರು ಟೈಲರಿಂಗ್ ವೃತ್ತಿಯಲ್ಲಿ ತೊಡಗಿಕೊಂಡಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಬಟ್ಟೆಯಂಗಡಿಯೂ ಬ್ರಾಹ್ಮಣೇತರ ಜಾತಿಯ ವೃತ್ತಿ. ಆದರೆ, ಬಡತನವು ಗೋಡ್ಸೆಯ ಪಾಲಿಗೆ ಇವೆರಡೂ ವೃತ್ತಿಯನ್ನು ಅನಿವಾರ್ಯವಾಗಿಸಿತ್ತು. ಬಹುಶಃ, ಸಾಮಾಜಿಕ ಮನ್ನಣೆ, ಗೌರವದ ದೃಷ್ಟಿಯಿಂದ ಸರಿಹೊಂದದ ವೃತ್ತಿಯಲ್ಲಿ ಸಣ್ಣ ಪ್ರಾಯದಲ್ಲೇ  ತೊಡಗಿಸ ಬೇಕಾಗಿ ಬಂದುದು ಆತನನ್ನು ವ್ಯಗ್ರನನ್ನಾಗಿ ಮಾಡಿರಬಹುದೇ? ಧಾರ್ಮಿಕ ಉಗ್ರತನವೆಂಬುದು ಧಾರ್ಮಿಕ ಕಾರಣಕ್ಕಾಗಿಯೇ ಹುಟ್ಟಿಕೊಳ್ಳಬೇಕೆಂದಿಲ್ಲ. ಧರ್ಮೇತರ ಸಂದರ್ಭ, ಸನ್ನಿವೇಶಗಳೂ ವ್ಯಕ್ತಿಯೋರ್ವನನ್ನು ಧ್ರರ್ಮಶ್ರದ್ಧೆಯವನನ್ನಾಗಿ, ಅಂಧಭಕ್ತನಾಗಿ ಮತ್ತು ಉಗ್ರನಾಗಿ ಪರಿವರ್ತಿಸ ಬಹುದು. ಗೋಡ್ಸೆ ಅಂಥದ್ದೊಂದು ಸನ್ನಿವೇಶದ ಬೀಜವೇ? ಎಳವೆಯಲ್ಲೇ  ಅವಮಾನಕಾರಿ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕಾದ ಸನ್ನಿವೇಶವು ಆತನನ್ನು ಅಸಂವಾದಿಯಾಗಿ ಮತ್ತು ಒಳ್ಳೆಯದನ್ನು ದ್ವೇಷಿಸುವವನಾಗಿ ಪರಿವರ್ತಿಸಿತೇ? ಗಾಂಧೀಜಿಗೆ ಮುಖಾಮುಖಿಯಾಗಿ ಆತನನ್ನು ತಂದಿಟ್ಟರೆ ಶ್ರದ್ಧಾವಂತ ಹಿಂದೂವಾಗಿ ಗಾಂಧೀಜಿಯವರೇ ಹೆಚ್ಚು ಅಂಕ ಪಡೆಯುತ್ತಾರೆ. ಅವರ ಮೃತದೇಹದ ತಲೆಯ ಭಾಗದಲ್ಲಿ ಹೇ ರಾಮ್ ಮತ್ತು ಕಾಲಿನ ಭಾಗದಲ್ಲಿ ಓಂ ಎಂದು ಹೂವಿನಲ್ಲಿ ಬಿಡಿಸಿದುದೂ ಇದಕ್ಕೊಂದು ಪುರಾವೆ. ಇಂಥ ಪುರಾವೆಗಳು ನೂರಾರು ಇವೆ. ಅವರು 1896ರಲ್ಲಿ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದ ತಕ್ಷಣ ಬಾಂಬೆಗೆ ಹೋಗುವ ರೈಲಿನಿಂದ ಅಲಹಾಬಾದ್‍ನಲ್ಲಿ ಇಳಿದು ತ್ರಿವೇಣಿ (ಮೂರು ನದಿಗಳ ಸಂಗಮ) ಸಂಗಮದ ದರ್ಶನ ಪಡೆದುದೂ ಇದಕ್ಕೆ ಇನ್ನೊಂದು ಪುರಾವೆ. ಅವರ ಆತ್ಮಕತೆಯಲ್ಲಿ ಇಂಥ ಅನೇಕಾರು ಸಾಕ್ಷ್ಯಗಳಿವೆ. ಗಾಂಧೀಜಿಯನ್ನು ಮುಂದಿಟ್ಟುಕೊಂಡು ಗೋಡ್ಸೆಯ ಬದುಕನ್ನು ಕೆದಕುತ್ತಾ ಹೋದರೆ, ಆತ ಅಲ್ಪವಾಗುತ್ತಲೇ ಹೋಗುತ್ತಾನೆ. ಗಾಂಧೀಜಿಯಂಥ ತೆರೆದ ಮನಸ್ಸೂ ಆತನದಲ್ಲ. ಅವರಷ್ಟು ಉತ್ತಮ ಶ್ರದ್ಧಾವಂತ ವ್ಯಕ್ತಿಯೂ ಆತನಲ್ಲ. ಮುಖ್ಯವಾಗಿ, ಆತನ ವಿಚಾರಧಾರೆ ಏನೋ ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಆತ ಇಳಿದವನಲ್ಲ. ಗಾಂಧೀಜಿ ಸಂವಾದವನ್ನು ಇಷ್ಟ ಪಟ್ಟಿದ್ದರೆ ಆತ ಅದನ್ನು ದ್ವೇಷಿಸಿಕೊಂಡೇ ಬೆಳೆದ. ಎಲ್ಲವನ್ನೂ ಬಲವಂತದಿಂದ ಹೇರುವ ಮನಸ್ಥಿತಿ ಆತನದು. ಬ್ರಿಟಿಷರನ್ನು ದ್ವೇಷಿಸುವುದು ಗಾಂಧೀಜಿಯ ಉದ್ದೇಶವಾಗಿರಲಿಲ್ಲ. ಆಡಳಿತವನ್ನು ಸುಲಲಿತವಾಗಿ ಭಾರತೀಯರ ಕೈಗೆ ವರ್ಗಾಯಿಸುವುದು ಅವರ ಗುರಿಯಾಗಿತ್ತು. ಆದರೆ, ಗೋಡ್ಸೆಯಲ್ಲಿ ಬಲವಂತವಿತ್ತು. ಆತ ಪ್ರತಿಪಾದಿಸುವ ವಿಚಾರಧಾರೆಯಲ್ಲಿ ಗಾಂಧೀಜಿಯವರ ಸಹಜತೆಯೋ ಸುಲಲಿತತೆಯೋ ಇರಲಿಲ್ಲ. ಆದ್ದರಿಂದಲೇ, ಗಾಂಧೀಜಿಯವರು ಸತ್ಯಾಗ್ರಹವನ್ನು ಎತ್ತಿಕೊಂಡಾಗ ಆತ ಬಂದೂಕನ್ನು ಎತ್ತಿಕೊಂಡ. ನಿಜವಾಗಿ, ಸತ್ಯಾಗ್ರಹ ಮತ್ತು ಬಂದೂಕು ಇವೆರಡೂ ಇಬ್ಬರು ವ್ಯಕ್ತಿಗಳನ್ನು ಪ್ರತಿನಿಧಿಸುವುದಲ್ಲ, ಎರಡು ವಿಚಾರಧಾರೆಗಳನ್ನು ಪ್ರತಿನಿಧಿಸುತ್ತದೆ. ಗಾಂಧೀಜಿಯವರು ಸತ್ಯಾಗ್ರಹದ ಮೂಲಕ ಬೃಹತ್ ಸಾಮ್ರಾಜ್ಯ ಶಾಹಿತ್ವವನ್ನೇ ಮಣಿಸಿದರು. ಆದರೆ, ಗೋಡ್ಸೆಯ ಬಂದೂಕಿಗೆ ಭಾರತ ಬಿಡಿ, ಪುಣೆಯ ಪುಟ್ಟ ಹಳ್ಳಿಯ ಮೇಲೂ ಪ್ರಾಬಲ್ಯ ಸ್ಥಾಪಿಸಲು ಸಾಧ್ಯವಾಗಿಲ್ಲ. ಆ ಬಂದೂಕು ಮತ್ತೆ ಮತ್ತೆ ಸೋಲುತ್ತಲೂ ಅಲ್ಪವಾಗುತ್ತಲೂ ಇರುತ್ತದೆ. ಮೊನ್ನೆ,

ಕೃತಕ ಬಂದೂಕು ಬಳಸಿ ಪೂಜಾ ಶಕುನ್ ಪಾಂಡೆ ಹಾರಿಸಿದ ಗುಂಡಿನ ಘಟನೆಗೆ ಒಂದು ಡಜನ್‍ನಷ್ಟು ಮಂದಿ ಮಾತ್ರವೇ ಉಪಸ್ಥಿತರಿದ್ದುದು ಇದಕ್ಕೆ ಬಲವಾದ ಸಾಕ್ಷಿ.