ಸೌದಿ ಸಂತ್ರಸ್ತರು: ರಾಜ್ಯ ಸರಕಾರ ತೂಗುಹಾಕಬೇಕಾದ ಬೋರ್ಡು

0
861

ಸಂಪಾದಕೀಯ

ವಿದೇಶಿಯರ ಪಾಲಿಗೆ ಚಿನ್ನದ ಮೊಟ್ಟೆಯಾಗಿದ್ದ ಸೌದಿ ಅರೇಬಿಯಾವು ಇದೀಗ ಆ ಮೊಟ್ಟೆಯನ್ನೆಲ್ಲ ತಾನೇ ಕಸಿದುಕೊಳ್ಳುವ ಧಾವಂತದಲ್ಲಿದೆ. ಈ ಕಸಿಯುವಿಕೆಯ ಪ್ರಕ್ರಿಯೆಗೆ ಸಿಲುಕಿ ಕನ್ನಡಿಗರು ನಜ್ಜುಗುಜ್ಜಾಗುತ್ತಿದ್ದಾರೆ. ತಮ್ಮ ಬದುಕಿನ ದೊಡ್ಡದೊಂದು ಪ್ರಾಯವನ್ನು ಸೌದಿಯಲ್ಲಿ ದುಡಿದು ಕಳೆದ ಕನ್ನಡಿಗರು ಇದೀಗ ಮುಂದೇನು ಎಂಬ ಆತಂಕದಲ್ಲಿದ್ದಾರೆ. ಈ ಆತಂಕಕ್ಕೆ ಇರುವ ಪ್ರಮುಖ ಕಾರಣ ಏನೆಂದರೆ, ಸೌದಿ ಅರೇಬಿಯಾ ಆರಂಭಿಸಿರುವ ಸೌದೀಕರಣ ಯೋಜನೆ.

ಸೌದಿ ಬದಲಾಗುತ್ತಿದೆ. ತೈಲದ ಮೇಲಿನ ಅತಿ ಅವಲಂಬನೆಯನ್ನು ಕೈಬಿಟ್ಟು ಅದು ಆದಾಯದ ಇತರ ಮೂಲಗಳನ್ನು ಹುಡುಕುವ ಉಮೇದಿನಲ್ಲಿದೆ. ಅದರ ಭಾಗವಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ, ವಲಸಿಗರಿಗೆ ಅಧಿಕ ಕರ ವಿಧಿಸುವ ಮತ್ತು ‘ಸೌದಿ ಪ್ರಥಮ’ ಎಂಬ ಕಟು ಕಾಯ್ದೆಯನ್ನು ನಿಷ್ಠುರವಾಗಿ ಜಾರಿಗೊಳಿಸುವುದಕ್ಕೆ ಹೊರಟಿದೆ. ಇದರ ನೇರ ಪರಿಣಾಮವನ್ನು ಎದುರಿಸಬೇಕಾಗಿರುವುದು ವಲಸಿಗರು. ಸೌದಿಯಲ್ಲಿ ಸುಮಾರು 5 ಲಕ್ಷದಷ್ಟು ಕನ್ನಡಿಗರಿದ್ದಾರೆ ಎಂದು ಹೇಳಲಾಗುತ್ತದೆ. ಸೌದೀಕರಣದ ಬಹುದೊಡ್ಡ ಆಘಾತವನ್ನು ಅನುಭವಿಸಿದವರು ಮತ್ತು ಅನುಭವಿಸಬೇಕಾದವರು ಇವರೇ. ಸೌದೀಕರಣ ಎಂಬ ಕಾಯ್ದೆಯ ಪ್ರಕಾರ- ಎಲ್ಲ ಅಂಗಡಿ-ಮಳಿಗೆಗಳಲ್ಲಿ ಸೌದಿ ಪ್ರಜೆಗಳನ್ನು ಕಡ್ಡಾಯವಾಗಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅದರ ಪ್ರಮಾಣ ಎಷ್ಟೆಂದರೆ ಶೇ. 70! ಒಂದು ಅಂಗಡಿಯಲ್ಲಿ 10 ಮಂದಿ ಕೆಲಸಗಾರರಿದ್ದರೆ ಅವರಲ್ಲಿ 7 ಮಂದಿಯೂ ಸೌದಿ ಪ್ರಜೆಗಳಾಗಿರಬೇಕು. ಹಾಗಂತ, ಅವರಲ್ಲಿ ಕೌಶಲ್ಯ ಎಷ್ಟಿದೆ, ಕೆಲಸ ಮಾಡುವ ಕ್ಷಮತೆ ಏನು ಅನ್ನುವುದನ್ನು ಪ್ರಶ್ನಿಸಿ ಕೆಲಸ ನಿರಾಕರಿಸುವ ಹಾಗಿಲ್ಲ. ನ್ಯಾಯಾಲಯದ ಕದ ತಟ್ಟಿ ಈ ಕಾಯ್ದೆಯನ್ನು ಬದಲಿಸಿಕೊಳ್ಳುವ ಭರವಸೆಯೂ ಇಲ್ಲ.

ಈಗಾಗಲೇ ಎರಡು ಹಂತದ ಸೌದೀಕರಣ ಪ್ರಕ್ರಿಯೆ ಮುಗಿದಿದೆ. 2018 ಸೆ. 11ರೊಳಗೆ ಮುಗಿದಿರುವ ಪ್ರಥಮ ಸೌದೀಕರಣ ಪ್ರಕ್ರಿಯೆಯಲ್ಲಿ- ವಾಹನಗಳು, ಶೋರೂಂ, ಅಟೋಮೊಬೈಲ್, ಸಿದ್ಧ ಉಡುಪು, ಪೀಠೋಪಕರಣಗಳು, ಮನೆಬಳಕೆ ವಸ್ತು ಇತ್ಯಾದಿ ಮಳಿಗೆಗಳು ಸೌದಿಗಳ ಪಾಲಾಗಿವೆ. ಇಲ್ಲೆಲ್ಲಾ ಶೇ. 70ರಷ್ಟು ಸೌದಿಗಳನ್ನು ಕೆಲಸಗಾರರಾಗಿ ನೇಮಿಸಿಕೊಳ್ಳಲಾಗಿದೆ. ನವೆಂಬರ್ 9ರೊಳಗೆ ಮುಗಿದ ಎರಡನೇ ಸೌದೀಕರಣದಲ್ಲಿ- ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ವಾಚ್ ಅಂಗಡಿ, ಕನ್ನಡಕ, ಔಷಧ ಅಂಗಡಿಗಳು ಸೌದಿಗಳ ವಶವಾಗಿವೆ. ಇಲ್ಲೆಲ್ಲಾ ಶೇ. 70ರಷ್ಟು ಸೌದಿಗಳನ್ನು ತುಂಬಿಸುವಲ್ಲಿ ಸೌದಿ ಆಡಳಿತವು ಯಶಸ್ವಿಯಾಗಿದೆ. ಇನ್ನೀಗ ಮೂರನೇ ಹಂತದ ಸೌದೀಕರಣ ಪ್ರಕ್ರಿಯೆಯಲ್ಲಿ ಸೌದಿ ತೊಡಗಿಸಿಕೊಂಡಿದೆ. 2019 ಜನವರಿ 7ರೊಳಗೆ ಮುಗಿಯಬೇಕಾದ ಈ ಪ್ರಕ್ರಿಯೆಯಲ್ಲಿ- ಕಟ್ಟಡ ಕಾಮಗಾರಿ ವಸ್ತುಗಳ ಮಾರಾಟ, ವಾಹನಗಳ ಬಿಡಿ ಭಾಗಗಳ ಮಾರಾಟ ಮಳಿಗೆ, ಚಾಕಲೇಟ್ ಅಂಗಡಿಗಳು ಇತ್ಯಾದಿಗಳು ಸೇರಿವೆ. ಈ ಕ್ರಮವೂ ಕೊನೆಗೊಂಡ ಬಳಿಕ ಸೌದಿಯಲ್ಲಿ ವಿದೇಶಿಯರ ಸಂಖ್ಯೆ ದೊಡ್ಡಮಟ್ಟದಲ್ಲಿ ಕಡಿಮೆಯಾಗುತ್ತದೆ. ಹೀಗೆ ಕಡಿಮೆಯಾಗುವುದೆಂದರೆ,

ಅವರೆಲ್ಲ ಅವರವರ ರಾಷ್ಟ್ರಕ್ಕೆ ಮರಳುವುದು ಎಂದರ್ಥ. ಈಗಾಗಲೇ ಹೀಗೆ ಮರಳಿದವರಲ್ಲಿ ಕನ್ನಡಿಗರು ಬಹುಸಂಖ್ಯೆಯಲ್ಲಿದ್ದಾರೆ. ಇನ್ನು ಮರಳಲು ಸಿದ್ಧವಾಗಿರುವ ಗುಂಪಂತೂ ಇದಕ್ಕಿಂತಲೂ ದೊಡ್ಡದಿದೆ. ಇವರು ನುಸುಳುಕೋರರಲ್ಲ. ವಂಚಕರೂ ಅಲ್ಲ. ವಿದೇಶಿ ನೆಲದಲ್ಲಿ ದೀರ್ಘ ಕಾಲದಿಂದ ಬೆವರು ಸುರಿಸಿ ನಮ್ಮ ರಾಜ್ಯಕ್ಕೆ ದೊಡ್ಡಮಟ್ಟದ ವಿದೇಶಿ ವಿನಿಮಯ ಆದಾಯವನ್ನು ದೊರಕಿಸಿಕೊಟ್ಟವರು. ಕರಾವಳಿ ಕರ್ನಾಟಕವೂ ಸೇರಿದಂತೆ ರಾಜ್ಯದ ಅಭಿವೃದ್ಧಿಯಲ್ಲಿ ಇವರ ಪಾತ್ರ ಬಹಳ ದೊಡ್ಡದಿದೆ. ನಿಜವಾಗಿ,

ಸೌದಿಗೆ ತೆರಳಿ ಇವರು ರಾಜ್ಯ ಸರಕಾರದ ಪಾಲಿಗೆ ಎರಡು ರೀತಿಯಲ್ಲಿ ಪ್ರಯೋಜನಕ್ಕೆ ಬಂದರು. ಒಂದು- ಉದ್ಯೋಗ ಕೊಡಿಸುವ ಹೊಣೆಯಿಂದ ರಾಜ್ಯ ಸರಕಾರವನ್ನು ಇವರು ಪಾರುಗೊಳಿಸಿದರು ಮತ್ತು ಎರಡನೆಯದಾಗಿ- ರಾಜ್ಯ ಸರಕಾರಕ್ಕೆ ಆದಾಯ ಮೂಲವಾದರು. ಇದೀಗ ಅವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹಾಗಂತ, ಇವರು ಬರೇ ನಮ್ಮ ರಾಜ್ಯದ ಸಮಸ್ಯೆ ಮಾತ್ರ ಅಲ್ಲ. ಕೇರಳವಂತೂ ಸೌದಿಯಿಂದ ಮರಳಿದವರ ದೊಡ್ಡ ದಂಡನ್ನೇ ನಿಭಾಯಿಸಬೇಕಾದ ಸ್ಥಿತಿಯಲ್ಲಿದೆ. ಈಗಾಗಲೇ ಅದು ‘ಅನಿವಾಸಿ ಭಾರತೀಯ ಸಮಿತಿ’ ಎಂಬ ಹೆಸರಿನಲ್ಲಿ ಸಮಿತಿಯೊಂದನ್ನು ರಚಿಸಿದೆ. ಮಂಗಳೂರು ದಕ್ಷಿಣ ವಿಭಾಗದ ಶಾಸಕರಾಗಿದ್ದ ಜೆ.ಆರ್. ಲೋಬೋ ಅವರು ಇದೇ ಮಾದರಿಯ ಸಮಿತಿಯೊಂದನ್ನು ರಚಿಸುವ ಬಗ್ಗೆ 2017ರಲ್ಲಿ ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ ಆ ವರದಿ ಯಾವ ಕಪಾಟಿನಲ್ಲಿದೆ ಅನ್ನುವುದು ಆ ವರದಿಯನ್ನು ಸ್ವೀಕರಿಸಿದವರಿಗೆ ಗೊತ್ತಿದೆಯೋ ಇಲ್ಲವೋ ಎಂದು ಅನುಮಾನ ಪಡುವ ಸ್ಥಿತಿ ಈಗಿನದು.

ಸೌದಿಯಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಮತ್ತು ಅವರ ಸ್ಥಿತಿ-ಗತಿಗಳು ಏನೇನು ಅನ್ನುವ ಬಗ್ಗೆ ವರದಿಯೊಂದನ್ನು ತಯಾರಿಸುವ ಹೊಣೆಗಾರಿಕೆ ರಾಜ್ಯ ಸರಕಾರದ ಮೇಲಿದ್ದರೂ ಅದು ಈವರೆಗೂ ನಡೆದಿಲ್ಲ. ಸೌದಿಯಿಂದ ಹಿಂತಿರುಗುತ್ತಿರುವವರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣೆ ಕೇಂದ್ರವೊಂದನ್ನು ತೆರೆದು ಮರಳಿದವರನ್ನು ಪ್ರೀತಿಸುವುದು ಮತ್ತು ಅವರಲ್ಲಿ ಭರವಸೆ ತುಂಬುವುದು ಅತೀ ಜರೂರಾಗಿತ್ತು. ಮರಳುವವರೇನೂ ಖುಷಿಯಿಂದ ಮರಳುತ್ತಿಲ್ಲವಲ್ಲ. ಅವರಲ್ಲೊಂದು ಆತಂಕವಿದೆ. ಮುಂದೇನು ಅನ್ನುವ ಅಳುಕು ಇದೆ. ಈ ಅಳುಕು ಮತ್ತು ಆತಂಕವನ್ನು ಕಡಿಮೆಗೊಳಿಸುವಲ್ಲಿ ನೋಂದಣಿ ಪ್ರಕ್ರಿಯೆ ಮಹತ್ವದ ಪಾತ್ರ ವಹಿಸಬಹುದು. ಇನ್ನು, ಹೀಗೆ ಮರಳಿದವರಿಗೆ ಸಾಲ ಕೊಡುವ ಸ್ವಾಗತಾರ್ಹ ಯೋಜನೆಯನ್ನು ರಾಜ್ಯ ಸರಕಾರ ಕೈಗೊಂಡಿದ್ದರೂ ಇದು ಸಾಲಮನ್ನ ಯೋಜನೆಯ ಅಡ್ಡಪರಿಣಾಮಕ್ಕೆ ತುತ್ತಾಗಲಿದೆಯೇ ಅನ್ನುವ ಆತಂಕ ಇದೆ. ಒಂದು ಕಡೆ,

2018 ಜೂನ್‍ನಿಂದ ಸೆಪ್ಟೆಂಬರ್ 21ರ ವರೆಗೆ ಆನ್‍ಲೈನ್‍ನಲ್ಲಿ ಹೀಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಈ ಸೌದೀಕರಣ ಸಂತ್ರಸ್ತರ ಸಂಖ್ಯೆಯೇ 47 ಸಾವಿರ. ಜೂನ್‍ನಿಂದ ಸೆಪ್ಟೆಂಬರ್ ವರೆಗಿನ ಈ ನಾಲ್ಕು ತಿಂಗಳ ಅವಧಿಯಲ್ಲಿ ಸಲ್ಲಿಸಲಾದ ಅರ್ಜಿಗಳ ಈ ಬೃಹತ್ ಸಂಖ್ಯೆಯೇ ಸಮಸ್ಯೆಯ ಆಳವನ್ನು ಹೇಳುತ್ತದೆ. ಮುಂದಿನ ದಿನಗಳಲ್ಲಿ ಇಂಥ ಅರ್ಜಿಗಳ ಸಂಖ್ಯೆ ಲಕ್ಷವನ್ನು ದಾಟಬಹುದು. ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಮುಸ್ಲಿಮರು, ಕೈಸ್ತರು, ಜೈನರು ಎಲ್ಲರೂ ಇದ್ದಾರೆ. ಆದರೆ, ಹರಿದು ಬರುತ್ತಿರುವ ಅರ್ಜಿಗಳನ್ನು ನಿಭಾಯಿಸುವಷ್ಟು ಮೊತ್ತವನ್ನು ರಾಜ್ಯ ಸರಕಾರ ನಿಗಮಕ್ಕೆ ಒದಗಿಸಲು ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಸಾಲ ಮನ್ನಾದ ಮೊತ್ತವನ್ನು ತುಂಬಿಸುವುದಕ್ಕಾಗಿ ಇತರೆಲ್ಲ ನಿಗಮ-ಮಂಡಳಿಗಳಿಗೆ ನೀಡುವ ಮೊತ್ತದಲ್ಲಿ ಸರಕಾರ ಈಗಾಗಲೇ ಕಡಿತ ಮಾಡಿದೆ. ಕಳೆದ ವರ್ಷ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 45 ಕೋಟಿ ರೂಪಾಯಿಯನ್ನು ಕೊಟ್ಟಿದ್ದ ಸರಕಾರವು ಈ ವರ್ಷ ಬರೇ 13 ಕೋಟಿ ರೂಪಾಯಿಯಷ್ಟೇ ಒದಗಿಸಿದೆ. ಇದೊಂದು ಉದಾಹರಣೆ ಅಷ್ಟೇ. ಸೌದಿಯಿಂದ ಹಿಂತಿರುಗಿದವರಿಗೆಂದು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ತಯಾರಿಸಿರುವ ಸ್ವಯಂ ಉದ್ಯೋಗ ಯೋಜನೆ, ಕಿರುಸಾಲ ಮತ್ತು ಶ್ರಮಶಕ್ತಿ ಯೋಜನೆಗಳು ಜಾರಿಯಾಗಬೇಕಾದರೆ ನಿಗಮದಲ್ಲಿ ಹಣ ಇರಬೇಕಾಗುತ್ತದೆ. ಹಾಗಂತ, ನಿಗಮದಲ್ಲಿ ಹಣ ತಾನೇ ತಾನಾಗಿ ತುಂಬುವುದಿಲ್ಲವಲ್ಲ. ಅದನ್ನು ತುಂಬಿಸಬೇಕಾದುದು ಸರಕಾರ. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕು.

ಹರಿದು ಬರುತ್ತಿರುವ ಅರ್ಜಿಯನ್ನು ಎಣಿಸುತ್ತಾ ದಿನ ಕಳೆಯುವುದು ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಒಂದು ದೀರ್ಘ ಕಾಲ ಸರಕಾರದ ಆದಾಯ ಮೂಲವಾದವರು ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದವರು ‘ಇನ್ನು ಸಾಧ್ಯವಿಲ್ಲ’ ಎಂದು ಹೊರಟು ನಿಂತವರನ್ನು ನಾವು ಅಭಿಮಾನದಿಂದ ಸ್ವೀಕರಿಸಬೇಕು. ‘ನಾವಿದ್ದೇವೆ’ ಎಂಬ ಭರವಸೆಯನ್ನು ತುಂಬಬೇಕು. ‘ನೀವು ನಮ್ಮನ್ನು ಪೊರೆದವರು’ ಎಂಬ ಅಭಿಮಾನವನ್ನು ಅವರಲ್ಲಿ ತುಂಬಿದರೆ ಅವರು ಎದುರಿಸಲಿರುವ ಸವಾಲಿನ ಅರ್ಧಭಾಗವನ್ನು ಕ್ರಮಿಸಿದಂತೆಯೇ. ಇದೀಗ ರಾಜ್ಯ ಸರಕಾರ ಈ ಹೊಣೆಗಾರಿಕೆಯಲ್ಲಿ ನಿಭಾಯಿಸಬೇಕಾಗಿದೆ. ‘ಮರಳುವ ಕನ್ನಡಿಗರಿಗೆ ಸ್ವಾಗತ’ ಎಂಬ ಬೋರ್ಡನ್ನು ಪ್ರತಿ ವಿಮಾನ ನಿಲ್ದಾಣಗಳಲ್ಲಿ ನಿಲ್ಲಿಸುವ ಧೈರ್ಯ ಮತ್ತು ಅವರಿಗೆ ಉದ್ಯೋಗ ದೊರಕಿಸಿ ಕೊಡುವ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗಿದೆ. ‘ನಾವು ಹೊರೆಯಲ್ಲ, ಸಂಪನ್ಮೂಲ’ ಎಂಬ ಭಾವನೆಯನ್ನೂ ಅವರಲ್ಲಿ ತುಂಬಬೇಕಾಗಿದೆ. ಬಡ್ಡಿರಹಿತವಾಗಿ ಸಾಲವನ್ನು ಒದಗಿಸಬೇಕಾಗಿದೆ.

ಇದು ಅಸಾಧ್ಯವಲ್ಲ. ಬದ್ಧತೆ ಬೇಕಷ್ಟೇ.