ಬಳ್ಳಾರಿಯ ಅನಾಗರಿಕ ಘಟನೆ ಮಾನವೀಯತೆಗೆ ಕಳಂಕ; ಸರಕಾರ ಕೋವಿಡ್ ನಿಯಂತ್ರಣ ಕಳಕೊಂಡಿದೆ- SDPI ಆಕ್ರೋಶ

0
558

ಸನ್ಮಾರ್ಗ ವಾರ್ತೆ

ಮಂಗಳೂರು, ಜೂ.30:ಕೋವಿಡ್-19 ರೋಗದಿಂದ ಮರಣ ಹೊಂದಿದ ಮೃತದೇಹಗಳನ್ನು ಅಗೌರವದಿಂದ ಹೂಳಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಇದು ಮಾನವೀಯತೆಗೆ ಕಳಂಕ ತರುವ ಘಟನೆಯಾಗಿದೆ. ಇಂತಹ ಅನಾಗರಿಕ ರೀತಿಯ ವರ್ತನೆಯ ಘಟನೆಯು ಸಮಾಜದಲ್ಲಿ ತೀವ್ರ ಆತಂಕ ಹುಟ್ಟಿಸಿದ್ದು, ಬಳ್ಳಾರಿ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಆಡಳಿತ ನಡೆಸಲು ಅಸಮರ್ಥವೂ ಅನರ್ಹವೂ ಆಗಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನವ ಮೃತದೇಹಕ್ಕೆ ಕಿಂಚಿತ್ತು ಗೌರವ ಕೊಡದ ಇಂತಹ ವ್ಯವಸ್ಥೆಯ ವಿರುದ್ಧ ಜನರು ಒಗ್ಗಟ್ಟಾಗಿ ಪ್ರತಿಭಟಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸುವುದಕ್ಕೆ ನಿರಾಕರಿಸುವ ಘಟನೆಗಳು ವರದಿಯಾಗುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿ ಹಲವು ರೀತಿಯ ಅವ್ಯವಸ್ಥೆಯ ಘಟನೆಗಳು ವರದಿಯಾಗುತ್ತಿವೆ. ರೋಗ ನಿಯಂತ್ರಣ ಮತ್ತು ಚಿಕಿತ್ಸೆಯ ಬಗ್ಗೆ ಸರಕಾರದ ಗಮನ ಹಾಗೂ ಸಮರ್ಪಕತೆ ಏನೇನೂ ಸಾಲದಾಗಿದೆ.

ಸುಮಾರು 7ಕೋಟಿ ಜನಸಂಖ್ಯೆ ಇರುವಂತಹ ನಮ್ಮ ರಾಜ್ಯದಲ್ಲಿ ಸಾಂಕ್ರಾಮಿಕವು ವ್ಯಾಪಿಸುತ್ತಿರುವಾಗ ಅದಕ್ಕೆ ಚಿಕಿತ್ಸೆ ನೀಡುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರೀ ಆಸ್ಪತ್ರೆಗಳು, ಬೆಡ್ ಗಳು, ವೈದ್ಯಕೀಯ ಸಲಕರಣೆಗಳು, ವೈದ್ಯಕೀಯ ಸಿಬ್ಬಂದಿಗಳು, ಇತ್ಯಾದಿಗಳನ್ನು ಸರ್ಕಾರ ವ್ಯವಸ್ಥೆ ಮಾಡಿರುವುದಿಲ್ಲ.

ಸರಕಾರಿ ಆಸ್ಪತ್ರೆಗಳ ಸಂಖ್ಯೆ, ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆ, ಇತ್ಯಾದಿಗಳನ್ನು ಮಾಡುವುದರ ಬದಲಿಗೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುವ ಹಾಗೂ ಪರಾವಲಂಬನೆಯ ಅವ್ಯವಸ್ಥೆಗೆ ಸರಕಾರವು ಜೋತು ಬಿದ್ದಿರುವುದು ಅದರ ತಪ್ಪು ನೀತಿಯಾಗಿದೆ. ಇದರಿಂದ ಬಡ ಹಾಗೂ ಕೆಳಮಧ್ಯಮ ವರ್ಗದ ಜನರಿಗೆ ತೀರಾ ಅನ್ಯಾಯವಾಗುತ್ತಿದೆ ಹಾಗೂ ಸಾಂಕ್ರಾಮಿಕ ರೋಗವು ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹುಟ್ಟು ಹಾಕುತ್ತಿದೆ.

ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ನಿಧಿಗೆ ಈಗಾಗಲೇ ಸಾರ್ವಜನಿಕರಿಂದ ಸಂಗ್ರಹಿತ ರೂಪಾಯಿ 291 ಕೋಟಿ ಸಹಾಯಧನ ಸಂಗ್ರಹವಾಗಿದ್ದು ,ಇದನ್ನು ಕೋವಿಡ್ ಸಾಂಕ್ರಾಮಿಕ ರೋಗ ಚಿಕಿತ್ಸೆಗಾಗಿ ಸರಕಾರ ಬಳಸಬೇಕು. ಜನರಿಗೆ ಉಚಿತ ಹಾಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಸರಕಾರಿ ಆಸ್ಪತ್ರೆಗಳನ್ನು ಹಾಗೂ ಅದರ ಸಾಮರ್ಥ್ಯಗಳನ್ನು ಹೆಚ್ಚಿಸಬೇಕು. ಯಾವುದೇ ನಿರ್ಲಕ್ಷ್ಯ, ತಾರತಮ್ಯ, ಶೋಷಣೆ, ಬೆದರಿಕೆ ಮತ್ತು ಅಜಾಗ್ರತೆಗೆ ಎಳ್ಳಷ್ಟೂ ಅವಕಾಶ ಕೊಡಬಾರದು. ಪ್ರತಿಯೊಬ್ಬ ರೋಗಿಗಳೂ ಉಚಿತ ಹಾಗೂ ಉತ್ಕೃಷ್ಟ ಚಿಕಿತ್ಸೆ ಸರ್ಕಾರದಿಂದ ಲಭ್ಯವಾಗಬೇಕು ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಆಗ್ರಹಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.