ಸೀರತ್ ಅಭಿಯಾನ: ಶಿಕ್ಷಕರ ಪ್ರಬಂಧ ಸ್ಪರ್ಧೆಯಲ್ಲಿ ಚೇತನ್ ಕೊಪ್ಪ ಪ್ರಥಮ

0
980

ಮಂಗಳೂರು ಫೆ. 9: ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾದ ರಾಜ್ಯವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ಆಯೋಜಿಸಲಾದ “ಪ್ರವಾದಿ ಮುಹಮ್ಮದ್(ಸ) ನನ್ನ ದೃಷ್ಟಿಕೋನದಲ್ಲಿ” ಎಂಬ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಮಂಗಳೂರಿನ ಐ.ಎಂ‌.ಎ ಹಾಲ್ ನಲ್ಲಿ ಜರುಗಿತು.

ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು  ಶ್ರೀ ಚೇತನ್ ಕೊಪ್ಪ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಳಾಯಿಬೆಟ್ಟುರವರು ಪಡೆದುಕೊಂಡರು. ಇವರಿಗೆ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ರವರು ಬಹುಮಾನದ ಮೊತ್ತ 25,000 ನಗದು ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು.  ಈ ಸಂದರ್ಭದಲ್ಲಿ ಪ್ರಥಮ ಬಹುಮಾನ ಪಡೆದ ಶಿಕ್ಷಕ  ಚೇತನ್ ಕೊಪ್ಪ ರವರ ಪ್ರಬಂಧವನ್ನು ಕಿರು ರೂಪದಲ್ಲಿ ಸೀರತ್ ಅಭಿಯಾನದ ಸ್ವಾಗತ ಸಮಿತಿಯು ಪ್ರಸ್ತುತ ಪಡಿಸಿತು.

ದ್ವಿತೀಯ ಬಹುಮಾನ  ₹15,000 ಸಾವಿರ ನಗದು ಮತ್ತು ಪ್ರಮಾಣ ಪತ್ರವನ್ನು  ಶ್ರೀಮತಿ ಮಂಜುಳಾ ಐ.ಜಿ. ಸರಕಾರಿ ಹೈಸ್ಕೂಲ್, 5ನೇ ಬ್ಲಾಕ್, ಕೃಷ್ಣಾಪುರ ಹಾಗೂ ತೃತೀಯ ಬಹುಮಾನ ₹10,000 ನಗದು ಮತ್ತು ಪ್ರಮಾಣಪತ್ರವನ್ನು ಶ್ರೀ ಸುಲೈಮಾನ್ ಕೆ. ಸರಕಾರಿ ಪಿ.ಯು. ಕಾಲೇಜು, ಕುಂಬ್ರ, ಪುತ್ತೂರುರವರು ಪಡೆದುಕೊಂಡರು.

ಈ ಸಂದರ್ಭದಲ್ಲಿ ತಲಾ 2000 ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡ 11 ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.  ಶ್ರೀಮತಿ ಶೈಲಜಾ ಸೈಂಟ್ ಆ್ಯಗ್ನೆಸ್ ಪಿ.ಯು. ಕಾಲೇಜು, ಮಂಗಳೂರು, ಶ್ರೀಮತಿ ಕನೀಝ್ (ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ, ಶ್ರೀಮತಿ ಲೀಲಾವತಿ ಯು.ಬಿ. ಮೌಲಾನಾ ಆಝಾದ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುದ್ರೋಳಿ, ಶ್ರೀ ಪ್ರದೀಪ್ ಕೊೈಲ ಸರಕಾರಿ ಪಿ.ಯು. ಕಾಲೇಜು, ಸುಳ್ಯ, ಶ್ರೀಮತಿ ಸುಲೋಚನಾ ಕುಮಾರಿ ಬಿ.ಕೆ. ಸರಕಾರಿ ಪಿಯು. ಕಾಲೇಜು, ಸಜಿಪ ಮೂಡ, ಶ್ರೀಮತಿ ಅಸುಂತಾ ಮೀರಾ ಡಯಾಸ್. ಸರಕಾರಿ ಪಿ.ಯು. ಕಾಲೇಜು ಚೇಳ್ಯಾರು, ಮಂಗಳೂರು, ಶ್ರೀಮತಿ ಎಂ.ಜಿ. ರೀಮ್. ಹಿರಾ ವಿಮೆನ್ಸ್ ಪಿ.ಯು. ಕಾಲೇಜು, ಬಬ್ಬುಕಟ್ಟೆ, ಮಂಗಳೂರು,  ಶ್ರೀಮತಿ ಸುಪ್ರಿತಾ. ನೂರುಲ್ ಹುದಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಾಟಿಪಳ್ಳ, ಶ್ರೀಮತಿ ಜಯಶ್ರೀ.ಎಸ್.ಜಿ.ಎಂ. ಹೈಸ್ಕೂಲ್, ಬಡಕೋಡಿ, ಪುತ್ತೂರು, ಶ್ರೀಮತಿ ನಿಶಾನಾ ಬೇಗಂ.ಹಿರಾ ವಿಮೆನ್ಸ್ ಪಿ.ಯು. ಕಾಲೇಜು, ಬಬ್ಬುಕಟ್ಟೆ, ಮಂಗಳೂರು, ಶ್ರೀಮತಿ ಮರ್ಯ ಶರ್ಮಿಳಾ ರೊಸಾರಿಯೋ. ಕಾರ್ಮೆಲ್ ಗಲ್ರ್ಸ್ ಹೈಸ್ಕೂಲ್, ಮೊಡಂಕಾಪುರವರು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಹಿರಿಯ ಸಾಹಿತಿ ಶ್ರೀ ಲಕ್ಷೀನಾರಾಯಾಣ ಆಳ್ವ ರವರು ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡುತ್ತಾ, “ಭಾರತವು ಜಾತ್ಯಾತೀತ ದೇಶವಾಗಿದ್ದು ಇಂದು ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ವಿಷಯಗಳೇ ಇರಬಾರದೆಂಬ ನಿಲುವುಗಳು ಕಂಡು ಬರುತ್ತಿರುವುದು ದುರಾದೃಷ್ಟಕರ. ಆದರೆ ಸಮಾಜದಲ್ಲಿ ಬದುಕಲು ಜಾತಿ ಉಪಜಾತಿಗಳಿಲ್ಲದೇ ಯಾವುದೇ ರೀತಿಯ ಸರಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲಾಗದು ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ಇದೆ. ಎಲ್ಲ ಧರ್ಮಗಳ ನಡುವೆ ಬೆಳೆದ ನನಗೆ ಜಾತಿಯನ್ನು ಮೀರಿ ಬೆಳೆಯಲು ಸಾಧ್ಯವಾಯ್ತು‌. ಕುರ್ ಆನ್, ಬೈಬಲ್, ಗೀತೆ ಸೇರಿದಂತೆ ಹಲವಾರು ಧರ್ಮಗ್ರಂಥಗಳನ್ನು ಓದಿದ ಕಾರಣಕ್ಕಾಗಿ ಮಾನವೀಯತೆ ಎಲ್ಲ ಧರ್ಮಗಳಲ್ಲಿ ಸಾರಲ್ಪಡುವ ಸಂದೇಶವೆಂಬುದನ್ನು ನಾನು ಅರಿತ್ತಿದ್ದೇನೆ. ಹಾಗಾಗಿ ಎಲ್ಲ ಧರ್ಮಗಳನ್ನು ಕೂಡ ಅಧ್ಯಯನ ನಡೆಸಬೇಕಾದ ಅಗತ್ಯತೆ ಸಮಾಜದಲ್ಲಿದೆ” ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಉದಯ್ ಕುಮಾರ್ ಇರ್ವತ್ತೂರು ರವರು ಮಾತನಾಡುತ್ತಾ “ಇಂದು ಸಮಾಜದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದ್ದು ನಾವು ಏನನ್ನು ಮಾತನಾಡಬೇಕು ಏನನ್ನು ಮಾತನಾಡಬಾರದು ಎಂಬುದನ್ನು ಒತ್ತಡ ಪೂರ್ವಕವಾಗಿ ಹೇರಲಾಗುತ್ತಿರುವ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಆದುದರಿಂದ ಇತರ ಧರ್ಮೀಯರ ಧರ್ಮ ಸಂದೇಶಗಳನ್ನು ಅರಿತು ಕುರಿತು ಬಾಳಲು ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ” ಎಂದರು.

 

ಪ್ರಥಮ ಬಹುಮಾನ ಪಡೆದ ಚೇತನ್ ಕೊಪ್ಪ ರವರು ತಮ್ಮ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರಲ್ಲದೇ”ಸಮಾಜದಲ್ಲಿ ಶಿಕ್ಷಕರ ಪಾತ್ರವು ಪ್ರಮುಖವಾಗಿದ್ದು ಶಿಕ್ಷಕರಿಗೆ ನಡೆಸಲಾದ ಈ ಪ್ರಬಂಧ ಸ್ಪರ್ಧೆಯು ಜ್ಞಾನದ ಬೇರಿಗೆ ನೀಡಿದ ಒಂದು ಸವಾಲಾಗಿದೆ‌ ಇದರಿಂದ ಪಡೆದುಕೊಂಡ ಜ್ಞಾನವು ಎಲೆಗಳಿಗೂ(ವಿದ್ಯಾರ್ಥಿಗಳಿಗೂ) ತಲುಪುತ್ತದೆ” ಎಂಬ ಆಶಯವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಡಾ|ಸಿ .ಪಿ ಹಬೀಬ್ ರಹ್ಮಾನ್. ಅಧ್ಯಕ್ಷರು ಸ್ವಾಗತ ಸಮಿತಿ, ಬ್ಯಾರೀಸ್ ವೆಲ್ಫೇರ್, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ಡಾ. ಉದಯಕುಮಾರ್ ಇರ್ವತ್ತೂರು, ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಘಟಕದ ಅಧ್ಯಕ್ಷರಾದ ಜ. ಮುಹಮ್ಮದ್ ಅಲಿ ಉಚ್ಚಿಲ್, ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ. ಕೆ ಎಂ.ಆಶ್ರಫ್, ಸ್ವಾಗತ ಸಮಿತಿಯ ಸದಸ್ಯರಾದ ಕೆ.ಎಂ. ಶರೀಫ್, ನಾಝಿಮ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಮುಹಮ್ಮದ್ ತುಂಬೆ ಯವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.