ಸಾರ್ವಜನಿಕ ಸ್ಥಳದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಸರಿಯಲ್ಲ: ಶಾಹೀನ್‍ ಬಾಗ್ ಹೋರಾಟದ ವಿರುದ್ಧ ಸುಪ್ರೀಂ ಕೋರ್ಟ್ ಆದೇಶ

0
381

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.8: ಜನರ ಭಾಗವಹಿಸುವಿಕೆಯಿಂದ ಜಗತ್ತಿನ ಗಮನ ಸೆಳೆದ ಶಾಹೀನ್ ಬಾಗ್ ಹೋರಾಟದ ವಿರುದ್ಧ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಬಾರದು ಎಂದು ಸುಪ್ರೀಂ ಕೋರ್ಟು ತಿಳಿಸಿದೆ. ರಸ್ತೆ ಅತಿಕ್ರಮಿಸಿ ನಡೆಸಿದ ಶಾಹೀನ್‍ ಬಾಗ್ ಹೋರಾಟವನ್ನು ಅಂಗೀಕರಿಸಲು ಸಾದ್ಯವಿಲ್ಲ ಎಂದು ಸಂಜಯ್ ಕಿಶನ್ ಕೌಲ್‍ರ ನೇತೃತ್ವದ ಪೀಠ ಹೇಳಿದೆ.

ಶಾಂತಿಯುತ ಪ್ರತಿಭಟನೆ ಸಾಂವಿಧಾನಿಕ ಹಕ್ಕು ಆಗಿದೆ. ಆದರೆ, ಅದು ಪರಮವಾದುದಲ್ಲ. ಜನರಿಗೆ ತೊಂದರೆಯಾಗುವಂತೆ ಮತ್ತು ಸಂಚಾರಕ್ಕೆ ಅಡ್ಡಿಪಡಿಸಿ ರಸ್ತೆ ತಡೆಯಬಾರದು. ಇಂತಹ ಅತಿಕ್ರಮಗಳಿಂದ ಸಾರ್ವಜನಿಕ ಸ್ಥಳಗಳನ್ನು ಸಂರಕ್ಷಿಸಲು ಸರಕಾರಗಳು ಶ್ರಮಿಸಬೇಕು. ಅತಿಕ್ರಮಿಸದಂತೆ ತಡೆಯುವುದು ಸರಕಾರದ ಹೊಣೆಯಾಗಿದೆ. ಕೋರ್ಟು ಆದೇಶಕ್ಕೆ ಕಾದು ನಿಲ್ಲಬೇಕಾಗಿಲ್ಲ. ಪ್ರತಿಭಟನೆಗಳು ನಿಗದಿಗೊಳಿಸಿದ ಸ್ಥಳದಲ್ಲಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಿಪಡಿಸಿ ಪ್ರತಿಭಟನೆ ಮಾಡಬಾರದು. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣಗೊಳ್ಳಬಾರದು. ಪ್ರತಿಭಟನೆಗಳ ವಿಷಯದಲ್ಲಿ ಇಂಟರ್, ಸಾಮಾಜಿಕ ಮಾಧ್ಯಮಗಳು ಅಪಾಯಕಾರಿ ತಿರುವು ಉಂಟುಮಾಡುತ್ತಿದೆ ಎಂದು ಸುಪ್ರೀಂಕೋರ್ಟು ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಪ್ರತಿಭಟನಾಕಾರರನ್ನು ಬೇರೆ ಕಡೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ಅಡ್ವೊಕೇಟ್ ಅಮಿತ್ ಸಾಹ್ನಿ ತಿಂಗಳ ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ ಮೂವರು ಸದಸ್ಯರ ಪೀಠ ತೀರ್ಪು ನೀಡಿದೆ. ಕೇಸು ಈಗ ಅಪ್ರಸಕ್ತವಾದರೂ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸುವ ಕುರಿತು ಸ್ಪಷ್ಟವಾದ ಸೂಚನೆ ನೀಡಲು ಬಯಸುವುದಾಗಿ ಕೋರ್ಟು ತಿಳಿಸಿತ್ತು. ಇದಕ್ಕೆ ಸಂಬಂಧಿಸಿದ ತೀರ್ಪು ಪ್ರಕಟವಾಗಿದೆ.