ಶಾಂತಿ, ಸಹಬಾಳ್ವೆ ಇಂದಿನ ಅಗತ್ಯ: ಶಾಂತಿ ಪ್ರಕಾಶನದ ನೂತನ ಕಚೇರಿ ಉದ್ಘಾಟಿಸಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್

0
400

ಸನ್ಮಾರ್ಗ ವಾರ್ತೆ

ಮಂಗಳೂರು: “ಈಗ ನಮ್ಮೆಲ್ಲರಿಗೂ ಬೇಕಾಗಿರುವುದು ಶಾಂತಿ, ಸಹಬಾಳ್ವೆ. ದ್ವೇಷ ತುಂಬಿದ ಇಂದಿನ ವಾತಾವರಣದಲ್ಲಿ ಇದರ ಅಗತ್ಯ ಬಹಳವಿದೆ. ಈಗಿನ ಕಾಲಮಾನಕ್ಕೆ ಬೇಕಾದಷ್ಟು ಅಂಶಗಳು ಎಲ್ಲ ಧರ್ಮಗ್ರಂಥಗಳಲ್ಲಿವೆ. ಧರ್ಮಗಳೆಲ್ಲ ಕಲಿಸುವುದು ನೀತಿ, ಚಾರಿತ್ರ್ಯ, ಸುಂದರ ಮತ್ತು ಶಾಂತಿಯುತ ಜೀವನ ವಿಧಾನವನ್ನಾಗಿದೆ. ಅವುಗಳನ್ನೇ ನಾವು ಪಾಲಿಸಿಕೊಂಡು ಬಂದರೆ ಜೀವನ ಸಾರ್ಥಕವಾಗುತ್ತದೆ” ಎಂದು ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಇದರ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಹೇಳಿದರು.

ಅವರು ನಗರದ ಸಹಕಾರಿ ಸದನದಲ್ಲಿ ಶಾಂತಿ ಪ್ರಕಾಶನದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
“ಕಚೇರಿಯ ಹೊರಭಾಗವು ಎಷ್ಟು ಸುಂದರವಾಗಿದೆಯೋ ಅದಕ್ಕಿಂತಲೂ ಒಳಗೆ ಸುಂದರವಾಗಿದೆ. ಇದುವೇ ಧರ್ಮಗಳು ಕಲಿಸುವ ಆತ್ಮಶುದ್ಧಿಯ ಪ್ರತೀಕ. ಸರಕಾರದಿಂದ ಯಾವುದೇ ಅನುದಾನವನ್ನು ಪಡೆಯದೆಯೇ ಇಷ್ಟು ಸಾಹಿತ್ಯ ಸಾಧನೆಗೈದಿರುವುದು ಶಾಂತಿ ಪ್ರಕಾಶನದ ಹೆಗ್ಗಳಿಕೆಯಾಗಿದೆ. ಬೇರೆ ಬೇರೆ ಭಾಷೆಗಳಲ್ಲಿರುವ ಸಾಹಿತ್ಯಗಳನ್ನು ಕನ್ನಡದಲ್ಲಿ ಪ್ರಕಟಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ” ಎಂದು ಅವರು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿವಿಯ ಉಪಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯರವರು, “ನಮ್ಮ ಮಕ್ಕಳಿಗೆ ಕೋಟಿಗಟ್ಟಲೆ ಹಣ, ಐಷಾರಾಮಿ ಜೀವನ ಕೊಡುವುದಕ್ಕಿಂತ ಜೀವನದ ಮೌಲ್ಯಗಳನ್ನು ಕಲಿಸಿ ಕೊಟ್ಟರೆ ಉತ್ತಮ ಅದುವೇ ಧರ್ಮಗಳ ಸಾರವಾಗಿದೆ. ಕರುಣಾನಿಧಿಯಾದ ಸೃಷ್ಟಿಕರ್ತನು ನಮ್ಮನ್ನು ಪೂರ್ತಿ ಪ್ಯಾಕೆಜ್‍ನೊಂದಿಗೆ ಕಳುಹಿಸಿದ್ದಾನೆ. ಆದರೆ ನಮ್ಮಲ್ಲಿನ ಪ್ರತಿಭೆಗಳಲ್ಲಿ 5% ಮಾತ್ರ ನಾವು ಬಳಸುತ್ತೇವೆ. ನಿಜವಾಗಿ ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ. ನಮಗಿಂತ ಮುಂಚಿನವರು ನಮಗೆ ತಮ್ಮ ಕೊಡುಗೆಗಳನ್ನು ಕೊಟ್ಟು ಹೋಗಿದ್ದಾರೆ. ಹಾಗಾಗಿ ನಾವೂ ನಮ್ಮ ನಂತರದವರಿಗೆ ಕೊಟ್ಟು ಹೋಗಬೇಕು. ಧರ್ಮಗ್ರಂಥಗಳೆಲ್ಲವೂ ಅದನ್ನೇ ಹೇಳುತ್ತವೆ. ಇಂತಹ ಕಲ್ಪನೆಗಳನ್ನೇ ಶಾಂತಿ ಪ್ರಕಾಶನವು ಕನ್ನಡದಲ್ಲಿ ಕನ್ನಡ ನಾಡಿಗೆ ಉಣಬಡಿಸುತ್ತಿದೆ” ಎಂದು ಹೇಳಿದರು.

ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರರವರು ಮಾತನಾಡಿ, “ಬೆಳಕು ಎಲ್ಲ ಧರ್ಮಗಳ ಸಾರವಾಗಿದೆ. ಸಾಹಿತ್ಯ ಲೋಕದಲ್ಲಿ ಸೀಮೋಲ್ಲಂಘನೆ ಮಾಡಿ ಸಂಸ್ಕøತಿಯ ಚೌಕಟ್ಟನ್ನು ಮೀರದೆ ಈ ಬೆಳಕನ್ನು ಬೆಳಕಾಗಿಯೇ ತೋರಿಸಿದ ಇಸ್ಲಾಮೀ ಸಾಹಿತ್ಯವನ್ನು ಕನ್ನಡದಲ್ಲಿ ಕನ್ನಡ ನಾಡಿಗೆ ಕೊಡುಗೆಯಗಿ ನೀಡಿದ ಗೌರವ ಶಾಂತಿ ಪ್ರಕಾಶನಕ್ಕೆ ಸಲ್ಲುತ್ತದೆ. “ಪ್ರಗತಿಯ ನಾಗಾಲೋಟದಲ್ಲಿ ಪ್ರಕೃತಿಯನ್ನು ಮರೆತು ಬಿಟ್ಟ ಮಾನವನಿಗೆ ಪ್ರಕೃತಿಯೇ ಕಲಿಸಿದ ಪಾಠವಾಗಿತ್ತು ಕೊರೋನಾ. ಇಂತಹ ಸಂದರ್ಭದಲ್ಲಿ ಧರ್ಮದ ಒಳಸಾರದ ಮಂಥನವನ್ನು ನಡೆಸಿ ಕೃತಾರ್ಥರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಾಂತಿ ಪ್ರಕಾಶನವು ಜ್ಞಾನದ ಕೇಂದ್ರವಾಗಲಿ” ಎಂದು ಹೇಳಿದರು.

ಇಸ್ಲಾಮಿಕ್ ಸ್ಟಡೀಸ್, ಹಿರಾ ಕಾಲೇಜು ಉಳ್ಳಾಲ ಇದರ ಮುಖ್ಯಸ್ಥರಾದ ಮೌಲಾನಾ ಶುಐಬ್ ನದ್ವಿಯರವರು ಮಾತನಾಡಿ, “ಅಲ್ಲಾಹನು ಮೊತ್ತ ಮೊದಲು ಸೃಷ್ಟಿಸಿರುವುದು ಲೇಖನಿಯನ್ನು. ಅಂತೆಯೇ ಇಸ್ಲಾಮಿನ ಕ್ರಾಂತಿ ನಡೆದಿರುವುದು ಶಿಕ್ಷಣ ಮತ್ತು ಸುಧಾರಣೆಯ ಮೂಲಕವಾಗಿದೆ. ಗ್ರಂಥ ಮತ್ತು ಜ್ಞಾನವು ಆತ್ಮದ ಆಹಾರವಾಗಿದೆ. ಈ ನಿಟ್ಟಿನಲ್ಲಿ ಮೌಲ್ಯಯುತವಾದ ಧಾರ್ಮಿಕ ಉಪದೇಶಗಳನ್ನು ನೀಡಿದ ಶಾಂತಿ ಪ್ರಕಾಶನಕ್ಕೆ ದೀರ್ಘಕಾಲದ ಇತಿಹಾಸವಿದೆ. ಮಂಗಳೂರಿನಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಯ ಮೂಲಕ ಒಂದು ವಿಶ್ವ ವಿದ್ಯಾಲಯದ ಕೆಲಸ ನಡೆದಿದೆ. ಉರ್ದು, ಅರಬಿ ಮತ್ತಿತರ ಭಾಷೆಗಳಲ್ಲಿನ ಸಾಹಿತ್ಯಗಳನ್ನು ಕನ್ನಡದಲ್ಲಿ ಪ್ರಕಟಿಸಿರುವುದು ಬಲುದೊಡ್ಡ ಸಾಧನೆಯಾಗಿದೆ” ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಂತಿ ಪ್ರಕಾಶನ ಸಂಸ್ಥೆಯ ಅಧ್ಯಕ್ಷರಾದ ಡಾ. ಬೆಳಗಾಮೀ ಮುಹಮ್ಮದ್ ಸಅದ್‍ರವರು, “ಮಾನವನು ವೈಜ್ಞಾನಿಕವಾಗಿ ಬಹಳ ಪ್ರಗತಿಯನ್ನು ಸಾಧಿಸಿದ್ದಾನೆ. ಭೂಮಿಯ ಹೊರಗೆ ಗ್ರಹಗಳನ್ನು ಹೋಗಿ ತಲುಪುತ್ತಿದ್ದಾನೆ. ಆದರೆ ಸ್ವತಃ ಮಾನವರನ್ನು ತಲುಪುವಲ್ಲಿ ಎಡವಿದ್ದಾನೆ. ಇಂದು ಮಾನವನೇ ಮಾನವರ ಮೇಲೆ ದೌರ್ಜನ್ಯವನ್ನು ಎಸಗುತ್ತಿದ್ದಾನೆ. ಪ್ರಸಕ್ತ ಕಾಲಘಟ್ಟದಲ್ಲಿ ಬಡವ-ಬಲ್ಲಿದರ ಅಂತರವು ಇನ್ನೂ ಹೆಚ್ಚುತ್ತಾ ಹೋಗಿದೆ. ಇಂತಹ ಸಂದರ್ಭದಲ್ಲಿ ನಾವು ಆತ್ಮಸಂಸ್ಕರಣೆ ನಡೆಸದೆ ಮುಂದುವರಿಯಲಾರೆವು. ಈ ನಿಟ್ಟಿನಲ್ಲಿ ಶಾಂತಿ ಪ್ರಕಾಶನವು ಶಾಂತಿ, ಸಹೋದರತೆ ಮತ್ತು ಸಹಬಾಳ್ವೆಯನ್ನು ಪಸರಿಸುವ ಕೆಲಸ ಮಾಡುತ್ತಿದೆ. ಸಾಮಾಜಿಕ ಪರಿವರ್ತನೆಯಲ್ಲಿ ಶಾಂತಿ ಪ್ರಕಾಶನದ ಕೊಡುಗೆಗಳು ಅನನ್ಯವಾಗಿವೆ” ಎಂದು ಹೇಳಿದರು.
ಆರಂಭದಲ್ಲಿ ಸಹೋದರ ಮುಹಮ್ಮದ್ ಸದೀದ್ ಕುರ್‍ಆನ್ ಪಠಣಗೈದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಯವರು ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್‍ನ ಅಧ್ಯಕ್ಷರಾದ ಅಲ್ ಹಾಜ್ ಎಸ್.ಎಂ. ರಶೀದ್‍ರವರು ಸಂಸ್ಥೆಗೆ ಶುಭ ಹಾರೈಸಿದರು. ಪಿ.ಎ. ಪೋಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಡಾ. ಮುಹಮ್ಮದ್ ಮುಬೀನ್ ಉಳ್ಳಾಲ್‍ರವರು ನಿರೂಪಿಸಿ, ಧನ್ಯವಾದ ಅರ್ಪಿಸಿದರು.