ಶ್ರೀರಾಮಚಂದ್ರ ಮತ್ತು ಪ್ರವಾದಿ ಅನುಯಾಯಿಗಳಿಗೆ ಅಭಿನಂದನೆಗಳು

0
1064

ಸನ್ಮಾರ್ಗ ಸಂಪಾದಕೀಯ

ಕಳೆದವಾರ ಎರಡು ಘಟನೆಗಳು ನಡೆದುವು. ಈ ಎರಡೂ ಘಟನೆಗಳಿಗೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ವ್ಯಕ್ತಪಡಿಸಿರುವ ಪ್ರತಿಕ್ರಿಯೆ ಅತ್ಯಂತ ಪ್ರಬುದ್ಧತೆಯಿಂದ ಕೂಡಿತ್ತು ಮತ್ತು ಆ ಎರಡೂ ಘಟನೆಗಳಿಗೆ ಕಾರಣಕರ್ತರಾದವರು ತಲೆ ತಗ್ಗಿಸುವ ರೂಪದಲ್ಲಿತ್ತು. ಇದರಲ್ಲಿ ಒಂದು- ಪ್ರೊಫೆಸರ್ ಭಗವಾನ್‍ರ ಬರಹ. ಆ ಬರಹದಲ್ಲಿ ಶ್ರೀರಾಮನನ್ನು ಅವರು ಅತ್ಯಂತ ಕೆಳದರ್ಜೆಯ, ಅವಮಾನಕರವಾದ ಮತ್ತು ನಿಂದನಾತ್ಮಕ ರೀತಿಯಲ್ಲಿ ಉಲ್ಲೇಖಿಸಿದ್ದರು. ಮಾತ್ರವಲ್ಲ, ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನನ್ನು ಹೀಗೆಯೇ ಉಲ್ಲೇಖಿಸಲಾಗಿದೆ ಎಂದೂ ಸಮರ್ಥಿಸಿಕೊಂಡಿದ್ದರು. ಇನ್ನೊಂದು- ಟಿ.ವಿ. ನಿರೂಪಕರೊಬ್ಬರು ಪ್ರವಾದಿ ಮುಹಮ್ಮದ್‍ರ ಬಗ್ಗೆ ಆಡಿದ ಮಾತು. ಪ್ರವಾದಿ ಮುಹಮ್ಮದ್‍ರಿಗೆ ಶಿಶುಕಾಮಿ ಎಂಬ ಪದವನ್ನು ಅವರು ಪ್ರಯೋಗಿಸಿದ್ದರು. ಸಾರ್ವಜನಿಕರ ಪ್ರತಿಕ್ರಿಯೆಯ ದೃಷ್ಟಿಯಿಂದ ಈ ಎರಡೂ ಸಂದರ್ಭಗಳು ಬಹುಮುಖ್ಯವಾದವು.

ಒಂದು ಧರ್ಮದ ಐಕಾನ್‍ಗಳೆಂಬ ನೆಲೆಯಲ್ಲಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರಿಗೆ ಬಹಳ ದೊಡ್ಡ ಗೌರವವಿದೆ. ಯಾವುದೋ ಒಂದು ಕಾಲದಲ್ಲಿ ಮತ್ತು ಎಷ್ಟೋ ಶತಮಾನಗಳ ಹಿಂದೆ ಬಾಳಿ, ತುಂಬು ಜೀವನ ನಡೆಸಿ ಹೊರಟು ಹೋದವರಷ್ಟೇ ಅಲ್ಲ ಇವರು. ಇವರಿಬ್ಬರನ್ನೂ ಈ ಸಮಾಜ ಅನುಸರಿಸುತ್ತಾ ಬಂದಿದೆ. ಶ್ರೀರಾಮ ಈ ದೇಶದಲ್ಲಿ ಮರ್ಯಾದಾ ಪುರುಷೋತ್ತಮನಾಗಿ ಗುರುತಿಸಿಕೊಂಡವರು. ಅವರನ್ನು ಆರಾಧಿಸುವ, ಆದರಿಸುವ, ದೇವ ಸ್ವರೂಪಿಯಾಗಿ ಕಾಣುವ ಪರಂಪರೆಯೊಂದು ಈ ದೇಶದಲ್ಲಿ ಬೆಳೆದು ಬಂದಿದೆ. ಶ್ರೀರಾಮರ ಕುರಿತಂತೆ ಹೆಣೆದುಕೊಂಡ ಕತೆಗಳೇ ಇಲ್ಲಿ ನೂರಾರು ಇವೆ. ರಾಮ, ಲಕ್ಷ್ಮಣ, ಸೀತೆ, ಹನುಮಂತ, ಸುಗ್ರೀವ, ವಾಲಿ ಇತ್ಯಾದಿ ಇತ್ಯಾದಿಗಳೆಲ್ಲ ಬರೇ ಹೆಸರುಗಳಷ್ಟೇ ಅಲ್ಲ, ಅವೊಂದು ರೂಪಕ. ಜನರು ಸ್ವತಃ ಪಾತ್ರವಾಗಿ ಅವನ್ನು ಬದುಕಿನಲ್ಲಿ ಅನುಸರಿಸುತ್ತಾ ಬಂದಿದ್ದಾರೆ. ಪ್ರವಾದಿ ಮುಹಮ್ಮದರೂ(ಸ) ಅಷ್ಟೇ.

6 ಮತ್ತು 7ನೇ ಶತಮಾನದ ನಡುವೆ ಮಕ್ಕಾ ಮತ್ತು ಮದೀನಾಗಳನ್ನು ಕೇಂದ್ರವಾಗಿಟ್ಟುಕೊಂಡು ಅವರು ನಡೆಸಿದ ಸುಧಾರಣಾ ಚಟುವಟಿಕೆಗಳು ಅಮೋಘ ಮತ್ತು ಅತುಲ್ಯ. ಅವರ ಕಾಲದ ಸಾಮಾಜಿಕ ರೀತಿ-ನೀತಿ, ಜೀವನ ಪದ್ಧತಿ; ಕೌಟುಂಬಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ಗಮನಿಸದೇ ಮತ್ತು ಪರಿಶೀಲನೆಗೊಡ್ಡದೇ ಈ ಕಾಲದಲ್ಲಿ ನಿಂತು ನಾವು ಅವರ ಬಗ್ಗೆ ಬೀಸು ಹೇಳಿಕೆಗಳನ್ನು ಕೊಡುವುದು ಸುಲಭ. ಆದರೆ ಬೀಸು ಹೇಳಿಕೆಗಳಿಗಷ್ಟೇ ಸೀಮಿತವಾಗುವ ವ್ಯಕ್ತಿತ್ವವೇ ಅದು ಎಂಬ ಪರಿಶೀಲನೆಗಿಳಿದರೆ ತೆರೆದುಕೊಳ್ಳುವ ಜಗತ್ತೇ ಬೇರೆ. ಅವರ ಬಾಲ್ಯ, ಯೌವನ, ಮದುವೆ, ಮಕ್ಕಳು, ಅವರ ಸುಧಾರಣಾ ಕಾರ್ಯಗಳು, ಅವರು ಎದುರಿಸಿರುವ ಸವಾಲುಗಳು ಮತ್ತು ಅದನ್ನು ಅವರು ಎದುರಿಸಿದ ರೀತಿ, ಅವರ ಸಾಮಾಜಿಕ ಚಿಂತನೆಗಳು, ಹೆಣ್ಣಿನ ಬಗೆಗಿನ ಅವರ ನಿಲುವು, ವಿಧವೆಯರು ಮತ್ತು ಹೆತ್ತವರ ಬಗೆಗಿನ ಅಭಿಪ್ರಾಯಗಳು ಇತ್ಯಾದಿಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ನಡೆಸಿದ ಓರ್ವ ವ್ಯಕ್ತಿ ಅವರನ್ನು ಒಂದು ವಾಕ್ಯದ ಬೀಸು ಹೇಳಿಕೆಯೊಳಗೆ ಬಂಧಿಸಿಡಲಾರ. ಪ್ರವಾದಿ ಮುಹಮ್ಮದ್‍ರಿಂದ ಆಕರ್ಷಿತರಾಗಿ ಅವರ ಅನುಯಾಯಿಗಳಾದ ತತ್ವಜ್ಞಾನಿಗಳಿದ್ದಾರೆ, ಬರಹಗಾರರಿದ್ದಾರೆ, ಕವಿಗಳಿದ್ದಾರೆ, ರಾಜಕಾರಣಿಗಳಿದ್ದಾರೆ, ಕ್ರೀಡಾಪಟುಗಳಿದ್ದಾರೆ. ವಿಶ್ವ ಕಂಡ ಶ್ರೇಷ್ಠ ಬಾಕ್ಸಿಂಗ್ ಪಟು ಅಮೇರಿಕದ ಕ್ಯಾಸಿಯಸ್ ಕ್ಲೇ ಅವರು ಮುಹಮ್ಮದಲಿ ಕ್ಲೇ ಆದುದು ಪ್ರವಾದಿಯವರನ್ನು ಓದಿಕೊಂಡು. ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಸರೋಜಿನಿ ನಾಯ್ಡು, ನೆಹರೂ ಎಲ್ಲರೂ ಪ್ರವಾದಿಯವರ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ. ಜಾಗತಿಕವಾಗಿ ಇವತ್ತು ಪ್ರವಾದಿ ಮುಹಮ್ಮದ್‍ರಿಗೆ 160 ಕೋಟಿಗಿಂತಲೂ ಅಧಿಕ ಅನುಯಾಯಿಗಳಿದ್ದಾರೆ. ಇಂಥ ವ್ಯಕ್ತಿತ್ವದ ಮೇಲೆ ಪ್ರತಿಕ್ರಿಯಿಸುವ ಮೊದಲು ಅವರ ಬಗ್ಗೆ ಅಧ್ಯಯನ ಅತೀ ಅಗತ್ಯ. ಹಾಗಂತ,

ಪ್ರವಾದಿ ಮುಹಮ್ಮದ್‍ರಾಗಲಿ, ಶ್ರೀರಾಮ ಚಂದ್ರರಾಗಲಿ ಈ ಸಮಾಜಕ್ಕೆ ಅಜ್ಞಾತರಾಗಿ ಉಳಿದಿಲ್ಲ. ಇವರನ್ನು ವಿವರಿಸುವ ಸಾವಿರಾರು ಕೃತಿಗಳು ಇಲ್ಲಿವೆ. ಇವರು ಕಾವ್ಯವಾಗಿ, ಕವನವಾಗಿ, ಕತೆ, ಕಾದಂಬರಿಯಾಗಿ, ನಾಟಕವಾಗಿ, ಸಿನಿಮಾವಾಗಿ ಹೀಗೆ ವಿವಿಧ ರೂಪದಲ್ಲಿ ಸಮಾಜದ ನಡುವೆಯಿದ್ದಾರೆ. ಬಿಡಿಬಿಡಿಯಾಗಿರುವ ಇವನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ತಂದುಕೊಂಡು ಅಧ್ಯಯನಕ್ಕಿಳಿದರೆ ಅವರೇನೆಂಬುದು ಗೊತ್ತಾಗುತ್ತದೆ. ವಿಷಾದ ಏನೆಂದರೆ,

ಐತಿಹಾಸಿಕ ವ್ಯಕ್ತಿತ್ವಗಳನ್ನು ಈ ಕಾಲದಲ್ಲಿ ನಿಂತು ನೋಡುವಾಗ ಯಾವ ಎಚ್ಚರಿಕೆಯನ್ನು ಪಾಲಿಸಬೇಕಿತ್ತೋ ಆ ಎಚ್ಚರಿಕೆಯನ್ನು ಕಳೆದವಾರದ ಎರಡೂ ಘಟನೆಗಳಲ್ಲಿ ವಹಿಸಲಾಗಿಲ್ಲ ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಆದರೂ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳು ಈ ಬಗ್ಗೆ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿವೆ. ಪ್ರೊಫಸರ್ ಭಗವಾನ್‍ರ ಬಗ್ಗೆ ಅಥವಾ ಟಿ.ವಿ. ನಿರೂಪಕರ ಬಗ್ಗೆ ಈ ಸಮಾಜ ಸಿಟ್ಟುಗೊಂಡರೂ ಎಲ್ಲೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಇವರನ್ನು ಖಂಡಿಸುವ ಭರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿಲ್ಲ. ರಸ್ತೆ ತಡೆ, ಬಂದ್‍ಗೆ ಕರೆಕೊಟ್ಟಿಲ್ಲ. ಇದೊಂದು ಪ್ರಬುದ್ಧ ನಡೆ. ಪ್ರಬುದ್ಧರೆನಿಸಿಕೊಂಡವರು ತೀರಾ ಅಪ್ರಬುದ್ಧರಂತೆ ವರ್ತಿಸಿದಾಗ ಸಾಮಾನ್ಯವಾಗಿ ಜನರು ರೊಚ್ಚಿಗೇಳುವುದಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವುದಿದೆ. ಬೈಗುಳ ಸುರಿಸುವುದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳನ್ನು ನಾವು ಅಭಿನಂದಿಸಬೇಕು. ಶ್ರೀರಾಮಚಂದ್ರರಾಗಲಿ ಪ್ರವಾದಿ ಮುಹಮ್ಮದರಾಗಲಿ ನಿಜ ಐಕಾನ್‍ಗಳಾಗುವುದು ಇಂಥ ಪ್ರತಿಕ್ರಿಯೆಗಳ ಮೂಲಕ. ಓರ್ವರು ಶ್ರೀರಾಮಚಂದ್ರರನ್ನು ನಿಂದಿಸಿದರು ಎಂಬುದನ್ನು ಎತ್ತಿಕೊಂಡು ಅದಕ್ಕಿಂತಲೂ ಕೆಟ್ಟದಾಗಿ ಅವರನ್ನು ನಾವು ನಿಂದಿಸಲು ಪ್ರಾರಂಭಿಸಿದರೆ ಅವರಿಗೂ ನಮಗೂ ನಡುವೆ ಇರುವ ವ್ಯತ್ಯಾಸ ಅಳಿದು ಹೋಗುತ್ತದೆ. ಮಾತ್ರವಲ್ಲ,

ಶ್ರೀರಾಮಚಂದ್ರರ ನಿಜ ಅನುಯಾಯಿ ನಾವು ಎಂದು ಹೇಳಿಕೊಳ್ಳುವುದಕ್ಕೂ ಅದು ಧಕ್ಕೆ ತರುತ್ತದೆ. ಪ್ರವಾದಿ ಮುಹಮ್ಮದ್‍ರ ನಿಜ ಅನುಯಾಯಿಯೊಬ್ಬ ಪ್ರವಾದಿ ನಿಂದಕರನ್ನು ಅದೇ ಭಾಷೆಯಲ್ಲಿ ನಿಂದಿಸಲಾರ. ನಿಂದನೆಗೆ ಪ್ರತಿಯಾಗಿ ಪ್ರತಿನಿಂದನೆ, ಹತ್ಯೆಗೆ ಪ್ರತಿಯಾಗಿ ಪ್ರತಿಹತ್ಯೆ, ಅನ್ಯಾಯಕ್ಕೆ ಪ್ರತಿಯಾಗಿ ಪ್ರತಿಅನ್ಯಾಯ, ಅತ್ಯಾಚಾರಕ್ಕೆ ಪ್ರತಿಯಾಗಿ ಪ್ರತಿ ಅತ್ಯಾಚಾರ ಇವೆಲ್ಲ ಧರ್ಮ ವಿರೋಧಿಸಿದ ಕೃತ್ಯಗಳು. ನಿಂದನೆಗೆ ಶಿಕ್ಷೆ ಏನು ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು. ಹತ್ಯೆಗೆ ಶಿಕ್ಷೆ ಏನು ಅನ್ನುವುದನ್ನೂ ನಿರ್ಧರಿಸಬೇಕಾದುದು ನ್ಯಾಯಾಲಯವೇ. ಅತ್ಯಾಚಾರವಾಗಲಿ ಇನ್ನಾವುದೇ ಸಮಾಜ ವಿರೋಧಿ ಕೃತ್ಯಗಳಾಗಲಿ ಇವುಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದ ಹೊಣೆಗಾರಿಕೆ ನ್ಯಾಯಾಲಯದ ಮೇಲಿದೆ. ಈ ಕ್ರಮವನ್ನು ಗೌರವಿಸದೇ ಹೋದರೆ ನಾಗರಿಕ ಸಮಾಜ ಅನಾಗರಿಕವಾಗಿ ಬಿಡುತ್ತದೆ. ಶಿಕ್ಷೆಗೆ ಒಳಗಾಗಬೇಕಾದವರು ತಪ್ಪಿಸಿಕೊಳ್ಳುತ್ತಾರೆ. ಅಮಾಯಕರು ಅನ್ಯಾಯಕ್ಕೊಳಗಾಗುತ್ತಾರೆ. ಆದ್ದರಿಂದಲೇ ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯ ತೋರಿದ ಸಹನೆ ಮತ್ತು ವಹಿಸಿದ ಎಚ್ಚರಿಕೆಯು ಇಷ್ಟವಾಗುವುದು. ಒಂದುವೇಳೆ, ಈ ದೇಶದಲ್ಲಿರುವ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದ್‍ರ ಕೋಟ್ಯಾಂತರ ಅನುಯಾಯಿಗಳು ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳುವ ಪ್ರಮಾದ ಮಾಡಿರುತ್ತಿದ್ದರೆ ಅದರಿಂದ ಅಪಾಯಕಾರಿ ಸನ್ನಿವೇಶವೊಂದು ನಿರ್ಮಾಣವಾಗುತ್ತಿತ್ತು. ಅನಾಹುತಕಾರಿ ವಿದ್ಯಮಾನಗಳಿಗೆ ಅದು ಕಾರಣವಾಗುತ್ತಿತ್ತು. ಮಾತ್ರವಲ್ಲ, ಇಂಥ ಕ್ರಮಗಳು ಪ್ರವಾದಿ ಮತ್ತು ಶ್ರೀರಾಮರಿಗೆ ಮಾಡುವ ದ್ರೋಹವೂ ಆಗುತ್ತಿತ್ತು.

ಪ್ರಬುದ್ಧ ಧರ್ಮಾನುಯಾಯಿಗಳ ಲಕ್ಷಣ ಏನೆಂದರೆ, ಯಾವ ಸಂದರ್ಭದಲ್ಲಿಯೂ ವಿವೇಚನೆಯನ್ನು ಕಳಕೊಳ್ಳದೇ ಇರುವುದು. ಪ್ರವಾದಿ ಮುಹಮ್ಮದ್‍ರ ನಿಂದನೆಗೆ ಪ್ರತಿಕ್ರಿಯೆಯಾಗಿ ಅವರ ಅನುಯಾಯಿಗಳು ಪ್ರತಿನಿಂದನೆಗೆ ಮತ್ತು ಪ್ರತಿಹಿಂಸೆಗೆ ಇಳಿದರು ಎಂದಾದರೆ, ಅವರು ವಿಚಾರವಂತ ಅನುಯಾಯಿಗಳ ಪಟ್ಟಿಯಿಂದ ಹೊರಗಿದ್ದಾರೆ ಎಂದೇ ಅರ್ಥ. ಶ್ರೀರಾಮರಿಗೆ ಸಂಬಂಧಿಸಿಯೂ ಇವೇ ಮಾತುಗಳನ್ನು ಹೇಳಬೇಕು. ನಿಂದನೆಗೆ ಕಾನೂನಿನ ಭಾಷೆಯಲ್ಲಿ ಉತ್ತರಿಸುವ ವಿವೇಚನೆಯನ್ನು ನಾವು ರೂಢಿಸಿಕೊಳ್ಳಬೇಕು. ಪ್ರೊಫೆಸರ್ ಭಗವಾನ್ ಮತ್ತು ಟಿ.ವಿ. ನಿರೂಪಕರ ವಿಷಯದಲ್ಲಿ ಇದು ಸಾಧ್ಯವಾಗಿದೆ. ಇದಕ್ಕಾಗಿ ಶ್ರೀರಾಮಚಂದ್ರ ಮತ್ತು ಪ್ರವಾದಿ ಮುಹಮ್ಮದರ ಅನುಯಾಯಿಗಳಿಗೆ ಅಭಿನಂದನೆಗಳು.