ಕೊರೋನ, ಕ್ಯೂ ರೋನಾ?: ಕೊರೋನವನ್ನು ಗೆದ್ದು ಬಂದ ಶಿಕ್ಷಕ ಸೋಮಶೇಖರ್‌‌ರವರ ಅನುಭವ

0
258

ಕರೋನಾವನ್ನು ಗೆದ್ದು, ಆಸ್ಪತ್ರೆಯಿಂದ ಮೊನ್ನೆಯಷ್ಟೇ ಡಿಸ್ಚಾರ್ಜ್ ಆದ ಮದ್ದೂರು ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸಗಾವಿಯ ಶಿಕ್ಷಕರಾದ ಶ್ರೀಯುತ ಸೋಮಶೇಖರ್‌ರವರು (ಕೊಪ್ಪ ನಿವಾಸಿ) ತಮ್ಮ ಅನುಭವಗಳನ್ನು ಬರೆದುಕೊಂಡಿದ್ದಾರೆ, ಅವರ ಅದ್ಭುತ ಮಾತುಗಳನ್ನು ಒಮ್ಮೆ ಓದಿ

ಕರೋನಾ, ಕ್ಯೂ ರೋನಾ…?

ಮಾಧ್ಯಮದಲ್ಲಿ ಬಂದ ಕಪೋಲ ಕಲ್ಪಿತ ಸುದ್ದಿಗಳನ್ನು ಕಳೆದ ಮೂರು ತಿಂಗಳಿಂದ ಮೈತುಂಬಿಸಿಕೊಂಡು, ಆ ಅವ್ಯಕ್ತ ಭಯವು ನನ್ನನ್ನೇ ಒಂದು ದಿನ ಸಾಮಾನ್ಯ ಅನಾರೋಗ್ಯಕ್ಕೇ (ನೆಗಡಿ‌, ಶೀತ, ಸೌಮ್ಯಜ್ವರ) ಆಸ್ಪತ್ರೆಯ ದಾರಿ ಹಿಡಿಸೀತೂ ಎಂದು ಕನಸಿನಲ್ಲೂ ಎಣಿಸಿರಲಿಲ್ಲ.. ಒಂದು ಭಾರಿ ಅನುಮಾನ ಪರಿಹಾರ ಮಾಡಿದರೆ ಆಯಿತು ಎಂದು ಪರೀಕ್ಷೆಗೆ ಹೋದ ನನಗೆ ಒಳಗೊಳಗೇ ಏನೋ ದುಗುಡ,ಆದರೂ ನನಗೆ ಕರೋನಾ ಬರುವ ಸಾಧ್ಯತೆ ಇಲ್ಲ ಎನ್ನುವ ಕಿಂಚಿತ್ ಧೈರ್ಯ.

‘ಸ್ವಾಬ್’ ಕೊಟ್ಟು ಬಂದ ಮೇಲೆ ಯಾವುದಕ್ಕೂ ಇರಲಿ ಎಂದು ಮನೆಯ ಮಂದಿಯನ್ನೂ ದೂರ ಇಟ್ಟು ದೇವರ ಧ್ಯಾನ ಮಾಡುತ್ತ ನಿದ್ರೆ, ಊಟ ಎಲ್ಲಾ ಆರಾಮವಾಗಿ‌ ಮಾಡುತ್ತಾ ನಾಲ್ಕು ದಿನ ಕಳೆದರೂ ಫಲಿತಾಂಶ ಬರಲಿಲ್ಲ, ಹೋ ಬಿಡು ಇನ್ನೇನು ನಂದು ‘ನೆಗೆಟಿವ್ ಪಕ್ಕಾ’ ಎಂದು ಮಲಗಲು ಅಣಿಯಾಗುತ್ತಿರುವಾಗಲೇ ರಾತ್ರಿ 11:25 ರಲ್ಲಿ ಬಂತಲ್ಲಾ ಒಂದು ಕಾಲ್ 08232- ಎಂದು ನೋಡಿದಾಲೇ ಎದೆ ನಡುಗಲು ಆರಂಭವಾಯಿತು.

ಮೆಲ್ಲನೆ ಕಾಲ್ ರಿಸೀವ್ ಮಾಡಿದ ನನಗೆ “ನೀವು ಸೋಮಶೇಖರ್ ತಾನೇ, ಕೊಪ್ಪ,” ಎನ್ನಲು ನಾನು ಕ್ಷೀಣ ದ್ವನಿಯಲ್ಲಿ “ಹೌದು ಸರ್ ನೀವೂ?” ಎಂದೆ. “ನಾವು ಮಂಡ್ಯ ಹಾಸ್ಪಿಟಲ್‌ನಿಂದ ಸರ್” ಎಂದು ತುಂಬಾ ಸೌಮ್ಯವಾದ ವಾಯ್ಸನಲ್ಲೇ; “ಸಾರ್ ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದೀರಾ, ಹೆಸರು, ವಯಸ್ಸು” ಎಂದು ಕೇಳುತ್ತಲೇ ಪಾಠ ಒಪ್ಪಿಸಿದ ಹಾಗೆ ಒಪ್ಪೀಸಿದ್ದಾಯಿತು.

” ಅನ್ಫಾಚ್ಛ್ರನೇಟ್ಲೀ ಇಂದು 36 ಜನಕ್ಕೆ ಪಾಸಿಟಿವ್ ಬಂದಿದೆ ಅದರಲ್ಲಿ ನೀವೂ ಒಬ್ಬರು ಸಾರ್. ಸಾರ್ ನಮ್ಮ ಜಿಲ್ಲೆಯಲ್ಲಿ ಟ್ರೀಟ್ಮೆಂಟ್ ತುಂಬಾ ಚೆನ್ನಾಗಿ ಇದೆ ಸರ್ ಏನೂ ಭಯ ಪಡಬೇಕಾಗಿಲ್ಲ ವಾಸೀ ಮಾಡಿಕೊಂಡು ಹೊಗುವಿರಂತೆ. ದಯವಿಟ್ಟು ನಾಳೆ ಎಲ್ಲೂ ಹೋಗಬೇಡಿ ಆಂಬ್ಯುಲೆನ್ಸ್ ಕಳುಹಿಸುತ್ತೇವೆ ಬನ್ನೀ ಸರ್” ಎನ್ನಲು “ನಾನು ನನ್ನ ಗಾಡಿಯಲ್ಲಿ ಬರುತ್ತೇನೆ ಎಂದರೂ ನಯವಾಗಿಯೇ ಇಲ್ಲಾ ಸರ್ ಅದು ಪ್ರೋಟೋಕಲ್ ಸರ್ ಆಂಬ್ಯುಲೆನ್ಸ್‌ನಲ್ಲೇ ಬರಬೇಕು’ ಎಂದು ಫೋನ್ ಇಟ್ಟರು.

ಆ ನಂತರ ಶುರುವಾದದ್ದೇ ಕರೋನಾ ಮತ್ತು ಸಮಾಜದ ಅನುಭವ

ಮನೆಯವರ ಅಳಲು, ಪ್ರಶ್ನೆ, ನಮಗೇ ಯಾಕೆ ಹೀಗಾಯಿತು ಎನ್ನುವ ಭಾವ, ಅದರಲ್ಲೂ ಊರಿಗೆ ಮೋದಲು? ಎಲ್ಲೋ ಇದ್ದ ಈ ತೊಂದರೆ ನಮ್ಮ ಮನೆಗೆ ಯಾಕೆ ಬಂತೋ ಎಂದು ರಾತ್ರಿ ಇಡೀ ದೇವರಿಗೆ ಶಾಪ, ಪೇಚಾಟ, ಬೆಳಗಾದರೆ ನಮ್ಮನ್ನು ಜನ ನೋಡುವ ರೀತಿ, ಮಾತಾಡುವ ಮಾತುಗಳು, ನೂರಾರು ಪ್ರಶ್ನೆಗಳು? ತಲೆಯನ್ನು ನಿದ್ರೆಗೆ ಜಾರಲು ಬಿಡಲೇ ಇಲ್ಲ, ಮಾನಸಿಕವಾಗಿ ತಯಾರಾಗುವುದೋಂದೇ ನನ್ನ ಮುಂದಿದ್ದ ಆಯ್ಕೆ.ಎಲ್ಲರನ್ನೂ ಸಮಾದಾನ ಮಾಡುವ ಅನಿವಾರ್ಯತೆಯೂ ನನ್ನ ಮೇಲೆ ಇತ್ತು.

ಬೆಳಿಗ್ಗೆ ಆಯಿತು ಅಷ್ಟೇ ಕಾಡ್ಗಿಚ್ಚಿನಂತೆ ಹಬ್ಬಿತ್ತು ಸುದ್ದಿ ಅಕ್ಕ ಪಕ್ಕದ ಊರಿಗೂ.

ಅಕ್ಕ ಪಕ್ಕದ ಅಷ್ಟೇ ಏಕೇ ಇಡೀ ಏರಿಯಾದ ಮನೆಗಳ ಬಾಗಿಲುಗಳು, ಕಿಟಕಿಗಳು ಬಂದ್. ದಶಕಗಳಿಂದ ಒಟ್ಟಿಗೆ ಇದ್ದ ಜನರು ಎಲ್ಲಿ? ಯಾರೂ ನಮ್ಮವರಿಲ್ಲಾ ಎನ್ನುವ ಅನುಭವ.

ಹೋಬಳಿಯ ತುಂಬಾ ನನ್ನದೇ ಮಾತು, ಕಪೋಲಕಲ್ಪಿತ ಸುದ್ದಿಗಳನ್ನು ಹರಡಲಾಯಿತು, ಫೊನ್ ಕಾಲ್‌ಗಳ ಸುರಿಮಳೆ ಕೆಲವರು ಧೈರ್ಯದಿಂದ ಧೈರ್ಯ ಹೇಳಲು ಮಾಡಿದರೆ ಮತ್ತೆ ಕೆಲವರು ಪತ್ತೇದಾರಿಕೆಗೆ.

ಅಷ್ಟರಲ್ಲೇ ಊರಿನ ಆಡಳಿತ ಮಾತುಕತೆಗೆ ‌ಸೇರಿ 5ದಿನ ಸಂಪೂರ್ಣ ಸೀಲ್‌ಡೌನ್ ಎಂದು ತೀರ್ಮಾನಿಸಿ ಮೈಕ್ ಮೂಲಕ ಪ್ರಚಾರ ಶುರು ಮಾಡಿಸಿ ಆಗಿತ್ತು. ನನ್ನಿಂದಲೇ ಇಂತದ್ದನ್ನೆಲ್ಲಾ ಊರಿನಲ್ಲಿ ಅನುಭವಿಸುವ ಪರಿಸ್ಥಿತಿ ಬಂತಲ್ಲಾ ಎಂದು ಕಣ್ಣೀರಿನ ಕಟ್ಟೆ ಒಡೆಯಿತು, ಪ್ರಥಮ ಭಾರಿಗೆ ಇಷ್ಟೊಂದು ಅವಮಾನಕ್ಕೆ ತುತ್ತಾಗ್ಗಿದ್ದೆ.

ಪರಿಸ್ಥಿತಿಯ ಎದುರಿಸದೇ ಬೇರೆ ದಾರಿ ಇರಲಿಲ್ಲ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಾಣದ ಅನುಭವದ ದಾರಿಗೆ ಕಾಯುತ್ತಾ ಕುಳಿತೆ, ಮದ್ಯಾಹ್ನ 3 ಗಂಟೆಗೆ ಆಂಬ್ಯುಲೆನ್ಸ್ ಬಂತು ಎಂದು ಫೋನ್ ಬಂತು ಸದ್ಯಕ್ಕೆ ಸೈರನ್ ಹಾಕಿರಲಿಲ್ಲ ಸಮಾಧಾನಕ್ಕೆ. ಪೊಲೀಸ್‌ರು , ಹೆಲ್ತ್ ಡಿಪಾರ್ಮೆಂಟ್ ನವರು ಎಲ್ಲರೂ ಬಂದು ಆಂಬ್ಯುಲೆನ್ಸ್ ಬಂತೆಂದು ಹೊರಡುವ ಸೂಚನೆ ನೀಡಿದರು , ಮನೆಯವರ ಕಣ್ಣಿರ ಕಟ್ಟೆ ಒಡೆದು ಮನೆಯ ಹೊರಗೆ ಬಂದಾಗ ನನ್ನ ಮುದ್ದು ಮಕ್ಕಳನ್ನೂ ಮುದ್ದಾಡುವ ಬಾಗ್ಯವೂ ನನಗೆ ಇರಲಿಲ್ಲ.

ಕಾಣದ ಕಡಲಲ್ಲಿ ಬೆಳಕೋ ಇಲ್ಲ ಕತ್ತಲೆಯೋ ನನಗೇ ತಿಳಿಯದೇ ಹೊರಟೇ ಬಿಟ್ಟೆ ದಾರಿಲ್ಲಿ ಮತ್ತದೇ ಮುಚ್ಚಿದ ಬಾಗಿಲು, ಕಿಟಕಿಗಳು, ಯಾರಾದರೂ ಒಬ್ಬರು ಹುಷಾರಾಗಿ ಬಾ ಎಂದು ಹೇಳೀಯಾರೇನೋ ಎಂದು ಕೊಂಡರೂ ಊಹುಂ ಎಲ್ಲರೂ ಕಳ್ಳನನ್ನಹ ನೋಡಿದ ಹಾಗೆ ನೋಡಿದರೇ ಹೊರತೂ ಯಾರೊಬ್ಬರೂ ದೂರದಿಂದಲೂ ಮಾತನಾಡಿಸಲಿಲ್ಲ. ಮೊದಲ ಬಾರಿಗೆ ಅಸ್ಪೃಶ್ಯತೆಯ ಕರಾಳ ಅನುಭವ ಈ ಕಾಲದಲ್ಲಿ ಆಯಿತು.

ಅಂಬ್ಯುಲೆನ್ಸ್ ರಸ್ತೆಯಲ್ಲಿ ನಿಂತಿತ್ತು. ಯಾರೂ ಯಾವತ್ತಿಗೂ ಹತ್ತಲು ಇಷ್ಟಪಡದ ವಾಹನ ನನಗಾಗಿ ಕಾಯುತ್ತಾ , ಇಬ್ಬರು ಶ್ವೇತ ವರ್ಣದ ಪೋಷಾಕು ತೊಟ್ಟು ನನ್ನ ಯಾವುದೋ ಸ್ಥಳಕ್ಕೆ ಕರೆದ್ಯೊಯಲು ನಿಂತಿದ್ದರು. ನೋಡಿದೊಡನೆಯೇ ಅಳು ತಡೆಯಲು ಆಗಲೇ ಇಲ್ಲ, ಹಾಗೆ ಆಂಬ್ಯುಲೆನ್ಸ್ ಬಾಗಿಲು ತೆಗೆದೊಡನೆಯೇ ನನಗಿಂತ ಮೊದಲೇ ಮೂರು ಜನ. ಹೊರಗೆ ನಿಂತಿದ್ದ ಕೆಲವರಿಗೆ ನನ್ನ ಪರಿಸ್ಥಿತಿಯನ್ನು ವೀಡಿಯೋ ಮಾಡುವ ಅದನ್ನು ಆದಷ್ಟು ಬೇಗ ಗ್ರೂಪ್ ಗಳಿಗೆ ಶೇರ್ ಮಾಡುವ ಧಾವಂತ. ಆ ಪುಣ್ಯಾತ್ಮನಿಗೆ, ಅವನಿಗೆ ಬುದ್ಧಿ ಕಲಿಸಿದ ಗುರುಗಳಿಗೆ, ಪೋಷಕರಿಗೆ, ಸಮಾಜಕ್ಕೆ, ಸ್ನೆಹಿತರಿಗೆ ನನ್ನದೊಂದು ಸಲಾಮ್.

ಅಂತೂ ಆಂಬ್ಯುಲೆನ್ಸ್ ಹೊರಟೇ ಬಿಟ್ಟಿತು. ಒಳಗಿರುವ ಯಾರಿಗೂ ಮಾತನಾಡುವ ಧೈರ್ಯ ಇರಲಿಲ್ಲ. ಅಂತೂ ಆಸ್ಪತ್ರೆ ಬಂತು ಮೊದಲು ಯಾವುದೋ ರೂಂನಲ್ಲಿ ಕೈದಿಗಳ ಹಾಗೆ ಕೂಡಿ ಹಾಕಿದರು. ಸ್ವಲ್ಪ ಹೊತ್ತು ಯಾರು ಕೇಳುವವರೇ ಇರಲಿಲ್ಲ. ಆ ನಂತರ ಒಬ್ಬರು ಬಂದು ಹೆಸರು ಬರೆದುಕೊಂಡು ತಟ್ಟೆ ಲೋಟ, ಸ್ಯಾನಿಟರಿ ವಸ್ತುಗಳನ್ನು ನೀಡಿ ವಾರ್ಡ್‌ಗೆ ಕಳುಹಿಸಿದರು.

ಹೊಸ ಅಧ್ಯಾಯ ಶುರು…

ಯಾವುದೋ ವಾರ್ಡಿಗೆ ಹೋಗಿ ಎಂದು ಕೈ ತೋರಿಸಿದರು , ಒಳಗ್ಗಿದ್ದವರೆಲ್ಲಾ ಅನ್ಯಗ್ರಹ ಜೀವಿಗಳ ರೀತಿಯಲ್ಲೇ ಇದ್ದರು. ಅವರಿಗೆ ನಮ್ಮನ್ನು ನಮಗೆ ಅವರನ್ನು ಕಂಡರೇ ಭಯ. ಹೇಗೋ ಎಲ್ಲರಿಗೂ ಓಂದೊಂದುದು ಹಳೆಯ ಮಂಚ ಹಾಸಿಗೆಯ ವ್ಯವಸ್ಥೆ ಆಯಿತು. ಸೇಮ್ ಟು ಸೇಮ್ ಹಾಸ್ಟೆಲ್. ಆದರೆ ಎಲ್ಲರದೂ ಹೆಚ್ಚು ಕಡಿಮೆ ನನ್ನ ಅನುಭವವೇ. ಒಬ್ಬರನ್ನೊಬ್ಬರು ಮುಖ ನೋಡುತ್ತಾ ಅಂಜಿಕೆಯಲ್ಲೇ ಅಂದು ಕಳೆಯಿತು. ಆದರೆ ಹಳಬರು ಏನೂ ಆಗೇ ಇಲ್ಲ ಎನ್ನುವ ರೀತಿ ನೋಡಿ ಆಶ್ಚರ್ಯವಾಯಿತು. ಅವರಿಗೆ ಆಗಲೇ ‌ಸತ್ಯ ಧರ್ಶನ ಆಗಿತ್ತು. ಕಾಮನ್ ಟಾಯ್ಲೆಟ್, ಬಾತ್  ಎಲ್ಲಿಯೂ ಯಾವ ಅಡೆತಡೆ ಇರಲಿಲ್ಲ , ಸೋಷಿಯಲ್ ಡಿಸ್ಟೆಂಸ್ ಎಲ್ಲೂ ಇಲ್ಲ. ಅರೆ ಇಲ್ಲಿಗೆ ಇಷ್ಟೊಂದು ಸುರಕ್ಷಿತವಾಗಿ ಅವಮಾನದ ರೀತಿಯಲ್ಲಿ ಕರೆದುಕೊಂಡು ಬಂದರಲ್ಲಾ ಎಂದು ಎಲ್ಲರೂ ಗೋಣಗಿಕೊಂಡೆವು.

ಅಂದು ನಮ್ಮ ನಡುವೆ ಎಲ್ಲಾ ತರದ ಜನಗಳು , ಬಡವರು, ಶ್ರೀಮಂತರು, ಅಧಿಕಾರಿಗಳು, ನೌಕರರು, ವ್ಯವಸಾಯಗಾರು ಎಲ್ಲರೂ ಇದ್ದರು. ಬೇರೆ ಕೊಠಡಿಗಳನ್ನು ಸುತ್ತಾಡಿ ನೋಡಿದರೆ ಅಜ್ಜಂದಿರು, ಎಳೆಯ ಮಕ್ಕಳು, ಬಾಲಕರು, ಗರ್ಭಿಣಿಯರು , ಎಲ್ಲರೂ ಏನೂ ಆಗೇ ಇಲ್ಲವೆಂಬಂತೆ ಕಾರಿಡಾರ್‌ನಲ್ಲಿ ವಾಕ್ ಮಾಡುವುದನ್ನು ನೋಡಿ ಭಯವೆಲ್ಲ ಮಾಯವಾಗತೊಡಗಿತು.

ಬಂದಿದ್ದ ಬಹುತೇಕರಿಗೆ ಯಾವ ಕರೋನಾ ಲಕ್ಷಣಗಳು ಇರಲೇ ಇಲ್ಲ ಆದರೂ ಭಯ ಡಾಕ್ಟರ್ ಏನು ಹೇಳುವರೋ ಎಂದು. ಡಾಕ್ಟರ್, ನರ್ಸ್‌ಗಳು , ಕೆಲಸಗಾರರು , ಊಟ ಬಡಿಸುವವರು, ಎಲ್ಲರಿಗೂ ವಿಶೇಷ ಪೋಷಾಕು. ಯಾರು ಎಂದು ಮುಖ ದರ್ಶನವೂ ಆಗುವುದಿಲ್ಲ.

ಮಾರನೆಯ ದಿವಸ ಡಾಕ್ಟರ್ ಬಂದು ಎಲ್ಲರಿಗೂ ECG, X RAY, ಮಾಡಿಸಲು ಹೇಳಿದರು. ರಿಪೋರ್ಟ್ ಬರಲು ಮತ್ತೊಂದು ದಿವಸ ಕಾಯಬೇಕು. ಆ ನಂತರ ನಸ್‌ಗಳು ಬಂದು ಎಲ್ಲರಿಗೂ ಮಾತ್ರೆ ತಂದು ಒಟ್ಟಿಗೇ ಐದು ದಿವಸಗಳಲ್ಲಿ ಯಾವಾಗ ತೆಗೆದುಕೂಬೇಕು ಎಂದು ತಿಳಿಸಿ ಹೋದರು ಅಸ್ಟೆ ಟ್ರೀಟ್ಮೆಂಟ್. ನಮಗೆಲ್ಲಾ ಆಶ್ಚರ್ಯ ಹೇಗೇಗೋ ಹಿಡಿದುಕೊಂಡು ಬಂದ ನಮಗೆಲ್ಲ ಇಷ್ಟೇನಾ ಕೇರ್ ಮಾಡೋದು? ಎಂದು ಸೀನಿಯರ್ ನ ಕೇಳಿದರೆ ಉತ್ತರ ಇಷ್ಟೇ.

ಆದರೆ ಮೋಬೈಲ್ನನಲ್ಲಿ ಬರುವ ಊರಿನ ಗಾ‌ಸಿಪ್ಗಳು, ಮನೆಯವರನ್ನೆಲ್ಲಾ ಕ್ವಾರಂಟ್ಟೈನ್ ಮಾಡಿರುವ ಭಯ, ಅವರಿಗೂ ಪಾಸಿಟಿವ್ ಬಂದರೆ ಎನ್ನುವ ಆತಂಕ ಸರಿಯಾಗಿ ನಿದ್ರೆ ಮಾಡಲು ಯಾರಿಗೂ ಬಿಡಲಿಲ್ಲ ಎಲ್ಲರಿಗೂ ಅದೇ ಸಮಸ್ಯೆ ಹೊರತು ಒಳಗೆ ಯಾವ ಸಮಸ್ಯೆಗಳು ಇರಲಿಲ್ಲ. ಕೊನೆಗೆ ಅವರ ರಿಸಲ್ಟ್ ನೆಗೆಟಿವ್ ಬಂದಿದೆ ಅವರನ್ನು ಮನೆಗೆ ಕಳುಹಿಸಿದರು ಎಂದು ತಿಳಿದ ಮೇಲೆ ನನ್ನ ಪುಟ್ಟ ಮನೆಯಲ್ಲಿ ಇದ್ದು ಕೊಂಡು ನಾ ವಹಿಸಿದ ಎಚ್ಚರಿಕೆ ಎಲ್ಲರನ್ನೂ ಕಾಪಾಡಿತು ಎಂಬ ಹೆಮ್ಮೆ, ಕಣ್ಣಂಚಿನಲ್ಲಿ ನೀರು, ಒಂದು ನೆಮ್ಮದಿಯ ನಿದ್ರೆ.

ಹೇಗೋ ದಿನ ಮಾತ್ರೆ ನುಂಗುವುದು, ಊಟ ಮಾಡುವುದು, ಮೊಬೈಲ್ ಸಂಭಾಷಣೆ, ಮಲಗುವುದು ಇದಿಷ್ಟೇ ಕರೋನಾ ಟ್ರೀಟ್ಮೆಂಟ್, ಒಟ್ಟಿನಲ್ಲಿ ಸೇಮ್ ಹಾಸ್ಟೆಲ್ ಜೀವನ. ಹೆಚ್ಚಿನ ಸಮಸ್ಯೆ ಇದ್ದರೆ ಒಂದು ಎಷ್ಟ್ರಾ ಇಂಜೆಕ್ಷನ್ ಅಷ್ಟೇ, ಮನೆಯವರಿಗೆಲ್ಲಾ ನೆಗೆಟಿವ್ ಬಂತು ಎಂದು ತಿಳಿದಾ ಕ್ಷಣ ಮತ್ತಷ್ಟೂ ಚೇತರಿಕೆ ಹೀಗೆ ಒಂದು ವಾರ ಕಳೆದದ್ದೇ ಗೊತ್ತಾಗಲಿಲ್ಲ , ಮಾತ್ರೆಗಳ ಮುಕ್ತಾಯವಾಯಿತು, ಮತ್ತೇನೂ ಕೊಡಲಿಲ್ಲಾ ಬರೀ ಅಬ್ಸವ್ರೇಷನ್ ಅಷ್ಟೇ.

ಸರಿಯಾಗಿ ಎಂಟನೇ ದಿನಕ್ಕೆ ಮತ್ತೆ ಸ್ವಾಬ್ ಟೆಸ್ಟ್ ಮಾಡಿಸಿ ಎಂದಾಗ ಎಲ್ಲರಿಗೂ ಅರೇ ನಮಗೆ ಹುಷಾರಾಯಿತಾ? ಕರೋನಾ ಎಂಬ ಮಾಧ್ಯಮ ಸೃಷ್ಟಿ ಭಯಂಕರ ಕಾಯಿಲೆ ಕಡಿಮೆ ಆಯಿತ ಎಂದು ನಮಗೇ ನಂಬಲು ಆಗಲಿಲ್ಲ. ಕೇವಲ ಐದಾರು ನಿಮಿಷಗಳಲ್ಲಿ ಎಲ್ಲರ ಪರೀಕ್ಷೆಗಳು ಮುಗಿದವು ಆದರೇ ಮತ್ತೆ ಏನು ರಿಪೋರ್ಟ್ ಬರುತ್ತದೋ ಎನ್ನುವ ಆತಂಕ ಮತ್ತೊಮ್ಮೆ ಶುರುವಾಯಿತು ಮತ್ತೆ ಅಂದು ನಿದ್ರೆ ಬರಲಿಲ್ಲ. ಮಾರನೇ ದಿನ ಮತ್ತೆ ದೇವರ ಧ್ಯಾನ , ಹರಕೆ ಎಲ್ಲವನ್ನೂ ಮಾಡುತ್ತಾ ಮಲಗಿರುವಾಗಲೇ ಡಾಕ್ಟರ್ ಬಂದು ಒಬ್ಬೂಬ್ಬರ ಹೆಸರು ಕರೆದು ಡಿಸ್ಚಾರ್ಜ್ ಸಮ್ಮರಿ ಕೊಡುವಾಗ ನನ್ನ ಹೆಸರು ಹೇಳಿದ ತಕ್ಷಣ ಅವರೇ ದೇವರು ಎನ್ನುವ ಭಾವ , ಆನಂದ ಭಾಷ್ಪ. ಅಲ್ಲಿನ ಮಧ್ಯಾಹ್ನ ದ ಊಟಕ್ಕೂ ಕಾಯದೇ ಗೇಟ್ ತೆಗೆದ ಕೂಡಲೇ ಓಡಿ ಬಂದ ಅನುಭವ ಯಾವತ್ತಿಗೂ ಮರೆಯಲಾಗದ ಜೀವನದ ಕ್ಷಣ..

ಇನ್ನೂ ಕೊರೋನಾ ವಾರಿಯರ್ಸ್ ಬಗ್ಗೆ ಹೇಳದೇ ಇದ್ದರೆ ದೇವರು ಮೆಚ್ಚುವುದಿಲ್ಲ. ಡಾಕ್ಟರ್ಸ್, ನಸ್‌ಗಳು, ಊಟ ಬಡಿಸುವವರು, ಸ್ವಚ್ಛತಾ ಕೆಲಸ ದವರು, ಸಿಗ್ಬಂದಿಗಳು ಎಲ್ಲರೂ ತಮ್ಮ ಜೀವ ಭಯದಲ್ಲೇ ನಮ್ಮ ನ್ನೆಲ್ಲಾ ರೋಗ ಮುಕ್ತಗೊಳಿಸಿ ಮನೆಗೆ ಕಳುಹಿಸಬೇಕು ಎನ್ನುವ ಛಲಕ್ಕೆ , ಹಾಗೆಯೇ ಸರ್ಕಾರದ ಇಚ್ಛಾ ಶಕ್ತಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಮೊದಲ ದಿನ ಊಟ ಬಡಿಸಲು ಬಂದ ಒಬ್ಬ ಅಣ್ಣ ಹೇಳಿದ ಮಾತು ಕಿವಿಯಲ್ಲಿ ಗುಂಯ್ಗುಟ್ಟುತ್ತಲೇ ಇದೆ . “ಎಲ್ಲರೂ ಚೆನ್ನಾಗಿ ಹೊಟ್ಟೆ ತುಂಬಾ ಊಟ ಮಾಡಿ ಬೇಗ ಮನೆಗೆ ಹೋಗಿ” ಈ ಪುಟ್ಟ ಸಾಲು ಎಷ್ಟು ನಿಜ ಎಂದರೆ ಎಲ್ಲಾ ಕರೋನಾ ರೋಗಿಗಳ ಕಲಸ ಅದೋಂದೇ ಅಲ್ಲಿ. ಅಂತೂ ಒಂದು ದೊಡ್ಡ ಕಂಟಕದಿಂದ ಪಾರಾದ ತೃಪ್ತಿ ಕೊನೆಗೆ, ಆಸ್ಪತ್ರೆಯಿಂದ ಬಿಡುಗಡೆ ಗೊಂಡ ಲಿಸ್ಟ್ ನಲ್ಲಿ ನನ್ನ ನಂಬರ್ ಅಚ್ಚಾದಾಗಲೇ ಸಂಪೂರ್ಣ ನೆಮ್ಮದಿ.

ಇನ್ನೂ ಕೊರೋನಾ ಕಲಿಸಿದ ಪಾಠ ದೊಡ್ಡದು, “ಕೇವಲ ಹತ್ತು ದಿನದಲ್ಲಿ ಇಡೀ ಸಮಾಜವನ್ನು ಜರಡಿ ಹಿಡಿದು ತಕೋ ನಿನಗೆ ಉಳಿದ ಗಟ್ಟಿಯಾದ ಸಂಬಂಧಗಳು ಇಷ್ಟೇ” ಎಂದು ತಿಳಿಸಿದೆ.

ನನ್ನ ಸ್ವಂತ ಬೀದಿಯ ಜನ ಬಾಗಿಲು ಬಡಿದು ಕೊಂಡು ಕೂತರು, ದೂರದಿಂದಲಾದರೂ ಧೈರ್ಯದಿಂದ ಇರು ಎನ್ನುವ ಯಾವ ಶಬ್ದವೂ ಕೇಳಲಿಲ್ಲ. ಆಮೇಲಾದರೂ ಒಂದೇ ಒಂದು ದಿವಸವೂ ಕರೆ ಮಾಡಿ ಹೇಗಿದ್ದೀಯಾ ಎನ್ನುವ ಮನುಷ್ಯತ್ವ ಸತ್ತೋಗಿತ್ತು.

ಇನ್ನೂ ನಾನು ಕಳೆದ 14 ವರ್ಷದ ಸೇವೆ? ನನ್ನ ಯಾವ ವಿದ್ಯಾರ್ಥಿಗಳೇ ಆಗಲಿ, ಪೋಷಕರೇ ಆಗಲಿ ಊರಿನವರೇ ಆಗಲಿ, ಮರಿಯಪ್ಪನವರನ್ನು ಬಿಟ್ಟು ಯಾರು ಒಂದು ದಿನವೂ ಒಂದೇ ಒಂದು ಕರೆ ಮಾಡಬೇಕು ಅನಿಸದಷ್ಟೂ ಭಯ ಉಂಟು ಮಾಡಿಬಿಟ್ಟೆಯಲ್ಲಾ ಕೊರೋನಾ.

ದಿನ ಬಾಯಿ ತುಂಬಾ ಮಾತನಾಡಿಸುತ್ತಿದ್ದ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳು ಭಯದಿಂದ ನನ್ನ ಜೊತೆ ಮೊಬೈಲ್‌ನಲ್ಲಿ ಮಾತನಾಡಿದರೂ ಎಲ್ಲಿ ನಮ್ಮನ್ನೂ ಕ್ವಾರಂಟೈನ್ ಮಾಡುತ್ತಾರೋ ಎಂದು ನನ್ನ ನೆನಸಿಕೊಳ್ಳಲೂ ಇಲ್ಲ, ಆದರೂ ಪರವಾಗಿಲ್ಲ ನನಗೆ ಕಾಲ್ಗಳ ಸಂಖ್ಯೆಯಲ್ಲಿ ಇಳಿಮುಖ ವಾಗಲಿಲ್ಲ ಎಷ್ಟೋ ಸ್ನೇಹಿತರು, ಬಂದುಗಳು, ಹಿತೈಷಿಗಳು ಧೈರ್ಯ ತುಂಬಿದ ಧನ್ಯತಾ ಭಾವ ನನಗಿದೆ. ಎಲ್ಲರಿಗೂ ನನ್ನ ಅನಂತ ವಂಧನೆಗಳು.

ನಾನು ಆಂಬ್ಯುಲೆನ್ಸ್ ಹತ್ತುವಾಗ ವಿಕೃತ ಮನಸ್ಸಿನ ಯಾರೋ ಮಾಡಿದ ವೀಡಿಯೋ ಆನಂತರ ಅದನ್ನು ಬಿಸಿ ದೋಸೆಯ ಹಾಗೆ ಹಂಚಿದ ರೀತಿ , ನನ್ನ ಬಗ್ಗೆ ಇಲ್ಲಸಲ್ಲದ ವ್ಯಾಖ್ಯಾನಗಳು, ಗಾಸಿಪ್ಗಗಳು, ಅಲ್ಲಿ ಹೋಗಿ ಬಂದನಂತೆ, ಅವನಿಗೆ ಬುದ್ಧಿ ಇರಲಿಲ್ಲವ?, ಹೋಗಲಿ ನಮ್ಮ ಅಕ್ಕ ಪಕ್ಕದವರನ್ನೂ , ಸ್ನೇಹಿತರನ್ನೂ ಅನುಮಾನಿಸುವುದು, ಎಲ್ಲವೂ ಹತ್ತೇ ದಿನಗಳಲ್ಲಿ ಆಗಿ ಹೋಯಿತು, ಯಾರಿಗೂ ನಮ್ಮ ಪರಿಸ್ಥಿತಿಯ ಅರ್ಥ ಆಗಲೇ ಇಲ್ಲ, ಇಂತದ್ದನ್ನೆಲ್ಲಾ ತಡೆಯಲು ಯಾವ ಮುಖಂಡರು ಪ್ರಯತ್ನ ಸದ ರೀತಿ ನೋಡಿ ಸಮಾಜದಲ್ಲಿ ಇಷ್ಟೆಲ್ಲ ಕೊಳಕು ಮನಸ್ಥಿತಿ ಗಳ ಮದ್ಯ ನಾನು ಬದಕುತ್ತಿದ್ದೀನಾ ಎಂದು ಭಯವಾಗುತ್ತಿದೆ. ಇಲ್ಲಿ ಮನುಷ್ಯನಿಗೆ, ಅವನ ಯಾವ ಒಳ್ಳೆಯತನಕ್ಕೂ ಬೆಲೆಯಿಲ್ಲ ಎಂಬುದು ಖಾತ್ರಿಯಾಯಿತು. ನಮಗೆ ನಮ್ಮ ಜೀವನ ಅಷ್ಟೆ. ಒಂದಂತೂ ಸತ್ಯ ಕೊರೋನಾ ಇಂದು ನಿಮ್ಮಿಂದ ಬಂದಿಲ್ಲಾ ಈಗಲೇ ಹೊರಟು ಹೋಗೂ ಇಲ್ಲ ಮುಂದೆ ನಮಗೂ ಇಂತದೇ ಪರಿಸ್ಥಿತು ಬರಬಹುದು, ಕೇವಲ 4 ದಿನ ಲಾಕ್ಡಡೌನ್ ಮಾಡಿಬಿಟ್ಟರೆ ಕೊರೋನಾ ಹೋರಟೋಗುತ್ತದೆ ಎನ್ನುವ ಭ್ರಮೆಯಲ್ಲೇ ಬದುಕುತ್ತಿರುವ ಜನರಿಗೆ ಇದು ಈಗ ಹೇಗಾದರು, ಯಾರಿಗಾದರೂ ಬರಬಹುದು ಎನ್ನುವ ಸತ್ಯ ಮಾತ್ರ ಒಪ್ಪಿಕೊಳ್ಳಲು ಸಿದ್ಧರಿಲ್ಲ, ಬೇರೆಯವರಿಗೆ ಮಾತ್ರ ಬರಲಿ ಎನ್ನುವ ವಿಕೃತ ಸ್ಥಿತಿಗೆ ಸಮಾಜ ತಲುಪಿದೆ. ಕರೋನಾ ಬಂದರೂ ಜನ ತಮ್ಮ ಕೆಟ್ಟ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಒಪ್ಪುತ್ತಿಲ್ಲ ಎಂಬುದೇ ವಿಪರ್ಯಾಸ?

ಅಂತಿಮ ಸತ್ಯ

ಕೊರೋನಾ ಒಂದು ಸಾಮಾನ್ಯ ಅಂಟು ಕಾಯಿಲೆ ಅಷ್ಟೇ, ಧೈರ್ಯದಿಂದ ಎದುರಿಸಿದರೆ ಅದರಿಂದ ಏನೂ ತೊಂದರೆ ಇಲ್ಲ. ಸ್ವಲ್ಪ ಕೇರ್, ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ, ಏನಾದರೂ ಲಕ್ಷಣಗಳು ಇದ್ದರೆ ಮನೆಯವರಿಂದ, ಮಕ್ಕಳಿಂದ , ಸ್ನೇಹಿತರಿಂದ ಸ್ವಯಂ ಅಂತರ ಇದು ನ್ನಮ್ಮ ಕರ್ತವ್ಯವೂ ಹೌದು. ಬಿಸಿ ನೀರು ಉಪಯೋಗ ಹಾಗೂ ಎಚ್ಚರಿಕೆಯಿಂದ ಇದ್ದರೇ ಸಾಕು. ಒಂದು ವೇಳೆ ಬಂದೇ ಬಿಟ್ಟಿತು ಎಂದರೂ ಹೆದರಬೇಡಿ ಧೈರ್ಯದಿಂದ ಇರಿ, ಆಸ್ಪತ್ರೆಗೆ ಹೋಗಿ ಖಂಡಿತಾ ಕೆಲವೇ ದಿನಗಳಲ್ಲಿ ಗುಣಮುಖರಾಗಿ ಬರಬಹುದು ನೆಮ್ಮದಿಯಿಂದ ಒಂದಷ್ಟು ದಿನಗಳನ್ನು ಹಾಸ್ಟೆಲ್ ಲ್ಲಿ ಕಳೆದು ಬಂದ ಹಾಗೆ ಕಳೆಯಿರಿ, ಹೋಗಿ ಮಾತ್ರೆ ತಕೋಳಿ, ಊಟ ಮಾಡಿ, ರೆಸ್ಟ್ ಮಾಡಿ ಆರಾಮವಾಗಿ ಮನೆಗೆ ಬಂದು ಸೇರಿ. ಆದರೆ ಮೋದಲು ಈ ಸಮಾಜ ಬದಲಾಗಬೇಕು ಕೊರೋನಾಗಿಂತಲೂ ಈ ಸಮಾಜ ಅವರನ್ನು ಕೊಲ್ಲುವುದೇ ಜಾಸ್ತಿ. ಜನರೇ ಬದಲಾಗಿ ಕಷ್ಟದಲ್ಲಿ ಇರುವವರಿಗೆ ಮತ್ತಷ್ಟೂ ಕಷ್ಟ ಕೊಡಬೇಡಿ ಭಯವಿದ್ದರೆ ದೂರದಿಂದಲಾದರೂ ಆತ್ಮವಿಶ್ವಾಸ ತುಂಬಿ. ಅನಗತ್ಯವಾಗಿ ಮಾತನಾಡಿ ನೋಯಿಸಬೇಡಿ, ಆಸ್ಪತ್ರೆಯಿಂದ ಮರಳಿದ ಮೇಲಾದರೂ ಸಾಮಾನ್ಯರಂತೆ ಕಾಣಿರಿ. ಏಕೆಂದರೆ, ಕೊರೋನಾ ಎಲ್ಲರಿಗೂ ಬರುವ ರೋಗ ಎಂಬುದು ನೆನಪಿರಲಿ. ಕೇವಲ ಹತ್ತು ದಿನಗಳಲ್ಲಿ ನೀ ಕಲಿಸಿದ ಪಾಠ ತುಂಬಾ ದೊಡ್ಡದು ಒಬ್ಬ ಟೀಚರ್ ತರ ಸಾಮಾಜಿಕ ಪಾಠ ಕಲಿಸಲು ಪ್ರಯತ್ನ ಪಡುತ್ತಿರುವ ನೀನು ಖಂಡಿತಾ ಸೋಲಿನ ರುಚಿ ನೋಡುತ್ತೀಯ. ಏಕೆಂದರೆ ಇದು ಹಳ್ಳಿಗಳ ಭವ್ಯ ಭಾರತದ ಸಮಾಜ. ಬೇಗ ಹೊರಟು ಹೋಗು ಕೊರೋನಾ ನಿನ್ನಿಂದ ನೋವೇ ಜಾಸ್ತಿಯಾಗಿದೆ. ಮನಸ್ಸುಗಳು ದೂರವಾಗುತ್ತಿವೆ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತಿದೆ. ಆದಷ್ಟು ಬೇಗ ನಮ್ಮ ದೇಶದಿಂದ ಹೊರಡು ಕೊರೋನಾ….

ಇತಿ,
ಸೋಮಶೇಖರ್,ಕೊಪ್ಪ

LEAVE A REPLY

Please enter your comment!
Please enter your name here