ಸೋರುತಿಹುದು ಮನೆಯ ಮಾಳಿಗಿ…

0
1100

ಸಂಪಾದಕೀಯ

ಬಟಾಟೆ, ಬೆಂಡೆಕಾಯಿ, ಹಸಿ ಮೆಣಸು, ಟೊಮೆಟೊ, ನೀರುಳ್ಳಿ ಇತ್ಯಾದಿಗಳನ್ನು ದಾರದಿಂದ ಪರಸ್ಪರ ಪೋಣಿಸಿ, ಮಾಲೆಯಂತೆ ಕೊರಳಿಗೆ ಧರಿಸಿದ ಸುಶ್ಮಾ ಸ್ವರಾಜ್‍ರ ಫೋಟೋವನ್ನು 2009 ಆಗಸ್ಟ್ 3ರಂದು ಇಂಡಿಯಾ ಟುಡೇ ಪತ್ರಿಕೆಯು ಪ್ರಕಟಿಸಿತ್ತು. ಫೋಟೋ ಕ್ಲಿಕ್ಕಿಸಿದ್ದು ಸುಬೀರ್ ಹೈದರ್ ಎಂದೂ ಅದು ನಮೂದಿಸಿತ್ತು. ದೆಹಲಿಯ ಜಂತರ್ ಮಂತರ್ ನಲ್ಲಿ ಸುಶ್ಮಾ ಸ್ವರಾಜ್‍ರು ಈ ರೀತಿ ಕಾಣಿಸಿಕೊಂಡಿದ್ದರು. ‘ಮನ್‍ಮೋಹನ್ ಸಿಂಗ್ ಸರಕಾರವು ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ’ ಎಂದು ಆರೋಪಿಸಿ ಬಿಜೆಪಿಯು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಹೀಗೆ ಕಾಣಿಸಿಕೊಂಡಿದ್ದರು. ಇದೇ ಸುಶ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿಯವರೂ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಪರಸ್ಪರ ಕೈ ಪೋಣಿಸಿ ಎತ್ತಿ ಹಿಡಿದ ದೃಶ್ಯವನ್ನು 2010 ಫೆಬ್ರವರಿ 10ರಂದು ಓಆಖಿಗಿ ಪ್ರಸಾರ ಮಾಡಿತ್ತು. ಈ ಪ್ರತಿಭಟನೆ ನಡೆದದ್ದೂ ಪ್ರಧಾನಿ ಮನ್‍ಮೋಹನ್ ಸಿಂಗ್ ಸರಕಾರದ ವಿರುದ್ಧ. ಸ್ಥಳ: ಅದೇ ಜಂತರ್ ಮಂತರ್. ಆ ಪ್ರತಿಭಟನಾ ಸಭೆಯಲ್ಲಿ ಗಡ್ಕರಿಯವರು ಕ್ರಿಕೆಟ್ ಭಾಷೆಯಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದರು. ‘ಸಕ್ಕರೆಯ ಬೆಲೆಯು ಅರ್ಧಶತಕವನ್ನು ದಾಟಿದೆ ಮತ್ತು ಬೇಳೆಯು ಶತಕ ಸಿಡಿಸಿದೆ. ಈ ತಂಡದ ಕೋಚ್ ಆಗಿ ಶರದ್ ಪವಾರ್ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದರು. ಅಲ್ಲಿ ಸೇರಿದ್ದ ಪ್ರತಿಭಟನಾಕಾರರಂತೂ ವಿವಿಧ ಹಣ್ಣು-ಹಂಪಲು ಮತ್ತು ತರಕಾರಿಗಳನ್ನು ದಾರದಲ್ಲಿ ಪೋಣಿಸಿ ಕೊರಳಿಗೆ ಹಾಕಿಕೊಂಡಿದ್ದರು. ಬೆಲೆ ಏರಿಕೆಯನ್ನು ಖಂಡಿಸಿ ಮನ್‍ಮೋಹನ್ ಸಿಂಗ್ ಸರಕಾರದ ವಿರುದ್ಧ 2010 ಡಿಸೆಂಬರ್ 15ರಂದು ಜಂತರ್ ಮಂತರ್‍ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿರುವ ಚಿತ್ರ ಮತ್ತು ಸುದ್ದಿಯು ಬಿಜೆಪಿ ವೆಬ್‍ಸೈಟ್‍ನಲ್ಲಿ ಈಗಲೂ ಇದೆ. ಇದೇ ಬೆಲೆ ಏರಿಕೆಯ ಕಾರಣವನ್ನು ಮುಂದಿಟ್ಟು 2011, ಸೆಪ್ಟೆಂಬರ್ 17 ಮತ್ತು 2012 ಅಕ್ಟೋಬರ್ 12ರಂದು ಬಿಜೆಪಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿರುವುದನ್ನು ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳು ಪ್ರಕಟಿಸಿವೆ. ಇದರ ಜೊತೆಗೇ, ಪ್ರಧಾನಿಯಾಗುವುದಕ್ಕಿಂತ ಮೊದಲು ನರೇಂದ್ರ ಮೋದಿಯವರು ಮಾಡಿರುವ ಭಾಷಣಗಳನ್ನೂ ಇಟ್ಟು ನೋಡಬೇಕು.

2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರ ಭಾಷಣವು ಪೆಟ್ರೋಲ್ ಮತ್ತು ಡೀಸೆಲ್‍ಗಳಿಲ್ಲದೇ ಕೊನೆಗೊಳ್ಳುತ್ತಲೇ ಇರಲಿಲ್ಲ. ತೈಲ ಬೆಲೆ ಏರಿಕೆಯನ್ನು ಅವರು ಮನ್‍ಮೋಹನ್ ಆಡಳಿತದ ವೈಫಲ್ಯಕ್ಕೆ ಸಾಕ್ಷ್ಯವಾಗಿ ದೇಶದ ಮುಂದಿಟ್ಟಿದ್ದರು. 2012 ಆಗಸ್ಟ್ 10ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಕಾಣಿಸಿಕೊಂಡ ಬಾಬಾ ರಾಮ್‍ದೇವ್‍ರಂತೂ ಲೋಕಪಾಲ ಕಾಯ್ದೆಯನ್ನು ಜಾರಿ ಮಾಡಿ ಕಪ್ಪು ಹಣವನ್ನು ಮರಳಿ ತಂದರೆ 35 ರೂಪಾಯಿಗೆ ಪೆಟ್ರೋಲ್ ಸಿಗಲಿದೆ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ರಾಮ್‍ದೇವ್‍ರ ಜೊತೆಗಿದ್ದುದು ಇದೇ ಬಿಜೆಪಿ. ಅವರ ಮಾತನ್ನು ತನ್ನದೇ ಮಾತು ಎಂಬಂತೆ ಅದು ಆಡಿಕೊಂಡಿತ್ತು. ಇದೀಗ ಮನ್‍ಮೋಹನ್ ಸಿಂಗ್ ಹೊರಟು ಹೋಗಿದ್ದಾರೆ. ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸುತ್ತೇನೆಂದು ಹೇಳಿದ, 100 ದಿನದೊಳಗೆ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತಂದು ಪ್ರತಿಯೋರ್ವ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವೆನೆಂದು ಭರವಸೆ ಕೊಟ್ಟ ಮತ್ತು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಇಳಿಸಿ, ಬೆಲೆ ಏರಿಕೆಯನ್ನು ತಡೆದು,  ಡಾಲರ್ ನ ಎದುರು ರೂಪಾಯಿ ಮೌಲ್ಯವನ್ನು ಏರಿಸುವೆನೆಂದು ಮಾತು ಕೊಟ್ಟ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. 2014ರ ಲೋಕಸಭಾ ಚುನಾವಣೆಗಿಂತ ಮೊದಲು ನರೇಂದ್ರ ಮೋದಿಯವರು ಮಾಡಿದ ಭಾಷಣಗಳನ್ನು ಗಣನೆಗೆ ತೆಗೆದುಕೊಂಡರೆ ಈ ಭರವಸೆಯ ಪಟ್ಟಿ ಇನ್ನಷ್ಟು ಬದ್ಧವಾಗಬಹುದು.

ಕಾಶ್ಮೀರದ 371ನೇ ವಿಧಿಯ ಬಗ್ಗೆ, ಸಮಾನ ನಾಗರಿಕ ಸಂಹಿತೆಯ ಬಗ್ಗೆ, ಪಾಕಿಸ್ತಾನಕ್ಕೆ ಪಾಠ ಕಲಿಸುವ ಬಗ್ಗೆ, ಕಾಶ್ಮೀರದ ಪ್ರತ್ಯೇಕತಾವಾದವನ್ನು ಹುಟ್ಟಡಗಿಸುವ ಬಗ್ಗೆ ಅವರು ಪುಂಖಾನುಪುಂಖ ಮಾತುಗಳನ್ನು ಆಡಿದ್ದರು. ಈಗ ಅವೇ ಪ್ರಶ್ನೆಗಳು ಬಿಜೆಪಿಯ ಎದುರು ನಿಂತಿವೆ. ಪ್ರತಿದಿನ ಡಾಲರ್ ನ ಎದುರು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ರೂಪಾಯಿಯನ್ನು ಮೇಲೆತ್ತಲು ಬಿಜೆಪಿ ಸರಕಾರ ಯಾಕೆ ವಿಫಲವಾಗುತ್ತಿದೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸತತ ಇಳಿಕೆಯಾಗುತ್ತಿರುವುದರ ಹೊರತಾಗಿಯೂ ಭಾರತದಲ್ಲೇಕೆ ತೈಲ ಬೆಲೆಯಲ್ಲಿ ಪ್ರತಿದಿನ ಏರಿಕೆಯಾಗುತ್ತಲೇ ಇದೆ? 100 ದಿನಗಳೊಳಗೆ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆಂದು ಭರವಸೆ ನೀಡಿದ ನರೇಂದ್ರ ಮೋದಿಯವರು ಯಾಕೆ ಆ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಮನ್‍ಮೋಹನ್ ಸಿಂಗ್ ಸರಕಾರಕ್ಕೆ ಹೋಲಿಸಿದರೆ, ಇವತ್ತು ಗ್ಯಾಸ್‍ನ ಬೆಲೆ ದುಪ್ಪಟ್ಟಾಗಿದೆ. ದಿನಬಳಕೆಯ ವಸ್ತುಗಳ ಬೆಲೆಯಲ್ಲಂತೂ ತೀವ್ರ ಏರಿಕೆಯಾಗಿದೆ. ಸಮಾನ ನಾಗರಿಕ ಸಂಹಿತೆಯ ಪ್ರಸ್ತಾಪವನ್ನಂತೂ ಕೇಂದ್ರದ ಕಾನೂನು ಆಯೋಗವೇ ಅಪ್ರಾಯೋಗಿಕ ಎಂದು ತಿರಸ್ಕರಿಸಿದೆ. ಕಾಶ್ಮೀರದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಾಗಲಿ, 371ನೇ ವಿಧಿಯನ್ನು ರದ್ದುಪಡಿಸುವ ವಿಷಯದಲ್ಲಾಗಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ.

NEW DELHI, INDIA – OCTOBER 12: Leader of Opposition in Lok Sabha Sushma Swaraj and Leader of Opposition in Rajya Sabha Arun Jaitley during BJP Mahila Morcha protest against the recent hike in prices of cooking gas, electricity and diesel at Jantar Mantar in New Delhi on Friday. (Photo by Ramesh Sharma/India Today Group/Getty Images)

ಮನ್‍ಮೋಹನ್ ಸಿಂಗ್ ಸರಕಾರವನ್ನು ಖಂಡಿಸುವುದಕ್ಕೆ ಹಣ್ಣು-ಹಂಪಲು ಮತ್ತು ತರಕಾರಿಗಳ ಮಾಲೆಯನ್ನು ಕೊರಳಿಗೆ ಹಾಕಿ ಪ್ರತಿಭಟಿಸಿದ ಸುಶ್ಮಾ, ಗಡ್ಕರಿ ಸಹಿತ ಬಿಜೆಪಿಯ ಯಾವ ನಾಯಕರೂ ಈಗ ಮಾತಾಡುತ್ತಿಲ್ಲ? ಐದಾರು ವರ್ಷಗಳ ಹಿಂದೆ ಅವರು ಕೊರಳಿಗೆ ಹಾಕಿಕೊಂಡಿದ್ದ ಮಾಲೆಗಳ ಉದ್ದೇಶ ಪ್ರಾಮಾಣಿಕವೇ ಆಗಿದ್ದಿದ್ದರೆ, ಈಗಲೂ ಅವೇ ಜನರಿದ್ದಾರಲ್ಲ ಮತ್ತು ಅಂದಿಗಿಂತಲೂ ದುರ್ದಿನಗಳಿವೆಯಲ್ಲ, ಯಾಕೆ ಅವರು ಬೀದಿಗಿಳಿಯುತ್ತಿಲ್ಲ? ಶತಕ ದಾಖಲಿಸುವ ಹಂತದಲ್ಲಿ ತೈಲಬೆಲೆ ಇದ್ದಾಗ್ಯೂ ನರೇಂದ್ರ ಮೋದಿಯವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದನ್ನೇ ಆದ್ಯತೆಯಾಗಿಟ್ಟುಕೊಂಡಿದ್ದಾರೆ. 2+2 ಮಾತುಕತೆಗಿಂತ 100 ಕೋಟಿ ಭಾರತೀಯರ ಬವಣೆಗಳು ಸುಶ್ಮಾರಿಗೆ ಮುಖ್ಯವಾಗಲಿಲ್ಲವೆಂದರೆ ಏನರ್ಥ?

2014ರ ಲೋಕಸಭಾ ಚುನಾವಣೆಗಿಂತ ಮೊದಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಯಾವ ಭರವಸೆಯನ್ನು ಹುಟ್ಟು ಹಾಕಿತ್ತೋ ಆ ಭರವಸೆಗಳೆಲ್ಲ ಇವತ್ತು ಹತಾಶೆಯಾಗಿ ಮಾರ್ಪಟ್ಟು ಬಿಟ್ಟಿದೆ. ವಿಶೇಷವಾಗಿ, ನರೇಂದ್ರ ಮೋದಿಯವರನ್ನು ಪರಿವರ್ತನೆಯ ಹರಿಕಾರ ಎಂದೇ ಮಾಧ್ಯಮಗಳು ಬಿಂಬಿಸಿದ್ದುವು. ಅಳೆದೂ ತೂಗಿ ಮಾತಾಡುವ ಮನ್‍ಮೋಹನ್ ಸಿಂಗ್‍ರಿಗಿಂತ ವಾಚಾಳಿ ನರೇಂದ್ರ ಮೋದಿಯವರಲ್ಲಿ ಈ ದೇಶದ ಜನರು ಏನೋ ಹೊಸತನ್ನು ನಿರೀಕ್ಷಿಸಿದರು. ಮಾತುಗಳಲ್ಲಿ ಅವರು ಕಟ್ಟಿಕೊಟ್ಟ ಅರಮನೆಯನ್ನು ನಿಜವೆಂದೇ ನಂಬಿದ್ದರು. ಆದರೆ ಆ ಮಾತುಗಳ ಆಚೆಗೆ ನರೇಂದ್ರ ಮೋದಿಯವರು ಅತ್ಯಂತ ದುರ್ಬಲ ಮತ್ತು ವಿಫಲ ನಾಯಕ ಎಂಬುದನ್ನು ಕಳೆದ ನಾಲ್ಕು ವರ್ಷಗಳು ಸ್ಪಷ್ಟಪಡಿಸಿದೆ. ಈಗಲೂ ಮೋದಿಯವರು ಬರೇ ಮಾತುಗಳನ್ನಷ್ಟೇ ಆಡುತ್ತಿದ್ದಾರೆ. ಆಡಿದ ಮಾತಿನ ಮೇಲೆ ಯಾವ ಹೊಣೆಗಾರಿಕೆಯನ್ನೂ ಹೊರದೇ ಅಡಗಿಕೊಳ್ಳುತ್ತಾರೆ. ಈಗ ಹಿಂತಿರುಗಿ ನೋಡಿದರೆ ಮನ್‍ಮೋಹನ್ ಸಿಂಗ್ ಎಷ್ಟೋ ಮಿಗಿಲು ಅನ್ನಿಸುತ್ತದೆ. ಅವರು ಆಡುವ ಮಾತುಗಳಲ್ಲಿ ತೂಕವಿತ್ತು. ಕೊಡುವ ಭರವಸೆಗಳಿಗೆ ಬದ್ಧತೆಯೂ ಇತ್ತು.

ಮಾತುಗಾರಿಕೆ ಮತ್ತು ಹೊಣೆಗಾರಿಕೆ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಮಾತು ಹೊಣೆಗಾರಿಕೆಯನ್ನು ಬಯಸುತ್ತದೆ. ಹೊಣೆ ಹೊರದ ಮಾತು ಹೊಣೆಗೇಡಿಯಾದುದು, ನಿಷ್ಫಲವಾದುದು. ಈ ದೇಶದ ಮಂದಿ ಪ್ರಧಾನಿಯನ್ನು ಹೊಣೆಗಾರನ ಸ್ಥಾನದಲ್ಲಿರಿಸಿ ನೋಡುತ್ತಾರೆ. ಮಾತು ತಪ್ಪುವುದು ಮತ್ತು ವಚನಭಂಗ ಮಾಡುವುದನ್ನು ಈ ದೇಶದ ಸಂಸ್ಕೃತಿಯು ಗಂಭೀರ ಅಪರಾಧವಾಗಿ ಪರಿಗಣಿಸುತ್ತದೆ. ಪ್ರಧಾನಿ ಮೋದಿಯವರು ಸದ್ಯ ಅಂಥದ್ದೊಂದು ಸ್ಥಿತಿಯಲ್ಲಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ನಾಲ್ಕು ವರ್ಷಗಳ ಹಿಂದೆ ಅವರು ಕಟ್ಟಿಕೊಟ್ಟ ಕನಸಿನ ಮನೆ ಇಷ್ಟು ಬೇಗ ಸೋರಬಹುದೆಂದು ಯಾರೂ ನಿರೀಕ್ಷಿಸಿರಲಾರರು.