ಈ ಸಲದ ಉಪವಾಸ, ಉಪವಾಸದಂತಿಲ್ಲ ಎಂದು ವಾದಿಸುವ ಮಗು ಮತ್ತು…..

0
1041

ಲೇಖಕಿ:ಸಿಹಾನ ಬಿ.ಎಂ.

“ಅಬ್ಬೂ… ಶಾಝ್ಮಾ ಕಿ ಅಬ್ಬೂ ಬಾಹರ್ ಜಾಕೆ ಆತೆ ವಕ್ತ್ ಖಾನೆ ಕ ಚೀಝ್ ಲೇಕೆ ಆತಿ…. ಆಪ್ ಕಭಿ ಬಾಹರ್ ಜಾತಿ, ಔರ್ ಖಾನೆ ಕಿ ಚೀಝ್ ಲೇಕೆ ಆತಿಂ…..?”ಸಂಜೆ ಮಗಳು ಕೇಳಿದ ಅದೇ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗಿತು.

ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ಚಾಪೆಯಲ್ಲಿ ಹೊರಳಾಡಿದ. ಇಂದು ಹೇಗೋ ಮಗಳ ಪ್ರಶ್ನೆಗೆ ಆಶ್ವಾಸನೆಯ ಉತ್ತರ ನೀಡಿದ. ನಾಳೆ ಪುನಃ ಏನೆಂದು ಉತ್ತರ ನೀಡಲಿ…? ಮಗಳ ಮುಂದೆ ಕುಬ್ಜನಾಗಿ ನಿಲ್ಲುವಂತಹ ಪರಿಸ್ಥಿತಿ. ಜೊತೆಗೆ ಸುಳ್ಳುಗಾರ ಅಪ್ಪನೆಂಬ ಅಪರಾಧಿ ಸ್ಥಾನ ಅಣಕಿಸುವಂತಿತ್ತು. ಪ್ರತಿದಿನ ಮಗಳು ಮತ್ತು ಆಕೆಯ ಗೆಳತಿ ಶಾಝ್ಮಾಳ ಆಟ, ವಿನೋದಗಳನ್ನು ನೋಡಿ ಸಂತೋಷಪಡುತ್ತಿದ್ದ ಆತ ನಾಳೆ ಶಾಝ್ಮ ಬಾರದಿರಲೆಂದು ಪ್ರಾರ್ಥಿಸಿದ.

ಕೊರೋನ, ಲಾಕ್ ಡೌನ್ ಪದ ಜಪ ಮಾಡತೊಡಗಿದ ಕಾಲದಿಂದ ಆಕೆಯದು ಮುಗಿಯದ ಪ್ರಶ್ನೆಗಳ ಸುರಿಮಳೆ. ವಿವರಿಸಿದರೂ ಅರ್ಥವಾಗದ ಮೆದುಳು ಆಕೆಯದು. ಅದರ ನಡುವೆ ಉಪವಾಸದ ದಿನಗಳು ಹಾದು ಬಂದಾಗ ಆಕೆಯ ಪ್ರಶ್ನೆಗಳ ಹಾವಳಿ ಕೇಳುವುದಂತೂ ಬೇಡ. ಉಪವಾಸ ಎಂದರೆ ಕಸ್ಟರ್ಡ್, ಸಮೂಸ ಎಂದು ಕಲ್ಪಿಸಿಕೊಂಡಿದ್ದ ಮಗು ಈ ಸಲದ ಉಪವಾಸವನ್ನು ಉಪವಾಸವಲ್ಲವೆಂದು ವಾದಿಸತೊಡಗಿತು. ಮಗಳ ಇಷ್ಟದ ತಿನಿಸುಗಳ ಪಟ್ಟಿ ಮತ್ತು ಪತ್ನಿಯ ದಿನನಿತ್ಯದ ಕಣ್ಣೀರಿಗೆ ಆತನದು ಅಸಹಾಯಕತೆಯ ನಿಟ್ಟುಸಿರೇ ಉತ್ತರವಾಗಿತ್ತು.

ಸಣ್ಣಮಟ್ಟಿನ ಬಟ್ಟೆ ವ್ಯಾಪಾರ ನಡೆಸುತ್ತಿದ್ದ ಆತ ತನ್ನ ಬಣ್ಣದ ಕನಸಿಗೆ ಈದ್ ದಿನಗಳ ವ್ಯಾಪಾರವನ್ನು ಪ್ರತಿವರ್ಷ ಎದುರು ನೋಡುತ್ತಿದ್ದ. ಒಂದು ವರ್ಷದ ಸಂಸಾರದ ಲೆಕ್ಕಾಚಾರವನ್ನು ಈದ್ ವ್ಯಾಪಾರದಲ್ಲಿ ಸರಿದೂಗಿಸಲು ಪ್ರಯತ್ನಿಸುತ್ತಿದ್ದ. ಆದರೆ ಈ ವರ್ಷ ಬಟ್ಟೆ ವ್ಯಾಪಾರಿಗಳು ಅಂಗಡಿಯನ್ನು ತೆರೆಯಬಾರದೆಂಬ ಸಮುದಾಯದ ಕಟ್ಟುನಿಟ್ಟಿನ ಕ್ರಮಕ್ಕೆ ಬದ್ಧನಾಗಬೇಕಾದ ಅನಿವಾರ್ಯತೆ ಒಂದೆಡೆಯಾದರೆ ಕೊರೋನ ಜಿಹಾದಿಗಳು ಎಂಬ ಹಣೆಪಟ್ಟಿ ಕಟ್ಟುವರೇನೋ ಎಂಬ ಆತಂಕ ಮತ್ತೊಂದೆಡೆ. ಲಾಕ್ ಡೌನ್ ಸಡಿಲಿಕೆಯಿಂದ ಇತರ ವ್ಯಾಪಾರಿಗಳು ವ್ಯಾಪಾರ ಕುದುರಿಸುತ್ತಿರುವಾಗ ಈತ ಒಳಗೊಳಗೇ ಚಡಪಡಿಸುತ್ತಿದ್ದ.

ದೊಡ್ಡ ವ್ಯಾಪಾರಿಗಳು ಹೇಗೂ ಕೂಡಿಟ್ಟ ಹಣದಲ್ಲಿ ಆರಾಮದಲ್ಲಿ ಜೀವನ ಸಾಗಿಸಿದರೂ ಬೀದಿಪಾಲಾಗುತ್ತಿರುವುದು ನನ್ನಂತಹ ಸಣ್ಣ ವ್ಯಾಪಾರಿಗಳೆಂದು ಮನಸ್ಸಿನಲ್ಲೇ ಕೊರಗುತ್ತಿದ್ದ. ಇಷ್ಟರವರೆಗೆ ಅವರಿವರು ಕೊಟ್ಟ ಆಹಾರದ ಕಿಟ್ ನಲ್ಲಿ‌ ಅರ್ಧ ಹೊಟ್ಟೆ ತುಂಬಿಸಿದರೂ ನಂತರದ ದಿನಗಳನ್ನು ಹೇಗೆ ಕಳೆಯುವುದೆಂದು ಚಿಂತಿಸತೊಡಗಿದ.

ತನ್ನ ಶುಗರ್ ಟ್ಯಾಬ್ಲೆಟ್, ಪತ್ನಿಯ ಪ್ರೆಶರ್ ಟ್ಯಾಬ್ಲೆಟ್ ಮುಗಿದಿದೆ. ಮಾಡಿದ ಸಾಲವನ್ನು ಆದಷ್ಟು ಬೇಗ ತೀರಿಸಬೇಕಾಗಿದೆ. ಪರಿಚಯಸ್ಥರಲ್ಲಿ ಬಾಯಿ ಬಿಟ್ಟು ಕೇಳಲು ಸ್ವಾಭಿಮಾನ ಒಪ್ಪುತ್ತಿಲ್ಲ. ಚಿಂತೆಯಲ್ಲಿ ಮುಳುಗಿದ ಆತ ಹಾಗೆಯೇ ನಿದ್ದೆಗೆ ಜಾರಿದ.

ಮರುದಿನ ಬೆಳಿಗ್ಗೆ ಮಗಳು ಏಳುವ ಮೊದಲೇ ಜಾಗ ಖಾಲಿ ಮಾಡಬೇಕೆಂದು ತೀರ್ಮಾನಿಸಿ ಬೇಗನೇ ಎದ್ದು ಹೊರಟು ನಿಂತವನಿಗೆ ಮನೆಯ ಮುಂದೆ ಕೆಂಪು ಬಣ್ಣದ ಕಾರು ಬಂದು ನಿಂತಾಗ ಯಾರಾಗಿರಬಹುದೆಂದು ಇಣುಕಿ ನೋಡಿದ. ಆತ್ಮೀಯ ಗೆಳೆಯ ಪ್ರದೀಪನ ಆಗಮನ. ಯಾವಾಗಲೋ ಆತನಿಗೆ ಮಾಡಿದ ಸಹಾಯದ ಋಣ ತೀರಿಸುವ ಸಲುವಾಗಿ ಹಣದ ಕಟ್ಟನ್ನು ಕೈಗಿಟ್ಟದ್ದು ಎಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಇದು ಕನಸೋ ನನಸೋ ಎಂದು ತಿಳಿಯದೆ ಮಾತು ಗಂಟಲಲ್ಲೇ ಉಳಿದು ಗೆಳೆಯನನ್ನು ಬಿಗಿದಪ್ಪಿ ಬಿಕ್ಕಳಿಸತೊಡಗಿದ.