ಸದೃಢವಾದ ಕುಟುಂಬ-ಸದೃಢವಾದ ಸಮಾಜವನ್ನು ನಿರ್ಮಿಸುವುದು ಕಾಲದ ಬೇಡಿಕೆ: ಸಾದತುಲ್ಲಾಹ್ ಹುಸೈನಿ

0
191

ಫೆ.19ರಿಂದ ದೇಶಾದ್ಯಂತ’ಸದೃಢ ಕುಟುಂಬ-ಸದೃಢ ಸಮಾಜ’ಅಭಿಯಾನ

ಸನ್ಮಾರ್ಗ ವಾರ್ತೆ

ನವದೆಹಲಿ: ಸದೃಢವಾದ ಕುಟುಂಬ ಹಾಗೂ ಸದೃಢವಾದ ಸಮಾಜವನ್ನು ನಿರ್ಮಿಸುವುದು ಕಾಲದ ಬೇಡಿಕೆಯಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್(ಜೆಐಹೆಚ್) ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಾದತುಲ್ಲಾಹ್ ಹುಸೇನಿಯವರು ಹೇಳಿದರು‌.

ಫೆಬ್ರವರಿ 19 ರಿಂದ 10 ದಿನಗಳ ಕಾಲಾವಧಿಗೆ ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸದೃಢ ಕುಟುಂಬ, ಸದೃಢ ಸಮಾಜ’ (ಸ್ಟ್ರಾಂಗ್ ಫ್ಯಾಮಿಲಿ ಸ್ಟ್ರಾಂಗ್ ಸೊಸೈಟಿ) ಎಂಬ ಅಭಿಯಾನವನ್ನು ಜೆಐಹೆಚ್, ಎಸ್‌ಐಓ ಮತ್ತು ಜಿಐಓ ಹೊಣೆಗಾರರನ್ನೊಳಗೊಂಡ ವೆಬಿನಾರ್‌ನಲ್ಲಿ ಪರಿಚಯಿಸಿದರು. ಮತ್ತು ಜೆಐಹೆಚ್ ಮಹಿಳಾ ವಿಭಾಗವು ಈ ಅಭಿಯಾನವನ್ನು ಆಯೋಜಿಸುತ್ತಿರುವ ಕುರಿತು ಮಾಹಿತಿ ನೀಡಿದರು.

ವೆಬಿನಾರ್ ನಲ್ಲಿ ಮಾತನಾಡಿದ ಜೆಐಎಚ್ ಅಧ್ಯಕ್ಷರು, ಸಮಾಜದಲ್ಲಿನ ದುಷ್ಟತೆಗಳನ್ನು ಮಟ್ಟಹಾಕಲು ಜಮಾಅತ್ ವಿವಿಧ ಧರ್ಮಗಳ ಮುಖಂಡರೊಂದಿಗೆ ಕೆಲಸ ಮಾಡುತ್ತಿದೆ. “ಪಾಶ್ಚಿಮಾತ್ಯ ಜಗತ್ತು ಮೊದಲು ಉದಾರವಾದಿ ಕಲ್ಪನೆಯನ್ನು ಸ್ವೀಕರಿಸಿತು. ಆದಾಗ್ಯೂ, ಪ್ರಸ್ತುತ ಪಾಶ್ಚಿಮಾತ್ಯ ಮತ್ತು ಅಭಿವೃದ್ಧಿ ಹೊಂದಿದ ಸಮಾಜಗಳು ಸಹ ಕುಟುಂಬದ ರಕ್ಷಣೆಯ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳಲು ಪ್ರಾರಂಭಿಸಿವೆ ಮತ್ತು ಈಗ ಅವರು ಬಲವಾದ ಕುಟುಂಬ ಸಂಸ್ಥೆಯನ್ನು ಪುನಃಸ್ಥಾಪಿಸಲು ಬಯಸುತ್ತಿದ್ದಾರೆ. ಆದಾಗ್ಯೂ, ಕಳೆದ ಶತಮಾನಗಳಲ್ಲಿ ಜನಪ್ರಿಯವಾಗಿರುವ ಜೀವನಶೈಲಿ ಮತ್ತು ನೈತಿಕ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಪುನಃ ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ, ಕುಟುಂಬ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವ ಕೊನೆಯ ಗುರಾಣಿಯು ಇಸ್ಲಾಮ್ ಧರ್ಮದಲ್ಲಿದೆ. ಏಕೆಂದರೆ, ಇಸ್ಲಾಂ ಧರ್ಮದಲ್ಲಿ ಕುಟುಂಬ ಜೀವನದ ಪರಿಕಲ್ಪನೆಯು ದೇವನ ಆಜ್ಞೆಗಳಿಗೆ ಅನುಗುಣವಾಗಿರುತ್ತದೆ” ಎಂದರು.

ಮುಸ್ಲಿಂ ಸಮಾಜವನ್ನು ಆದರ್ಶ ಕುಟುಂಬವನ್ನಾಗಿ ಮಾಡುವುದು ಈ ಅಭಿಯಾನದ ಗುರಿಯಾಗಿದೆ. ಮುಸ್ಲಿಮೇತರ ಸಮಾಜಗಳಲ್ಲಿಯೂ ಸಾರ್ವತ್ರಿಕ ತತ್ವಗಳ ಆಧಾರದಲ್ಲಿ ಸಮಾಜವನ್ನು ನಿರ್ಮಿಸಲು ಕೌಟುಂಬಿಕ ಸ್ಥಿತಿಗತಿಗಳಿಗೆ ಸಂಬಂಧಿತ ವಿಷಯಗಳ ಬಗ್ಗೆ ಗಮನ ನೀಡಲಾಗುವುದು ಎಂಬುದಾಗಿ ಅಭಿಯಾನದ ಉದ್ದೇಶ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಜೆಐಹೆಚ್ ಪ್ರಧಾನ ಕಾರ್ಯದರ್ಶಿ ಟಿ. ಆರಿಫ್ ಅಲಿ ಅವರು ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಿದರು. ಈ ಲೋಗೋ ನವನ್ನು ಛತ್ತೀಸ್‌ಗಢದ ಶ್ರೀಮತಿ ಇರಾಮ್ ರೆಹಮಾನ್ ವಿನ್ಯಾಸಗೊಳಿಸಿದ್ದಾರೆ.

ಕುಟುಂಬವು ಸಮಾಜದ ಮೂಲ ಘಟಕವಾಗಿದೆ ಎಂದು ಜೆಐಹೆಚ್ ಪ್ರಧಾನ ಕಾರ್ಯದರ್ಶಿ ಹೇಳಿದರು. “ಕುಟುಂಬ ಸಮೃದ್ಧವಾಗಿದ್ದರೆ ಸಮಾಜ ಮತ್ತು ದೇಶ ಕೂಡ ಸಮೃದ್ಧವಾಗುತ್ತದೆ. ಆದ್ದರಿಂದ, ಈ ಅಭಿಯಾನದ ಸಮಯದಲ್ಲಿ ನಮ್ಮ ಸಮಾಜದ ಪ್ರತಿಯೊಂದು ಕುಟುಂಬವನ್ನು ಸಮೃದ್ಧವಾಗಿಸಲು ಪ್ರಯತ್ನಿಸಬೇಕಾಗಿದೆ” ಎಂದು ಅವರು ಹೇಳಿದರು.

ಜೆಐಹೆಚ್ ಮಹಿಳಾ ವಿಭಾಗದ ರಾಷ್ಟ್ರೀಯ ಸಹ-ಕಾರ್ಯದರ್ಶಿ ರಹಮತುನ್ನಿಸಾ ರವರು ಅಭಿಯಾನದ ಉದ್ದೇಶಗಳನ್ನು ವಿವರಿಸುತ್ತಾ, ಲಾಕ್ ಡೌನ್ ಸಮಯದಲ್ಲಿ ಕುಟುಂಬ ಮತ್ತು ಕುಟುಂಬ ಸಂಬಂಧಿತ ವಿಷಯಗಳ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನು ಜನರು ತೀವ್ರವಾಗಿ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ, ಈ ಅಭಿಯಾನವನ್ನು ನಡೆಸಲು ನಿರ್ಧರಿಸಲಾಯಿತು. ಇಸ್ಲಾಂ ಧರ್ಮದ ಸಮತೋಲಿತ ಮತ್ತು ಪ್ರಾಯೋಗಿಕ ಕುಟುಂಬ ವ್ಯವಸ್ಥೆಯು ಜನರಲ್ಲಿ ಸಕಾರಾತ್ಮಕ ರೀತಿಯಲ್ಲಿ ಎದ್ದು ಕಾಣುತ್ತಿದೆ. ಸಮಾನ ಮನಸ್ಕ ಜನರೊಂದಿಗೆ ಒಟ್ಟಿಗೆ ಚರ್ಚೆ ನಡೆಸಲಾಗುವುದು” ಎಂದು ಅವರು ಹೇಳಿದರು.

ಸದಸ್ಯರು ಇತರರಿಗೆ ಆದರ್ಶಪ್ರಾಯರಾಗಲು ಸೂಚನೆ ನೀಡಿದ ಅವರು, ಈ ವಿಷಯದಲ್ಲಿ ಅವರ ಕುಟುಂಬವು ಸಮಾಜದಲ್ಲಿ ಒಂದು ಮಾದರಿಯಾಗಿಸಲು ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.