ನಮ್ಮ ಸಹೋದರ ಸಂಬಂಧಗಳು ಹೇಗಿರಬೇಕು?

0
916

ಸನ್ಮಾರ್ಗ ವಾರ್ತೆ

ಲೇಖಕಿ: ಖದೀಜ ನುಸ್ರತ್

ಅಲ್ಲಾಹನು ನಮಗೆ ನೀಡಿದ ಅನುಗ್ರಹಗಳು ಅಪಾರವಾದುದು. ಅವುಗಳನ್ನು ನಮಗೆ ಎಣಿಸಲು ಅಸಾಧ್ಯ. ಅದರಲ್ಲಿ ವಿವಾಹವು ಒಂದು ಅತಿ ದೊಡ್ಡಅನುಗ್ರಹವಾಗಿದೆ. ಅದು ಮಾನವನ ಹಲವಾರು ಕನಸು ಹಾಗು ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ವಿವಾಹದ ನಂತರ ದಾಂಪತ್ಯ ಜೀವನದಲ್ಲಿ ಮಕ್ಕಳನ್ನು ಬಯಸುವುದು ಪ್ರಕೃತಿ ನಿಯಮವಾಗಿರುತ್ತದೆ. ಒಂದು ಮಗುವಾದ ನಂತರ ಇನ್ನೊಂದು ಮಗುವನ್ನು ಬಯಸುವುದು ಕೂಡಾ ಸಹಜವಾಗಿರುತ್ತದೆ. ಅಲ್ಲಾಹನು ಕೆಲವರಿಗೆ ಹೆಣ್ಣು, ಕೆಲವರಿಗೆ ಗಂಡು ಮತ್ತು ಇನ್ನು ಕೆಲವರಿಗೆ ಗಂಡು ಹೆಣ್ಣು ಎರಡನ್ನೂ ನೀಡುತ್ತಾನೆ. ಸಹೋರರ ಸಹೋದರಿಯರು ಅಲ್ಲಾಹನು ನೀಡಿದ ಅನುಗ್ರಹಗಳಲ್ಲಿ ಮಹತ್ವವಾದುದು. ಅದರ ಮೌಲ್ಯ ಅದು ಇಲ್ಲದವರಿಗೆ ಮಾತ್ರ ತಿಳಿಯುತ್ತದೆ. ಸಣ್ಣ ಮಕ್ಕಳು ಕೂಡಾ ಸಹೋದರ ಸಹೋದರಿಯರೊಂದಿಗೆ ಪ್ರೀತಿಯಿಂದ ಆಟವಾಡಲು ಬಯಸುತ್ತಾರೆ. ಆದರೆ ದೊಡ್ಡವರಾದಂತೆ ದೂರವಾಗುತ್ತಾ ಅವರ ಮಹತ್ವವನ್ನು ಕಳೆದುಕೊಳ್ಳುವುದನ್ನು ಕಾಣುತ್ತೇವೆ.

ಸಹೋದರ ಸಹೋದರಿಯರೊಂದಿಗೆ ಕಳೆದ ಬಾಲ್ಯ ಕಾಲವು ಜೀವನದ ಅತ್ಯುತ್ತಮ ಸಮಯವಾಗಿರುತ್ತದೆ. ಹಗಲು ರಾತ್ರಿಯೆನ್ನದೆ ಆಡಿದ ಆಟ, ಜೊತೆಗೆ ಶಾಲೆಗೆ ಹೋಗುತ್ತಿದ್ದ, ಪರಸ್ಪರ ಜಗಳ ಮಾಡುತ್ತಿದ್ದ, ಅವರೊಂದಿಗೆ ಸುಖ ಮತ್ತು ದುಃಖಗಳನ್ನು ಹಂಚಲು ಕಲಿತಂತಹ ಪಾಠವು ನಮ್ಮ ಜೀವನದಲ್ಲಿ ಮರೆಯಲಾಸಾಧ್ಯ. ಸಮಾಜದಲ್ಲಿ ಹಲವು ರೀತಿಯ ಜನರೊಂದಿಗೆ ವಿವಿಧ ಪರಿಸ್ಥಿತಿಗಳಲ್ಲಿ ಹೇಗೆ ಹೊಂದಿಕೊಳ್ಳಬೇಕೆಂಬ ಬಾಲಪಾಠವನ್ನು ಸಹೋದರರಿಂದಲೇ ಕಲಿತುಕೊಂಡೆವು.

ಕಾಲಕಳೆದಂತೆ ಒಂದೇ ಶಾಲೆಗೆ ಹೋಗುತ್ತಿದ್ದವರು ತಮ್ಮ ಅಭಿರುಚಿಗನುಗುಣವಾಗಿ ಬೇರೆ ಬೇರೆ ಕಾಲೇಜನ್ನು ಆರಿಸಿಕೊಳ್ಳುತ್ತಾರೆ. ವಿದ್ಯಾಭ್ಯಾಸ, ಉದ್ಯೋಗ ಅಥವಾ ವಿವಾಹವಾಗಿ ಬೇರೆ ಬೆರೆ ನಗರಗಳಿಗೆ ಹೋಗುವ ಮೂಲಕ ದೂರವಾಗುತ್ತಾರೆ. ಇನ್ನುಕೆಲವರು ಜೀವನೋಪಾಯಕ್ಕಾಗಿ ವಿದೇಶಕ್ಕೆಹೋಗುತ್ತಾರೆ. ಕೆಲವು ವರ್ಷಗಳ ಹಿಂದೆ ಪತ್ರದ ಮೂಲಕ ಸಂಪರ್ಕ ನಡೆಸುತ್ತಿದ್ದ ಸಮಯದಲ್ಲಿ ಎಷ್ಟೋ ದಿನಗಳ ನಂತರ ಅದು ಕೈಗೆ ತಲುಪುತ್ತಿತ್ತು. ಅದರಲ್ಲಿ ತಮ್ಮ ಬರಹಗಳ ಮೂಲಕ ತಮ್ಮ ಜೀವನದ ಸುಖ ದುಖಗಳನ್ನು ಹಂಚಿಕೊಳ್ಳುತ್ತಿದ್ದರು.

ಆದರೆ, ಆಧುನಿಕ ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂದು ನಮ್ಮಲ್ಲಿರುವ ಮೊಬೈಲ್ ಹಾಗು ಇಂಟರ್ನೆಟ್ ಮೂಲಕ ನೋಡಲು, ಮಾತನಾಡಲು ಮತ್ತು ಸಂದೇಶಗಳನ್ನು ಕಳುಹಿಸುವುದು ಸುಲಭವಾಗಿದೆ.

ಒಂದು ತಾಯಿಯ ಮಕ್ಕಳು ಬೇರೆ ಬೇರೆ ರೀತಿಯ ಗುಣ, ಸ್ವಭಾವ, ಅಭಿರುಚಿ, ಧಾರ್ಮಿಕ ಅಭಿಪ್ರಾಯ, ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಎಲ್ಲವನ್ನೂ ಗೌರವಿಸುತ್ತಾ ಅವರನ್ನು ಪ್ರೀತಿಸಿರಿ. ಅಲ್ಲಾಹನು ನೀಡಿದ ಸಹೋದರ ಸಹೋದರಿಯರು ಕೂಡ ಪರೀಕ್ಷೆಯಾಗಿತ್ತದೆ. ಯಾವಾಗಲು ನಗುಮುಖದೊಂದಿಗೆ ಭೇಟಿಯಾಗಿರಿ. ಕರುಣೆಯಿಂದ ವರ್ತಿಸಿರಿ. ಪರಸ್ಪರರನ್ನು ಅರ್ಥಮಾಡಿಕೊಳ್ಳಿರಿ.ಅವರ ಬಗ್ಗೆ ಕಾಳಜಿ ವಹಿಸಿರಿ. ಮನನೋಯುವ ಮಾತನ್ನಾಡಬೇಡಿರಿ. ಅಗತ್ಯವಿರುವಾಗ ಅವರಿಗೆ ಸಹಾಯ ಮಾಡಿರಿ. ನಿಮ್ಮ ಜೀವನದ ಪ್ರಮುಖ ವಿಷಯಗಳ ತೀರ್ಮಾನ ಕೈಗೊಳ್ಳುವಾಗ ಇನ್ನೊಬ್ಬರ ಸಲಹೆ ಪಡೆಯಿರಿ. ತಪ್ಪಿದಾಗ ದಾರಿ ತೋರಿಸಿರಿ, ದುಖದಲ್ಲಿರುವಾಗ ಸಮಾಧಾನಪಡಿಸಿರಿ. ಅವರು ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಕಡೆಗಣಿಸಿರಿ, ಅವರನ್ನು ಕ್ಷಮಿಸಿರಿ. ಮಾತ್ರವಲ್ಲಅವರೊಂದಿಗೆ ಅತ್ಯುತ್ತಮವಾಗಿ ವರ್ತಿಸಿರಿ. ಅವರು ಮಾಡಿದ ನಷ್ಟಗಳನ್ನು ಮರೆತುಬಿಡಿರಿ. ಅವರ ವಿಷಯದಲ್ಲಿ ಮನಸ್ಸಿನಲ್ಲಿ ಹಗೆ, ದ್ವೇಷ, ಕೋಪವನ್ನಿರಿಸಬೇಡಿರಿ.

ನಿಮ್ಮ ಸಂತೋಷ ಮತ್ತು ದುಃಖದ ಸಂಗತಿಗಳನ್ನು ಅವರೊಂದಿಗೆ ಹಂಚಿಕೊಳ್ಳಿರಿ. ನಿಮ್ಮ ಸಮಸ್ಯೆಗಳನ್ನು ಅವರಿಗೆ ತಿಳಿಸಿರಿ. ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸಲು ಅಸಾಧ್ಯವಾದರೂ ಮನಸ್ಸಿನ ಭಾರವು ಕಡಿಮೆಯಾಗುವುದು. ಸಂತಸದಲ್ಲಿರುವಾಗ ಅವರ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಿರಿ. ರಜಾ ದಿನಗಳನ್ನು ಅವರೊಂದಿಗೆ ಕಳೆಯಿರಿ, ತಮ್ಮತಮ್ಮಲ್ಲಿ ಸಿಹಿತಿಂಡಿಗಳನ್ನು ಮತ್ತು ಚಿಕ್ಕದಾದ ಉಡುಗೊರೆಗಳನ್ನು ಹಂಚಿರಿ. ಅವರ ಮಕ್ಕಳು ನಮ್ಮ ಮಕ್ಕಳಿಗೆ ಉತ್ತಮ ಸ್ನೇಹಿತರಾಗಿರುತ್ತಾರೆ. ಹೆಚ್ಚಿನ ಮಕ್ಕಳು ಕೂಡ ಕಝಿನ್ ಗಳೊಂದಿಗೆ ಆಟವಾಡಲು ಮತ್ತು ಸಮಯ ಕಳೆಯುವುದನ್ನು ಇಷ್ಟಪಡುತ್ತಾರೆ. ನಿಮ್ಮ ಸಹೋದರ ಸಹೋದರಿಯರ ಮಕ್ಕಳ ಸಾಮರ್ಥ್ಯ, ಕಲೆ, ಪ್ರತಿಭೆಗಳನ್ನು ಪ್ರೋತ್ಸಾಹಿಸಿರಿ.

ನಿಮ್ಮ ಮಾತಾಪಿತರಿಗೆ ಯಾರಾದರೊಬ್ಬರ ಬಳಿ ಅತಿ ಹೆಚ್ಚು ಒಲವು, ಪ್ರೇಮವಿರುವುದು ಪ್ರಕೃತಿಯ ನಿಯಮವಾಗಿರುತ್ತದೆ. ಮಾತಾಪಿತರು ನಿಮಗೆ ಏನಾದರೂ ಕೊಡುವುದರಲ್ಲಿ ಹೆಚ್ಚು ಕಡಿಮೆಯಾಗಿದ್ದರೆ ಕಡೆಗಣಿಸಿರಿ. ಅಲ್ಲಾಹನು ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯ ಅನುಗ್ರಹಗಳನ್ನು ನೀಡಿರುವನು. ಇನ್ನೊಬ್ಬರಲ್ಲಿರುವುದನ್ನು ನೋಡಿ ಅಸೂಯೆ ಪಡಬೇಡಿರಿ. ಇನ್ನೊಬ್ಬರಲ್ಲಿರುವ ಅನುಗ್ರಹವು ನಮ್ಮಲ್ಲಿರಬೇಕೆಂದಿಲ್ಲ. ಎಲ್ಲವನ್ನೂ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಕೆಂದಿಲ್ಲ.

ನಿಮ್ಮ ಸಹೋದರ ಸಹೋದರಿಯರು ನಿಮ್ಮ ಪ್ರತಿಸ್ಪರ್ಧಿ ಅಲ್ಲ, ವೈರಿ ಅಲ್ಲ, ಎದುರಾಳಿಯೂ ಅಲ್ಲ, ಶತ್ರು ಅಲ್ಲ, ಅವರು ನಮ್ಮ ಒಡ ಹುಟ್ಟಿದವರು, ನಮ್ಮೊಂದಿಗೆ ರಕ್ತ ಸಂಬಂಧ ಇರುವವರು. ಮನೆ ನಿರ್ಮಾಣ, ವಸ್ತ್ರಾಭರಣ, ಔತಣ ಕೂಟ ಇತ್ಯಾದಿಗಳಿಗೆ ಖರ್ಚು ಮಾಡುವಾಗ ಸಹೋದರ ಸಹೋದರಿಯರ ಮಧ್ಯೆ ಸ್ಪರ್ಧೆ ನಡೆಯುತ್ತಿರುವುದು ವಿಷಾದದ ಸಂಗತಿಯಾಗಿರುತ್ತದೆ. ನಾವು ನಮ್ಮ ಆರ್ಥಿಕ ಸ್ಥಿತಿಗೆ ಅನುಸಾರವಾಗಿ ಜೀವಿಸಬೇಕೇ ಹೊರತು ಜನರಿಗೆ ತೋರಿಕೆಗಾಗಿಯಾಗಬಾರದು. ಇದು ನಮ್ಮ ಅವನತಿಗೆ ಕಾರಣವಾಗಬಹುದು. ಸಣ್ಣ ಸಣ್ಣ ಮಾತು ಅಥವಾ ಅಹಿತ ಘಟನೆಯಿಂದ ಸಹೋದರ ಸಹೋದರಿಯ ಸಂಬಂಧ ಕೊನೆಗೊಳ್ಳುವಂತಹದಲ್ಲ. ಸಹೋದರ ಸಹೋದರಿಯರಿಗಾಗಿ ಸಂಬಂಧವನ್ನು ಬಲಪಡಿಸಲು ಕೆಲವೊಮ್ಮೆ ದೊಡ್ಡದೊಡ್ಡ ತ್ಯಾಗ ಮಾಡಬೇಕಾಗಬಹುದು.

ವಾರೀಸು ಸೊತ್ತು ವಿತರಣೆಯು ನಮ್ಮ ಸಮುದಾಯದಲ್ಲಿ ಸಹೊದರರ ಮಧ್ಯೆ ಸಂಬಂಧದಲ್ಲಿ ಬಿರುಕನ್ನುಂಟುಮಾಡುವ ವಿಷಯವಾಗಿದೆ. ತಮ್ಮ ಸಹೋದರಿಯರ ಹಕ್ಕುಗಳನ್ನು ಅಕ್ರಮವಾಗಿ ಯಾರದರು ಪಡೆಯಲು ಪ್ರಯತ್ನಿಸಿದರೆ ತಮ್ಮ ತಮ್ಮಲ್ಲಿ ಜಗಳವುಂಟಾಗುತ್ತದೆ. ವಾರೀಸು ಸೊತ್ತುಗಳನ್ನು ಸರಿಯಾಗಿ ಪಾಲು ಮಾಡಲು ಸರಿಯಾದ ಧಾರ್ಮಿಕ ವಿಧಿಗಳ ಬಗ್ಗೆ ಗಮನ ಹರಿಸಬೇಕು.

ಪತಿ-ಪತ್ನಿಯ ಸಹೋದರ ಸಹೋದರಿಯರು, ಮಾತಾಪಿತರ ಸಹೋದರ ಸಹೋದರಿಯರ ಮಕ್ಕಳು, ಮಲ ಸಹೋದರ ಸಹೋದರಿಯರು ಕೂಡಾ ನಮ್ಮ ಸದ್ವರ್ತನೆಗೆ ಹಕ್ಕುದಾರರಾಗಿರುತ್ತಾರೆ. ಸಹೋದರರರು ಸಂತಸದಲ್ಲಿರುವ ಮನೆಯು ಶಾಂತಿ ಸಮಾಧಾನದ ಮಾದರಿ ಕೇಂದ್ರವಾಗಿರುತ್ತದೆ. ಹಾಗಿದ್ದರೆ ಮಾತ್ರ ನಮ್ಮ ಇಹಲೋಕ ಜೀವನವನ್ನು ಸ್ವರ್ಗೀಯ ಜೀವನವನ್ನಾಗಿ ಮಾಡಬಹುದಾಗಿದೆ. ವಿವಾಹದ ನಂತರ ಸ್ತ್ರೀಯರು ತಮ್ಮ ಪತಿಯ ಸಹೋದರ ಸಹೋದರಿಯರೊಂದಿಗಿನ ಹಾಗೂ ತಮ್ಮ ಸಹೋದರನ ಪತ್ನಿಯೊಂದಿಗಿನ ಒಳಿತಿನ ವರ್ತನೆಯು ಕೌಟುಂಬಿಕ ಜೀವನದಲ್ಲಿ ಭಾರಿ ಬದಲಾವಣೆಯನ್ನುಂಟುಮಾಡುತ್ತದೆ.

ಏಕೆಂದರೆ ಇಲ್ಲಿ ಮನನೋಯುವ ಮಾತನ್ನು ಕೇಳಬೇಕಾಗಬಹುದು. ತಮ್ಮ ಸ್ವಂತ ಸಹೋದರಿಯರ ಮಾತು ವರ್ತನೆಯನ್ನು ನಿರ್ಲಕ್ಷಿಸಿದಂತೆ ಇಲ್ಲಿಯು ಕೂಡಾ ನಿರ್ಲಕ್ಷಿಸುವುದು ಉತ್ತಮವಾಗಿದೆ. ತಮ್ಮ ಸಹೋದರ ಸಹೋದರಿಯರಿಗೆ ಒಳಿತನ್ನು ಬಯಸಿದಂತೆ ತಮ್ಮ ಪತಿ ಹಾಗೂ ಪತ್ನಿಯ ಸಹೋದರ ಸಹೋದರಿಯರಿಗೆ ಮತ್ತು ಸಹೋದರರ ಪತ್ನಿಯರಿಗೂ ಒಳಿತನ್ನು ಬಯಸಬೇಕು. ಇಸ್ಲಾಮ್ ಧರ್ಮವು ಪ್ರತಿಯೊಬ್ಬರನ್ನು ಸಹೋದರರಾಗಿ ಪರಿಗಣಿಸುತ್ತದೆ.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು: “ನನ್ನ ಆತ್ಮವು ಯಾರ ಹಸ್ತದಲ್ಲಿದೆಯೋ ಆತನಾಣೆ! ಓರ್ವನು ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ಸತ್ಯವಿಶ್ವಾಸಿಯಾಗುವುದಿಲ್ಲ.”

ವಿವಾಹ ಹಾಗೂ ಇನ್ನಿತರ ಸಂತೋಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಂತೆ ಮರಣ, ರೋಗ ಅಥವಾ ಇನ್ನಾವುದೇ ದುಃಖದಲ್ಲಿ ಅವರೊಂದಿಗೆ ಭಾಗಿಯಾಗಿರಿ. ಒಳಿತನ್ನು ನೆನಪಿಸಿಕೊಡಿರಿ. ವಿಶಾಲ ಮನೋಭಾವ ಹೊಂದಿರಿ. ಪರಸ್ಪರರಿಗೆ ಒಳಿತನ್ನು ಆಜ್ಞಾಪಿಸಿರಿ ಮತ್ತು ಕೆಡುಕಿನಿಂದ ದೂರವಿರಿ.

ಸಹೋದರ ಸಹೋದರಿಯರ ಇಹಪರ ಒಳಿತಿಗಾಗಿ ಪ್ರಾರ್ಥನೆ ಮಾಡಿರಿ. ಮೂಸಾ(ಅ) ರ ಪ್ರಾರ್ಥನೆಯು ಅತ್ಯುತ್ತಮ ಮಾದರಿಯಾಗಿರುತ್ತದೆ. “ಓ ನನ್ನ ಪ್ರಭೂ ನನ್ನನ್ನು ನನ್ನ ಸಹೋದರನನ್ನು ಕ್ಷಮಿಸು ಮತ್ತು ನಮ್ಮನ್ನು ನಿನ್ನ ಕರುಣೆಯಲ್ಲಿ ಸೇರಿಸಿಕೋ, ನೀನು ಅತ್ಯಂತ ಕೃಪಾಳುವಾಗಿರುವೆ.”