ಸುಳ್ಯದ ರೋಹಿತಾಶ್ವ ಹೇಳುವ ವೃದ್ಧಾಪ್ಯದ ಕತೆ

0
1057

ಸನ್ಮಾರ್ಗ ಸಂಪಾದಕೀಯ

ಮನುಷ್ಯರೊಳಗಿರುವ ಕೌಟುಂಬಿಕ ಮತ್ತು ಮಾನವೀಯ ಸಂಬಂಧಗಳು ಬಿರುಕು ಬಿಡುತ್ತಿರುವುದಕ್ಕೆ ಏನು ಕಾರಣ, ಯಾರು ಕಾರಣ? ಅಪ್ಪ-ಅಮ್ಮ, ಮಕ್ಕಳು, ಮೊಮ್ಮಕ್ಕಳು, ಸಹೋದರ-ಸಹೋದರಿಯರು ಮುಂತಾದವರ ಮಧ್ಯೆ ಕರುಳಬಳ್ಳಿ ಸಂಬಂಧ ಇದೆ. ಈ ಸಂಬಂಧಗಳು ನೆಲೆಗೊಳ್ಳುವುದಕ್ಕೆ ಹಣ ಕಾರಣವಲ್ಲ. ಪತಿಯನ್ನು ಪತ್ನಿ ಮತ್ತು ಪತ್ನಿಯನ್ನು ಪತಿ ಪ್ರೀತಿಸುವುದು, ಆದರಿಸುವುದು ಮತ್ತು ಕಾಳಜಿ ತೋರುವುದೆಲ್ಲ ಹಣಯೇತರ ಕಾರಣಕ್ಕಾಗಿ. ಸಹೋದರ-ಸಹೋದರಿಯರ ನಡುವಿನ ಸಂಬಂಧಗಳೂ ಹಾಗೆಯೇ. ಅದರ ಹಿಂದೆ ಭಾವನಾತ್ಮಕತೆಯಿದೆ. ರಕ್ತ ಸಂಬಂಧದ ಕತೆಯಿದೆ. ಒಬ್ಬರಿಗೊಬ್ಬರು ಆದರಿಸಿಕೊಂಡು ಮತ್ತು ಅವಲಂಬಿಸಿಕೊಂಡು ಬದುಕುವ ಸಹಜತೆಯಿದೆ. ಆದರೆ, ಇವತ್ತಿನ ದಿನಗಳಲ್ಲಿ ಈ ಸಂಬಂಧಗಳಿಗೂ ಸಂಚಕಾರ ಬಂದಿರುವುದಕ್ಕೆ ಏನೆನ್ನಬೇಕು?

ಕಳೆದವಾರ ಹೃದಯ ವಿದ್ರಾವಕ ವರದಿಯೊಂದು ಪ್ರಕಟವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದಲ್ಲಿರುವ ಶಾಂತಿನಗರದ ರೋಹಿತಾಶ್ವ ಎಂಬ 70 ವರ್ಷದ ವೃದ್ಧರು ಒಂಟಿಯಾಗಿದ್ದಾರೆ. ಹಾಗಂತ, ಪತ್ನಿ, ಮಕ್ಕಳು, ಸಹೋದರರು ಇಲ್ಲದ ಕೌಟುಂಬಿಕ ಹಿನ್ನೆಲೆ ಅವರದಲ್ಲ. ಅವರು ಕ್ಯಾಂಪ್ಕೊ ಸಂಸ್ಥೆಯಲ್ಲಿ ಅಧಿಕಾರಿಯಾಗಿ ದುಡಿದು ನಿವೃತ್ತರಾದವರು. ಪತ್ನಿ ನಿವೃತ್ತ ಶಿಕ್ಷಕಿ. ಮಗಳು ಆಯುರ್ವೇದ ವೈದ್ಯೆಯಾಗಿದ್ದಾರೆ. ಮಗನೂ ಇದ್ದಾನೆ. ಒಂದು ರೀತಿಯಲ್ಲಿ, ಅತ್ಯಂತ ಸಂತೋಷದಿಂದ ನಿವೃತ್ತ ಜೀವನ ಕಳೆಯಬೇಕಾದ ಇವರು ಇವತ್ತು ಮೃತ್ಯುವನ್ನು ಕಾಯುತ್ತಾ ಬದುಕುತ್ತಿದ್ದಾರೆ. ಪಾಳುಬಿದ್ದ ಒಂಟಿ ಮನೆಯಲ್ಲಿ ಇವರ ವಾಸ. ಕೆಲವು ಸಮಯದ ಹಿಂದೆ ಪತ್ನಿಯೂ ಇವರನ್ನು ತ್ಯಜಿಸಿ ಹೋಗಿದ್ದಾರೆ. ಮಕ್ಕಳೂ ಹತ್ತಿರ ಸೇರಿಸುತ್ತಿಲ್ಲ. ಅವರನ್ನು ಮನೆಯಿಂದ ಹೊರ ಹೋಗಲು ಅನಾರೋಗ್ಯ ಬಿಡುತ್ತಲೂ ಇಲ್ಲ. ಸ್ಥಳೀಯರು ಮೂರು ಹೊತ್ತು ಊಟ ಕೊಡುವ ಮೂಲಕ ಅವರನ್ನು ಬದುಕಿಸುತ್ತಿದ್ದಾರೆ. ಅಂದಹಾಗೆ,

ಆರೋಗ್ಯ ಮತ್ತು ಉದ್ಯೋಗ ಇದ್ದ ಕಾಲದಲ್ಲಿ ಒಂಟಿಯಾಗದಿದ್ದ ರೋಹಿತಾಶ್ವರು ಅವೆಲ್ಲವನ್ನೂ ಕಳಕೊಂಡಾಗ ಒಂಟಿಯಾಗಲು ಕಾರಣವೇನು? ಆಯುಸ್ಸು ಮತ್ತು ಆರೋಗ್ಯ ಮನುಷ್ಯರ ಕೈಯಲ್ಲಿಲ್ಲ. ಬೇಡಬೇಡವೆಂದರೂ ಆಯುಸ್ಸು ಹೆಚ್ಚುತ್ತಲೇ ಇರುತ್ತದೆ. ಮಗುವೊಂದು ತಾನು ಸದಾ ಕಾಲ ಮಗುವಾಗಿಯೇ ಇರಬೇಕೆಂದು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಯೌವನ ಎಲ್ಲರ ಕನಸು. ಯೌವನವನ್ನು ದಾಟಿ ವೃದ್ಧಾಪ್ಯಕ್ಕೆ ತಲುಪುವುದನ್ನು ಇಷ್ಟಪಡುವವರು ಕಡಿಮೆ. ಸಂಪತ್ತು ಕೂಡಿಡುವುದಕ್ಕೂ ಅವಕಾಶ ಇರುವ ಪ್ರಾಯ ಅದು. ವೃದ್ಧಾಪ್ಯ ಹಾಗಲ್ಲ. ಅದು ಕೂಡಿಟ್ಟ ಸಂಪತ್ತನ್ನು ಅನೇಕ ಬಾರಿ ಖರ್ಚು ಮಾಡಬೇಕಾದ ಪ್ರಾಯವೂ ಹೌದು. ಯೌವನದಲ್ಲಿ ಹತ್ತಿರ ಬರದ ರೋಗಗಳು ವೃದ್ಧಾಪ್ಯದಲ್ಲಿ ಮುತ್ತಿಕೊಳ್ಳುತ್ತವೆ. ದೈಹಿಕ ಅಸಾಮರ್ಥ್ಯಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನ ಸಮಸ್ಯೆ, ನಾಲಗೆಯ ಸಮಸ್ಯೆ, ಚಲನೆಯ ಸಮಸ್ಯೆ ಇತ್ಯಾದಿಗಳೆಲ್ಲ ಎದುರಾಗುವುದು ವೃದ್ಧಾಪ್ಯದಲ್ಲೇ. ಅನೇಕ ಬಾರಿ ವೃದ್ಧಾಪ್ಯವು ವ್ಯಕ್ತಿಯನ್ನು ಮಗುತನಕ್ಕೆ ಒಯ್ಯುತ್ತದೆ. ವೃದ್ಧರು ಮಗುವಿನಂತೆ ಆಡುತ್ತಾರೆ. ಮಲ-ಮೂತ್ರಗಳ ಮೇಲೆಯೂ ನಿಯಂತ್ರಣವಿಲ್ಲದ ಸ್ಥಿತಿಗೆ ತಲುಪುತ್ತಾರೆ. ನಿಜವಾಗಿ, ಇದೊಂದು ಚಕ್ರ. ಮಗುತನದಿಂದ ಯೌವನಕ್ಕೆ, ಬಳಿಕ ನಡು ವಯಸ್ಸಿಗೆ ಮತ್ತು ಅಲ್ಲಿಂದ ವೃದ್ಧಾಪ್ಯಕ್ಕೆ.. ಹೀಗೆ ಜೀವನ ಚಕ್ರ ತಿರುಗುತ್ತಲೇ ಇರುತ್ತದೆ. ಈ ಚಕ್ರದಲ್ಲಿ ಅವಜ್ಞೆಗೆ ಮತ್ತು ತಿರಸ್ಕಾರಕ್ಕೆ ಒಳಗಾಗುವುದು ವೃದ್ಧಾಪ್ಯ ಮಾತ್ರ. ಮಗುವನ್ನು ಎಲ್ಲರೂ ಪ್ರೀತಿಸುತ್ತಾರೆ. ಮಲ-ಮೂತ್ರ ಇತ್ಯಾದಿಯಾಗಿ ಅದರ ಸಕಲ ಶೌಚಕ್ರಿಯೆಗಳನ್ನೂ ಯಾವ ಗೊಣಗಾಟವೂ ಇಲ್ಲದೇ ನಗುನಗುತ್ತಲೇ ನಿರ್ವಹಿಸುತ್ತಾರೆ. ಆದರೆ, ಅದೇ ಮಗು ಬೆಳೆದು ಯೌವನವನ್ನು ದಾಟಿ ವೃದ್ಧಾಪ್ಯಕ್ಕೆ ತಲುಪಿದಾಗ ಅದನ್ನು ಅಷ್ಟೇ ಸ್ಫೂರ್ತಿಯಿಂದ ಸ್ವೀಕರಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗುವುದಿಲ್ಲ. ಪತ್ನಿ-ಮಕ್ಕಳೂ ಅನೇಕ ಬಾರಿ ಈ ವಿಷಯದಲ್ಲಿ ಅನುತ್ತೀರ್ಣರಾಗುತ್ತಾರೆ. ರೋಹಿತಾಶ್ವರ ವಿಷಯದಲ್ಲಿ ಆಗಿರುವುದೂ ಇದುವೇ. ಆದ್ದರಿಂದ ಈ ಬಗ್ಗೆ ನಮ್ಮಲ್ಲಿ ಒಂದು ಅವಲೋಕನ ನಡೆಯಬೇಕು. ವೃದ್ಧರ ಆರೈಕೆಗೆ ಒತ್ತು ಕೊಡುವ ಮತ್ತು ಧರ್ಮಗಳು ವೃದ್ಧರಿಗೆ ಕೊಟ್ಟಿರುವ ಮಹತ್ವವನ್ನು ವಿವರಿಸುವ ಜಾಗೃತಿ ಅಭಿಯಾನಗಳು ನಡೆಯಬೇಕು. ಎರಡ್ಮೂರು ವರ್ಷಗಳ ಹಿಂದೆ ಪ್ರಕಟವಾದ ವರದಿಯಂತೆ, ಭಾರತದಲ್ಲಿ ಶೇ. 70ರಷ್ಟು ವೃದ್ಧರು ಮನೆಯಲ್ಲಿ ಕಿರುಕುಳ, ಹಿಂಸೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ವೃದ್ಧರಾಗಿರುವುದೇ ಇದಕ್ಕೆ ಕಾರಣ ಎಂಬುದೂ ಬಹಿರಂಗವಾಗಿತ್ತು.

ವೃದ್ಧ ಹೆತ್ತವರ ಆರೈಕೆಯ ಬಗ್ಗೆ ಧರ್ಮಗ್ರಂಥಗಳು ಪುಟಗಟ್ಟಲೆ ಹೇಳಿವೆ. ಶ್ರವಣ ಕುಮಾರನ ಕತೆಯನ್ನು ಈ ದೇಶದಲ್ಲಿ ಬಹಳ ಗೌರವದಿಂದ ಸ್ಮರಿಸಲಾಗುತ್ತದೆ. ಪವಿತ್ರ ಕುರ್‍ಆನ್ ಅಂತೂ ‘ದೇವನನ್ನು ಆರಾಧಿಸಿರಿ’ ಎಂದು ಹೇಳಿದ ಮರುಕ್ಷಣದಲ್ಲೇ, `ಹೆತ್ತವರನ್ನು ಗೌರವಿಸಿರಿ’ ಎಂದೂ ಹೇಳುವ ಮೂಲಕ ದೇವನ ಮೇಲಿನ ಆರಾಧನೆಯನ್ನು ಹೆತ್ತವರ ಜೊತೆಗಿಟ್ಟು ತೂಗಿದೆ. ವೃದ್ಧಾಪ್ಯಕ್ಕೆ ತಲುಪಿದ ಹೆತ್ತವರಿಗೆ ‘ಛೆ’ ಎಂಬ ಪದವನ್ನೂ ಬಳಸಬಾರದು ಎಂದು ಅದು ತಾಕೀತು ಮಾಡಿದೆ. ವೃದ್ಧ ಹೆತ್ತವರು ನಿಮ್ಮ ಪಾಲಿನ ಸ್ವರ್ಗ ಮತ್ತು ನರಕ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ವೃದ್ಧ ಹೆತ್ತವರನ್ನು ಸಂತೃಪ್ತಿಪಡಿಸಿದ ಮಕ್ಕಳಿಗೆ ಸ್ವರ್ಗ ಇದೆ ಅನ್ನುವುದು ಇದರ ತಾತ್ಪರ್ಯ. ಯಾರು ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೋ ಅವರು ದೇವನಿಗೆ ಎಷ್ಟೇ ನಮಾಝï, ಉಪವಾಸ ಆಚರಿಸಿದರೂ ನರಕಕ್ಕಷ್ಟೇ ಯೋಗ್ಯರಾಗಿರುತ್ತಾರೆ ಎಂಬುದು ಪ್ರವಾದಿಯವರ(ಸ) ಮಾತಿನ ಅರ್ಥ. ಹೆತ್ತವರಿಗಾಗಿ ಮಕ್ಕಳು ಸದಾ ಪ್ರಾರ್ಥಿಸುತ್ತಿರಬೇಕೆಂದು ಪವಿತ್ರ ಕುರ್‍ಆನ್ ಕಲಿಸುತ್ತದೆ. ‘ಎಳವೆಯಲ್ಲಿ ಹೆತ್ತವರು ನಮ್ಮ ಮೇಲೆ ಕರುಣೆ ತೋರಿದಂತೆಯೇ ಈ ವೃದ್ಧಾಪ್ಯದಲ್ಲಿ ಅವರ ಮೇಲೆ ಕರುಣೆ ತೋರು’ ಎಂದು ದೇವನಲ್ಲಿ ಪ್ರಾರ್ಥಿಸುವಂತೆ ಪವಿತ್ರ ಕುರ್‍ಆನ್ ಮಕ್ಕಳಿಗೆ ಆದೇಶಿಸುತ್ತದೆ. ಅಮ್ಮನ ಪಾದದಡಿಯಲ್ಲಿ ಸ್ವರ್ಗ ಇದೆ ಎಂದು ಪ್ರವಾದಿ ಮುಹಮ್ಮದರು(ಸ) ಹೇಳಿರುವುದರ ಹಿಂದೆ ಇದೇ ವೃದ್ಧಾಪ್ಯ ಸೇವೆಯ ಉದ್ದೇಶವೇ ಇದೆ. ನೀವು ಅಮ್ಮನ ಸೇವೆ ಮಾಡಿದರೆ ನಿಮಗೆ ಸ್ವರ್ಗ ಲಭಿಸುತ್ತದೆ ಎಂಬುದನ್ನು ಅವರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ.

ವೃದ್ಧಾಪ್ಯ ಎಂಬುದು ಇನ್ನೊಬ್ಬರನ್ನು ಆಶ್ರಯಿಸಿ ಬದುಕುವಂತಹ ಕಾಲ. ಇವತ್ತು ಹೆತ್ತವರನ್ನು ನಿರ್ಲಕ್ಷ್ಯ ಮಾಡುವ ಮಕ್ಕಳೂ ನಾಳೆ ಆ ವೃದ್ಧಾಪ್ಯಕ್ಕೆ ತಲುಪಬಹುದು. ಒಂದುವೇಳೆ, ವೃದ್ಧ ಹೆತ್ತವರನ್ನು ಮಕ್ಕಳು ನಿರ್ಲಕ್ಷಿಸಿದರೂ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಅವರಲ್ಲಿರುವುದಿಲ್ಲ. ಒಂದು ಪ್ರತಿಭಟನೆ ಹಮ್ಮಿಕೊಂಡು ತಮ್ಮ ಸಮಸ್ಯೆಯನ್ನು ಸಮಾಜದ ಮುಂದಿಡುವ ಅವಕಾಶವೂ ಅವರಿಗಿರುವುದಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಒಳಗೊಳಗೇ ಮರುಗಿಕೊಂಡು ಬದುಕುವ ಅವರ ಕಣ್ಣೀರೇ ಮಕ್ಕಳ ಪಾಲಿಗೆ ಶಾಪವಾಗಲು ಧಾರಾಳ ಸಾಕು.

ತಮ್ಮ ದುಡಿಮೆಯ ಎಲ್ಲವನ್ನೂ ಮಕ್ಕಳು, ಕುಟುಂಬ ಎಂದು ವ್ಯಯಿಸುವ ಅಪ್ಪ ಮತ್ತು ತನ್ನ ಆಯುಷ್ಯವನ್ನೇ ಮಕ್ಕಳಿಗಾಗಿ ಮೀಸಲಿಡುವ ಅಮ್ಮ- ಇವೆರಡೂ ಈ ಜಗತ್ತಿನ ಅಮೂಲ್ಯ ರತ್ನಗಳು. ಅವರನ್ನು ನಿರ್ಲಕ್ಷಿಸುವುದೆಂದರೆ, ನಮ್ಮ ಜೊತೆಗಿರುವ ಈ ರತ್ನದ ಮೌಲ್ಯವನ್ನು ನಾವು ಅರಿತುಕೊಂಡಿಲ್ಲ ಎಂದೇ ಅರ್ಥ. ಇದು ಧರ್ಮವಿರೋಧಿ. ಆದ್ದರಿಂದ, ನಮ್ಮನ್ನು ಅವಲೋಕಿಸಿಕೊಳ್ಳುವುದಕ್ಕೆ ಸುಳ್ಯದ ರೋಹಿತಾಶ್ವರು ಒಂದು ನೆಪವಾಗಲಿ.