ಲೈಂಗಿಕ ದೌರ್ಜನ್ಯ ಕುರಿತು ವಿವಾದಾತ್ಮಕ ತೀರ್ಪು: ನ್ಯಾಯಾಧೀಶೆಯನ್ನು ಖಾಯಂಗೊಳಿಸಬೇಕಿಲ್ಲ; ಕೊಲಿಜಿಯಂ ಶಿಫಾರಸು

0
623
ಬಾಂಬೆ ಹೈಕೋರ್ಟ್ ನಾಗ್ಪುರ ನ್ಯಾಯಪೀಠ, ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲೈಂಗಿಕ ದೌರ್ಜನ್ಯಗಳ ಕುರಿತು ಎರಡು ವಿವಾದಾತ್ಮಕ ತೀರ್ಪುಗಳನ್ನು ಜಾರಿಗೊಳಿಸಿದ ಬಾಂಬೆ ಹೈಕೋರ್ಟ್ ನ್ಯಾಯಾಧೀಶರ ಶಾಶ್ವತ ಸ್ಥಾನಮಾನದ ದೃಢಿಕರಣದ ಕುರಿತು ತಾನು ಮಾಡಿದ್ದ ಶಿಫಾರಸನ್ನು ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಹಿಂತೆಗೆದುಕೊಂಡಿದ್ದು, ನ್ಯಾಯಾಧೀಶೆಯನ್ನು ಖಾಯಂಗೊಳಿಸಬೇಕಿಲ್ಲ ಎಂದಿದೆ.

ಲೈಂಗಿಕ ದೌರ್ಜನ್ಯಗಳ ಕುರಿತು ಎರಡು ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದ ಪುಷ್ಪ ಗನೇಡಿಯವಾಲರವರು ಬಾಂಬೆ ಹೈಕೋರ್ಟಿನಲ್ಲಿ ಅಡಿಶನಲ್ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಷ್ಪ ಗನೆಡಿವಾಲರಿಗೆ ಖಾಯಂ ನೇಮಕಾತಿ ನೀಡಬೇಕೆಂದು ಈ ಹಿಂದೆ ಸುಪ್ರೀಂ ಕೋರ್ಟ್ನ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ವಿವಾದಾತ್ಮಕ ತೀರ್ಪು ಬಂದ ಬಳಿಕ ಅದನ್ನು ಈಗ ಹಿಂದಕ್ಕೆ ತೆಗೆದುಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ನ ಚೀಫ್ ಜಸ್ಟಿಸ್ ಎಸ್.ಎ. ಬೊಬ್ಡೆ ಅಧ್ಯಕ್ಷತೆಯ ಕೊಲಿಜಿಯಂ ಜ. 20ಕ್ಕೆ ಪುಷ್ಪರಿಗೆ ಖಾಯಂ ಜಡ್ಜ್ ಮಾಡಬೇಕೆಂದು ಶಿಫಾರಸ್ಸು ಮಾಡಿತ್ತು. ಜಸ್ಟಿಸ್ ಎನ್‍ ವಿ . ರಮಣ, ರೊಹಿಗ್ಟನ್ ನಾರಿಮನ್ ಕೊಲಿಜಿಯಂನ ಇತರ ಸದಸ್ಯರಾಗಿದ್ದಾರೆ.

“ಆ ನ್ಯಾಯಾಧೀಶೆಯ ವಿರುದ್ಧ ವೈಯಕ್ತಿಕವಾಗಿ ಏನೂ ಇಲ್ಲ. ಅವರಿಗೆ ಇನ್ನೂ ಅನುಭವಬೇಕು ಮತ್ತು ಅವರು ವಕೀಲರಾಗಿದ್ದಾಗ ಈ ರೀತಿಯ ಪ್ರಕರಣಗಳನ್ನು ಎದುರಿಸದಿರಬಹುದು… ಅವರಿಗೆ ತರಬೇತಿ ಬೇಕು. ಅಂತಹ ಪ್ರಕರಣಗಳಲ್ಲಿ “ಹೆಚ್ಚಿನ ಮಾನ್ಯತೆ” ನೀಡುವ ಅಗತ್ಯವನ್ನು ಆಧರಿಸಿ ಶಾಶ್ವತ ಸ್ಥಾನಮಾನವನ್ನು ನೀಡದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೊಲಿಜಿಯಂ ಅಭಿಪ್ರಾಯ ಪಟ್ಟಿದ್ದಾಗಿ ಸುಪ್ರೀಂ ಕೋರ್ಟ್‌ನ ಮೂಲಗಳು ಉಲ್ಲೇಖಿಸಿವೆ.

ನ್ಯಾಯಾಧೀಶೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯದ ಕುರಿತು ಎರಡು ತೀರ್ಪುಗಳನ್ನು ಜಾರಿಗೊಳಿಸಿದರು, ಅದು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಈಗ ಅದೇ ಅವರಿಗೆ ಮುಳುವಾಗಿದೆ. ಜನವರಿ 19ರ ತೀರ್ಪಿನಲ್ಲಿ, “ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದೆ”, ಬಟ್ಟೆ ತೆಗೆಯದೆ ಸಂತ್ರಸ್ತೆಯ ಮರ್ಮಭಾಗವನ್ನು ಸ್ಪರ್ಶಿಸುವುದು ಪೊಕ್ಸೊ ಪ್ರಕರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪೋಕ್ಸೋ ಕಾಯಿದೆಯಡಿ ವ್ಯಾಖ್ಯಾನಿಸಲಾಗಿದೆ ಎಂದು ಅವರು ವಿವಾದಾತ್ಮಕ ತೀರ್ಪು ನೀಡಿದ್ದರು. ಅಲ್ಲದೇ , ಒಂದು ವಾರದಲ್ಲಿ ಬೇರೆ ಬೇರೆ ಪೊಕ್ಸ್ ಪ್ರಕರಣಗಳ ಆರೋಪಿಗಳನ್ನು ಜಸ್ಟಿಸ್ ಪುಷ್ಪಾ ಖುಲಾಸೆಗೊಳಿಸಿದ್ದರು.

ಮಹಾರಾಷ್ಟ್ರದ ಸುಪ್ರೀಂಕೋರ್ಟಿನ ಹಿರಿಯ ಜಡ್ಜ್ ಆಗಿರುವ ಡಿವೈ ಚಂದ್ರಚೂಡ್, ಎಎಂ ಖನವಿಲ್ಕರ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಶಿಫಾರಸ್ಸನ್ನು ಹಿಂಪಡೆಯಲಾಗಿದೆ.