ಬಿಹಾರ: ಏಕೈಕ ರಾಜ್ಯಸಭಾ ಸೀಟನ್ನೂ ಕಳಕೊಂಡ ಚಿರಾಗ್ ಪಾಸ್ವಾನ್

0
214

ಸನ್ಮಾರ್ಗ ವಾರ್ತೆ

ಪಾಟ್ನ: ಬಿಹಾರದಲ್ಲಿ ತೆರವಾದ ರಾಜ್ಯಸಭಾ ಸೀಟಿಗೆ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಇಂದು ನಾಮಪತ್ರಿಕೆ ಸಲ್ಲಿಸಲಿದ್ದು ಎನ್‍ಡಿಎ ಅಭ್ಯರ್ಥಿಯಾಗಲಿದ್ದಾರೆ. ಲೋಕಜನಶಕ್ತಿ ಪಾರ್ಟಿ ನಾಯಕ ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ಈ ಸ್ಥಾನ ತೆರವಾಗಿತ್ತು.

ಎಲ್‍ಜೆಪಿಯ ರಾಜ್ಯಸಭಾ ಸೀಟು ಇದು. ಆದರೆ, ಮಗ ಚಿರಾಗ್ ಪಾಸ್ವಾನ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರಿಂದ ಎಲ್‍ಜೆಪಿಯ ಶಕ್ತಿ ಸೋರಿಕೆಯಾಗಿತ್ತು. ಜೆಡಿಯುನ ನಿರಾಸಕ್ತಿಯನ್ನು ಗಮನಿಸಿ ಬಿಜೆಪಿ ತನ್ನ ಉಮೇದ್ವಾರನನ್ನು ನಿಲ್ಲಿಸುತ್ತಿದೆ.

ರಾಮವಿಲಾಸ್ ಪಾಸ್ವಾನ್‍ರ ಸಾವಿನ ನಂತರ ನೇತೃತ್ವವನ್ನು ಅವರ ಪುತ್ರ ಚಿರಾಗ್ ಪಾಸ್ವಾನ್ ವಹಿಸಿಕೊಂಡಿದ್ದರು. ಎಲ್‍ಜೆಪಿ ಬಿಹಾರದಲ್ಲಿ ನಿರ್ಣಾಯಕ ಶಕ್ತಿಯಾಗಬಹುದು ಎನ್ನಲಾಗಿದ್ದು ವಿಧಾನಸಭಾ ಚುನಾವಣೆಯಲ್ಲಿ ದಯನೀಯವಾಗಿ ಸೋಲುಂಡಿತ್ತು. ಆದರೆ ಆರ್‌ಜೆಡಿ ನೇತೃತ್ವದ ಮಹಾಘಟ್‍ಬಂಧನ್ ಈವರೆಗೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ಅವರ ಅಭ್ಯರ್ಥಿ ಕೂಡ ವಿಳಂಬವಿಲ್ಲದ ಘೋಷಣೆಯಾಗಲಿದೆ ಎಂದು ಮೂಲಗಳು ಹೇಳಿವೆ. ಡಿಸೆಂಬರ್ 14ಕ್ಕೆ ಚುನಾವಣೆ ನಡೆಯಲಿದೆ.

ಸುಶೀಲ್ ಕುಮಾರ್ ಮೋದಿಯ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್, ಉಪಮುಖ್ಯಮಂತ್ರಿಗಳಾದ ತಾರಕೇಶ್ವರ ಪ್ರಸಾದ್, ರೇಣು ದೇವಿ ಮೊದಲಾದವರು ಉಪಸ್ಥಿತರಿರಲಿದ್ದಾರೆಂದು ಬಿಜೆಪಿ ತಿಳಿಸಿದೆ.