ಸುವರ್ಣ ಟಿವಿ ಕಚೇರಿಗೆ ಭೇಟಿ: ಅಜಿತ್ ಹನುಮಕ್ಕನವರ್, ರವಿ ಹೆಗಡೆಗೆ ಪ್ರವಾದಿ ಜೀವನ ಸಂದೇಶ ಪುಸ್ತಕ ನೀಡಿದ ಜಮಾಅತ್ ನಿಯೋಗ

0
3013

ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಸುವರ್ಣ ನ್ಯೂಸ್ ಚಾನಲ್ ನ ನಿರೂಪಕ ಅಜಿತ್ ಹನುಮಕ್ಕನವರ್ ಅವಹೇಳನಕಾರಿ ಮಾತುಗಳನ್ನಾಡಿದ ವಿಷಯದ ಬಗ್ಗೆ ಚರ್ಚಿಸಲು ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ಸಮೂಹ ಸಂಪಾದಕರಾದ ರವಿ ಹೆಗಡೆಯವರನ್ನು ಇಂದು (31/12/2018) ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಡಾ. ಬೆಳಗಾಮಿ ಮುಹಮ್ಮದ್ ಸಾದ್ ರವರ ನೇತೃತ್ವದ ನಿಯೋಗವು ಭೇಟಿ ಮಾಡಿತು.

ಅಂದು ಪ್ರಸಾರಗೊಂಡ ಕಾರ್ಯಕ್ರಮದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ರವಿ ಹೆಗಡೆಯವರು ಕ್ಷಮೆಯನ್ನು ಯಾಚಿಸಿದ್ದಾರೆ. ಮಾತ್ರವಲ್ಲ, ಅಜಿತ್ ಅವರನ್ನು ಕರೆದು ಅವರೂ ಕ್ಷಮೆಯನ್ನು ಯಾಚಿಸಿದ್ದಾರೆ.

ಪ್ರವಾದಿ ಜೀವನ ಸಂದೇಶದ ಬಗ್ಗೆ ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡುವ ಕುರಿತು ಸಂಪಾದಕರು ಭರವಸೆಯನ್ನು ನೀಡಿದ್ದಾರೆ.

ನಿರೂಪಕನ ಅನಗತ್ಯ ಮತ್ತು ಪೂರ್ವಾಗ್ರಹ ಪೀಡಿತ ಹೇಳಿಕೆಯ ಬಗ್ಗೆ ಮುಸ್ಲಿಮ್ ಸಮುದಾಯದ ಆಕ್ರೋಶವನ್ನು ಅವರಿಬ್ಬರಿಗೂ ತಿಳಿಹೇಳಲಾಯಿತು. ತಾವು ಮಾಡಿದ್ದು ತಪ್ಪು ಎಂದು ಅವರೀರ್ವರೂ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಶಾಂತಿ ಪ್ರಕಾಶನದಿಂದ ಪ್ರಕಟಗೊಂಡ ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ, ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ, ವಿಶ್ವ ದಾರ್ಶನಿಕರ ದೃಷ್ಟಿಯಲ್ಲಿ ಪ್ರವಾದಿ ಇತ್ಯಾದಿ ಪುಸ್ತಕಗಳನ್ನು ರವಿ ಹೆಗಡೆ, ಅಜಿತ್ ಹನುಮಕ್ಕನವರ್ ಸೇರಿದಂತೆ ಸುವರ್ಣ ನ್ಯೂಸ್ ಬಳಗಕ್ಕೆ ನೀಡಲಾಯಿತು.

ಪ್ರವಾದಿ ಸಾಹಿತ್ಯಗಳನ್ನು ಅಧ್ಯಯನ ನಡೆಸುವೆವು ಎಂದವರು ತಿಳಿಸಿದ್ದಾರೆ. ಮಾತ್ರವಲ್ಲದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವೆವು ಎಂದು ನಿಯೋಗಕ್ಕೆ ಅವರು ಭರವಸೆ ನೀಡಿದ್ದಾರೆ.

ನಿಯೋಗದಲ್ಲಿ ಸಾಮಾಜಿಕ ಕಾರ್ಯಕರ್ತರಾದ ತನ್ವೀರ್ ಅಹ್ಮದ್, ಅಮ್ಜದ್ ಪಾಷಾ, ಮುಹಮ್ಮದ್ ನವಾಝ್ ಅಬ್ಬೆಟ್ಟು, ಮುಶ್ತಾಕ್ ಅಹ್ಮದ್, ರಿಯಾಝ್ ಅಹ್ಮದ್, ಸಲೀಮ್ ಇನ್ನಿತರರು ಇದ್ದರು.