ತಾಜ್ ಮಹಲ್; ಬಕ್ರೀದ್ ನಮಾಝಿಗರ ಸಂಖ್ಯೆಯಲ್ಲಿ ಭಾರೀ ಕುಸಿತ!

0
764

ಆಗ್ರಾ: ತಾಜ್‍ಮಹಲ್‍ನ ಹೊರಾಂಗಣದಲ್ಲಿ ಸ್ಥಳೀಯ ಮುಸ್ಲಿಮರಿಗೆ ಮಾತ್ರ ನಮಾಝ್ ನಿರ್ವಹಿಸುವಂತೆ ಆಗ್ರಾ ಜಿಲ್ಲಾಡಳಿತವು ಕಠಿಣ ಸೂಚನೆ ನೀಡಿದ ಬೆನ್ನಿನಲ್ಲಿಯೇ ಬಕ್ರೀದ್ ನಂದು ನಮಾಝಿಗರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದೆ. ತಾಜ್‍ಮಹಲ್ ಇಂತೆಜಾಮೀಯಾ ಕಮಿಟಿಯ ಅಧ್ಯಕ್ಷರಾದ ಸೈಯ್ಯದ್ ಇಬ್ರಾಹೀಮ್ ಝೈದಿಯವರು ಈ ಕುರಿತು ಸ್ಪಂದಿಸುತ್ತಾ, “ಬಕ್ರೀದ್ ವೇಳೆ ಪ್ರತಿ ವರ್ಷ ಕನಿಷ್ಠ 15,000 ಜನರು ನಮಾಝ್ ನಿರ್ವಹಿಸುತ್ತಿದ್ದರು. ಆದರೆ ಈ ಬಾರಿ ಕೇವಲ 5000 ದಷ್ಟು ಜನರು ಮಾತ್ರ ತಾಜ್ ಆವರಣದಲ್ಲಿ ನಮಾಝ್ ನಿರ್ವಹಿಸಿದ್ದಾರೆ” ಎಂದು ತಿಳಿಸಿದ್ದಾರೆ. ಸ್ಥಳೀಯ ಮುಸ್ಲಿಮ್ ನಾಯಕರು, ವಿದ್ವಾಂಸರು ಹಾಗೂ ಪಂಡಿತರ ಪ್ರಕಾರ ನಮಾಝಿಗರ ಸಂಖ್ಯೆಯಲ್ಲಿ ಸುಮಾರು 66% ದಷ್ಟು ಕುಸಿತ ಕಂಡು ಬಂದಿದೆ ಎಂಬುದು ತಿಳಿದು ಬಂದಿದೆ.
ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ (CISF) ಕಮಾಂಡೆಂಟ್ ಆದ ಬ್ರಿಜ್ ಭೂಷಣ್‍ರವರು “ಇವತ್ತು ತಾಜ್ ಪ್ರವೇಶದ ಮೇಲೆ ಯಾರಿಗೂ ನಿರ್ಬಂಧನೆ ಇರಲಿಲ್ಲ. ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ವೀಕ್ಷಕರಿಗೆ ಉಚಿತ ಪ್ರವೇಶವಿತ್ತಲ್ಲದೆ, ಈ ಸಂದರ್ಭದಲ್ಲಿ ಪ್ರವೇಶಿಸಿದ ಮುಸ್ಲಿಮರಿಗೆ ನಮಾಝ್ ನಿರ್ವಹಿಸುವ ಅನುಮತಿ ಇತ್ತು” ಎಂದು ತಿಳಿಸಿದ್ದಾರೆ.

“ತಾಜ್‍ಮಹಲ್ ದಿನೇ ದಿನೇ ವಿವಾದಕ್ಕೆ ಗುರಿಯಾಗುತ್ತಿದ್ದು ಜನರು ಯಾವುದೇ ರೀತಿಯಲ್ಲಿ ಶೋಷಣೆಗೊಳಗಾಗಲು ಇಚ್ಛಿಸದೇ ತಮ್ಮ ತಮ್ಮ ಪ್ರದೇಶಗಳಲ್ಲಿರುವ ಸಮೀಪದ ಮಸೀದಿಗಳಲ್ಲಿಯೇ ನಮಾಝ್ ನಿರ್ವಹಿಸಲು ಆದ್ಯತೆ ನೀಡಿರುವುದು ನಮಾಝಿಗಳ ಸಂಖ್ಯೆಯಲ್ಲಿ ಇಳಿಕೆ ಕಾಣಲು ಕಾರಣವಾಗಿದೆ”ಎಂಬುದು ಸ್ಥಳೀಯರ ಅಭಿಪ್ರಾಯ.

ಇನ್ನೊಂದೆಡೆ,  “ಬಲಪಂಥೀಯ ಗುಂಪುಗಳು ಸಮುದಾಯದ ಜನರನ್ನು ಈ ದಿನ ಗುರಿಯಾಗಿಸಿದರೆ ಎಂಬ ಭಾವನೆಯು ಜನರ ಸಂಖ್ಯೆಯಲ್ಲಿ ಕುಸಿತ ಕಾಣಲು ಕಾರಣವಾಗಿದೆ” ಎಂದು ಜನರು ತಿಳಿಸಿದ್ದಾರೆ.
ಕಳೆದ ಜುಲೈ 9 ರಂದು ಸುಪ್ರೀಮ್ ಕೋರ್ಟ್ ಆಗ್ರಾ ಜಿಲ್ಲಾಡಳಿತದ ನಿಲುವನ್ನು ಎತ್ತಿಹಿಡಿಯುವ ಮೂಲಕ ಶುಕ್ರವಾರದ ಪ್ರಾರ್ಥನೆಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸ್ಥಳೀಯರಲ್ಲದವರು ತಾಜ್ ಆವರಣದಲ್ಲಿ ನಮಾಝ್ ನಿರ್ವಹಿಸುವುದನ್ನು ತಡೆಹಿಡಿದಿತ್ತು.